
ಎಲ್ ಇಡಿ ಬಲ್ಬ್ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು
ಕೊಚ್ಚಿ: ನಿಮ್ಮ ಮನೆಯಲ್ಲಿ ಎಲ್‌ಇಡಿ ಬಲ್ಬ್ ಕೆಟ್ಟರೆ ಏನು ಮಾಡುತ್ತೀರಿ? ಅದನ್ನು ಎಸೆದು ಹೊಸದನ್ನು ಖರೀದಿಸುತ್ತೀರಾ, ಸರಿ? ಆದಾಗ್ಯೂ, ಹೊಸ ಬಲ್ಬ್‌ನ ಬೆಲೆ ಹಾಗೂ ಹಳೆಯದನ್ನು ಎಸೆಯುವುದರಿಂದ ಪರಿಸರಕ್ಕೆ ಆಗುವ ಹಾನಿ ಕುರಿತು ಎರಡು ಬಾರಿ ಚಿಂತನೆ ಮಾಡಬೇಕು.
ಅಂತಹ ಹಾನಿಯಾದ ಬಲ್ಬ್ ಗಳನ್ನು ಪುನರ್ ಬಳಸಬಹುದಾಗಿದೆ. ಅದಕ್ಕಾಗಿಯೇ ಕೇರಳದ ಕೊಚ್ಚಿಯಲ್ಲಿ ಕ್ಲಿನಿಕ್ ವೊಂದನ್ನು ತೆರೆಯಲಾಗಿದೆ. ಕೆಟ್ಟ ಬಲ್ಬ್ ಗಳನ್ನು ಈ ಕ್ಲಿನಿಕ್ ಗಳಿಗೆ ತೆಗೆದುಕೊಂಡು ಹೋಗುವಂತೆ ಮುಳಂತುರತಿ ಸಮೀಪದ ತುರುತಿಕ್ಕರದ ಗ್ರಾಮೀಣ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎ. ತಂಕಚನ್ ಒತ್ತಾಯಿಸಿದ್ದಾರೆ.
ತುರುತಿಕ್ಕರ ಪಂಚಾಯತ್‌ನಲ್ಲಿ ಹೊರಸೂಸುವ ಇಂಗಾಲದ ಪ್ರಮಾಣವನ್ನು ತಡೆಯುವ ನಿಟ್ಟಿನಲ್ಲಿ ನಡೆದ ಚರ್ಚೆಯ ಭಾಗವಾಗಿ ಇದನ್ನು ಆರಂಭಿಸಲಾಯಿತು. 2017 ರಲ್ಲಿ ಪ್ರಾರಂಭವಾದಾಗಿನಿಂದ, ತರಬೇತಿ ಮತ್ತು ಇತರ ಸಹಾಯಕ್ಕಾಗಿ ಕ್ಲಿನಿಕ್ ಸಂಪರ್ಕಿಸುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕುಟುಂಬಶ್ರೀ ಮತ್ತು ಹರಿತ ಕರ್ಮ ಸೇನೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಇದು ಜೀವನೋಪಾಯದ ಮೂಲವೂ ಆಗಿದೆ"ಎಂದು ತಂಕಚನ್ ಹೇಳಿದರು.
ಇದನ್ನೂ ಓದಿ: ಹಾವೇರಿಯ ಪ್ರಸಿದ್ದ ಏಲಕ್ಕಿ ಹಾರ: ಇಂದಿನವರೆಗೆ ಎಲ್ಲಾ ಪ್ರಧಾನಿಗಳ ಕೊರಳನ್ನು ಅಲಂಕರಿಸಿರುವ ಹೆಗ್ಗಳಿಕೆ!
"ಅನೇಕ ಸ್ಥಳೀಯ-ಸ್ವಯಂ ಸರ್ಕಾರಿ ಸಂಸ್ಥೆಗಳು ಈ ಕಲ್ಪನೆಗೆ ಪ್ರೇರಿತರಾಗಿದ್ದಾರೆ. ಕೇರಳ ಸ್ಥಳೀಯ ಆಡಳಿತ ಸಂಸ್ಥೆಯು ಪಂಪಾ ನದಿ ಜಲಾನಯನ ಪ್ರದೇಶದ ಸಮೀಪದ ಪಂಚಾಯತ್‌ಗಳಲ್ಲಿ ಇದೇ ರೀತಿಯ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ಸ್ಥಳೀಯ ಸಂಸ್ಥೆ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಟುಂಬಶ್ರೀ ಘಟಕದ ಐವರು ಮಹಿಳೆಯರು ಇದೀಗ ಕ್ಲಿನಿಕ್ ಆರಂಭಿಸಿದ್ದಾರೆ. ತುರುತಿಕ್ಕರ ವಿಜ್ಞಾನ ಕೇಂದ್ರದವರು ತರಬೇತಿಯನ್ನು ನೀಡಿದ್ದಾರೆ ಎಂದು ಎಡಕ್ಕಟ್ಟುವಾಯಲ್ ಪಂಚಾಯತ್‌ನ ಸಮುದಾಯ ಅಭಿವೃದ್ಧಿ ಸೊಸೈಟಿ ಅಧ್ಯಕ್ಷೆ ನಿಶೀದಾ ತಿಳಿಸಿದ್ದಾರೆ.
ಪಂಚಾಯಿತಿಯ ಎಲ್ಲೆಡೆಯಿಂದ ಜನರು ಕೆಟ್ಟ ಎಲ್ ಇಡಿ ಬಲ್ಬ್‌ಗಳನ್ನು ತರುತ್ತಿದ್ದಾರೆ. ತಿಂಗಳಿಗೆ ಸರಾಸರಿ 50 ಕ್ಕೂ ಹೆಚ್ಚು ಬಲ್ಬ್‌ಗಳನ್ನು ಪಡೆಯುತ್ತೇವೆ. ಆರಂಭದ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಿತ್ತು ಎಂದು ತರಬೇತಿ ಪಡೆದ ಮಹಿಳೆಯರಲ್ಲಿ ಒಬ್ಬರಾದ ದೀಪಾ ಬಾಬು ಹೇಳಿದರು.
ಒಂದು ಲೈಟ್ ರಿಪೇರಿ ಮಾಡಲು 40 ರೂ. ಪಡೆಯುತ್ತೇವೆ. ಹೊಸದನ್ನು ಸಹ ನಾವೇ ತಯಾರಿಸುತ್ತೇವೆ. ಇವುಗಳ ಬೆಲೆ 100 ರೂ. ಆಗಿರುತ್ತದೆ ಎಂದು ದೀಪಾ ಹೇಳಿದರು. ಒಂದು ಅಂದಾಜಿನಂತೆ ಒಂದು ಪಂಚಾಯಿತಿಯ ಬೀದಿ ದೀಪಗಳು, ಕಚೇರಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ಬಳಸಲಾಗುತ್ತದೆ. ಈ ಬಲ್ಬ್‌ಗಳನ್ನು ಬದಲಾಯಿಸುವ ಬದಲು ದುರಸ್ತಿ ಮಾಡಿದರೆ ದೊಡ್ಡ ವೆಚ್ಚವನ್ನು ಉಳಿಸಿದಂತಾಗುತ್ತದೆ ಎಂದು ದೀಪಾ ತಿಳಿಸಿದರು.