ಕರ್ನಾಟಕದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಅದ್ಭುತ ಯೋಜನೆ; ಆದರೆ ಸವಾಲುಗಳು ಅನೇಕ!

2023-24 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗಳ ಪೈಕಿ ಪ್ರಮುಖವಾದದ್ದಾಗಿದೆ. 
ಕೃಷಿ ಚಟುವಟಿಕೆ (ಸಂಗ್ರಹ ಚಿತ್ರ)
ಕೃಷಿ ಚಟುವಟಿಕೆ (ಸಂಗ್ರಹ ಚಿತ್ರ)

ಬೆಂಗಳೂರು: 2023-24 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗಳ ಪೈಕಿ ಪ್ರಮುಖವಾದದ್ದಾಗಿದೆ. 

ಈ ಯೋಜನೆಯನ್ನು ಜಾರಿಗೊಳಿಸಿ, ನನಸಾಗಿಸುವ ಮೊದಲ ರಾಜ್ಯ ಕರ್ನಾಟಕವಾಗಿರಲಿದೆ ಎಂದು ಇತ್ತೀಚೆಗಷ್ಟೆ ಸಿಎಂ ಬೊಮ್ಮಾಯಿ ಹೇಳಿದ್ದರು. 

ಯೋಜನೆಗೆ ಸಂಬಂಧಿಸಿದ ಪ್ರಕ್ಷೇಪಗಳು ಸುಲಭ ಆದರೆ ಅದನ್ನು ಸಾಧಿಸಲು ಇರುವ ಮಾರ್ಗ ಬಹಳ ಸವಾಲಿನದ್ದಾಗಿದೆ.  

2014 ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2023-24 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಉದ್ದೇಶಿಸಲಾಗಿತ್ತು.

ರೈತರ ಆದಾಯ ದ್ವಿಗುಣಗೊಳಿಸಲು ಇರುವ (ಡಿಎಫ್ಐ) ಸಮಿತಿಯ ಪ್ರಕಾರ 2011-12 ರಲ್ಲಿ ಕೃಷಿ ಕುಟುಂಬವೊಂದರ ವಾರ್ಷಿಕ ಆದಾಯ 96,718 ರೂಪಾಯಿಗಳಿತ್ತು. 2015-16 ರಲ್ಲಿ ಈ ಮೊತ್ತ 1,54,399 ರೂಪಾಯಿಗಳಿಗೆ ಏರಿಕೆಯಾಗಿತ್ತು.

2023-24 ರ ವೇಳೆಗೆ ರೈತರ ಆದಾಯವನ್ನು 2,84,888 ರೂಪಾಯಿಗಳನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಬೆಳೆ ಸುಧಾರಣೆ, ಜಾನುವಾರು ಉತ್ಪಾದಕತೆ, ಸಂಪನ್ಮೂಲ ಬಳಕೆಯಲ್ಲಿ ದಕ್ಷತೆ, ಉತ್ಪಾದನಾ ವೆಚ್ಚದಲ್ಲಿ ಉಳಿತಾಯ, ಬೆಳೆಯ ತೀವ್ರತೆಯನ್ನು ಹೆಚ್ಚಿಸುವುದು, ಹೆಚ್ಚಿನ ಮೌಲ್ಯದ ಬೆಳೆಗಳ ಕಡೆಗೆ ವೈವಿಧ್ಯಗೊಳಿಸುವುದು ಮತ್ತು ರೈತರು ಪಡೆದ ನೈಜ ಬೆಲೆಯನ್ನು ಹೆಚ್ಚಿಸುವುದರತ್ತ ಗಮನ ಕೇಂದ್ರೀಕರಿಸುವ ಅಗತ್ಯವಿದೆ. 

ಕೃಷಿ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ರೈತರ ಆದಾಯ ದ್ವಿಗುಣಗೊಳಿಸುವುದರಲ್ಲಿ ಬಹುದೊಡ್ಡ ಸವಾಲು ಇರುವುದು ಕೊಯ್ಲು ನಂತರದ ಪ್ರಕ್ರಿಯೆ, ಅಭ್ಯಾಸಗಳನ್ನು ತೀಕ್ಷ್ಣಗೊಳಿಸುವುದರಲ್ಲಿ.

ಆಹಾರೋತ್ಪನ್ನಗಳ ಕೊಯ್ಲು ನಂತರದ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವುದರತ್ತ ಹೆಚ್ಚಿನ ಗಮನ ಹರಿಸಬೇಕಿದ್ದು,  ಕೊಯ್ಲು ನಂತರ- ಒಟ್ಟುಗೂಡಿಸುವಿಕೆ, ಸಂಸ್ಕರಣೆ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ರಫ್ತು ವಿಭಾಗಗಳೂ ಕೂಡ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಪ್ರಮುಖ ಅಂಶವಾಗಿರಲಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಕೇವಲ ಉತ್ಪಾದನೆಯ ಮೇಲೆ ಗಮನ ಹರಿಸುವ ಇಲಾಖೆ ಇನ್ನು ಮುಂದಿನ ದಿನಗಳಲ್ಲಿ ರೈತರಿಗೆ ಅವರ ಉತ್ಪನ್ನಗಳು ಮಾರುಕಟ್ಟೆಗೆ ಹೋಗಿ ಉತ್ತಮ ಬೆಲೆ ಬರುವವರೆಗೂ ರೈತರಿಗೆ ಸಹಕರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. 

