ಬಂಜರು ಭೂಮಿಯಲ್ಲಿ ನಳನಳಿಸುವ ಹಸಿರು: 10 ಸಾವಿರಕ್ಕೂ ಹೆಚ್ಚು ಗಿಡ, ಮರ ನೆಟ್ಟು ಪೋಷಿಸುತ್ತಿರುವ ಕರ್ನಾಟಕ ವಿವಿ!

ಉಸಿರಾಡುವ ಗಾಳಿ ಪ್ರಾಣವಾಯು. ಇಂತಹ ಗಾಳಿಯೇ ವಿಷವಾದರೆ ಜೀವಿಗಳ ಜೀವನ ನಿಜಕ್ಕೂ ನರಕ. ಉಸಿರಾಡಲು ಶುದ್ಧ ಗಾಳಿಯನ್ನು ನೀಡುವ ಮರಗಳನ್ನು ವರ್ಷಕ್ಕೊಮ್ಮೆ ಪರಿಸರ ದಿನದಂದು ಮಾತ್ರ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆದರೆ, ಮರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು. ಅವುಗಳನ್ನು ಉಳಿಸಿ, ಬೆಳೆಸುವತ್ತ ಸಹ ಗಮನಹರಿಸುವುದು ಮುಖ್ಯವಾಗಿದೆ.
‘ಜನ ವನ’ ಯೋಜನೆಯಲ್ಲಿ ಇದುವರೆಗೆ 10,000 ಸಸಿಗಳನ್ನು ನೆಟ್ಟಿರುವುದು.
‘ಜನ ವನ’ ಯೋಜನೆಯಲ್ಲಿ ಇದುವರೆಗೆ 10,000 ಸಸಿಗಳನ್ನು ನೆಟ್ಟಿರುವುದು.

ಉಸಿರಾಡುವ ಗಾಳಿ ಪ್ರಾಣವಾಯು. ಇಂತಹ ಗಾಳಿಯೇ ವಿಷವಾದರೆ ಜೀವಿಗಳ ಜೀವನ ನಿಜಕ್ಕೂ ನರಕ. ಉಸಿರಾಡಲು ಶುದ್ಧ ಗಾಳಿಯನ್ನು ನೀಡುವ ಮರಗಳನ್ನು ವರ್ಷಕ್ಕೊಮ್ಮೆ ಪರಿಸರ ದಿನದಂದು ಮಾತ್ರ ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆದರೆ, ಮರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು. ಅವುಗಳನ್ನು ಉಳಿಸಿ, ಬೆಳೆಸುವತ್ತ ಸಹ ಗಮನಹರಿಸುವುದು ಮುಖ್ಯವಾಗಿದೆ. ಆಧುನೀಕರಣ ಹಾಗೂ ಹೆಚ್ಚಾಗುತ್ತಿರುವ ಜನಸಂಖ್ಯೆಯ ಪರಿಣಾಮದಿಂದಾಗಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ದುಷ್ಪರಿಣಾಮಗಳು ಎದುರಾಗುತ್ತಿದೆ.

ಈ ನಡುವೆ ಗದಗ ಜಿಲ್ಲೆಯ ಉತ್ತರ ಭಾಗದ ಬಯಲು ಸೀಮೆಯಲ್ಲಿ ಸಂಘ-ಸಂಸ್ಥೆಗಳ ತಂಡವೊಂದು ನೆಲವನ್ನು ಹಚ್ಚ ಹಸಿರಾಗಿಸುವ ಧ್ಯೇಯವೊಂದರಲ್ಲಿ ತೊಡಗಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯವು (KSRDPRU), ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮತ್ತು ಎಸ್'ಬಿಐ ಫೌಂಡೇಶನ್ ಸಹಯೋಗದೊಂದಿಗೆ 'ಜನ ವನ' (ಜನರ ಅರಣ್ಯ)ವನ್ನು ಅಭಿವೃದ್ಧಿಪಡಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ.

