ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೋರಿಸುತ್ತೇವೆ: ವಿರೋಧ ಪಕ್ಷದ ನಾಯಕ ಆರ್ ಅಶೋಕ್ (ಸಂದರ್ಶನ)

ಬಿಜೆಪಿಯ ಹಿರಿಯ ನಾಯಕ ಆರ್ ಅಶೋಕ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಪಕ್ಷವು ನೇಮಿಸಿದ್ದು, ಇದು ಸವಾಲಿನ ಕೆಲಸವಾಗಿದೆ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೋರಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. 
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್

ಬಿಜೆಪಿಯ ಹಿರಿಯ ನಾಯಕ ಆರ್ ಅಶೋಕ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಪಕ್ಷವು ನೇಮಿಸಿದ್ದು, ಇದು ಸವಾಲಿನ ಕೆಲಸವಾಗಿದೆ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೋರಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕರು ಮತ್ತು ಸಿಬ್ಬಂದಿಯೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಬರಪೀಡಿತ ತಾಲೂಕುಗಳ ಜನರಿಗೆ ಸಹಾಯ ಮಾಡುವಲ್ಲಿ ವಿಫಲವಾಗಿರುವುದು ಸೇರಿದಂತೆ ಸರ್ಕಾರದ ನ್ಯೂನತೆಗಳನ್ನು ಎತ್ತಿ ತೋರಿಸುವುದಾಗಿ ಹೇಳಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ: 

ವಿರೋಧ ಪಕ್ಷದ ನಾಯಕರಾಗಿ ನಿಮ್ಮ ಆದ್ಯತೆಗಳೇನು?
ನೀವು ಸಚಿವರಾಗಿದ್ದಾಗ ಎಲ್ಲ ವಿವರಗಳು ಬರೀ ಒಂದು ಫೋನ್ ಕಾಲ್ ನಲ್ಲಿ ನಿಮಗೆ ಬರುತ್ತವೆ. ಆದರೆ ವಿರೋಧ ಪಕ್ಷದ ನಾಯಕನಾದಾಗ ಬೇರೆ. ವಿವರಗಳನ್ನು ನಾವೇ ಪಡೆಯಬೇಕು. ಸರ್ಕಾರ ಈಗ ಮಾಡುತ್ತಿರುವ ತಪ್ಪುಗಳನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ. ಅದರ ಜೊತೆಗೆ ನಮ್ಮ ಸಾಧನೆ ಕೂಡ ಮುಖ್ಯ. ಇದನ್ನು ಉತ್ತಮವಾಗಿ ಮಾಡಿದರೆ ಮುಂದಿನ ಬಾರಿ ರಾಜ್ಯದಲ್ಲಿ ನಾವೇ ಆಡಳಿತ ನಡೆಸುತ್ತೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯಲು ಮತ್ತು ಜನರಿಗೆ ಏನು ಬೇಕು ಎಂಬುದನ್ನು ತಿಳಿದುಕೊಳ್ಳಲು ನನಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಇದು ಸವಾಲಾಗಿದೆ. ಸವಾಲನ್ನು ಸ್ವೀಕರಿಸಿ ಉತ್ತಮ ಕೆಲಸ ಮಾಡಿ ತೋರಿಸಬೇಕು, ಮಾಡುತ್ತೇನೆ ಎಂಬ ವಿಶ್ವಾಸವಿದೆ. 

ಬಿಜೆಪಿಯಿಂದ ವಿರೋಧ ಪಕ್ಷದ ನಾಯಕರ ಘೋಷಣೆಗೆ ವಿಳಂಬ ಏಕಾಯಿತು? ಪಕ್ಷಕ್ಕೆ ನಿಮ್ಮ ಮೇಲೆ ನಂಬಿಕೆ ಇರಲಿಲ್ಲವೇ?
ನಾಯಕನನ್ನು ಯಾವಾಗ ಆಯ್ಕೆ ಮಾಡಬೇಕು ಮತ್ತು ಯಾವಾಗ ಘೋಷಿಸಬೇಕು ಎಂಬ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಾನು ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಪಕ್ಷಕ್ಕಾಗಿ 20 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದೇನೆ. ನನ್ನ ಕೆಲಸ, ಸಾಧನೆ ನೋಡಿ ಹೈಕಮಾಂಡ್ ಇಂದು ಈ ಸ್ಥಾನ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲಬೇಕು ಎಂಬ ಪಕ್ಷದ ಆಶಯದಂತೆ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿಯೂ ನೇಮಿಸಿದರು.

