ಎರಡು ಪ್ರಕರಣಗಳ ತನಿಖೆಗಾಗಿ ಗೃಹ ಸಚಿವಾಲಯದ ಪದಕ ಪಡೆದ ಕರ್ನಾಟಕದ ಪೊಲೀಸ್ ಅಧಿಕಾರಿ ಲಕ್ಷ್ಮಿ ಗಣೇಶ್!
ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ತನಿಖೆ ನಡೆಸಿದ್ದಕ್ಕಾಗಿ ಪೊಲೀಸರಿಗೆ ನೀಡುವ ಈ ವರ್ಷದ ಗೃಹ ಸಚಿವಾಲಯದ (ಎಂಎಚ್‌ಎ) ಪದಕಗಳನ್ನು ಪಡೆದ 151 ಪೊಲೀಸ್ ಅಧಿಕಾರಿಗಳಲ್ಲಿ ಆರು ಅಧಿಕಾರಿಗಳು ಕರ್ನಾಟಕದವರಾಗಿದ್ದಾರೆ.
Published: 14th August 2022 12:30 PM | Last Updated: 17th August 2022 03:43 PM | A+A A-

ಗೃಹ ಸಚಿವಾಲಯದ ಪದಕ ಪಡೆದವರು
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ತನಿಖೆ ನಡೆಸಿದ್ದಕ್ಕಾಗಿ ಪೊಲೀಸರಿಗೆ ನೀಡುವ ಈ ವರ್ಷದ ಗೃಹ ಸಚಿವಾಲಯದ (ಎಂಎಚ್‌ಎ) ಪದಕಗಳನ್ನು ಪಡೆದ 151 ಪೊಲೀಸ್ ಅಧಿಕಾರಿಗಳಲ್ಲಿ ಆರು ಅಧಿಕಾರಿಗಳು ಕರ್ನಾಟಕದವರಾಗಿದ್ದಾರೆ. ಇವರಲ್ಲಿ ಇತ್ತೀಚೆಗಷ್ಟೇ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ಕೂಡ ಒಬ್ಬರು.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿವರ್ಷ ನೀಡಲಾಗುವ ಈ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಲಕ್ಷ್ಮೀ ಗಣೇಶ್ ಅವರು ತನಿಖೆ ನಡೆಸಿದ ಎರಡು ಪ್ರಕರಣಗಳು ಅವರಿಗೆ ಪದಕವನ್ನು ತಂದುಕೊಟ್ಟಿವೆ. ಓರ್ವ ವಯಸ್ಸಾದ ವ್ಯಕ್ತಿ, ಆತನ ವಿಧವೆ ಮಗಳು ಮತ್ತು 15 ವರ್ಷದ ಮೊಮ್ಮಗಳನ್ನು ಕೊಂದು ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲಾಯಿತು. ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಗಣೇಶ್ ಅವರು ಪರಿಹರಿಸಿದ ಮತ್ತೊಂದು ಪ್ರಕರಣವೆಂದರೆ, ಕುಖ್ಯಾತ ಮಾದಕವಸ್ತು ವ್ಯಾಪಾರಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. 1.6 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಯನ್ನು ವಶಕ್ಕೆ ಪಡೆದಿದ್ದರು. ಇದು ರಾಜ್ಯ ಪೊಲೀಸರು ಮಾಡಿದ ಮೊದಲನೇ ಪ್ರಕರಣವಾಗಿತ್ತು.
2016ರ ಜನವರಿಯಲ್ಲಿ ಹಾರೋಹಳ್ಳಿ ಬಳಿಯ ಅವರ ತೋಟದ ಮನೆಯಲ್ಲಿ ವೃದ್ಧ ಮತ್ತು ಅವರ ಇಬ್ಬರು ಕುಟುಂಬ ಸದಸ್ಯರ ತ್ರಿವಳಿ ಕೊಲೆ ಸವಾಲಿನ ಪ್ರಕರಣವಾಗಿತ್ತು. ಆರೋಪಿಯು ಮೂವರನ್ನು ಕೊಲ್ಲಲು ಕೈಗವಸುಗಳನ್ನು ಬಳಸಿದ್ದನು. ಬಳಿಕ ಆರೋಪಿ ಬಸವರಾಜ ಭೋವಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಯಿತು. ವೃತ್ತಿಯಲ್ಲಿ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಮೂವರನ್ನೂ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಅದಾದ ಬಳಿಕ, ತ್ರಿವಳಿ ಕೊಲೆ ನಡೆದ ದಿನದಿಂದಲೇ ಆರೋಪಿಯ ಮಾಂಸದ ಅಂಗಡಿಯನ್ನು ಮುಚ್ಚಲಾಗಿದೆ ಎಂಬುದನ್ನು ಡಿವೈಎಸ್ಪಿ ಆಗಿದ್ದ ಗಣೇಶ್ ಪತ್ತೆ ಮಾಡಿದ್ದರು. ಹೀಗಾಗಿ, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆಯ ಶ್ರೇಷ್ಠ ತನಿಖಾ ಪದಕ!
ಗಣೇಶ್ ಅವರನ್ನು ಪದಕಕ್ಕೆ ಆಯ್ಕೆ ಮಾಡಿದ ಇನ್ನೊಂದು ಪ್ರಕರಣವೆಂದರೆ, ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಬಿಹಾರದ 54 ವರ್ಷದ ಡ್ರಗ್ ಪೆಡ್ಲರ್ ಅಂಜಯ್ ಕುಮಾರ್ ಸಿಂಗ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆತನ ಚರ ಮತ್ತು ಸ್ಥಿರಾಸ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸಿಂಗ್ 2016 ರಲ್ಲಿ ಆನೇಕಲ್‌ನ ಬ್ಯಾಗಡೆದನಹಳ್ಳಿಯಲ್ಲಿ ನೆಲೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅಂತರರಾಜ್ಯ ಡ್ರಗ್ ದಂಧೆಕೋರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ಮೊದಲ ಪ್ರಕರಣ ಇದಾಗಿತ್ತು.
ಪದಕ ಪಡೆದ ಇತರರು
ಹುಬ್ಬಳ್ಳಿಯ ಎಸ್‌ಪಿ ಶಂಕರ್ ಕೆ ಮಾರಿಹಾಳ್, ರಾಯಚೂರು ಜಿಲ್ಲೆಯ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಲೋಕಾಯುಕ್ತ ಡಿವೈಎಸ್‌ಪಿ ಎಂ.ಆರ್. ಗೌತಮ್, ಕಲಬುರಗಿ ಸಿಐಡಿ ಡಿವೈಎಸ್‌ಪಿ ಶಂಕರೇಗೌಡ ಪಾಟೀಲ್ ಮತ್ತು ದಾವಣಗೆರೆ ಇನ್‌ಸ್ಪೆಕ್ಟರ್ ಎಚ್.ಗುರು ಬಸವರಾಜ ಪದಕಕ್ಕೆ ಆಯ್ಕೆಯಾಗಿದ್ದಾರೆ.