ಕಪ್ಪತಗುಡ್ಡದ ಮಡಿಲಲ್ಲಿರುವ ಕಾಡು - ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ವಿಶ್ವವಿದ್ಯಾನಿಲಯವು ಕಪ್ಪತಗುಡ್ಡ ಸಮೀಪದ ನಾಗಾವಿ ಗ್ರಾಮದ ಸಮೀಪ 350 ಎಕರೆ ಭೂಮಿಯನ್ನು ಹೊಂದಿದ್ದು, ಇದರಲ್ಲಿ 125 ಎಕರೆಯು ಯಾವುದೇ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಸಮಿತಿಗೆ ತಿಳಿಸಲಾಗಿದೆ.

ಹೀಗಾಗಿ ಉಪಕುಲಪತಿ ಪ್ರೊ.ವಿಷ್ಣುಕಾಂತ ಚಟಪಳ್ಳಿ ನೇತೃತ್ವದ ಸಮಿತಿಯು 10 ಎಕರೆ ಭೂಮಿಯನ್ನು ಅರಣ್ಯೀಕರಣಕ್ಕೆ ಮೀಸಲಿಡಲು ನಿರ್ಧರಿಸಿತು. ವಿಶ್ವವಿದ್ಯಾನಿಲಯವು ಸಂಕಲ್ಪ ಮತ್ತು ಎಸ್‌ಬಿಐ ಫೌಂಡೇಶನ್‌ನೊಂದಿಗೆ ಕೈಜೋಡಿಸಿ ಜೀವವೈವಿಧ್ಯತೆಯನ್ನು ಪುನರುಜ್ಜೀವನಗೊಳಿಸುವುದು ಮಾತ್ರವಲ್ಲದೆ ವಿವಿಧ ಜಾತಿಗಳ ಸಸಿಗಳನ್ನು ನೆಡಲು ಮುಂದಾಗಿದೆ.

2022 ರಲ್ಲಿ ವಿಶ್ವ ಪರಿಸರ ದಿನ (ಜೂನ್ 5) ರಂದು, ಯೋಜನೆಯ ಕುರಿತು ಚಿಂತನೆಗಳು ನಡೆದಿದ್ದು, ಜೂನ್ 25 ರಿಂದ ಸಸಿಗಳನ್ನು ನೆಡುವ ಕಾರ್ಯವನ್ನು ಆರಂಭಿಸಲಾಗಿತ್ತು. ಇದೀಗ ಇಲ್ಲಿಯವರೆಗೆ ಸುಮಾರು 10,000 ಸಸಿಗಳನ್ನು ನೆಡಲಾಗಿದೆ ಮತ್ತು ಇನ್ನೂ 15,000 ನೆಡುವ ಗುರಿಯನ್ನು ಹೊಂದಲಾಗಿದೆ. ಅರಣ್ಯವನ್ನು ಪೋಷಿಸುವುದು ಇದರ ಉದ್ದೇಶವಾಗಿದೆ.

ಗಾಲಿ ಮರ (ಶಿ-ಓಕ್), ನೆಲ್ಲಿ (ನೆಲ್ಲಿಕಾಯಿ), ಹೊಂಗೆ (ಪೊಂಗಮಿಯಾ), ಬಸವನಪಾದ (ಬೌಹಿನಿಯಾ ಪುಪೂರಿಯಾ) ಮತ್ತು ಮಹಾಗನಿ ಮುಂತಾದ ಸಸಿಗಳನ್ನು ಈ ಭೂಮಿಯಲ್ಲಿ ನೆಡಲಾಗಿದೆ.

ತಂಡವು ಪ್ರತಿದಿನ ಸಸಿಗಳಿಗೆ ನೀರುಣಿಸುತ್ತಿದ್ದು, ನೀರನ್ನು ಸಂಗ್ರಹಿಸಲು ಟ್ಯಾಂಕ್'ಗಳನ್ನು ನಿರ್ಮಿಸಿದೆ. ಜಾನುವಾರು ಮತ್ತಿತರ ಪ್ರಾಣಿಗಳು ಕಾಡಿಗೆ ಬರದಂತೆ ಭೂಮಿಯ ಸುತ್ತಲೂ ಬೇಲಿಯನ್ನೂ ಹಾಕಲಾಗಿದೆ.