ಬೆಳಗಾವಿ ಅಧಿವೇಶನದಲ್ಲಿ ನೀವು ಪ್ರಸ್ತಾಪಿಸುವ ವಿಷಯಗಳೇನು?
ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಪ್ರಸ್ತಾಪಿಸುವುದು ನಮ್ಮ ಕರ್ತವ್ಯ ಮತ್ತು ನಾವು ಅದನ್ನು ಖಂಡಿತಾ ಮಾಡುತ್ತೇವೆ. ಅಧಿಕಾರದ ಹೊರತಾಗಿ, ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸುತ್ತೇವೆ. ಎಲ್ಲ ಆದೇಶಗಳೂ ತಮಿಳುನಾಡಿನ ಪರವೇ ಏಕೆ? ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಮುಸ್ಲಿಂ ಸ್ಪೀಕರ್ ಮುಂದೆ ಎಲ್ಲರೂ ತಲೆಬಾಗಬೇಕು ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಯ ಬಗ್ಗೆಯೂ ನಾವು ಪ್ರಸ್ತಾಪಿಸುತ್ತೇವೆ. ಅವರು ಕೋಮು ಬಣ್ಣ ನೀಡುತ್ತಿದ್ದಾರೆ. ನಾವು ಸ್ಪೀಕರ್ ಕುರ್ಚಿಯನ್ನು ಸಾಂವಿಧಾನಿಕ ಹುದ್ದೆಯಾಗಿ ನೋಡುತ್ತೇವೆ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ನಾವೆಲ್ಲರೂ ಪರಸ್ಪರ ಗೌರವಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಪ್ರಸ್ತಾವಿತ ರಾಜ್ಯ ಶಿಕ್ಷಣ ನೀತಿಗೆ ನಮ್ಮ ಆಕ್ಷೇಪವಿದೆ. ಜಾತಿ ಗಣತಿ ಮತ್ತು ಕಾಂತರಾಜ್ ಆಯೋಗದ ವರದಿಯನ್ನು ಕೂಡ ಪ್ರಸ್ತಾಪಿಸುತ್ತೇವೆ. 

ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೀರಿ. ಅಲ್ಲಿ ಏನು ತಿಳಿದುಬಂತು?
ಜನರಿಗೆ ಪರಿಹಾರ ನೀಡಲು ಒಂದು ರೂಪಾಯಿ ಕೂಡ ಸರ್ಕಾರ ಬಿಡುಗಡೆ ಮಾಡಿಲ್ಲ. ಸರ್ಕಾರ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ ಎಂದು ಸಿಎಂ ಹೇಳುತ್ತಿದ್ದು, ವಾಸ್ತವದಲ್ಲಿ ಅದು ಬೇರೆ ಕಾಮಗಾರಿಗಳಿಗೆ ಮೀಸಲಾಗಿದೆಯೇ ಹೊರತು ರೈತರಿಗೆ ಪರಿಹಾರ ನೀಡುತ್ತಿಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಕಳೆದ ಆರು ತಿಂಗಳ ಸಾಧನೆಗೆ ಎಷ್ಟು ಅಂಕ ನೀಡುತ್ತೀರಿ?
ಈ ಸರ್ಕಾರ ಮೊದಲ ದಿನವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ವರ್ಗಾವಣೆ, ಕುಟುಂಬ ಸದಸ್ಯರ ಒಳಗೊಳ್ಳುವಿಕೆ, ಭ್ರಷ್ಟಾಚಾರ ನಡೆಯುತ್ತಿದ್ದು, ಭರವಸೆ ನೀಡಿದ್ದನ್ನು ಅನುಷ್ಠಾನಗೊಳಿಸಿಲ್ಲ. ನಮ್ಮಲ್ಲಿ 1.25 ಕೋಟಿ ಬಿಪಿಎಲ್ ಕಾರ್ಡ್ ದಾರರಿದ್ದು, ಸರಕಾರ 60 ಸಾವಿರಕ್ಕೂ ತಲುಪಿಲ್ಲ. ಅವರು ಅನೇಕ ಕಾರಣಗಳನ್ನು ನೀಡುತ್ತಿದ್ದಾರೆ. ಒಂದೆಡೆ ಸರಕಾರ ಉಚಿತ ಬಸ್ಸು ಎಂದು ಹೇಳಿದರೂ ಮಕ್ಕಳು ಶಾಲೆಗಳಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.

