ನಾವು ಕಾಡನ್ನು ರಕ್ಷಿಸಿದರೆ, ಕಾಡು ನಮ್ಮನ್ನು ಬದುಕಿಸುತ್ತದೆ: ಇಲ್ಲಿ ಬುಡಕಟ್ಟು ಮಹಿಳೆಯರೇ ಕಾಡು ಕಾಯಲು ನಿಂತಿದ್ದಾರೆ!

ಬುಡಕಟ್ಟು ಜನಾಂಗಗಳು ಇರುವ ಹಳ್ಳಿಗಳೆಂದರೆ ಬಡತನ, ಅನಕ್ಷರತೆ, ಅನಾರೋಗ್ಯ, ಮೂಢನಂಬಿಕೆ ಇರುವಂಥ ತಾಣಗಳೆಂದು  ಪೂರ್ವಾಗ್ರಹ. ಆದರೆ ಒಡಿಸ್ಸಾ ರಾಜ್ಯದ ಈ ಹಳ್ಳಿಗಳನ್ನು ಬಂದು ನೋಡಿದರೆ ಸಾಮಾನ್ಯ ಗ್ರಹಿಕೆಗಳು ದೂರಾಗುತ್ತವೆ.
ಬುಡಕಟ್ಟು ಮಹಿಳೆಯರು
ಬುಡಕಟ್ಟು ಮಹಿಳೆಯರು

ಸಿಂಧೂರಿಯಾ: ಬುಡಕಟ್ಟು ಜನಾಂಗಗಳು ಇರುವ ಹಳ್ಳಿಗಳೆಂದರೆ ಬಡತನ, ಅನಕ್ಷರತೆ, ಅನಾರೋಗ್ಯ, ಮೂಢನಂಬಿಕೆ ಇರುವಂಥ ತಾಣಗಳೆಂದು  ಪೂರ್ವಾಗ್ರಹ. ಆದರೆ ಒಡಿಸ್ಸಾ ರಾಜ್ಯದ ಈ ಹಳ್ಳಿಗಳನ್ನು ಬಂದು ನೋಡಿದರೆ ಸಾಮಾನ್ಯ ಗ್ರಹಿಕೆಗಳು ದೂರಾಗುತ್ತವೆ.

ಒಡಿಸ್ಸಾ ರಾಜಧಾನಿ ಭುವನೇಶ್ವರದಿಂದ ಸುಮಾರು 85 ಕಿಲೋ ಮೀಟರ್ ದೂರದಲ್ಲಿ ಸುರ್ಕಾಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿ, ರಣಪುರ ತಾಲ್ಲೂಕು, ನಯಾಗರ್ ಜಿಲ್ಲೆಯಲ್ಲಿ ಕೊಡಲಪಲ್ಲಿ ಮತ್ತು ಸಿಂದೂರಿಯಾ ಗ್ರಾಮಗಳು ಇವೆ.

ದಟ್ಟ ಕಾಡು, ಬೆಟ್ಟಗಳ ಬುಡದಲ್ಲಿ:
ಬಹು ದಟ್ಟಕಾಡು, ಅಗಾಧ ಎತ್ತರದ ಬೆಟ್ಟಗಳ ತಪ್ಪಲಿನಲ್ಲಿ ಇರುವ ಸಿಂದೂರಿಯಾ ಗ್ರಾಮ ಪ್ರವೇಶಿಸುತ್ತಿದ್ದಂತೆ ಒಡಿಸ್ಸಾದ ಸಾಂಪ್ರದಾಯಿಕ ಶೈಲಿಯ ಕುಟೀರಗಳು, ಪ್ರತಿಮನೆಯಲ್ಲಿಯೂ ಹಸುಗಳು, ಮೇಕೆಗಳು ಇರುವುದು ಕಾಣುತ್ತದೆ.

