ನಡೆದಾಡುವ ಸಾಮರ್ಥ್ಯ ಇಲ್ಲದಿದ್ದರೂ ದಿವ್ಯಾಂಗರು ಗೌರವಯುತ ಜೀವನ ನಡೆಸಲು ನೆರವಾಗುತ್ತಿರುವ ನಿಮಿಷ್ ಆಚಾರ್ಯ!
ಅಪಘಾತವೊಂದು ಅನೇಕ ಜೀವಗಳನ್ನು ಹಾಳುಮಾಡುತ್ತದೆ. ಆದರೆ ಈ ದುರಂತವು ಅನೇಕರ ಜೀವನವನ್ನು ಬದಲಾಯಿಸಿದೆ. 2001ರಲ್ಲಿ ಕಾರು ಅಪಘಾತಕ್ಕೊಳಗಾಗಿದ್ದ ನಿಮಿಷ್ ಆಚಾರ್ಯ (47) ಅವರ ಬೆನ್ನುಹುರಿ ಹಾನಿಯಾಗಿ ನಡೆದಾಡುವ ಸಾಮರ್ಥ್ಯವನ್ನೇ ಕಳೆದುಕೊಂಡರು, ಜೀವನದುದ್ದಕ್ಕೂ ಗಾಲಿಕುರ್ಚಿಗೆ ಸೀಮಿತವಾದರು. ಇದು ಅವರ ಜೀವನದ ಮತ್ತೊಂದು ಅಧ್ಯಾಯವನ್ನು ಪ್ರಾರಂಭಿಸಿತು.
Published: 27th August 2023 05:07 PM | Last Updated: 28th August 2023 05:19 PM | A+A A-

ತಮ್ಮ ಸಂಘದ ಮೂಲಕ ದಿವ್ಯಾಂಗರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ನಿಮಿಷ್ ಆಚಾರ್ಯ
ವಿಜಯಪುರ: ಅಪಘಾತವೊಂದು ಅನೇಕ ಜೀವಗಳನ್ನು ಹಾಳುಮಾಡುತ್ತದೆ. ಆದರೆ ಈ ದುರಂತವು ಅನೇಕರ ಜೀವನವನ್ನು ಬದಲಾಯಿಸಿದೆ. 2001ರಲ್ಲಿ ಕಾರು ಅಪಘಾತಕ್ಕೊಳಗಾಗಿದ್ದ ನಿಮಿಷ್ ಆಚಾರ್ಯ (47) ಅವರ ಬೆನ್ನುಹುರಿ ಹಾನಿಯಾಗಿ ನಡೆದಾಡುವ ಸಾಮರ್ಥ್ಯವನ್ನೇ ಕಳೆದುಕೊಂಡರು, ಜೀವನದುದ್ದಕ್ಕೂ ಗಾಲಿಕುರ್ಚಿಗೆ ಸೀಮಿತವಾದರು. ಇದು ಅವರ ಜೀವನದ ಮತ್ತೊಂದು ಅಧ್ಯಾಯವನ್ನು ಪ್ರಾರಂಭಿಸಿತು. ಈಗ ಅವರು ಬೆನ್ನುಹುರಿ ಗಾಯದಿಂದ ಉಂಟಾದ ದಿವ್ಯಾಂಗರಿಗೆ ವೈದ್ಯಕೀಯ ಶಿಬಿರ ಆಯೋಜಿಸುತ್ತಾರೆ. ಅವರ ಹಕ್ಕುಗಳಿಗಾಗಿ ಪ್ರತಿಭಟನೆಗಳು ಮತ್ತು ಅವರಿಗೆ ಉತ್ತಮ ಸೌಲಭ್ಯಗಳನ್ನು ಪಡೆಯಲು ಆಗಾಗ್ಗೆ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ. ಅಪಘಾತದಿಂದ ಅವರು ಅನುಭವಿಸಿದ ನೋವು, ಸಂಕಟ, ಅವರ ಚೈತನ್ಯವನ್ನು ಮತ್ತಷ್ಟು ಉಕ್ಕುವಂತೆ ಮಾಡಿದ್ದು, ಅವರಂತಹ ಅನೇಕರಿಗೆ ಈಗ ಸ್ಫೂರ್ತಿಯ ಸೆಲೆಯಾಗಿದ್ದಾರೆ.