ಟಿಕೆಟ್ ಕೊಡುವವರು ಬಸ್ ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದಾರೆ. ಪ್ರತಿ ವರ್ಷ ಹಳೆಯ ಬಸ್‌ಗಳನ್ನು ರದ್ದುಗೊಳಿಸಬೇಕು. ಶಕ್ತಿ ಯೋಜನೆಯಿಂದ ಹೆಚ್ಚಿನ ಬಸ್‌ಗಳ ಅವಶ್ಯಕತೆ ಇದೆ. ಆದರೆ ಬಸ್ ಖರೀದಿಸಲು ಸರ್ಕಾರದ ಬಳಿ ಹಣವಿಲ್ಲ. ಇವೆಲ್ಲವೂ ವೈಫಲ್ಯಗಳು. ನಿರುದ್ಯೋಗಿ ಯುವಕರಿಗೆ ಯುವ ನಿಧಿ ಯೋಜನೆಯನ್ನು ಇನ್ನೂ ಜಾರಿಗೆ ತಂದಿಲ್ಲ. ಅಭಿವೃದ್ಧಿ ನಿಂತು ಹೋಗಿದೆ. ಅಭಿವೃದ್ಧಿ ಮತ್ತು ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ನಾವು ಎರಡನೇ ಸ್ಥಾನದಲ್ಲಿದ್ದೆವು. ಆದರೆ ಈಗ ನಾವು ಹಿಂದುಳಿಯುತ್ತೇವೆ. ನಾವು ರಸ್ತೆಗಳು, ನೀರಾವರಿ ಯೋಜನೆಗಳು, ಆಸ್ಪತ್ರೆಗಳು ಅಥವಾ ಹೊಸ ಶಾಲೆಗಳು ಸೇರಿದಂತೆ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ 5 ವರ್ಷ ಹಿಂದೆ ಹೋಗಿದ್ದೇವೆ. 

ಬ್ರಾಂಡ್ ಬೆಂಗಳೂರು ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ಏನು ಹೇಳುತ್ತೀರಿ?
ಇತ್ತೀಚೆಗಷ್ಟೇ ವಿದ್ಯುತ್ ಸ್ಪರ್ಶದಿಂದ ತಾಯಿ ಮತ್ತು ಮಗು ಮೃತಪಟ್ಟರು. ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ. ಕಳೆದೆರಡು ದಿನಗಳ ಹಿಂದೆ ಮೆಟ್ರೋ ರೈಲಿನೊಳಗೆ ಬಾಲಕಿಯೊಬ್ಬಳ ಮೇಲೆ ಹಲ್ಲೆ ನಡೆದಿತ್ತು. ಸುರಕ್ಷಿತ ಎನ್ನಲಾದ ಮೆಟ್ರೋ ರೈಲುಗಳಲ್ಲಿ ಇಂತಹ ಘಟನೆ ನಡೆದಿದೆ. ಇದು ಬೆಂಗಳೂರು ಬ್ರ್ಯಾಂಡ್ ಹೇಗಾಗುತ್ತದೆ. ಬ್ರಾಂಡ್ ಬೆಂಗಳೂರು ಮಾಡುವ ಉದ್ದೇಶ ಕಾಂಗ್ರೆಸ್‌ಗೆ ಇಲ್ಲ. ಅವರು 50 ವರ್ಷಗಳಿಗಿಂತ ಹೆಚ್ಚು ಕಾಲ ಆಳಿದರು, ಆ ಸಮಯದಲ್ಲಿ ಮಾಡಲಿಲ್ಲ. ಬಿಬಿಎಂಪಿ ಚುನಾವಣೆಯ ಕಾರಣ, ಅವರು ಅದರ ಬಗ್ಗೆ ಈಗ ಮಾತನಾಡಲು ಪ್ರಾರಂಭಿಸಿದ್ದಾರೆ. ಬ್ರಾಂಡ್ ಬೆಂಗಳೂರಿಗೆ ನಮಗೆ 60,000 ಕೋಟಿ ರೂಪಾಯಿ ಬೇಕು, ಅಷ್ಟು ಹಣ ಎಲ್ಲಿದೆ? ಹಣವಿಲ್ಲ. ಬ್ರಾಂಡ್ ಬೆಂಗಳೂರಿಗೆ, ನಮಗೆ ಉತ್ತಮ ರಸ್ತೆಗಳು, ಉತ್ತಮ ಬೀದಿ ದೀಪಗಳು, ಉತ್ತಮ ನೈರ್ಮಲ್ಯ ಮಾರ್ಗಗಳು, ಕಡಿಮೆ ಮಾಲಿನ್ಯ, ಮಹಿಳೆಯರ ಸುರಕ್ಷತೆ ಮತ್ತು ಇನ್ನೂ ಅನೇಕ ಅಗತ್ಯವಿದೆ.

