ಮಳೆ ತರುವ ದೇವರು 'ಜೋಕುಮಾರಸ್ವಾಮಿ'

ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶ ಹೋದ ನಂತರ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂದೇ ಜನಪದರ ನಂಬಿಕೆ. 
ಜೋಕುಮಾರಸ್ವಾಮಿಯ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಕುಳಿತಿರುವ ಮಹಿಳೆಯರು
ಜೋಕುಮಾರಸ್ವಾಮಿಯ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಕುಳಿತಿರುವ ಮಹಿಳೆಯರು

ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶ ಹೋದ ನಂತರ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂದೇ ಜನಪದರ ನಂಬಿಕೆ. 

ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಮುದ್ದಿನ ಕುಮಾರಸ್ವಾಮಿ ಎಂದು ಬಣ್ಣಿಸಲಾಗುತ್ತದೆ. ‘ ಜೋಕುಮಾರ’ ಎಂದು ಕರೆಯಲಾಗುತ್ತದೆ. ಪಾರ್ವತಿಪುತ್ರ ಗಣಪತಿಯು ಭೂಲೋಕಕ್ಕೆ ಬಂದು ಹೋದ ಬಳಿಕ ಕೈಲಾಸದಿಂದ ಧರೆಗೆ ಬರುತ್ತಾನೆ ಶಿವಪುತ್ರ ಕುಮಾರಸ್ವಾಮಿ ಅಥವಾ ಷಣ್ಮುಖ. ಲೋಕಪ್ರಭುವಾದ ಪರಮೇಶ್ವರ ಶಿವನ ಮೊದಲ ಮಗ ಗಣಪತಿಯು ಪ್ರಭುತ್ವದ ಪ್ರತೀಕವಾದರೆ ಕಿರಿಯ ಮಗ ಕುಮಾರಸ್ವಾಮಿಯು ತನ್ನ ಲೋಕಾನುಗ್ರಹ ಬುದ್ಧಿಯಿಂದ ಜನಪದರ ದೈವವಾದನು. 

ಗಣಪತಿಯು ಶಿಷ್ಟದೇವತೆಯಾದರೆ ಷಣ್ಮುಖನು ಜನಪದರ ದೈವವಾದನು. ತಮ್ಮ ಕಷ್ಟಕ್ಕೆ ಕರಗಿ ಶಿವಕಾರುಣ್ಯವನ್ನು ಲೋಕಕ್ಕೆ ಉಣಬಡಿಸಿದ ಕುಮಾರಸ್ವಾಮಿಯನ್ನು ಜನಪದರು ಪ್ರೀತಿಯಿಂದ ' ಜೋಕುಮಾರ' ಎಂದು ಕರೆದು, ಗೌರವಿಸುತ್ತಾರೆ. 

ಗಣೇಶ ಸವಿಸವಿಯಾದ ಭೋಜನ ಸವಿದು ಹೋದರೆ, ಜೋಕಮಾರಸ್ವಾಮಿ ಮನೆ ಮನೆಗೆ ಸುತ್ತಿ ಜನರು ಪಡುವ ಕಷ್ಟಗಳನ್ನು ನೋಡಿ ಅವುಗಳನ್ನು ಶಿವನಿಗೆ ತಿಳುಸುತ್ತಾನೆ. ಜೋಕುಮಾರ ಸ್ವಾಮಿ ಹೋದ ನಂತರ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ. ಜೋಕಮಾರಸ್ವಾಮಿನಿಗೆ ನುಚ್ಚು ಪುಂಡಿಪಲ್ಯ ಕಟಕು ರೊಟ್ಡಿ. ಮೆಣಸಿನಕಾಯಿ ಉಪ್ಪು ಇವೇ ನೈವೇದ್ಯವಾಗಿದೆ.

ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ.  

ಜೋಕುಮಾರನು ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.

