ಅವಳಿ ಪರ್ವತಗಳನ್ನೇರುವ ಹುಮ್ಮಸ್ಸು; ವಿಶ್ವ ಭ್ರಾತೃತ್ವ ಸಂದೇಶ ಸಾರುತ್ತಿರುವ ನಿವೃತ್ತ ಪಿಎಸ್ಐ

ಖಾಕಿ ಧರಿಸಿ ಕರ್ತವ್ಯ ನಿರತರಾಗಿದ್ದ ದಿನದಿಂದಲೂ ತಾವು ಮುಂದೊಂದು ದಿನ ಪರ್ವತಾರೋಹಿಯಾಗಬೇಕೆಂಬುದು ಗಣೇಶ್ ಅವರ ಕನಸಾಗಿತ್ತು. ನಿವೃತ್ತರಾದ ಬಳಿಕ ಆರಾಮದಾಯಕ ಜೀವನ ನಡೆಸುವುದು ಅಥವಾ ಯಾರೂ ತುಳಿಯದ ಹಾದಿಯಲ್ಲಿ ನಡೆಯುವುದು ಗಣೇಶ್ ಅವರ ಆಯ್ಕೆಯಾಗಿತ್ತು.
ಬೆಂಗಳೂರಿನಿಂದ ಪಡುಬಿದ್ರಿಗೆ ಗಣೇಶ್ ಅವರು ಕೈಗೊಂಡಿದ್ದ ಸೈಕ್ಲಿಂಗ್ ಯಾತ್ರೆಗೆ ಚಾಲನೆ ನೀಡಿದ್ದ   ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ
ಬೆಂಗಳೂರಿನಿಂದ ಪಡುಬಿದ್ರಿಗೆ ಗಣೇಶ್ ಅವರು ಕೈಗೊಂಡಿದ್ದ ಸೈಕ್ಲಿಂಗ್ ಯಾತ್ರೆಗೆ ಚಾಲನೆ ನೀಡಿದ್ದ ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

ಕ್ರಿಮಿನಲ್ ಗಳನ್ನು ಮಟ್ಟಹಾಕುವುದು, ಮೇಜಿನ ಮೇಲಿರುವ ಫೈಲ್ ಗಳ ಪರ್ವತಗಳನ್ನು ವಿಲೇವಾರಿ ಮಾಡುವುದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ನೌಕರಿಯಲ್ಲಿ ಸೇವಾವಧಿಯನ್ನು ಪೂರ್ಣಗೊಳಿಸುವ ವೇಳೆಗೆ ಹಲವರು ಹೈರಾಣಾಗಿ, ನಿವೃತ್ತ ಜೀವನವನ್ನು ಆರಾಮಾಗಿ ಕಳೆಯಬೇಕೆಂದಿರುತ್ತಾರೆ. ಆದರೆ ಪರ್ವತಾರೋಹಿಯಾಗಿ ಸಾಧನೆ ಮಾಡಬೇಕೆಂಬ ನಿವೃತ್ತ ಪಿಎಸ್ಐ ಗಣೇಶ್ ಪಿಎನ್ ಅವರ ಜೀವನೋತ್ಸಾಹವನ್ನು ಇದ್ಯಾವುದೂ ಕುಗ್ಗಿಸಿಲ್ಲ.

