ಬಿಟೆಕ್, ಎಂಬಿಎಯಿಂದ ಹೈನುಗಾರಿಕೆಗೆ: ದನದ ಕೊಟ್ಟಿಗೆಯಲ್ಲಿ ಬದುಕು ಕಂಡುಕೊಂಡ ಪದವೀಧರರು!

ಕೃಷಿ ಲಾಭದಾಯಕವಲ್ಲಾ ಎಂದು ಅದರತ್ತ ಅಸಡ್ಡೆ ತೋರುವವರೇ ಹೆಚ್ಚು. ಆದರೆ, ವಿಜಯಪುರದ ಇಬ್ಬರು ಯುವ ಪದವೀಧರರಿಬ್ಬರೂ  ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರದ ಸಂಗಮೇಶ್
ವಿಜಯಪುರದ ಸಂಗಮೇಶ್

ವಿಜಯಪುರ: ಕೃಷಿ ಲಾಭದಾಯಕವಲ್ಲಾ ಎಂದು ಅದರತ್ತ ಅಸಡ್ಡೆ ತೋರುವವರೇ ಹೆಚ್ಚು. ಆದರೆ, ವಿಜಯಪುರದ ಇಬ್ಬರು ಯುವ ಪದವೀಧರರಿಬ್ಬರೂ  ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಹೌದು. ಬಿಟೆಕ್ ಪದವೀಧರ ರಿಜ್ವಾನ್ ಜಹಂಗೀರ್ ದಾರ್ ಮತ್ತು ಎಂಬಿಪಿ ಪದವೀಧರ ಸಂಗಮೇಶ್ ಅವರು, ತಾವು ಮಾಡಿರುವ ಶೈಕ್ಷಣಿಕ ಅರ್ಹತೆಗೆ ಯಾವುದೇ ಸಂಬಂಧವಿಲ್ಲದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಿನವಿಡೀ ಹಸು, ಎಮ್ಮೆಗಳ ಆರೈಕೆ ಮಾಡುತ್ತಾ, ಅವುಗಳಿಂದ ಹಾಲನ್ನು ಸಂಗ್ರಹಿಸಿ, ಗ್ರಾಹಕರಿಗೆ ಪೂರೈಸುತ್ತಾರೆ. 

ನಿಜವಾಗಿಯೂ, ಬಿ.ಟೆಕ್ ಮಾಡಿದ ನಂತರ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಆದರೆ, ನಾನು ಅದರ ಬಗ್ಗೆ ಆಸಕ್ತಿ ಹೊಂದಿದ್ದರಿಂದ, ಈ ಕ್ಷೇತ್ರಕ್ಕೆ ತೊಡಗುವುದು ಸುಲಭವಾಯಿತು ಎಂದು ರಿಜ್ವಾನ್ ಹೇಳಿದರು.

ಇದೇ ದೃಷ್ಟಿಕೋನ ಹೊಂದಿರುವ ಸಂಗಮೇಶ್, ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ತೊರೆದ ನಂತರ ವಿಜಯಪುರ ನಗರದಲ್ಲಿ ಎರಡು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ರಿಜ್ವಾನ್ ಬಿಟೆಕ್  ಮುಗಿಸಿದ ನಂತರ ಬೆಂಗಳೂರು ಮತ್ತು ದೆಹಲಿಯಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಐಸ್ ಲ್ಯಾಂಡ್ ಗೆ ಶಿಫ್ಟ್ ಆಗುವಂತೆ ಕಂಪನಿಯವರು ಹೇಳಿದಾಗ ವಿದೇಶ ಪ್ರಯಾಣಕ್ಕೆ ಇಷ್ಟವಿಲ್ಲದ ರಿಜ್ವಾನ್ ಕೆಲಸ ಬಿಟ್ಟು ವಿಜಯಪುರಕ್ಕೆ ಬಂದಿದ್ದು, ತವರು ಜಿಲ್ಲೆಯಲ್ಲಿ ಏನನ್ನಾದರೂ ಮಾಡಬೇಕು ಎಂದು ನಗರಕ್ಕೆ ಸಮೀಪವಿರುವ ಹೊನಗಾನಹಳ್ಳಿ ಗ್ರಾಮದಲ್ಲಿರುವ ಜಮೀನಿನಲ್ಲಿ ತಂದೆಯ ಪ್ರೋತ್ಸಾಹದಿಂದ ಕೃಷಿ ಆರಂಭಿಸಿದ್ದಾರೆ. ಮೊದಲಿಗೆ ಮೇಕೆ ಸಾಕಾಣಿಕೆಯನ್ನು ಆರಂಭಿಸಿದ್ದಾರೆ. ಆದರೆ ಆರೈಕೆ ಮಾಡಲು ಕಾರ್ಮಿಕರ ಕೊರತೆ ಕಾರಣ ಅದನ್ನು ನಡೆಸಲು ಸಮಸ್ಯೆಗಳನ್ನು ಎದುರಿಸಿದ್ದು, ನಂತರ ಹೈನುಗಾರಿಕೆಯನ್ನು ಪ್ರಾರಂಭಿಸಿದ್ದಾಗಿ ಅವರು ತಿಳಿಸಿದರು. 