ಸಾಂಪ್ರದಾಯಿಕ ಸ್ವಾಗತ:
ಪತ್ರಕರ್ತರು ಗ್ರಾಮ ಪ್ರವೇಶಿಸುತ್ತಿದ್ದ ಹಾಗೆ ಅಲ್ಲಿನ ಮಹಿಳೆಯರು ಆತ್ಮೀಯವಾಗಿ ಸ್ವಾಗತಿಸಿದ ಪರಿ ಅನನ್ಯ. ಅಪರೂಪದ್ದು. ಕಾಡಿನ ಬುಡಕಟ್ಟು ಸಂಸ್ಕೃತಿ ದಟ್ಟವಾಗಿರುವ ಅಲ್ಲಿ ಬುಡಕಟ್ಟು ಸಂಸ್ಕೃತಿಯ ರೀತಿಯಲ್ಲಿ ಧ್ವನಿ ಹೊರಡಿಸುತ್ತಾ ಅತಿಥಿಗಳ ಕಿವಿಗಳಿಗೆ ಹೂವುಗಳನ್ನಿಟ್ಟು, ಹಣೆಗೆ ತಿಲಕವಿಟ್ಟು ಸ್ವಾಗತಿಸಿದರು. ತೇಗಿನ ಮರದ ದಟ್ಟ ಎಲೆಗಳ ನೆರಳಿನ ಕೆಳಗೆ ಹಾಸಿದ ಟಾರ್ಪಲಿನಲ್ಲಿ ಕುಳಿತ ಕೂಡಲೇ ಮಳೆ. ಆದರೆ ಭಾರಿ ಅಗಲದ ತೇಗದ ಎಲೆಗಳು ಕೊಡೆಗಳ ಹಾಗೆ ನೆನೆಯದಂತೆ ರಕ್ಷಣೆ ನೀಡಿದವು. ಬಿಸಿಬಿಸಿ ಚಹಾದೊಂದಿಗೆ ಮಾತುಕಥೆ ಶುರುವಾಯಿತು. ಸ್ಥಳೀಯ ಅರಣ್ಯ ಸಮಿತಿಯ ಅಧ್ಯಕ್ಷೆ ಮಾಧವಿ ಅವರ ನೇತೃತ್ವದಲ್ಲಿ ಗ್ರಾಮದ ಅನೇಕ ಮಹಿಳೆಯರು ಅಲ್ಲಿ ನೆರೆದಿದ್ದರು. ಅವರಿಗೆ ಕೇಳಿದ ಮೊದಲನೇ ಪ್ರಶ್ನೆಯೇ ಕಾಡಿನ ಮರಮುಟ್ಟುಗಳನ್ನು ಕಡಿದು ಮಾರಿದರೆ ಒಂದಷ್ಟು ಹಣ ಸಿಗುತ್ತದೆ. ಆದರೆ ಇದಕ್ಕಿಂತ ಭಿನ್ನವಾಗಿ ನೀವು ಮಹಿಳೆಯರೇ ಕಾಡು ಕಾಯಲು ನಿಂತಿರುವುದೇಕೆ ?

ನಾವು ಕಾಡು, ಕಾಯುತ್ತೇವೆ, ಕಾಡು ನಮ್ಮನ್ನು ಕಾಯುತ್ತದೆ!
ಒಡಿಸ್ಸಿ ಗ್ರಾಮೀಣ ಭಾಷೆಯಲ್ಲಿ ಓರ್ವ ಅರಣ್ಯವಾಸಿ ಮಹಿಳೆ ಕೊಟ್ಟ  ಉತ್ತರ ದಂಗು ಬಡಿಸುವಂತಿತ್ತು. 'ನಾವು ಕಾಡು ಕಾಯುತ್ತೇವೆ. ಕಾಡು ನಮ್ಮ ಬದುಕಿಗೆ ರಕ್ಷಣೆಯಾಗಿ ನಮ್ಮನ್ನು ಕಾಯುತ್ತಿದೆ. ನಮ್ಮನ್ನು ಸಲಹುತ್ತಿದೆ” ಆದ್ದರಿಂದಲೇ ನಾವು ಕಾಡು ಕಾಯುತ್ತೇವೆ'.