ಈಗಾಗಲೇ 10 ಎಕರೆ ಭೂಮಿಯನ್ನು ಹಸಿರು ಹೊದಿಕೆಯಾಗಿ ಪರಿವರ್ತಿಸಿದ್ದೇವೆ. ಎಸ್‌ಬಿಐ ಫೌಂಡೇಶನ್ ಎರಡು ವರ್ಷಗಳ ಕಾಲ ಸಸಿಗಳನ್ನು ನೋಡಿಕೊಳ್ಳುತ್ತದೆ ಎಂದು ಅಭಿಯಾನದ ಭಾಗವಾಗಿರುವ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸದಸ್ಯ ಸಿಕಂದರ್ ಮೀರಾನಾಯಕ್ ಅವರು ಮಾತನಾಡಿ, “ಬೇಸಿಗೆಯಲ್ಲಿ ಸಸ್ಯಗಳ ನಿರ್ವಹಣೆ ಸ್ವಲ್ಪ ಕಷ್ಟಕರವಾದ ಕಾರಣ ಸಸಿಗಳನ್ನು ಆರೈಕೆ ಮಾಡುವ ಕೆಲಸವನ್ನು ಆರಂಭಿಸಿದ್ದೇವೆ. ಟ್ಯಾಂಕರ್‌ಗಳನ್ನು ಬಳಸಿ ಸಸಿಗಳಿಗೆ ನೀರುಣಿಸುವ ಜತೆಗೆ ಕೃತಕ ಕೆರೆಯನ್ನೂ ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ನಾವು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಅದಕ್ಕೆ ಧನಸಹಾಯ ನೀಡಿದ ಎಸ್'ಬಿಐ ಫೌಂಡೇಶನ್‌ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯದ ಈ ಉಪಕ್ರಮದಿಂದಾಗಿ ಬಂಜರು ಭೂಮಿಗೆ ಕಳೆ ಬಂದಂತಾಗಿದೆ. ಇದೀಗ ಈ ಪ್ರದೇಶ ಹಲವಾರು ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿ ಮಾರ್ಪಟ್ಟಿದೆ. ಸಾಕಷ್ಟು ಜನರು ಬೆಳಗಿನ ವಾಕಿಂಗ್'ಗೆ ಇಲ್ಲಿಗೆ ಬರುತ್ತಾರೆ ಎಂದು ಗದಗದ ಹಸಿರು ಹೋರಾಟಗಾರ ಪ್ರದೀಪ ಹಾದಿಮನಿ ಹೇಳಿದ್ದಾರೆ.
 
ಎಸ್‌ಬಿಐ ಫೌಂಡೇಶನ್‌ನ ಸಂಯೋಜಕ ಸಿದ್ದಲಿಂಗೇಶ್ ಅವರು ಮಾತನಾಡಿ, “ನಾವು ಅರಣ್ಯೀಕರಣವನ್ನು ಉತ್ತೇಜಿಸಲು ಈ ವಿಶಿಷ್ಟ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಇದು ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಮತ್ತು ಅರಣ್ಯ ರಕ್ಷಣೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವಿಷ್ಣುಕಾಂತ್ ಚಟ್ಪಲ್ಲಿ ಮಾತನಾಡಿ, ಗಾಂಧಿ ಮತ್ತು ವಿವೇಕಾನಂದರ ಚಿಂತನೆಗಳು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತವೆ. ನಾವು ಸಮಾಜಕ್ಕೆ ಕೊಡುಗೆ ನೀಡಲು ಬಯಸಿದ್ದೇವೆ. ಅರಣ್ಯಾಧಿಕಾರಿಗಳ ನೆರವಿನಿಂದ ಹಣ್ಣುಹಂಪಲು ಮತ್ತಿತರ ಜಾತಿಯ ಮರಗಳನ್ನು ನೆಡುತ್ತಿದ್ದೇವೆ. ಹಸಿರು ಹೊದಿಕೆಯನ್ನು ಹೆಚ್ಚಿಸಲು, ನಾವು ಎಸ್‌ಬಿಐ ಫೌಂಡೇಶನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದೀಗ ಸಸ್ಯಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಭೂಮಿಗೆ ಇದೀಗ ಜನ ವನ ಎಂದು ಹೆಸರಿಟ್ಟಿದ್ದೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com