ಆಚಾರ್ಯ ಅವರು ಒಂದು ದಶಕದಿಂದ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತ ಸಂತ್ರಸ್ತರ ಸಂಘವನ್ನು ನಡೆಸುತ್ತಿದ್ದಾರೆ. ಇದು ಅಂಗವಿಕಲರ ಪರಿಹಾರ ಮತ್ತು ಪುನರ್ವಸತಿಗಾಗಿ ಕಾರ್ಯನಿರ್ವಹಿಸುವ ಎನ್‌ಜಿಒ. ಆಗಿದೆ. ದಿ ಸಂಡೇ ಎಕ್ಸ್ ಪ್ರೆಸ್ ಜೊತೆಗೆ ಮಾತಾಡಿದ ಅವರು, 2001 ರಲ್ಲಿ ಆದ ಕಾರು ಅಪಘಾತ ನನ್ನನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿತು. ಆಗ ನನಗೆ ಕೇವಲ 24 ವರ್ಷ ಮತ್ತು ಆರು ತಿಂಗಳ ಮಗನಿದ್ದನು. ನಾನು ಮತ್ತೆ ನಡೆಯಲು ಸಾಧ್ಯವಿಲ್ಲ ಎಂದು ತಿಳಿದಾಗ ತುಂಬಾ ಆಘಾತವಾಯಿತು. ನಾಲ್ಕು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದೆ, ಆಗಿರುವ ಹಾನಿಯನ್ನು ಮತ್ತೆ ಸರಿ ಮಾಡಲು ಸಾಧ್ಯವಿಲ್ಲ ಎಂದು ಹೆಸರಾಂತ ವೈದ್ಯರು ಕೈಚೆಲ್ಲಿದ್ದಾಗಿ ಅವರು ನೆನಪಿಸಿಕೊಂಡರು.
ನಾಲ್ಕು ವರ್ಷಗಳ ಕಾಲ ಹಾಸಿಗೆಯಲ್ಲಿ ಕಳೆದ ನಂತರ, ಅಂತಿಮವಾಗಿ ತಿರುಗಾಡಲು ಭುಜದ ಶಕ್ತಿ ಪಡೆಯಲು ಸಹಾಯ ಮಾಡುವ ಚಿಕಿತ್ಸೆಯನ್ನು ಪಡೆದೆ. ಚಿಕಿತ್ಸೆಯು ದೈಹಿಕ ಶಕ್ತಿಗಿಂತ ಹೆಚ್ಚಾಗಿ ಆತ್ಮವಿಶ್ವಾಸವನ್ನು ವೃದ್ಧಿಸಿತು. ಗಾಲಿಕುರ್ಚಿಯಲ್ಲಿ ತಿರುಗಾಡುತ್ತಾ ಕೆಲಸ ಮಾಡಲು ಪ್ರಾರಂಭಿಸಿದ್ದೆ. ನಂತರ ವಿಜಯಪುರ ಜಿಲ್ಲೆಯಲ್ಲಿ ತಮ್ಮಂತೆಯೇ ಜೀವನ ನಡೆಸುತ್ತಿರುವ 40 ಜನರನ್ನು ನೋಡಿದೆ. ಹೆಚ್ಚಿನ ಸಂದರ್ಭಗಳಲ್ಲಿ ಕುಟುಂಬವು ಅಂತಹ ವ್ಯಕ್ತಿಗೆ ಕಾಳಜಿ ತೋರಿಸಲ್ಲ ಎಂಬುದು ತಿಳಿದು,ಅವರು ಸ್ವತಂತ್ರ ಮತ್ತು ಗೌರವಾನ್ವಿತ ಜೀವನ ನಡೆಸಲು ಸಹಾಯ ಮಾಡಲು ಅವರಂತಹ ಇತರರನ್ನು ಭೇಟಿಯಾಗಲು ಪ್ರಾರಂಭಿಸಿದ್ದೆ. ನಮ್ಮಂತಹ ಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಿಗೆ ಸರ್ಕಾರದ ಬೆಂಬಲವಿಲ್ಲದೆ ಪರಿಹರಿಸಲಾಗುವುದಿಲ್ಲ ಎಂದು ಅವರು ಹೇಳಿದರು.

2013ರಲ್ಲಿ 40 ಜನರೊಂದಿಗೆ ಸಂಘ ರಚನೆಯಾಗಿದ್ದು, ಐದು ದಿನಗಳ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿದರು. ಸುಮಾರು 20 ಜನರು ಭಾಗವಹಿಸಿದ್ದ ಶಿಬಿರದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಕೆಲವು ಎನ್‌ಜಿಒಗಳನ್ನು ತೊಡಗಿಸಿಕೊಂಡಿದ್ದೇವೆ. ಈಗ ನಿಯಮಿತವಾಗಿ ಶಿಬಿರ ನಡೆಯುತ್ತಿರುವುದು ಮಾತ್ರವಲ್ಲದೆ ಸಂಘದ ಸದಸ್ಯರ ಸಂಖ್ಯೆ 453ಕ್ಕೆ ಏರಿದೆ.
ಇದನ್ನೂ ಓದಿ: ಕ್ರೀಡೆ, ಕರಕುಶಲ ತರಬೇತಿ, 50 ವರ್ಷಗಳಿಂದ ನಿಸ್ವಾರ್ಥ ಸೇವೆ: ಕೊಳೆಗೇರಿಗಳಲ್ಲಿನ ವಿಶೇಷ ಚೇತನರ ಬಾಳಿಗೆ ಬೆಳಕು ಈ ಶಾಲೆ!