ಹಕ್ಕುಗಳು
ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಗುರುತಿಸುವಿಕೆ) ನಿಯಮಗಳು, 2008ರ ಅಡಿಯಲ್ಲಿ ಕೊಡಲಪಲ್ಲಿ ಮತ್ತು ಸಿಂಧೂರಿಯಾ ಬುಡಕಟ್ಟು ಗ್ರಾಮ ವಾಸಿಗಳಿಗೆ ಅರಣ್ಉ ಹಕ್ಕುಗಳನ್ನು ನೀಡಲಾಗಿದೆ. ಈ ಹಕ್ಕುಗಳನ್ನು ವಿಶೇಷವಾಗಿ ಅಲ್ಲಿನ ಮಹಿಳೆಯರು ಜತನದಿಂದ ನಿರ್ವಹಿಸುತ್ತಿದ್ದಾರೆ. ಸಮುದಾಯ ಹಕ್ಕುಗಳ ಸ್ವರೂಪ: ಸಾಂಪ್ರದಾಯಿಕ ಗಡಿಯೊಳಗೆ ಮತ್ತು ಹೊರಗೆ ಇಂಧನ, ಕೃಷಿ ಮತ್ತು ಗೃಹೋಪಯೋಗಿ ಬಳಕೆಗೆ ಅಗತ್ಯವಾದ  ಉತ್ಪನ್ನಗಳನ್ನು  ಸಂಗ್ರಹಿಸುವ ಮತ್ತು ಬಳಸುವ ಹಕ್ಕು ಗ್ರಾಮದ ಗಡಿಯೊಳಗೆ ಮತ್ತು ಹೊರಗೆ ಉತ್ಪನ್ನಗಳ ಮೌಲ್ಯವರ್ಧನೆ, ಸಂಗ್ರಹಣೆ ಮತ್ತು ಸಾಗಾಣಿಕೆ ಸೇರಿದಂತೆ ಬಿದಿರು, ಕೆಂಡು ಎಲೆಗಳು, ಗೆಡ್ಡೆಗಳು, ಹಸಿರು ಎಲೆಗಳು, ಇತ್ಯಾದಿ  ಅರಣ್ಯ ಉತ್ಪನ್ನಗಳ ಸಂಗ್ರಹಿಸುವ, ಸಂಸ್ಕರಿಸುವ, ಬಳಸುವ ಮತ್ತು ಮಾರಾಟ ಮಾಡುವ ಹಕ್ಕು ಜಲಮೂಲಗಳ ಬಳಕೆ ಮತ್ತು ಜಲಮೂಲಗಳ ಉತ್ಪನ್ನಗಳಾದ ಮೀನು, ಕಾರ್ಬ್, ಇತ್ಯಾದಿಗಳನ್ನು ಸಾಂಪ್ರದಾಯಿಕವಾಗಿ ಹಳ್ಳಿಗರು ಬಳಸಲು ಅನುಮೋದನೆ ಹಳ್ಳಿಗಳ ಸಾಂಪ್ರದಾಯಿಕ ಗಡಿಯೊಳಗೆ ಮತ್ತು ಹೊರಗಿನ ಅರಣ್ಯ ಪ್ರದೇಶಗಳನ್ನು ಜಾನುವಾರು ಮೇಯಿಸುವ  ಮೇಯಿಸುವ ಉದ್ದೇಶಗಳಿಗಾಗಿ ಬಳಸುವುದು ಜೈವಿಕ ವೈವಿಧ್ಯತೆ, ಬೌದ್ಧಿಕ ಆಸ್ತಿ ಮತ್ತು ಜೈವಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನದ ಪ್ರವೇಶದ ಹಕ್ಕು. ಇತರ ಸಾಂಪ್ರದಾಯಿಕ ಹಕ್ಕುಗಳು ಸೇರಿವೆ. ಗ್ರಾಮದ ಗಡಿಯೊಳಗೆ ಮತ್ತು ಹೊರಗೆ ಅರಣ್ಯ ಭೂಮಿಯೊಳಗೆ ನೆಲೆಗೊಂಡಿರುವ ದೇವರು ಮತ್ತು ದೇವತೆಯ ಆರಾಧನೆಯನ್ನು ಸಾಂಪ್ರದಾಯಿಕವಾಗಿ ಈ ಎರಡು ಗ್ರಾಮಗಳು ವಿವಿಧ ಹಬ್ಬಗಳು ಮತ್ತು ಆಚರಣೆಗಳಲ್ಲಿ ಪೂಜಿಸುತ್ತಾರೆ.