ಶಿವಕುಮಾರ್ ಅವರ ಬ್ರಾಂಡ್ ಬೆಂಗಳೂರು ದೂರದೃಷ್ಟಿ ಹಣ ಮಾಡುವ ಸಂಚು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಿಮ್ಮ ಅಭಿಪ್ರಾಯ ಏನು?
ಡಿಕೆ ಶಿವಕುಮಾರ್ ಅವರು ಮೊದಲು ಉದ್ಯಮಿ, ರಾಜಕೀಯದಲ್ಲಿ ತಮಗೆ ಆಸಕ್ತಿ ಎಂದು ಅವರೇ ಈ ಹಿಂದೆ ಹೇಳಿದ್ದರು. ಅದೇ ಅವರ ಬ್ರಾಂಡ್ ಬೆಂಗಳೂರು ದೃಷ್ಟಿಯಲ್ಲಿ ಕಾಣಬಹುದು. ಅವರಿಗೆ ಬೆಂಗಳೂರು ಬಗ್ಗೆ ಸಂಪೂರ್ಣ ಗೊತ್ತಿದೆಯೇ? ಇವರು ಕನಕಪುರದವರು. ನಗರವು ಗಟ್ಟಿಯಾದ ಬಂಡೆಗಳ ಮೇಲೆ ಕುಳಿತಿದೆ, ಸುರಂಗ ರಸ್ತೆ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿಲ್ಲ. ಈ ಯೋಜನೆಗಳು ಆರ್ಥಿಕವಾಗಿಯೂ ಕಾರ್ಯಸಾಧ್ಯವಲ್ಲ. ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬ್ರಾಂಡ್ ಬೆಂಗಳೂರು ಎಂದು ಘೋಷಿಸಿದ ಅವರು, ಚುನಾವಣೆಯ ಯಾವುದೇ ಸೂಚನೆ ಇಲ್ಲದ ಕಾರಣ, ಯೋಜನೆಯ ಬಗ್ಗೆ ಈಗ ಮಾತನಾಡುತ್ತಿಲ್ಲ. 

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರದ ಪೈಪೋಟಿ ಇದೆ ಎಂದು ಏಕೆ ಹೇಳುತ್ತೀರಿ?
ಕಾಂಗ್ರೆಸ್ ತನ್ನ ಮುಖ್ಯಮಂತ್ರಿಯನ್ನು ನಿರ್ಧರಿಸಲು ನಾಲ್ಕು ದಿನಗಳನ್ನು ತೆಗೆದುಕೊಂಡಿತು. ಇದು ಒಂದು ಗಂಟೆಯ ಕೆಲಸವಾಗುತ್ತಿತ್ತು, ಆದರೆ ಅವರೆಲ್ಲರೂ ದೆಹಲಿಗೆ ಹೋದರು. 2023ರ ನಂತರ ಸಿಎಂ ಆಗಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಅವರ ಗುರು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಶಿವಕುಮಾರ್ ಈಗ ಸಿಎಂ ಆಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶಿವಕುಮಾರ್ ಸಿಎಂ ಆಗಬೇಕು ಎಂದು ದಾವಣಗೆರೆ, ಮಂಡ್ಯದ ಕೆಲ ನಾಯಕರು ಈಗಾಗಲೇ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿಯೇ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ ಎಂದು ಹೇಳುತ್ತೇವೆ. ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಶಾಸಕರು ತಮ್ಮ ಸಿಎಂ ಬಗ್ಗೆ ಅಭದ್ರತೆಯ ಭಾವನೆಯನ್ನು ಅನುಭವಿಸಿದಾಗ ಹೋರಾಟವು ಹೆಚ್ಚು ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯ ಒಬ್ಬ ಬುದ್ಧಿವಂತ ರಾಜಕಾರಣಿ, ಅದನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಗೃಹ ಸಚಿವ ಡಾ.ಪರಮೇಶ್ವರ ಮತ್ತು ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗೆ ಸಭೆ ನಡೆಸಿದರು.