ಜೋಕುಮಾರನನ್ನು ಬೇವಿನತಪ್ಪಲ ತುಂಬಿದ ಬುಟ್ಟಿಯಲ್ಲಿಟ್ಡು ಕೊಂಡು ಮನೆ ಮನೆಗೆ ಹೋಗುವ ಮಹಿಳೆಯರು ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ  ಹೈನಾಗಿ” ಎಲ್ಲವೂ ಬರುತ್ತವೆ.

ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು, ಬೇವಿನ ಎಲೆಯಲ್ಲಿ ಕಾಡಿಗೆ (ಕಪ್ಪು) ನೀಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ. ಇನ್ನು ಕಪ್ಪನ್ನು ಮಕ್ಕಳ ಹಣೆಗೆ ಹಚ್ಚಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬುದು ನಂಬಿಕೆಯಾಗಿದೆ. 

ಹೀಗೆ ಏಳುದಿನಗಳವರೆಗೆ ಊರು ಸುತ್ತುವ ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ ಹುಣ್ಣೆಮೆ ಹಿಂದಿನ ರಾತ್ರಿ ಜೋಕುಮಾರನ ತಲೆ ಒಡೆದು ಹಳ್ಳಿದಲ್ಲಿ ಇಡುವ ಪದ್ದತಿ ಇದೆ. ಜೋಕುಮಾರ ಸ್ಬಾಮಿಯ ಆಚರಣೆ ಗಂಗಾವತಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈಗಲೂ ಆಚರಣೆ ಮುಂದುವರೆಯಿಸಿಕೊಂಡು ಬರಲಾಗಿದೆ.

7 ದಿನಗಳ ಕಾಲ ಜೋಕುಮಾರನನ್ನು ಹೊತ್ತು ಸಾಗುವ ಮಹಿಳೆಯರು ನಂತರ ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.

ಪ್ರತೀ ವರ್ಷ ನಾವು ಜೋಕುಮಾರಸ್ವಾಮಿ ಹಬ್ಬವನ್ನು ಆಚರಿಸುತ್ತೇವೆ. ಗ್ರಾಮದ ಹೊರಗಿರುವ ಕೆರೆಗಳಿಂದ ಮಣ್ಣನ್ನು ತರುವ ಮಹಿಳೆಯರು ನಂತರ ಅದರಿಂದ ಜೋಕುಮಾರಸ್ವಾಮಿ ಮೂರ್ತಿಯನ್ನು ಸಿದ್ಧಪಡಿಸುತ್ತಾನೆ. ಸ್ನಾನ ಮಾಡಿ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು 7 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಧಾನ್ಯಗಳನ್ನು ಸಂಗ್ರಹಿಸುತ್ತಾರೆಂದು ಆಚರಣೆ ಕುರಿತು ನಂದಾ ಎಂಬುವವರು ಮಾಹಿತಿ ನೀಡಿದ್ದಾರೆ. 

ಇತ್ತೀಚಿನ ಆಧುನಿಕ ಯುಗದ ಪ್ರಭಾವ ಈ ಆಚರಣೆಯ ಮೇಲೆ ಪರಿಣಾಮ ಬೀರತೊಡಗಿದೆ. ಸಾಕಷ್ಟು ಜನರು ಆಚರಣೆಯನ್ನು ಕೈಬಿಡುತ್ತಿರುವುದು ಕಂಡು ಬರುತ್ತಿದೆ. ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡುತ್ತಿರುವ ಮಹಿಳೆಯರು ಆಚರಣೆಯನ್ನು ಮರೆಯುತ್ತಿದ್ದಾರೆ. ಉತ್ತರ ಕರ್ನಾಟಕದ ಸಾಕಷ್ಟು ಸಂಪ್ರದಾಯಗಳು ಕಣ್ಮರೆಯಾಗುತ್ತಿದೆ. ಇವುಗಳಲ್ಲಿ ಜೋಕುಮಾರಸ್ವಾಮಿ ಆಚರಣೆ ಕೂಡ ಒಂದಾಗಿದೆ ಎಂದು ಜಾನಪದ ಕಲಾವಿದ ದ್ಯಾಮನ್ನ ಕೊನ್ನೂರು ಅವರು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಹಾಗೂ ಸ್ಮಾರ್ಟ್ ಫೋನ್ ಗಳನ್ನು ವಿಡಿಯೋ ಮಾಡಲು ಬಳಕೆ ಮಾಡುತ್ತಿರುವ ಜನರು ಜಾನಪದ ಗೀತೆಗಳನ್ನು ಅಭ್ಯಾಸ ಮಾಡಲು ಬಳಕೆ ಮಾಡುತ್ತಿಲ್ಲ ಎಂದು ಕೊನ್ನೂರು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಕೆಲ ಗ್ರಾಮಸ್ಥರು ಸಂಪ್ರದಾಯ ಹಾಗೂ ಆಚರಣೆಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 