ಹಕ್ಕುದಾರರ ಕರ್ತವ್ಯಗಳು:
ವನ್ಯಜೀವಿ, ಅರಣ್ಯ ಮತ್ತು ಅರಣ್ಯ ಜೀವವೈವಿಧ್ಯವನ್ನು ರಕ್ಷಿಸಬೇಕು ಜಲಮೂಲಗಳು, ಜಲಾನಯನ ಪ್ರದೇಶಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಬೇಕು. ಅರಣ್ಯದಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಆವಾಸಸ್ಥಾನವನ್ನು ಅವರ ಸಂಸ್ಕೃತಿ ಮತ್ತು ನೈಸರ್ಗಿಕ ಪರಂಪರೆಯ ಮೇಲೆ ಪರಿಣಾಮ ಬೀರುವ ಯಾವುದೇ ರೀತಿಯ ವಿನಾಶಕಾರಿ ಅಭ್ಯಾಸಗಳಿಂದ ಸಂರಕ್ಷಿಸಬೇಕು. ವನ್ಯಜೀವಿ ಮತ್ತು ಅದರ ಆವಾಸಸ್ಥಾನ, ಅರಣ್ಯ ಮತ್ತು ಜೀವವೈವಿಧ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಚಟುವಟಿಕೆಗಳನ್ನು ನಿಲ್ಲಿಸಬೇಕು. ಸಮುದಾಯ ಅರಣ್ಯ ಸಂಪನ್ಮೂಲಗಳ ಪ್ರವೇಶವನ್ನು ನಿಯಂತ್ರಿಸಲು ಗ್ರಾಮ ಸಭೆಗಳು ತೆಗೆದುಕೊಂಡ ನಿರ್ಧಾರಗಳನ್ನು ಬೆಂಬಲಿಸಬೇಕು.

ಕಾಡಿನ ವಿಸ್ತಾರ:
ದಾಖಲೆಯಲ್ಲಿ ಕೊಡಲಪಲ್ಲಿ ಮತ್ತು ಸಿಂದೂರಿಯಾ ಗ್ರಾಮಗಳ ವ್ಯಾಪ್ತಿಗೆ – 760.20625 ಎಕರೆ ಇದೆಯೆಂದು ಹೇಳಲಾಗಿದ್ದರೂ ವಾಸ್ತವವಾಗಿ ಇದಕ್ಕಿಂತಲೂ ಹೆಚ್ಚು ವಿಸ್ತರಾದ ಅರಣ್ಯ ಪ್ರದೇಶವನ್ನು ಅಲ್ಲಿನ ಮಹಿಳೆಯರು ಕಾವಲು ಕಾಯುತ್ತಿದ್ದಾರೆ.
ಪೂರ್ವ: ಪೂರ್ವದಲ್ಲಿ, ಗಡಿ ರೇಖೆಯು ಬರಕನಿಹಾ ಪಥಬನಿ, ಪಟುರಿಯಾಲ್ಖೋಲ್, ಅಂಬಾಖೋಲ್ ಪ್ರದೇಶಗಳನ್ನು ಸುಲಿಯಾ ಮೀಸಲು ಅರಣ್ಯಗಳ ಒಳಗೆ ಕಂಕಿಯಾ ಗ್ರಾಮದ ಸಾಂಪ್ರದಾಯಿಕ ಗಡಿಯೊಂದಿಗೆ ಆವರಿಸುತ್ತದೆ;
ಪಶ್ಚಿಮ: ಪಶ್ಚಿಮದಲ್ಲಿ, ಇದು ಚಂಚುನಿಯಾ, ಗುಂಡೂರಿಬಾಡಿ ಮತ್ತು ದರ್ಪನಾರಾಯಣಪುರ ಗ್ರಾಮಗಳ ಸಾಂಪ್ರದಾಯಿಕ ಗಡಿಯನ್ನು ಮುಟ್ಟುತ್ತದೆ;
ಉತ್ತರ: ಉತ್ತರದಲ್ಲಿ, ಇದು ಕೋಡಲ್ಪಲ್ಲಿ ಮತ್ತು ಸಿದುರಿಯಾ ಗ್ರಾಮದ ಕಂದಾಯ ಗಡಿಯನ್ನು ಮುಟ್ಟುತ್ತದೆ
ದಕ್ಷಿಣ: ದಕ್ಷಿಣದಲ್ಲಿ, ಇದು ದಿಮಿರಿಯಾಖೋಲ್, ಸಂಪದಾ, ಜೋಡಿಕಲಚುವಾ, ಬಗಬತತಲಿ, ಬೌನ್ಸಗಡ ಮತ್ತು ಕಾಕಲಾಮ ಗ್ರಾಮದ ಸಾಂಪ್ರದಾಯಿಕ ಅರಣ್ಯ ಗಡಿಗಳನ್ನು ಮುಟ್ಟುತ್ತದೆ.

