

ಓರ್ವ ಪೊಲೀಸ್ ಅಧಿಕಾರಿಗೆ ತನ್ನ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ತಡೆ, ಆರೋಪಿಗಳ ಬಂಧನವೇ ಆದ್ಯ ಕರ್ತವ್ಯವಾಗಿರುತ್ತದೆ. ಇದನ್ನಷ್ಟೇ ತಮ್ಮ ಕರ್ತವ್ಯವೆಂದು ಭಾವಿಸದೇ ತಮ್ಮ ವ್ಯಾಪ್ತಿಯನ್ನೂ ದಾಟಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ವಿವಿಧ ರೀತಿಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಬಹಳ ವಿರಳ. ಇಂತಹ ವಿರಳ ಅಧಿಕಾರಿಗಳ ಪೈಕಿ ಗುರುತಿಸಿಕೊಂಡಿರುವವರು ಬಂಡೆಪಾಳ್ಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಲ್ ವೈ ರಾಜೇಶ್...
ರಾಜೇಶ್ ಅವರು ಖಾಕಿ ತೊಟ್ಟು ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲದೇ, ಖಾಕಿ ಆಚೆಗೂ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವುದಕ್ಕೆ, ತನ್ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ.
ಬಿಹಾರ ಮೂಲದ 16 ವರ್ಷದ ರಾಜ್ ಕುಮಾರ್ ಎಂಬ ಬಾಲಕನ ಮೇ.2022 ರಲ್ಲಿ 10 ನೇ ತರಗತಿ ಪರೀಕ್ಷೆ ಬರೆದಿದ್ದ. ಆದರೆ ಆತನಿಗೆ ಕನ್ನಡ ಭಾಷೆ ಅತ್ಯಂತ ಕ್ಲಿಷ್ಟವಾಗಿದ್ದರಿಂದ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ವಿಫಲನಾಗಿದ್ದ. ಆತನ ತಾಯಿ ಹೆಚ್ಎಸ್ಆರ್ ಲೇಔಟ್ ನ ಅಪಾರ್ಟ್ ಮೆಂಟ್ ನಲ್ಲಿ ಅಡುಗೆ ಕೆಲಸದವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತನ ಹಿನ್ನೆಲೆ ಈ ರೀತಿ ಇದ್ದು, ಪರೀಕ್ಷೆಯಲ್ಲಿ ನಪಾಸಾಗಿದ್ದ ಪರಿಣಾಮ ಆತ ವಿದ್ಯಾಭ್ಯಾಸವನ್ನೇ ನಿಲ್ಲಿಸುವ ಸಾಧ್ಯತೆಗಳಿತ್ತು. ಆದರೆ ಈ ಸಾಧ್ಯತೆಗಳಿಂದ ಆತನನ್ನು ಹೊರತಂದು ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗುವಂತೆ ಮಾಡಿದ್ದು ಬಂಡೆಪಾಳ್ಯದ ಪೊಲೀಸ್ ಸ್ಟೇಷನ್ ನ ಅಧಿಕಾರಿ ಎಲ್ ವೈ ರಾಜೇಶ್. ಇನ್ಸ್ಪೆಕ್ಟರ್ ರಾಜೇಶ್ ರಾಜ್ ಕುಮಾರ್ ಎಂಬಾತನಿಗೆ ಅಗತ್ಯವಿರುವ ವಿಶೇಷ ತರಬೇತಿಯನ್ನು ಕೇವಲ 21 ದಿನಗಳಲ್ಲಿ ಕೊಡಿಸಿದ್ದರ ಪರಿಣಾಮ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಈಗ ಪದವಿ ಪೂರ್ವ ಶಿಕ್ಷಣಕ್ಕಾಗಿ ವಿಜಯ ಕಾಲೇಜು ಸೇರ್ಪಡೆಯಾಗುತ್ತಿದ್ದಾನೆ.
ನನಗೆ, ಮೂಲಭೂತ ಅಂಶಗಳನ್ನು ಕಲಿಯುವುದು ಕಷ್ಟವಾಗುತ್ತಿತ್ತು, ಗೀತಾ, ಮಂಜು ಅವರಂತಹ ಶಿಕ್ಷಕರು ಪ್ರಾಥಮಿಕ ಅಂಶಗಳನ್ನು ಕಲಿಯುವುದಕ್ಕೆ ಸಹಕರಿಸಿದರು ನಾನು ಪರೀಕ್ಷೆ ಎದುರಿಸುವುದಕ್ಕೆ ಹಲವಾರು ತಯಾರಿ ಮಾಡಿಕೊಂಡೆ. ಇನ್ಸ್ಪೆಕ್ಟರ್ ಅವರು ತರಬೇತಿಗೆ ವ್ಯವಸ್ಥೆ ಮಾಡಿದರು. ಪರಿಣಾಮ ನಾನು 355 ಅಂಕಗಳೊಂದಿಗೆ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದೆ ಎನ್ನುತ್ತಾನೆ ಕುಮಾರ್.
