ವಾರಣಾಸಿ: ಭಿಕ್ಷುಕರನ್ನು ಉದ್ಯಮಿಗಳಾಗಿ ಪರಿವರ್ತಿಸಲು ನೆರವಾಗುತ್ತಿರುವ ಪತ್ರಕರ್ತ ಚಂದ್ರ ಮಿಶ್ರಾ!

ಪತ್ರಕರ್ತ- ಸಮಾಜ ಸೇವಕ ಚಂದ್ರಮಿಶ್ರಾ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಿಕ್ಷಕರನ್ನು ಉದ್ಯಮಿಗಳಾಗಿ ಪರಿವರ್ತಿಸಲು ನೆರವಾಗುವ ಮೂಲಕ ಅವರಿಗೊಂದು ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಡುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶ: ಸಮಾಜದಲ್ಲಿ ಭಿಕ್ಷುಕರೆಂದರೆ ಕೀಳಾಗಿ ನೋಡುವವರೇ ಹೆಚ್ಚು. ಅವರ ನೆರವಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವೆಲ್ಲವೂ ಮಧ್ಯವರ್ತಿಗಳ ಪಾಲಾಗುತ್ತಿದ್ದು, ಅವರು ಗೌರವಯುತ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಾಜದಲ್ಲಿ ಪತ್ರಕರ್ತ- ಸಮಾಜ ಸೇವಕ ಚಂದ್ರ ಮಿಶ್ರಾ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಿಕ್ಷಕರನ್ನು ಉದ್ಯಮಿಗಳಾಗಿ ಪರಿವರ್ತಿಸಲು ನೆರವಾಗುವ ಮೂಲಕ ಅವರಿಗೊಂದು ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಡುತ್ತಿದ್ದಾರೆ.

ಭಿಕ್ಷುಕರಿಗೆ ಜೀವನೋಪಾಯಕ್ಕಾಗಿ ಪರ್ಯಾಯ ಮಾರ್ಗಗಳನ್ನು ಸೃಷ್ಟಿಸುವ ಮೂಲಕ ಗೌರವಯುತವಾಗಿ ಬದುಕಲು ಅವಕಾಶ ನೀಡಬೇಕು. ಭಿಕ್ಷುಕರು ಉದ್ಯಮಿಗಳಾಗಿದ್ದರೆ, ಯಾರೂ ನಿರುದ್ಯೋಗಿಗಳಾಗುವುದಿಲ್ಲ ಎಂದು ಮಿಶ್ರಾ ಹೇಳುತ್ತಾರೆ. ಮೂಲತ: ಒಡಿಶಾದ ಸಣ್ಣ ಹಳ್ಳಿಯವರಾದ ಅವರು, ಪವಿತ್ರ ಸ್ಥಳವಾದ ವಾರಣಾಸಿಯಲ್ಲಿ ಭಿಕ್ಷುಕರಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಡಿಸೆಂಬರ್ 2020 ರಲ್ಲಿ ವಾರಣಾಸಿಗೆ ಬಂದು ನೆಲೆಸಿದ್ದಾರೆ. ಒಡಿಶಾ, ಛತ್ತೀಸ್‌ಗಢ, ಬಿಹಾರ, ಹರಿಯಾಣ ಮತ್ತು ದೆಹಲಿ ರಾಜ್ಯ ಸರ್ಕಾರಗಳೊಂದಿಗೆ ಉದ್ಯೋಗ ನೀತಿಗಳ ಬಗ್ಗೆ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದರು. 

ಉದ್ಯಮಶೀಲತಾ ಕೌಶಲ್ಯಗಳನ್ನು ನೀಡಲು 2021 ರಲ್ಲಿ 'ಭಿಕ್ಷುಕರ ನಿಗಮ'ವನ್ನು ಸ್ಥಾಪಿಸಿದ ಮಿಶ್ರಾ ಅವರು, ಭಿಕ್ಷುಕರು ಹೆಚ್ಚಿನ ಸಂಖ್ಯೆಯಲ್ಲಿರುವ ವಾರಣಾಸಿಯ ಘಾಟ್‌ಗಳಾದ್ಯಂತ ಕಾನ್ಫರೆನ್ಸ್ ಬ್ಯಾಗ್‌ಗಳು, ಲ್ಯಾಪ್‌ಟಾಪ್ ಬ್ಯಾಗ್‌ಗಳು ಮತ್ತು ಶಾಪಿಂಗ್ ಬ್ಯಾಗ್‌ಗಳಂತಹ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಇದುವರೆಗೆ 12 ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಭಿಕ್ಷುಕರು ತಯಾರಿಸಿದ ಉತ್ಪನ್ನಗಳನ್ನು ಪೂರೈಸಲು ನಗರದ ಉನ್ನತ ಹೋಟೆಲ್‌ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಮಿಶ್ರಾ ಸಂಪರ್ಕಿಸಿದ್ದಾರೆ.