ಉಪಕರಣಗಳ ಮುಟ್ಟುಗೋಲು ಮತ್ತು ದಂಡ:
ಗ್ರಾಮದ ಮಹಿಳೆಯರು ಕಾಡಗಳಲ್ಲಿ ಗುಂಪಾಗಿ ಸಂಚರಿಸುತ್ತಾರೆ. ಯಾರೇ ಅಕ್ರಮವಾಗಿ ಕಾಡು ಕಡಿಯುವುದನ್ನು ಕಂಡರೆ ಅವರ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಜೊತೆಗೆ ದಂಡವನ್ನು ವಿಧಿಸುತ್ತಾರೆ. ಇದೆಷ್ಟರ ಮಟ್ಟಿಗೆ ಇದೆಯೆಂದರೆ ಅರಣ್ಯ ಸಮಿತಿಯವರು ತಮ್ಮ ಕುಟುಂಬಗಳ ಸದಸ್ಯರು ಸಹ ಕಾಡನ್ನು ಕಡಿಯಲು ಬಿಡುವುದಿಲ್ಲ. ಇದರ ಪರಿಣಾಮ ಕಾಡು ಸಮೃದ್ಧವಾಗಿ, ವಿಸ್ತಾರವಾಗಿ ಬೆಳೆದು ನಿಂತಿದೆ.

ಅರಣ್ಯಉತ್ಪನ್ನಗಳ ಸಂಗ್ರಹ:
ಕಾಡಿನಲ್ಲಿ ತಾನಾಗಿ ಉದುರಿಬಿದ್ದ ರೆಂಬೆಕೊಂಬೆ ಸಂಗ್ರಹಿಸುವುದಲ್ಲದೇ ಕಾಡಿನ ಉತ್ಪನ್ನಗಳಾದ ಅಂಟು, ಜೇನು, ಬಿದಿರು, ಕೆಂಡು ಎಲೆಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಇಲ್ಲಿನ ಕೆಂಡು ಎಲೆಗಳು ಉತ್ತಮ =ದರ್ಜೆಯ ಬೀಡಿ ಕಟ್ಟಲು ಉಪಯುಕ್ತವಾಗಿರುವುದರಿಂದ ಭಾರಿ ಬೇಡಿಕೆಯೂ ಇದೆ.

ಸಾಕ್ಷರತೆ:
ಇಲ್ಲಿನ ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಅವರ ವಿದ್ಯಾಭ್ಯಾಸ ಸಲುವಾಗಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಇಲ್ಲಿಮ ಬಹುತೇಕ ಪುರುಷರು, ಮಹಿಳೆಯರು ಸಾಕ್ಷರರಾಗಿದ್ದಾರೆ. ಒರಿಯಾ ಭಾಷೆಯಲ್ಲಿರುವ ಸರ್ಕಾರದ ಕಾಗದ ಪತ್ರಗಳನ್ನು ಉತ್ತಮವಾಗಿ ಗ್ರಹಿಸಿ ಅವುಗಳಿಗೆ ಮಾರುತ್ತರ ನೀಡುವ ಜ್ಞಾನ ಇವರಿಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com