ಕುಮಾರ್ ಅವರಂತೆಯೇ ಹೊಸಪಾಳ್ಯದ ನ್ಯೂ ಮದರ್ ಥೆರೇಸಾ ಪ್ರೌಢಶಾಲೆಯಲ್ಲಿನ ವಿ ರೀನಾ ಅವರೂ ಸಹ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ತೇರ್ಗಡೆ ಮಾಡುವುದಕ್ಕೆ ವಿಫಲರಾಗಿದ್ದರು. ಆಕೆಯ ತಂದೆ ಮೀನು ಮಾರಾಟಗಾರರಾಗಿದ್ದು, ಕೋವಿಡ್ ಕಾರಣದಿಂದ ಮಗಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಯಿತು ಎನ್ನುತ್ತಾರೆ. ರಾಜೇಶ್ ಅವರು ವ್ಯವಸ್ಥೆ ಮಾಡಿದ ಕೋಚಿಂಗ್ ನ ಪರಿಣಾಮ ರೀನಾ ಕನ್ನಡದಲ್ಲಿ 50 ಅಂಕ, ಹಿಂದಿಯಲ್ಲಿ 54 ಅಂಕಗಳನ್ನು ಗಳಿಸಿ ಪರೀಕ್ಷೆಯಲ್ಲಿ ತೆರ್ಗಡೆಗೊಂಡರು.
ಇಂತಹ ವ್ಯವಸ್ಥೆಯಿಂದ ಪ್ರಯೋಜನ ಪಡೆದುಕೊಂಡ ಫೈಜನ್ ಪಾಷಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಗುರುದಕ್ಷಿಣೆಯಾಗಿ ಪೊಲೀಸ್ ಠಾಣೆಯಲ್ಲಿ ರಾಜೇಶ್ ಅವರಿಗೆ ಸಿಹಿ ತಿನಿಸುಗಳನ್ನು ನೀಡಿ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ರಾಜೇಶ್, ಫಲಿತಾಂಶ ಬಂದ ಬಳಿಕ ನನ್ನ ಕರ್ತವ್ಯ ವ್ಯಾಪ್ತಿಯಲ್ಲಿ ನಪಾಸಾದ ವಿದ್ಯಾರ್ಥಿಗಳ ಬಗ್ಗೆ ಆತಂಕಗೊಂಡಿದ್ದೆ. ನಪಾಸಾದ ವಿದ್ಯಾರ್ಥಿಗಳಿಗೆ ಪಾಸಾಗಲು ಯಾವುದೇ ನೆರವು ಸಿಗದೇ ವಿದ್ಯಾಭ್ಯಾಸವನ್ನು ಬಿಡುತ್ತಾರೆ, ಅವರಲ್ಲಿ ಕೆಲವರು ಅಪರಾಧ ಕೃತ್ಯವನ್ನು ಎಸಗುವ ಸಾಧ್ಯತೆ ಇದೆ. ನಾನು ನಿರ್ವಹಿಸುವ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಆರೋಪಿಯೋರ್ವ ವಿಚಾರಣೆ ವೇಳೆ ತಾನು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ವಿಫಲನಾದೆ. ಆ ಬಳಿಕ ನನ್ನ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ. ಆಗ ನನಗೆ ತೇರ್ಗಡೆಯಾಗಲು ಯಾರಾದರೂ ಸಹಾಯ ಮಾಡಿದ್ದರೆ, ನಾನು ಇಂದು ಅಪರಾಧಿಯಾಗುತ್ತಿರಲಿಲ್ಲ ಎಂದು ಹೇಳಿದ್ದ. ಇದು ನನಗೆ ಅತ್ಯಂತ ಕಷ್ಟದ ಹಿನ್ನೆಲೆ ಹೊಂದಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾಗಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳನ್ನು ಆಯೋಜನೆ ಮಾಡಲು ಪ್ರೇರಣೆ ನೀಡಿತು ಎನ್ನುತ್ತಾರೆ ರಾಜೇಶ್. ರಾಜೇಶ್ ಅವರು ತರಬೇತಿ ಕೊಡಿಸಿರುವ 85 ವಿದ್ಯಾರ್ಥಿಗಳ ಪೈಕಿ 42 ಮಂದಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಗೂ ರಾಜೇಶ್ ಅವರು ಸಹಾಯ ಮಾಡುತ್ತಿದ್ದು, ಅವರಿಗೆ ಈ ರಾಜಲಾಂಛನ ಎಂಬ ಎನ್ ಜಿಒ ಸಹಕಾರ ನೀಡುತ್ತಿದೆ.
Advertisement