ರಿಜ್ವಾನ್ ಈಗ ತನ್ನ ಹಳ್ಳಿಯ ಶೆಡ್‌ನಲ್ಲಿ ಸುಮಾರು 50 ಹಸುಗಳು ಮತ್ತು ಎಮ್ಮೆಗಳನ್ನು ಹೊಂದಿದ್ದು, ತನ್ನ ಗ್ರಾಹಕರಿಗೆ 100 ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ಪೂರೈಸುತ್ತಾರೆ. ಹಾಲು ಸಂಗ್ರಹಿಸುವ ಮತ್ತು ಸರಬರಾಜು ಮಾಡುವ ಕೆಲಸದಲ್ಲಿ ಸುಮಾರು ಆರು ಮಂದಿ ಕಾರ್ಮಿಕರಿದ್ದಾರೆ. ಇದಲ್ಲದೇ ದ್ರಾಕ್ಷಿಯಂತಹ ಬೆಳೆಗಳಿಗೆ ಸಾವಯವ ಗೊಬ್ಬರವಾಗಿ ರೈತರಿಗೆ ಸಗಣಿಯನ್ನೂ ರಿಜ್ವಾನ್ ಪೂರೈಸುತ್ತಾರೆ. 

ಹಾಲು, ನಿತ್ಯಹರಿದ್ವರ್ಣ ಉತ್ಪನ್ನ

<strong>ಸಂಗಮೇಶ್</strong>
ಸಂಗಮೇಶ್

ಮತ್ತೊಂದೆಡೆ ವಿಜಯಪುರ ನಗರದಲ್ಲಿ ವಾಸಿಸುತ್ತಿರುವ ಸಂಗಮೇಶ್, ಎರಡು ವರ್ಷಗಳ ಹಿಂದೆ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಎಂಬಿಎ ಪದವಿ ಮುಗಿದ ನಂತರ ಅವರು, ಸೌರ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ನಂತರ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕಾಗಿ ಇಂದೋರ್‌ಗೆ ತೆರಳಿದರು. ಆದಾಗ್ಯೂ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್‌ನಿಂದ ಅವರು ವಿಜಯಪುರಕ್ಕೆ ಮರಳಬೇಕಾಯಿತು. ಕೆಲಸಕ್ಕಾಗಿ ಇಂದೋರ್‌ಗೆ ಮರಳಲು ಇಷ್ಟವಿಲ್ಲದೆ ಅವರು ಸ್ವಯಂ ಉದ್ಯೋಗಿಯಾಗಲು ನಿರ್ಧರಿಸಿ, ಅಂತಿಮವಾಗಿ ಹೈನುಗಾರಿಕೆಗೆ ತೊಡಗಿಸಿಕೊಂಡಿದ್ದಾಗಿ ಹೇಳುತ್ತಾರೆ.

ಸಂಗಮೇಶ್ ಈಗ ಸುಮಾರು 16 ಜಾನುವಾರುಗಳನ್ನು ಹೊಂದಿದ್ದಾರೆ ಮತ್ತು ಪ್ರತಿದಿನ ಸುಮಾರು 50 ಲೀಟರ್ ಹಾಲನ್ನು ಸಾಮಾನ್ಯ ಗ್ರಾಹಕರಿಗೆ ಸರಬರಾಜು ಮಾಡುತ್ತಾರೆ.  ರಿಜ್ವಾನ್ ಅವರಂತೆ ಸಂಗಮೇಶ್ ಯಾವುದೇ ಕೂಲಿ ಕಾರ್ಮಿಕರನ್ನು ಇಟ್ಟುಕೊಂಡಿಲ್ಲ.  ಇಡೀ ಕುಟುಂಬವೇ ಕೆಲಸದಲ್ಲಿ ತೊಡಗಿಸಿಕೊಂಡಿದೆ. ರಿಜ್ವಾನ್ ಕಾರ್ಮಿಕರ ಸಹಾಯದಿಂದ ಗ್ರಾಹಕರಿಗೆ ಹಾಲು ಪೂರೈಸಿದರೆ, ಗ್ರಾಹಕರೇ ಹಾಲನ್ನು ಪಡೆಯಲು ಸಂಗಮೇಶ್ ಅವರ ಮನೆಗೆ ಬರುತ್ತಾರೆ. 