ಖಾಕಿ ಧರಿಸಿ ಕರ್ತವ್ಯ ನಿರತರಾಗಿದ್ದ ದಿನದಿಂದಲೂ ತಾವು ಮುಂದೊಂದು ದಿನ ಪರ್ವತಾರೋಹಿಯಾಗಬೇಕೆಂಬುದು ಗಣೇಶ್ ಅವರ ಕನಸಾಗಿತ್ತು. ನಿವೃತ್ತರಾದ ಬಳಿಕ ಆರಾಮದಾಯಕ ಜೀವನ ನಡೆಸುವುದು ಅಥವಾ ಯಾರೂ ತುಳಿಯದ ಹಾದಿಯಲ್ಲಿ ನಡೆಯುವುದು ಗಣೇಶ್ ಅವರ ಆಯ್ಕೆಯಾಗಿತ್ತು. ಗಣೇಶ್ 2ನೇಯದ್ದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿರುವ ಪಡುಬಿದ್ರಿಯ ಹವ್ಯಾಸಿ ಅಂತರಾಷ್ಟ್ರೀಯ ಸಾಹಸಗಳ ಕ್ಲಬ್ ಹಾಗೂ ಮೌಂಟ್ ಎವರೆಸ್ಟ್ ಶಿಖರ ಆರೋಹಿಗಳ ಕ್ಲಬ್ ನ ಸದಸ್ಯರೂ ಆಗಿರುವ ಗಣೇಶ್, ಈಗಾಗಲೇ ಹಲವು ಪರ್ವತಗಳನ್ನು ಏರಿದ್ದು, ಈಗ 2023 ರ ವೇಳೆಗೆ 28,000ಕ್ಕೂ ಹೆಚ್ಚಿನ ಎತ್ತರವಿರುವ ಹಿಮಾಲಯದ ಅವಳಿ ಪರ್ವತಗಳನ್ನು ಏರುವ ಕನಸು ಹೊಂದಿದ್ದಾರೆ. ಈ ಸಾಹಸವನ್ನು ಈ ವರೆಗೂ ಯಾರೂ ಮೆರೆದಿಲ್ಲ ಎನ್ನುತ್ತಾರೆ ಗಣೇಶ್

2005 ರ ಜೂ.3 ರಂದು ಮೌಂಟ್ ಎವರೆಸ್ಟ್ ಏರಿದ್ದ ಗಣೇಶ್, ಗುರುಡೊಂಗ್ಮಾರ್, ಪಾಂಡಿಮ್, ಬಲಿಜುರಿ, ನಾಗ್ ಟಿಬ್ಬಾ, ಸುಂದರ್ದುಮ್, ಅನ್ನಪೂರ್ಣ ಬೇಸ್ ಕ್ಯಾಂಪ್, ನಂದಾ ಕೋಟ್, ಮಚಪುಚರೆ ಗಳನ್ನು ಏರಿದ್ದು, ಚೀನಾದ ಉತ್ತರ ಕಲಂ ಮೂಲಕ 29,028 ಅಡಿ ಎತ್ತರದ ಮೌಂಟ್ ಎವರೆಸ್ಟ್ ನ್ನೂ ಆರೋಹಣ ಮಾಡಿದ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಟಿಎನ್ಎಸ್ಇ ಜೊತೆ ಮಾತನಾಡಿದ್ದು, ತಮ್ಮ ಪರ್ವತಾರೋಹಣ ಸಾಹಸಗಳ ಮೂಲಕ ಜಗತ್ತಿನ ಶಾಂತಿ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಉದ್ದೇಶ ಹೊಂದಿದ್ದಾರೆ. ಈ ಉದ್ದೇಶದ ಭಾಗವಾಗಿ ಬೆಂಗಳೂರಿನಿಂದ ಪಡುಬಿದ್ರಿಗೆ ಗಣೇಶ್ ಅವರು ಕೈಗೊಂಡಿದ್ದ ಸೈಕ್ಲಿಂಗ್ ಯಾತ್ರೆಗೆ ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಚಾಲನೆ ನೀಡಿದ್ದರು. ಸೆ.2, 2022 ರಂದು ಪ್ರಧಾನಿ ಮೋದಿ ಸಹ ಕರಾವಳಿ ನಗರದಲ್ಲೇ ಇದ್ದ ಹಿನ್ನೆಲೆಯಲ್ಲಿ ಪ್ರಧಾನಿಗಳನ್ನೂ ಭೇಟಿ ಮಾಡಿ ಅವಳಿ ಪರ್ವತಗಳನ್ನು ಏರುವ ತಮ್ಮ ಯೋಜನೆಗಳ ಬಗ್ಗೆ ವಿವರಿಸಲು ಗಣೇಶ್ ಉತ್ಸುಕರಾಗಿದ್ದರು. ಆದರೆ ಪ್ರಧಾನಿಗಳ ವ್ಯಸ್ತ ವೇಳಾಪಟ್ಟಿಯ ಕಾರಣದಿಂದಾಗಿ ಭೇಟಿ ಸಾಧ್ಯವಾಗಿರಲಿಲ್ಲ.
 