ಬೆನ್ನುಹುರಿ ಅಪಘಾತದ ಸಂತ್ರಸ್ತರು ಸಾಮಾನ್ಯ ಜೀವನಕ್ಕೆ ಮರಳಲು ಸಾಧ್ಯವಿಲ್ಲ ಆದರೆ ಗಾಲಿಕುರ್ಚಿಯನ್ನು ನಿರ್ವಹಿಸಲು, ಅವರಿಗೆ ವಿಶೇಷ ಚಿಕಿತ್ಸೆ ಮತ್ತು ವ್ಯಾಯಾಮದ ಅಗತ್ಯವಿದೆ. ದುರದೃಷ್ಟವಶಾತ್, ಯಾವುದೇ ಸರ್ಕಾರಿ ಆಸ್ಪತ್ರೆಯು ಈ ಚಿಕಿತ್ಸೆಯನ್ನು ನೀಡುವುದಿಲ್ಲ. ಕರ್ನಾಟಕದಲ್ಲಿ ಅಂತಹ ಮೂರು ಕೇಂದ್ರಗಳಿವೆ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳು ಮೂರು ತಿಂಗಳ ಚಿಕಿತ್ಸೆಗಾಗಿ ತಿಂಗಳಿಗೆ ಸುಮಾರು 10,000 ರೂ.ಗಳನ್ನು ವಿಧಿಸುತ್ತವೆ ಎಂದು ತಿಳಿಸಿದ ಅವರು, ಪ್ರತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅಂತಹ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಿದರು.
ಬೆನ್ನುಹುರಿ ಗಾಯಕ್ಕೆ ವಿಶೇಷ ಚಿಕಿತ್ಸೆ ಅಗತ್ಯವಿರುತ್ತದೆ. ಔಷಧಿಗಳಿಗೆ ಸರಾಸರಿ 4,000 ರೂ. ಬೇಕಾಗುತ್ತದೆ. ವಿಕಲಚೇತನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆಚಾರ್ಯ, 2017 ರಲ್ಲಿ ಅಂಗವಿಕಲರ ಕೋಟಾದಡಿಯಲ್ಲಿ ಸರ್ಕಾರದಿಂದ ಮೋಟಾರು ವಾಹನ ಪಡೆದ ಬೆನ್ನುಹುರಿ ಗಾಯದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನಿಂದ ಅವರು ಸುಮಾರು 50 ಜನರಿಗೆ ಮೋಟಾರ್‌ಸೈಕಲ್‌ಗಳನ್ನು ಒದಗಿಸಿದ್ದಾರೆ. ಇದು ಅವರ ಜೀವನದಲ್ಲಿ ಒಂದು ಮಾದರಿ ಬದಲಾವಣೆಯನ್ನು ತಂದಿದೆ. ಇಲ್ಲಿಯವರೆಗೆ ನಮ್ಮ ಸಂಘದಲ್ಲಿ ಕನಿಷ್ಠ 30 ವ್ಯಕ್ತಿಗಳು ಆರ್ಥಿಕವಾಗಿ ಸ್ವತಂತ್ರರಾಗಿದ್ದು, ಕಿರಾಣಿ ಅಂಗಡಿಗಳು ಅಥವಾ ಜೆರಾಕ್ಸ್ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕಲ್ಲುಗಳ ಕಥೆ ಹೇಳುವ ಧನಪಾಲ್; ಶಿಲಾ ಶಾಸನಗಳ ಪತ್ತೆಯಲ್ಲಿ ಅತೀವ ಆಸಕ್ತಿ!
2012 ರಲ್ಲಿ ಅಪಘಾತದ ನಂತರ ಹಾಸಿಗೆ ಹಿಡಿದಿದ್ದ ಛಾಯಾ ಕುಷ್ಟಗಿ ಅವರು ಆಚಾರ್ಯ ಅವರ ನೆರವಿನಿಂದ ಮಾನಸಿಕವಾಗಿ ಸದೃಢವಾಗಿದ್ದು, 2015ರಲ್ಲಿ ಬೆಂಗಳೂರಿನಲ್ಲಿ ವಿಕಲಚೇತನರಿಗಾಗಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಈಗ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಮತ್ತೋರ್ವ ಸಂತ್ರಸ್ತ ಸಮೀರ್ ಜಮಖಂಡಿ ಈಗ ತೆರಿಗೆ ಸಲಹೆಗಾರರಾಗಿದ್ದು ಎಲ್ ಎಲ್ ಬಿ ಓದುತ್ತಿದ್ದಾರೆ. ಬೆನ್ನುಹುರಿ ಅಪಘಾತದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ತಮ್ಮ ಹೋರಾಟ ಕೊನೆಯ ಉಸಿರು ಇರುವವರೆಗೂ ಮುಂದುವರೆಯಲಿದೆ ಎಂದು ಅವರು ಒತ್ತಿ ಹೇಳಿದರು.