ಆದಾಗ್ಯೂ, ಇಬ್ಬರೂ ಪದವೀಧರರು ಹೈನುಗಾರಿಕೆಯ ಬಗ್ಗೆ ಸಾಮಾನ್ಯ ದೃಷ್ಟಿಕೋನವನ್ನು ಹೊಂದಿದ್ದಾರೆ. ಶಿಕ್ಷಿತರು ಬೇಸಾಯಕ್ಕೆ ತೊಡಗಿದಾಗ, ಅವರು ಜ್ಞಾನ ಮತ್ತು ಉತ್ಸಾಹವನ್ನು ಹೊಂದಿರುವುದರಿಂದ ಅವರು ಕೆಲಸದಲ್ಲಿ ಗಮನಾರ್ಹ ವ್ಯತ್ಯಾಸವನ್ನು ತರುತ್ತಾರೆ. ಡೈರಿ ಕ್ಷೇತ್ರವನ್ನು ಸುಧಾರಿಸಲು ಅವರು ಹೊಸ ಆಲೋಚನೆಗಳನ್ನು ಪರಿಚಯಿಸಬಹುದು. ಹೈನುಗಾರಿಕೆಯು ಸುಸ್ಥಿರ ಭವಿಷ್ಯವನ್ನು ಖಾತ್ರಿಪಡಿಸುವುದಲ್ಲದೆ, ಪರೋಕ್ಷವಾಗಿ ಇತರರಿಗೆ ಉದ್ಯೋಗವನ್ನು ನೀಡುತ್ತದೆ. ವಿದ್ಯಾವಂತ ಯುವಕರು ಈ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ಬಲವಾಗಿ ನಂಬಿದ್ದು, ಯುವಕರು ಇದನ್ನು ಕೀಳು ಕೆಲಸ ಎಂದು ಪರಿಗಣಿಸಬಾರದು ಎನ್ನುತ್ತಾರೆ.

ಹೈನುಗಾರಿಕೆ ಕ್ಷೇತ್ರವನ್ನು ಸುಧಾರಿಸಲು ಮತ್ತು ರೈತರಿಗೆ ಸಹಾಯ ಮಾಡಲು ರಿಜ್ವಾನ್ ಸರ್ಕಾರಕ್ಕೆ ಸಲಹೆಗಳನ್ನು ಸಹ ನೀಡಿದ್ದಾರೆ. ಪ್ರತಿ ಗ್ರಾ.ಪಂ.ನಲ್ಲಿ ಕನಿಷ್ಠ ಇಬ್ಬರು ಡೈರಿ ತೆರೆಯಲು ಉತ್ತೇಜನ ನೀಡಿದರೆ ಅವರಿಗೆ ನಿತ್ಯ ಆದಾಯ ಸಿಗುತ್ತದೆ ಎಂದ ಅವರು, ರೈತರು ಸ್ಥಳೀಯವಾಗಿ ಮೇವನ್ನು ಮಾರಾಟ ಮಾಡಬಹುದು. ಮುಖ್ಯವಾಗಿ ಬರಗಾಲದ ಸಮಯದಲ್ಲಿ ಬೆಳೆಗಳು ವಿಫಲವಾದುದನ್ನು ನೋಡಿದ್ದೇವೆ. ರೈತರಿಗೆ ಸಿಕ್ಕಿದ್ದು ಮೇವು ಮಾತ್ರ. ನಾವು ಸ್ಥಳೀಯವಾಗಿ ಹೆಚ್ಚಿನ ಡೈರಿ ಫಾರ್ಮ್‌ಗಳನ್ನು ಹೊಂದಿದ್ದರೆ, ರೈತರು ಕನಿಷ್ಠ ಮೇವನ್ನು ಮಾರಾಟ ಮಾಡಬಹುದು, ಅದು ಸ್ವಲ್ಪ ನಷ್ಟವನ್ನು ಭರಿಸುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com