ಪರ್ವತಾರೋಹಣ ಮಾಡುವ ಗಣೇಶ್ ತಮ್ಮೊಂದಿಗೆ ಪವಿತ್ರ ಗ್ರಂಥಗಳನ್ನು ಇರಿಸಿಕೊಂಡು, ಪರ್ವತದ ತುದಿಯಲ್ಲಿ ಇರಿಸುತ್ತಾರೆ ಹಾಗೂ ಚೀನಾ, ಪಾಕಿಸ್ತಾನಗಳ ಹೊರತಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಧ್ವಜಾರೋಹಣವನ್ನೂ ಮಾಡುವುದು ಮತ್ತೊಂದು ವಿಶೇಷವಾಗಿದ್ದು, ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಗತ್ತಿನ ಶಾಂತಿ ಹಾಗೂ ವಿಶ್ವ ಭ್ರಾತೃತ್ವವನ್ನು ಪಸರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕೇವಲ ಅಂತಾರಾಷ್ಟ್ರೀಯ ಮಟ್ಟದಲ್ಲಷ್ಟೇ ಅಲ್ಲದೇ ಸ್ಥಳೀಯವಾಗಿಯೂ ಏಕತೆ ಮತ್ತು ಕೋಮು ಸೌಹಾರ್ದತೆ ಮೂಡಿಸಲು ಗಣೇಶ್, ತಮ್ಮೊಂದಿಗೆ ಭಾರತದ ಎಲ್ಲಾ ರಾಜ್ಯಗಳ ಧ್ವಜಗಳನ್ನೂ ಕೊಂಡೊಯ್ಯುತ್ತಾರೆ. ಪ್ರಧಾನಿಗಳು ಮುಂದೊಂದು ದಿನ ತಮಗೆ ವಿಶ್ವಸಂಸ್ಥೆಯ ಎಲ್ಲಾ ದೇಶಗಳ ಧ್ವಜಗಳನ್ನೂ ಹಸ್ತಾಂತರಿಸಿದರೆ ಅದು ಅವಿಸ್ಮರಣೀಯವಾಗಿರಲಿದೆ ಎಂಬುದು ಗಣೇಶ್ ಅವರ ಆಶಯವಾಗಿದೆ.

ಸಾಮಾನ್ಯವಾಗಿ 24,000 ಅಡಿಗಳಷ್ಟು ಎತ್ತರವಿರುವ ಪರ್ವತವನ್ನು ಏರಿದವರು ಅವಳಿ ಪರ್ವತಗಳನ್ನು ಏರುವಾಗ ಕನಿಷ್ಟ 8 ತಿಂಗಳ ಕೂಲಿಂಗ್ ಆಫ್ ಅವಧಿ (ವಿಶ್ರಾಂತಿಯ ಅವಧಿ) ಇರಲಿದೆ. ಆದರೆ ಗಣೇಶ್ ಈ ಅವಧಿಯ ಹೊರತಾಗಿ ಅವಳಿ ಪರ್ವತಗಳನ್ನು ಏರಲು ಉತ್ಸುಕರಾಗಿದ್ದು, ಒಂದೇ ಸೆಷನ್ ನಲ್ಲಿ ಮೌಂಟ್ ಎವರೆಸ್ಟ್ (29,028 ಅಡಿ) ಹಾಗೂ ನಾಲ್ಕನೇ ಅತಿ ಎತ್ತರದ ಪರ್ವತವಾಗಿರುವ ಮೌಂಟ್ ಲೊಟ್ಸೆ (27,939 ಅಡಿ) ಆರೋಹಣಕ್ಕೆ ಯೋಜನೆ ರೂಪಿಸಿದ್ದಾರೆ. ಇದು ಯಶಸ್ವಿಯಾದಲ್ಲಿ ಗಣೇಶ್ ಹೆಸರು ಹೊಸ ದಾಖಲೆ ಸೇರಲಿದೆ.