ರಾನ್ ತಾಲ್ಲೂಕಿನ ಜಕ್ಕಲಿಯ ಬಾರ್ಕರ್ ಕುಟುಂಬವು ಮಕ್ಕಳಿಗೆ ಮತ್ತು ಹಳ್ಳಿಯ ಯುವಕರಿಗೆ ಜಾನಪದ ಗೀತೆ ಕುರಿತು ತರಬೇತಿ ನೀಡುವ ಕೆಲಸ ಮಾಡುತ್ತಿದೆ. ಮುತ್ತಪ್ಪ, ಮಲ್ಲವ್ವ ಮತ್ತು ಶಾರದ ಬಾರ್ಕರ್ ಎಲ್ಲರೂ ರೈತರಾಗಿದ್ದು, ತಮ್ಮ ಮುಂದಿನ ಪೀಳಿಗೆ ಸಂಪ್ರದಾಯ ಮುಂದುವರೆಸಿಕೊಂಡಲು ಹೋಗಲು ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಆರಂಭ
ನಂದಾ ಮೆಣಸಗಿ ಮತ್ತು ಜಕ್ಕಲಿಯ ಇತರ ಮಹಿಳೆಯರು ಜಾನಪದ ಕಲಾ ಪ್ರಕಾರಗಳಾದ ಡೊಳ್ಳು ಕುಣಿತ, ಗೊರವರ ಕುಣಿತ, ವೀರಗಾಸೆ ಮತ್ತು ದೊಡ್ಡಾಟದ ವೀಡಿಯೋಗಳನ್ನು ಮಾಡುತ್ತಿದ್ದು, ವಿಡಿಯೋಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಕೆಲಸ ಮಾಡುತ್ತಿದ್ದಾರೆ. 

ವಿಡಿಯೋದಲ್ಲಿ ಸಮುದಾಯದ ಹಿರಿಯರು ತಮ್ಮ ಆಚರಣೆ, ಸಂಪ್ರದಾಯ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಮಕ್ಕಳೂ ಕೂಡ ಆಚರಣೆ ಮುಂದುವರೆಸಿಕೊಂಡು ಹೋಗುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ. 

ವರ್ಷಕ್ಕೆ ಒಮ್ಮೆ ಈ ಆಚರಣೆಗಳು ಬರಲಿದ್ದು, ಒಂದು ವಿಡಿಯೋ ವರ್ಷದ ವರೆಗೂ ಕಾಯಬೇಕಾಗುತ್ತದೆ. ಈ ವಿಡಿಯೋಗಳನ್ನು ಇಟ್ಟುಗೊಂಡು ಡಾಕ್ಯುಮೆಂಟ್ ಮಾಡಿ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ, ಲಗೋರಿ, ಲಡ್ಡು ಲಡ್ಡು ತಿಮ್ಮಯ್ಯ, ಗೋಲಿ ಮತ್ತು ಗಿಲ್ಲಿ ದಂಡಗಳಂತಹ ಜಾನಪದ ಆಟಗಳ ಬಗ್ಗೆಯೂ ವಿಡಿಯೋಗಳನ್ನು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com