ಉತ್ಪಾದನೆ ವಿಷಯದಲ್ಲಿ ಭಾರತ ಸ್ವಾವಲಂಬಿಯಾಗಿದ್ದು, ಮಿಲಿಯನ್ ಟನ್ ಗಟ್ಟಲೆ ಆಹಾರ ಧಾನ್ಯಗಳು ಎಫ್ ಸಿಐ ಗೋದಾಮಿನಲ್ಲಿ ಸಂಗ್ರಹಣೆ ಮಾಡಲಾಗುತ್ತಿದೆ. ಈಗ ರೈತರ ಆದಾಯ ದ್ವಿಗುಣಗೊಳಿಸಬೇಕೆಂದರೆ ಕೊಯ್ಲು ನಂತರದ ಪ್ರಕ್ರಿಯೆಗಳತ್ತ ಗಮನ ಹರಿಸಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಹಣ್ಣು-ತರಕಾರಿಗಳ ವಿಭಾಗದಲ್ಲಿ ಶೇ.25-30 ರಷ್ಟು ಪೋಲಾಗುತ್ತಿದೆ. ಆದರೆ ಆಹಾರ ಧಾನ್ಯಗಳ ವಿಭಾಗದಲ್ಲಿ ಪೋಲು ಪ್ರಮಾಣ ಶೇ.8-10 ರಷ್ಟಿದೆ. 95,000 ಕೋಟಿ ರೂಪಾಯಿ ಮೌಲ್ಯದ ಹಣ್ಣುಗಳು, ತರಕಾರಿಗಳು, ಆಹಾರ ಧಾನ್ಯಗಳು ನಷ್ಟವಾಗುತ್ತಿವೆ. ಇದನ್ನು ತಡೆಗಟ್ಟಬೇಕಾದ ಅಗತ್ಯವಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ.

ಹಾಲು ಉತ್ಪಾದನೆಯಲ್ಲಿ ಉತ್ಪಾದನೆಯಿಂದ ಗ್ರಾಹಕರವರೆಗೆ ಕೋಲ್ಡ್ ಚೈನ್ ಇರುವುದರಿಂದ ಶೇ.1 ರಷ್ಟು ಉತ್ಪನ್ನ ವ್ಯರ್ಥವಾಗುತ್ತದೆ. ಆದರೆ ತರಕಾರಿಗಳು ಹಣ್ಣುಗಳು ಕೊಯ್ಲಿನ ನಂತರ ಬೇಗ ಹಾಳಾಗುತ್ತದೆ. ಸರಿಯಾದ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯ ಕಾರಣದಿಂದಾಗಿ ಈ ವಿಭಾಗದಲ್ಲಿ ನಷ್ಟ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸುಗ್ಗಿಯ ನಂತರದ ದೃಢವಾದ ಮೂಲಸೌಕರ್ಯ ಕೊರತೆಯಿಂದಾಗಿ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತಿದೆ. 

"ಉತ್ಪನ್ನಗಳಿಗೆ ಸರ್ಕಾರದಿಂದ ಸರಿಯಾದ ಮಾರುಕಟ್ಟೆ ಸೌಲಭ್ಯಗಳು ಮತ್ತು ಕನಿಷ್ಠ ಬೆಂಬಲ ಬೆಲೆ ದೊರೆತಲ್ಲಿ ರೈತರು ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದು ಇಲ್ಲದೇ ಹೋದಲ್ಲಿ ಕೃಷಿಯೆಡೆಗಿನ ಆಸಕ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಹಾಸನದ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಾಲ್

ಸರ್ಕಾರ ಕೆಲವು ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಕೆಲವೊಂದು ಉತ್ಪನ್ನಗಳ ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ನಡುವೆ ಅಂತರ ಹೆಚ್ಚಾಗಿದೆ. ಹತಾಶೆಗೊಳಗಾಗುವ ರೈತರು ಬೆಳೆದು ನಿಂತಿರುವ ಕೃಷಿ ಉತ್ಪನ್ನಗಳನ್ನು ನಾಶ ಮಾಡುತ್ತಾರೆ ಹಾಗೂ ಮುಂದಿನ ಹಂತದ ಬೆಳೆಯ ಬಗ್ಗೆ ಅನಾಸಕ್ತಿ ತೋರುತ್ತಾರೆ. ರೈತರ ಆದಾಯ ದ್ವಿಗುಣಗೊಳಿಸಲು ಆಹಾರೋತ್ಪನ್ನಗಳ ಕೊಯ್ಲು ನಂತರದ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವುದು ಬಹುದೊಡ್ಡ ಸವಾಲಿನ ಸಂಗತಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com