ನಿಮ್ಮ ಮತ್ತು ವಿಜಯೇಂದ್ರ ಅವರ ನೇಮಕದಿಂದ ನಮಗೆ ಸಂತೋಷವಿಲ್ಲ ಎಂದು ಕೆಲವು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರಲ್ಲವೇ?
ನಮ್ಮ ಪಕ್ಷ ಪ್ರಜಾಸತ್ತಾತ್ಮಕವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಹಕ್ಕಿದೆ. ಕೆಲವು ನಾಯಕರು ಮಾತ್ರ ನೇಮಕಾತಿ ವಿರುದ್ಧ ಮಾತನಾಡುತ್ತಿದ್ದಾರೆ. ನಾವು ಅವರನ್ನು ಸಮಾಧಾನ ಮಾಡಿದ್ದೇವೆ. ಅವರು ನಮ್ಮ ನಾಯಕತ್ವವನ್ನು ಬೆಂಬಲಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. 

ಪಕ್ಷ ಬಿಡಲು ಮುಂದಾಗಿದ್ದ ಬಿಜೆಪಿ ನಾಯಕರನ್ನು ಉಳಿಸಿಕೊಳ್ಳುವರೇ?
ಹೌದು. ಸರಿಯಾದ ನಾಯಕನಿಗೆ ನಾಯಕತ್ವ ನೀಡಿದಾಗ, ಫುಟ್ ಬಾಲ್ ನಂತೆ ಪ್ರತಿಯೊಬ್ಬರೂ ತಮ್ಮ ಪಾತ್ರ ನಿಭಾಯಿಸುತ್ತಾರೆ. 

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತ್ತು. ಅದೇ ರೀತಿ ಮಾಡಲು ಬಿಜೆಪಿ ವಿಫಲವಾಗಿದೆ ಎಂದು ನೀವು ಭಾವಿಸುತ್ತೀರಾ?

ನಾವು ಅದನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದೇವೆ, ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಸರ್ಕಾರ ಮೇಲೆ ಆರೋಪ ಮಾಡಿದ್ದ ಶೇಕಡಾ 40 ಕಮಿಷನ್ ಆರೋಪ ಬಗ್ಗೆ ಪೊಲೀಸ್, ನ್ಯಾಯಾಲಯ ಅಥವಾ ಲೋಕಾಯುಕ್ತಕ್ಕೆ ದೂರು ಸಲ್ಲಿಸುವಂತೆ ಹೇಳಿದೆವು. ಆದರೆ ಅವರು ಮಾಡಲಿಲ್ಲ. ಈಗ ಅವರ ವಿರುದ್ಧವೇ ಹಣ ವರ್ಗಾವಣೆಗೆಂದು ಪೋಸ್ಟರ್‌ ಪ್ರಚಾರ ಶುರುವಾಗಿರುವುದರಿಂದ ಅವರಿಗೇ ತಿರುಗುಬಾಣವಾಗುತ್ತಿದೆ. ಒಂದೇ ವ್ಯತ್ಯಾಸವೆಂದರೆ ಅವರು ಪುರಾವೆಗಳನ್ನು ಹೊಂದಿಲ್ಲ, ಆದರೆ ನಾವು ಹೊಂದಿದ್ದೇವೆ. ಗುತ್ತಿಗೆದಾರರಿಗೆ ಐದು ತಿಂಗಳಿಂದ ಬಾಕಿ ಪಾವತಿಯಾಗಿಲ್ಲ. ಆದರೆ ಐದು ರಾಜ್ಯಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ 750 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಕೆಲವು ದಿನಗಳ ನಂತರ, ಆದಾಯ ತೆರಿಗೆ ಇಲಾಖೆ ದಾಳಿಗಳು ನಡೆದಿದ್ದು, ಒಂದು ಸ್ಥಳದಲ್ಲಿ 50 ಕೋಟಿ ರೂಪಾಯಿ ಮತ್ತು ಇನ್ನೊಂದು ಸ್ಥಳದಲ್ಲಿ 54 ಕೋಟಿ ರೂಪಾಯಿ ಸಿಕ್ಕಿತು. ಇದೇ ಸಾಕ್ಷಿ.

