ಭಾರೀ ವಾಹನಗಳ ಡ್ರೈವಿಂಗ್ ಕ್ರೇಜ್: ಉಚಿತವಾಗಿ ಬಸ್ ಓಡಿಸುತ್ತಾಳೆ ಕೇರಳದ ಆನ್ ಮೇರಿ!
ಸಾಮಾನ್ಯವಾಗಿ ಬಸ್ ಹಾಗೂ ಲಾರಿಯಂತಹ ಭಾರೀ ವಾಹನಗಳನ್ನು ಪುರುಷರು ಮಾತ್ರ ಚಾಲನೆ ಮಾಡುತ್ತಾರೆ. ಆದರೆ ಕೇರಳದ ಎರ್ನಾಕುಲಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಆನ್ ಮೇರಿ ಅನ್ಸಲೆನ್ ಅವರು ಭಾರೀ ವಾಹನಗಳ...
Published: 26th July 2022 04:41 PM | Last Updated: 26th July 2022 06:33 PM | A+A A-

ಆನ್ ಮೇರಿ
ಕೊಚ್ಚಿ: ಸಾಮಾನ್ಯವಾಗಿ ಬಸ್ ಹಾಗೂ ಲಾರಿಯಂತಹ ಭಾರೀ ವಾಹನಗಳನ್ನು ಪುರುಷರು ಮಾತ್ರ ಚಾಲನೆ ಮಾಡುತ್ತಾರೆ. ಆದರೆ ಕೇರಳದ ಎರ್ನಾಕುಲಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಆನ್ ಮೇರಿ ಅನ್ಸಲೆನ್ ಅವರು ಭಾರೀ ವಾಹನಗಳ ಡ್ರೈವಿಂಗ್ ಕ್ರೇಜ್ ಹೊಂದಿದ್ದು, ಖಾಸಗಿ ಬಸ್ ಅನ್ನು ಉಚಿತವಾಗಿಯೇ ಓಡಿಸುತ್ತಾರೆ.
21 ವರ್ಷದ ಈ ಯುವತಿ ಎಲ್ಲಾ ರೀತಿಯ ರಸ್ತೆಗಳಲ್ಲೂ ಭಾರೀ ವಾಹನ ಚಾಲನೆ ಮಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಆನ್ ಮೇರಿ ಅವರು ಪ್ರತಿ ಭಾನುವಾರ ಹೇ ಡೇ ಹೆಸರಿನ ಬಸ್ ಅನ್ನು ಚಲಾಯಿಸುತ್ತಾರೆ ಮತ್ತು ಜನನಿಬಿಡ ಕಾಕ್ಕನಾಡು-ಪೆರುಂಬದಪ್ಪು ರಸ್ತೆಯ ಮೂಲಕ ಪ್ರಯಾಣಿಸುತ್ತಾರೆ. "ಇತರ ದಿನಗಳಲ್ಲಿ, ನಾನು ಪ್ರತಿದಿನ ಸಂಜೆ ಬಸ್ ಅನ್ನು ಅದರ ಮಾಲೀಕರ ಮೆನೆಗೆ ತೆಗೆದುಕೊಂಡು ಹೋಗುತ್ತೇನೆ. ವಾರದ ದಿನಗಳಲ್ಲಿ, ಚಾಲಕರು ಬಸ್ ಅನ್ನು ಹತ್ತಿರದ ಪೆಟ್ರೋಲ್ ಪಂಪ್ ಗಳಲ್ಲಿ ನಿಲ್ಲಿಸುತ್ತಾರೆ. ನಾನು ನನ್ನ ಕಾಲೇಜ್ ನಂತರ ಅದನ್ನು ನನ್ನ ನೆರೆಹೊರೆಯವರಾದ ಬಸ್ ಮಾಲೀಕರ ಮನೆಗೆ ಕೊಂಡೊಯ್ಯುತ್ತೇನೆ” ಆನ್ ಹೇಳಿದ್ದಾರೆ.
