ಒಡಿಶಾ: ಮೂರು ದಶಕಗಳಿಂದ ದುರ್ಗಾ ಪೂಜೆಯ ನೇತೃತ್ವ ವಹಿಸಿದ್ದಾರೆ ಮುಸ್ಲಿಂ ವ್ಯಕ್ತಿ!
ಸಮುದಾಯಗಳ ನಡುವೆ ಪ್ರೀತಿ ಮತ್ತು ಸಾಮರಸ್ಯ ಮೂಡಿಸಲು ಅವರ ನಂಬಿಕೆಯ ಎಲ್ಲೆಗಳನ್ನು ಮೀರಿ ಪ್ರಯತ್ನಿಸಬಹುದು ಎಂಬುದನ್ನು ಓಡಿಶಾದ ಕೊಹಿನೂರ್ ಇಸ್ಲಾಂ ತನ್ನ ಕಾರ್ಯಗಳಿಂದ ಸಾಬೀತುಪಡಿಸುತ್ತಿದ್ದಾರೆ.
Published: 26th September 2022 04:57 PM | Last Updated: 26th September 2022 05:03 PM | A+A A-

ಕೊಹಿನೂರ್ ಇಸ್ಲಾಂ
ಬಾರಿಪಾದ: ಸಮುದಾಯಗಳ ನಡುವೆ ಪ್ರೀತಿ ಮತ್ತು ಸಾಮರಸ್ಯ ಮೂಡಿಸಲು ಅವರ ನಂಬಿಕೆಯ ಎಲ್ಲೆಗಳನ್ನು ಮೀರಿ ಪ್ರಯತ್ನಿಸಬಹುದು ಎಂಬುದನ್ನು ಓಡಿಶಾದ ಕೊಹಿನೂರ್ ಇಸ್ಲಾಂ ತನ್ನ ಕಾರ್ಯಗಳಿಂದ ಸಾಬೀತುಪಡಿಸುತ್ತಿದ್ದಾರೆ.
74 ವರ್ಷದ ಈ ಮುಸ್ಲಿಂ ವ್ಯಕ್ತಿ ಕೊಹಿನೂರ್ ಇಸ್ಲಾಂ ಅವರು ಗಂಗರಾಜ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂತುಲಿಡಿಂಗ ಗ್ರಾಮದಲ್ಲಿ ಕಳೆದ ಮೂರು ದಶಗಳಿಂದ ದುರ್ಗಾಪೂಜೆಯ ನೇತೃತ್ವ ವಹಿಸುತ್ತಿದ್ದಾರೆ.
ಇದನ್ನು ಓದಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ: ಚಾಮುಂಡಿ ದೇವಿಗೆ ರಾಷ್ಟ್ರಪತಿ ಸೇರಿ ಗಣ್ಯರಿಂದ ಪುಷ್ಪಾರ್ಚನೆ
1986 ರಲ್ಲಿ, ಹಳ್ಳಿಯ ಮಹಿಳೆಯರು ದುರ್ಗಾಪೂಜೆಯಲ್ಲಿ ಪಾಲ್ಗೊಳ್ಳಲು ಬರಿಪಾದ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದುದನ್ನು ನೋಡಿದ ಅವರು ತಮ್ಮ ಹಳ್ಳಿಯಲ್ಲೂ ಈ ಹಬ್ಬವನ್ನು ಪ್ರಾರಂಭಿಸುವ ಆಲೋಚನೆ ಮಾಡಿದರು. ನಮ್ಮ ಗ್ರಾಮದಲ್ಲಿಯೇ ದುರ್ಗಾ ಪೂಜೆಯನ್ನು ನಾವೇಕೆ ನಡೆಸಬಾರದು ಎಂದು ಪ್ರಶ್ನಿಸಿದರು ಮತ್ತು ತಮ್ಮ ಸಲಹೆಗಳನ್ನು ಗ್ರಾಮಸ್ಥರೊಂದಿಗೆ ಹಂಚಿಕೊಂಡಾಗ, ಅವರು ಪ್ರಸ್ತಾಪವನ್ನು ಒಪ್ಪಿಕೊಂಡರು. ಸ್ಥಳೀಯರಿಂದ ಸಂಗ್ರಹಿಸಿದ ನಿಧಿಯಿಂದ ತೆಂತುಳಿಡಿಂಗ ದುರ್ಗಾಪೂಜಾ ಸಮಿತಿಯನ್ನು ಸ್ಥಾಪಿಸಲಾಯಿತು. ಅಂದಿನಿಂದ ಕೊಹಿನೂರ್ ಇಸ್ಲಾಂ ಅವರು ಸುಮಾರು 500 ಸದಸ್ಯರ ಸಮಿತಿಯ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
"ಗ್ರಾಮಸ್ಥರ ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿ ನಾನು ಸಮಿತಿಯನ್ನು ನಿರಂತರವಾಗಿ ನಡೆಸುತ್ತಿದ್ದೇನೆ ಮತ್ತು ಕಳೆದ 37 ವರ್ಷಗಳಿಂದ ದುರ್ಗಾಪೂಜೆ ಉತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇನೆ" ಎಂದು ಕೊಹಿನೂರ್ ಅವರು ಹೇಳಿದ್ದಾರೆ.
ನಾನು ಸಮಿತಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ ನನಗೆ ಕೇವಲ 34 ವರ್ಷ ಆಗಿತ್ತು. ಈಗ 74 ವರ್ಷ. ನನ್ನ ಇಬ್ಬರು ಪುತ್ರಿಯರಾದ ತಾಹಾ ಪರ್ವೀನ್ ಮತ್ತು ಜೋಹಾ ಸಹ ಸಮಿತಿಯನ್ನು ನಡೆಸಲು ಹಣಕಾಸಿನ ನೆರವು ನೀಡುತ್ತಾರೆ. ತಾಹಾ ಪುಣೆಯಲ್ಲಿ ಯುಎಸ್ ಮೂಲದ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿದ್ದರೆ, ಕಿರಿಯ ಸಹೋದರಿ ಜೋಹಾ ಅರ್ಥಶಾಸ್ತ್ರ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ನಾನು ಕಳೆದ 37 ವರ್ಷಗಳಿಂದ ದುರ್ಗಾ ಪೂಜೆ ಮಾಡುತ್ತಿರುವುದು ಆ ಇಬ್ಬರಿಗೂ ಹೆಮ್ಮೆಯ ವಿಚಾರ ಎಂದಿದ್ದಾರೆ.