ಮಿಶ್ರಾ ಹೇಳುವಂತೆ, ಭಿಕ್ಷೆಯಿಂದ ಬದುಕುತ್ತಿದ್ದ ಈ ಕುಟುಂಬಗಳು ಈಗ ಸ್ವಸಹಾಯ ಗುಂಪು ರಚಿಸಿಕೊಂಡಿವೆ. “2021-22ರಲ್ಲಿ ಭಿಕ್ಷುಕರ ವ್ಯಾಪಾರವನ್ನು ಹೆಚ್ಚಿಸಲು ಜನರು 5.7 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ 2022-23 ರಲ್ಲಿ, ಅವರು 10 ಪಟ್ಟು ಹೆಚ್ಚಿಗೆ ಹೂಡಿಕೆ ಮಾಡಿದ್ದು, ಅವರ ವ್ಯವಹಾರವನ್ನು 57 ಲಕ್ಷ ರೂ. ಗೆ ಹೆಚ್ಚಿಸಿದರು. ಈ ಭಿಕ್ಷುಕರು ತಮ್ಮಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಹಿಂದಿರುಗಿಸಿದ್ದಾರೆ ಎಂದು ಮಿಶ್ರಾ ತಿಳಿಸಿದರು. 

“ಭಿಕ್ಷುಕರ ಬಗೆಗಿನ ಮನಸ್ಥಿತಿ ಮತ್ತು ಧೋರಣೆ ಬದಲಾಗಬೇಕು. ಅವಕಾಶ ಸಿಕ್ಕರೆ, ಅವರು ಅದೃಷ್ಟವನ್ನು ಗಳಿಸಬಹುದು. ಮೊದಲು, ಅವರು ಭಿಕ್ಷಾಟನೆಯ ಮೂಲಕ ಅಸ್ಥಿರ ಆದಾಯದ ಮೇಲೆ ಅವಲಂಬಿತರಾಗಿದ್ದರು. ಇಂದು ಅವರು ತಿಂಗಳಿಗೆ ಕನಿಷ್ಠ 10,000 ರೂ. ಗಳಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ತಾವು ಮೊದಲ ಬಾರಿಗೆ ವಾರಣಾಸಿಗೆ ದೇವರ ದರ್ಶಕ್ಕೆ ಬಂದಾಗ ಘಾಟ್ ನಲ್ಲಿದ್ದ ಹೆಚ್ಚಿನ ಸಂಖ್ಯೆಯ ಭಿಕ್ಷುಕರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೆಗ್ಗರ್ಸ್ ಕಾರ್ಪೊರೇಷನ್ ಸ್ಥಾಪಿಸಿದೆ. ತನ್ನ 12 ವರ್ಷದ ಮಗನ ಜೊತೆಗೆ ಖುಷ್ಬು (ಹೆಸರು ಬದಲಾಯಿಸಲಾಗಿದೆ) ಘಾಟ್‌ನಲ್ಲಿ ಭಿಕ್ಷೆ ಬೇಡುತ್ತಿದ್ದರು. ಪತಿ ಬೇರೊಬ್ಬನನ್ನು ಮದುವೆಯಾಗಲು ಮನೆಯಿಂದ ಹೊರಹಾಕಿದ್ದರಿಂದ ಭಿಕ್ಷೆ ಬೇಡುತ್ತಿದ್ದಳು. ಒಂಟಿ ತಾಯಿಯಾದ ಖುಷ್ಬು ಭಿಕ್ಷಾಟನೆಯನ್ನು ತ್ಯಜಿಸಿ ಹೊಲಿಗೆ ಕಲಿಯಲು ತಕ್ಷಣ ಒಪ್ಪಿಕೊಂಡರು ಎಂದು ಮಿಶ್ರಾ ತಿಳಿಸಿದರು.

ಒಂದು ಡಜನ್ ಕುಟುಂಬಗಳು ಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ ಮತ್ತು ಅವರು ರಾಷ್ಟ್ರೀಯ ಕಾರ್ಯಕಾರಿ ಸಭೆಯ ಪ್ರತಿನಿಧಿಗಳಿಗೆ 10 ದಿನಗಳ ಅವಧಿಯಲ್ಲಿ 500 ಬ್ಯಾಗ್‌ಗಳನ್ನು ಪೂರೈಸಿದರು."ಇದು ಕಷ್ಟಕರವೆಂದು ತೋರುತ್ತದೆ, ಆದರೆ ಅವರು ಬ್ಯಾಗ್ ತಯಾರಿಸಲು ದಿನವಿಡೀ ಕೆಲಸ ಮಾಡಿದ್ದರು ಎಂದು ಮಿಶ್ರಾ ಹೇಳುತ್ತಾರೆ. ಈ ವರ್ಷದ ಎಪ್ರಿಲ್‌ನಲ್ಲಿ, ಸ್ಟಾರ್ಟ್‌ಅಪ್ ಇಂಡಿಯಾ ಸಹಯೋಗದಲ್ಲಿ ಲೆಮನ್ ಐಡಿಯಾಸ್ ಆಯೋಜಿಸಿದ್ದ ಇನ್ನೋಪ್ರೆನಿಯರ್ಸ್ ಗ್ಲೋಬಲ್ ಸ್ಟಾರ್ಟ್‌ಅಪ್ ಸ್ಪರ್ಧೆಯಲ್ಲಿ ‘ಬೆಗ್ಗರ್ಸ್ ಕಾರ್ಪೊರೇಷನ್’ ಬೆಸ್ಟ್ ಸೋಶಿಯಲ್ ಇಂಪ್ಯಾಕ್ಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com