“ನಾನು ಬಸ್ ಓಡಿಸಿದ ಮೊದಲ ದಿನ ನನಗೆ ಇನ್ನೂ ನೆನಪಿದೆ. ಮಹಿಳೆಯೊಬ್ಬರು ವಾಹನ ಚಲಾಯಿಸುತ್ತಿರುವುದನ್ನು ಕಂಡು ಜನರು ಗಾಬರಿ ಮತ್ತು ಭಯಭೀತರಾಗಿದ್ದರು. ಆರಂಭಿಕ ವಾರಗಳಲ್ಲಿ, ನಾನು ಹೊಸಬಳಾಗಿದ್ದೆ ಮತ್ತು ಮಹಿಳೆ ಚಾಲನೆಯನ್ನು ನೋಡಿ ಅನೇಕರು ಬಸ್ ನಲ್ಲಿ ಪ್ರಯಾಣಿಸಲು ಹೆದರುತ್ತಿದ್ದರು. ಅಪಘಾತ ಸಂಭವಿಸುವುದು ಖಚಿತ ಎಂದು ಅವರು ಭಾವಿಸಿದ್ದರು. ಆದರೆ ಈಗ ಅವರು ಪ್ರತಿ ಭಾನುವಾರ ಈ ಮಾರ್ಗದಲ್ಲಿ ನಾನು ಸುರಕ್ಷಿತವಾಗಿ ಚಾಲನೆ ಮಾಡುವುದನ್ನು ನೋಡುತ್ತಿದ್ದಾರೆ” ಎಂದು ಆನ್ ವಿವರಿಸುತ್ತಾರೆ.
ಇದನ್ನು ಓದಿ: ಕೇರಳ: ತೈಲ ಟ್ಯಾಂಕರ್ ಡ್ರೈವರ್ ಪರವಾನಗಿ ಪಡೆದ ರಾಜ್ಯದ ಎರಡನೇ ಮಹಿಳೆ 25 ವರ್ಷದ ಬರ್ಕತ್ ನಿಶಾ
ಆರಂಭದಲ್ಲಿ ಇತರ ಡ್ರೈವರ್‌ಗಳು ಮಹಿಳೆ ಬಸ್ ಚಾಲನೆ ಮಾಡುತ್ತಿರುವುದನ್ನು ಸಹಿಸಿಕೊಳ್ಳುತ್ತಿರಲಿಲ್ಲ. “ಅವರು ನನ್ನ ಬಸ್ಸನ್ನು ಹಿಂಬಾಲಿಸಿ ಹಿಂದಿಕ್ಕಲು ಪ್ರಯತ್ನಿಸುತ್ತಿದ್ದರು. ಇದು ತುಂಬಾ ಅಹಿತಕರವಾಗಿತ್ತು. ಅವರಲ್ಲಿ ಹಲವರು ಕೆಟ್ಟ ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಸಹ ಮಾಡುತ್ತಾರೆ ”ಎಂದು ಆನ್ ತಮಗಾದ ಅನುಭವ ಹೇಳಿಕೊಂಡಿದ್ದಾರೆ.
ಆದಾಗ್ಯೂ, ಆನ್ ಈಗ ಅನೇಕ ಸಹ ಚಾಲಕರೊಂದಿಗೆ ಸ್ನೇಹ ಬೆಳೆಸಿದ್ದಾರೆ. “ಕಂಡಕ್ಟರ್‌ನಂತಹ ಬಸ್‌ನಲ್ಲಿರುವ ಇತರ ಸಹೋದ್ಯೋಗಿಗಳು ಈಗ ನನ್ನ ಸ್ನೇಹಿತರು. ಪ್ರತಿ ಶಿಫ್ಟ್ ನಂತರ, ನಾವು ಒಟ್ಟಿಗೆ ಊಟ ಮಾಡುತ್ತೇವೆ ”ಎಂದು ಕಾನೂನು ವಿದ್ಯಾರ್ಥಿನಿ ತಿಳಿಸಿದ್ದಾರೆ.
“ಎಲ್ಲಾ ಬಸ್ ಚಾಲಕರ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ. ಹಾಗೆಯೇ ಇಲ್ಲೂ ಅದೇ ಪರಿಸ್ಥಿತಿ ಇದೆ” ಆನ್ ವಿವರಿಸಿದ್ದಾರೆ.