<strong>ಗಣೇಶ್ ಪಿಎನ್</strong>
ಗಣೇಶ್ ಪಿಎನ್


 ಈ ಮೂಲಕ ಭಾರತೀಯರು ಸಾಹಸ ಕ್ರೀಡೆಗಳಲ್ಲಿ ಯಾರನ್ನು ಬೇಕಾದರೂ ಮಣಿಸಬಲ್ಲರು ಎಂಬ ಸಂದೇಶವೂ ಜಗತ್ತಿಗೆ ತಲುಪುತ್ತದೆ ಎನ್ನುತ್ತಾರೆ ಗಣೇಶ್. ಯಾವುದೇ ಪರ್ವತಾರೋಹಿಗಳಿಗೆ ಮನೆಯಲ್ಲಿನ ಬೆಂಬಲ ಮುಖ್ಯವಾಗುತ್ತದೆ. ಅಂತೆಯೇ ಗಣೇಶ್ ಅವರಿಗೆ ಪತ್ನಿ ಸುಮಂಗಲ, ಪುತ್ರ ಸುಘೋಷ್, ಪುತ್ರಿ ಸಾಗರಿಕಾ ಬೆಂಬಲಿಸುತ್ತಿದ್ದಾರೆ.

ಸವಾಲುಗಳನ್ನು ಎದುರಿಸುವವರಿಗೆ ಪರ್ವತಾರೋಹಣವೇನು ಕಷ್ಟವಲ್ಲ ಎನ್ನುವ ಗಣೇಶ್, ಮೂಲಭೂತ, ಸುಧಾರಿತ ತರಬೇತಿ ಮತ್ತು ಎತ್ತರದ ಕೋರ್ಸ್‌ಗಳನ್ನು ಗ್ಯಾಂಗ್ಟಾಕ್ ನ ಎಸ್ ಜಿಎಂ ನಲ್ಲಿ ಪೂರ್ಣಗೊಳಿಸಿದ್ದಾರೆ. ಪರ್ವತಾರೋಹಣದ ವೇಳೆ ಹಲವು ಬಾರಿ ದಾರಿಯನ್ನು ತಪ್ಪಿಸಿಕೊಂಡಿದ್ದೇನೆ ಆದರೆ ನನ್ನ ಧೈರ್ಯವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ಸಾಹಸ ಕ್ರೀಡೆಗೆ ಪ್ರವೇಶಿಸುವ ನನ್ನ ನಿಧಾರದ ಬಗ್ಗೆ ಎಂದಿಗೂ ವಿಷಾದ ಹೊಂದಲಿಲ್ಲ. ಕನಸು ಕಟ್ಟಿದಾಗ ನನ್ನ ಗುರಿ ಇದ್ದದ್ದು ಪರ್ವತದ ತುತ್ತ ತುದಿಯಷ್ಟೆ, ಓರ್ವ ಪರ್ವತಾರೋಹಿಗೆ ಆಕಾಶವೇ ಮಿತಿ ಎನ್ನುವುದು ಈಗ ಅರ್ಥವಾಗಿದೆ ಎನ್ನುತ್ತಾರೆ ಗಣೇಶ್.

ಅಂದಹಾಗೆ ಪರ್ವತಾರೋಹಣ ಅತ್ಯಂತ ದುಬಾರಿಯೂ ಆಗಿದ್ದು, ಮೊದಲ ಪ್ರಯತ್ನದಲ್ಲಿ ಗಣೇಶ್ ಗೆ 12 ಲಕ್ಷ, ಎರಡನೇ ಪ್ರಯತ್ನಕ್ಕೆ 19 ಲಕ್ಷ, ಮುಂದಿನ ಅವಳಿ ಪರ್ವತಾರೋಹಣಕ್ಕೆ ಆಹಾರ, ಬಟ್ಟೆ, ಉಪಕರಣಗಳು ಸೇರಿ 50 ಲಕ್ಷ ರೂಪಾಯಿ ಖರ್ಚಾಗಲಿದೆ. ಗಣೇಶ್ ಅವರ ಪರ್ವತಾರೋಹಣದ ಕನಸಿಗೆ ಪ್ರಾಯೋಜಕರ ಹೊರತಾಗಿ ಸ್ನೇಹಿತ ಟಿ ಆನಂದ್, ಶಾಜಿ ಜೋಸೆಫ್ ಆರ್ಥಿಕ ನೆರವನ್ನೂ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com