ಸಿದ್ದರಾಮಯ್ಯನವರ ಮೊದಲ ಮತ್ತು ಎರಡನೇ ಅವಧಿಯ ಸಿಎಂ ಆಗಿ ನೀವು ಕಾಣುವ ವ್ಯತ್ಯಾಸವೇನು?
ಸಿದ್ದರಾಮಯ್ಯ ನಿಷ್ಕ್ರಿಯರಾಗಿದ್ದು, ಶಿವಕುಮಾರ್ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಅವರು ಸಕ್ರಿಯರಾಗಿ ಕಾಣುತ್ತಿಲ್ಲ ಮತ್ತು ಆಡಳಿತದಲ್ಲಿ ಆಕ್ರಮಣಶೀಲತೆ ಇಲ್ಲ, ಹೀಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಇಲ್ಲ.

ಅಪಾರ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರನ್ನು ಎದುರಿಸಲು ಹೇಗೆ ಯೋಜನೆ ರೂಪಿಸಿದ್ದೀರಿ?
ಸಿದ್ದರಾಮಯ್ಯ ಅವರಿಗೆ ನೈತಿಕತೆಯೂ ಇಲ್ಲ, ಸಿದ್ಧಾಂತವೂ ಇಲ್ಲ. ಜೆಡಿಎಸ್ ನಲ್ಲಿದ್ದಾಗ ಕಾಂಗ್ರೆಸ್ ಸಿದ್ಧಾಂತವನ್ನು ಟೀಕಿಸುತ್ತಿದ್ದ ಅವರು, ಈಗ ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರು ಪಕ್ಷ ಬದಲಾಯಿಸಿದ್ದಾರೆ. ನಾನು ಒಂದೇ ಪಕ್ಷದಿಂದ ಏಳು ಬಾರಿ ಗೆದ್ದಿದ್ದು ಒಂದೇ ಸಿದ್ಧಾಂತದಿಂದ ನನ್ನ ವಿಷಯದಲ್ಲಿ ಭಿನ್ನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿರುತ್ತವೆ. ಅವರು ಕೆಲವು ವಿಷಯಗಳಲ್ಲಿ ಬಲಶಾಲಿಯಾಗಿರಬಹುದು ಮತ್ತು ನಾನು ಕೂಡ, ಅವರ ವಿರುದ್ಧ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡುತ್ತೇನೆ.

ಕಾಂಗ್ರೆಸ್ ಈಗಾಗಲೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಆರಂಭಿಸಿದೆ. ಬಿಜೆಪಿ ಹೇಗೆ ಸಿದ್ಧತೆ ಮಾಡಿಕೊಂಡಿದೆ?
ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಘೋಷಣೆ ಹಾಗೂ ಪ್ರಚಾರ ಕಾರ್ಯದಲ್ಲಿ ವಿಳಂಬ ಮಾಡಿದ್ದರಿಂದ ಹಿನ್ನಡೆ ಅನುಭವಿಸಿದ್ದೇವೆ. ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆ. ಈ ಬಾರಿ ಕೇಂದ್ರ ನಾಯಕರೊಂದಿಗೆ ಚರ್ಚಿಸಿ ಶೀಘ್ರವೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ.

ಇನ್ನು ಮುಂದೆ ಬಿಜೆಪಿಯವರು ವಂಶ/ಕುಟುಂಬ ರಾಜಕಾರಣದ ಬಗ್ಗೆ ಚಕಾರ ಎತ್ತುವುದಿಲ್ಲವೇ?
ಕುಟುಂಬ ರಾಜಕಾರಣದ ವ್ಯಾಖ್ಯಾನವೇನು? ಯಾವುದಕ್ಕೂ ಒಂದು ವ್ಯಾಖ್ಯಾನ ಇರಬೇಕು. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ರಾಜಕೀಯದಲ್ಲಿದ್ದಾರೆ. ಅದು ರಾಜವಂಶದ ರಾಜಕಾರಣ. ತಮಿಳುನಾಡಿನಲ್ಲಿ ಕರುