ಸವಾಲುಗಳನ್ನು ದಾಟಿ ಕನಸಿನ ಬೆನ್ನೇರಿದ ಮಹಿಳಾ ಪೊಲೀಸ್ ಅಧಿಕಾರಿ ಮುಡಿಗೇರಿತು 6 ಪದಕ!
ತನ್ನ ಕನಸುಗಳಿಗೆ ಅಡ್ಡಿಯಾದ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಗಳಲ್ಲಿ 6 ಪದಕ (5 ಚಿನ್ನದ ಪದಕ, ಒಂದು ಬೆಳ್ಳಿಯ ಪದಕ)ಗಳನ್ನು ಗೆದ್ದಿದ್ದಾರೆ.
Published: 11th August 2022 03:20 PM | Last Updated: 12th August 2022 06:56 PM | A+A A-

ಪದಕ ಗೆದ್ದ ಮಹಿಳಾ ಪೊಲೀಸ್ ಅಧಿಕಾರಿ
ನವದೆಹಲಿ: ತನ್ನ ಕನಸುಗಳಿಗೆ ಅಡ್ಡಿಯಾದ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಗಳಲ್ಲಿ 6 ಪದಕ (5 ಚಿನ್ನದ ಪದಕ, ಒಂದು ಬೆಳ್ಳಿಯ ಪದಕ)ಗಳನ್ನು ಗೆದ್ದಿದ್ದಾರೆ.
ಲಲಿತಾ ಮಡ್ವಾಲ್ ನೆದರ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಪೊಲೀಸ್ ಹಾಗೂ ಅಗ್ನಿಶಾಮಕ ಕ್ರೀಡಾಕೂಟ, 2022ದಲ್ಲಿ ಪದಕಗಳನ್ನು ಗೆದ್ದ ಪೊಲೀಸ್ ಅಧಿಕಾರಿಯಾಗಿದ್ದು, ರಾಷ್ಟ್ರಪತಿ ಭವನದ ಭದ್ರತಾ ವಿಭಾಗದಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ.
"ನನ್ನ ನಿರೀಕ್ಷೆಗಳ ಪ್ರಕಾರ ನನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಗಲಿಲ್ಲ" ಎನ್ನುವ ಲಲಿತಾ, ತಮ್ಮ 12 ನೇ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಸಹೋದರನ ಸಹಕಾರದಿಂದ ಆಕೆ ಸ್ಥಳೀಯ ಕೋಚ್ ಬಳಿ ಅಥ್ಲೆಟಿಕ್ಸ್ ತರಬೇತಿಯನ್ನೂ ಪಡೆಯುತ್ತಿದ್ದರು. ಆದರೆ ವಿಧಿಯ ಯೋಜನೆಯೇ ಬೇರೆ ಇತ್ತು. ಕುಟುಂಬಕ್ಕೆ ಆಧಾರವಾಗಿದ್ದ ಸಹೋದರ 1995 ರಲ್ಲಿ ಇಹಲೋಕ ತ್ಯಜಿಸಿದ ಬಳಿಕ ಲಲಿತಾ ಅವರ ಜವಾಬ್ದಾರಿ ಹೆಚ್ಚಾಯಿತು. ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕಾಗಿ ಲಲಿತಾ ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ತಯಾರಿ ನಡೆಸಿದರು.
ಪ್ರಾರಂಭದಲ್ಲಿ ಟೈಪಿಂಗ್ ಹಾಗೂ ಸ್ಟೆನೋಗ್ರಾಫರ್ ತರಬೇತಿಗೆ ಸೇರಿದ ಅವರು ತಮ್ಮ ನಿರಂತರ ಪರಿಶ್ರಮದಿಂದಾಗಿ 2000 ರಲ್ಲಿ ದೆಹಲಿ ಪೊಲೀಸ್ ಇಲಾಖೆ ಸೇರ್ಪಡೆಯಾದರು. ಅಂದಿನಿಂದ ಆಕೆಯ ಅಥ್ಲೆಟಿಕ್ಸ್ ಕನಸು ಮತ್ತೆ ಚಿಗುರೊಡೆಯತೊಡಗಿತು. ಇಲಾಖೆಯ ತರಬೇತಿ ವೇಳೆ ಲಲಿತಾ ಅವರನ್ನು ಬ್ಯಾಚ್ ನ ಅತ್ಯುತ್ತಮ ಕಮಾಂಡೋ ಎಂದು ಘೋಷಿಸಲಾಗಿತ್ತು.
ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ 2022: ಭಾರತಕ್ಕೆ ಹೆಮ್ಮೆ ತಂದ ಮಹಿಳಾ ಕ್ರೀಡಾಪಟುಗಳು ಇವರು!
ಅಂದಿನಿಂದ ಇಂದಿನ ವರೆಗೂ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಲಲಿತ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಓಟದ ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಗಳಲ್ಲಿ ಭಾಗವಹಿಸಿದ್ದಾರೆ. ಈ ನಡುವೆ ಲಲಿತಾ ಮಗುವಿಗೆ ಜನ್ಮ ನೀಡಿದ್ದರಿಂದ ಆಕೆಯ ಅಥ್ಲೆಟಿಕ್ಸ್ ಸಾಧನೆ ಸ್ವಲ್ಪ ಮಟ್ಟಿಗೆ ಹಿಂದೆಬಿದ್ದಿತ್ತು. ಆದರೆ ಆಕೆಯ ಪತಿ ರಾಜೇಂದ್ರ ಸಿಂಗ್ ಮಾಡ್ವಲ್ ಮತ್ತೆ ಉತ್ತೇಜನ ನೀಡಿದ್ದರ ಫಲವಾಗಿ ಆಕೆ ತನ್ನ ಕನಸನ್ನು ಸಾಧ್ಯವಾದಷ್ಟೂ ಈಡೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಈ ವಯಸ್ಸಿನಲ್ಲಿ ಒಲಂಪಿಕ್ಸ್ ನಲ್ಲಿ ಭಾಗವಹಿಸುವುದು ಅಸಾಧ್ಯ. ಆದರೆ ನಾನು ಮಿಷನ್ ಒಲಂಪಿಕ್ಸ್ ಗೆ ತರಬೇತಿ ನೀಡುವುದರಲ್ಲಿ ಸಂತಸ ಕಂಡುಕೊಳ್ಳುತ್ತೆನೆ ಎಂದು ಲಲಿತಾ ಹೇಳಿದ್ದಾರೆ.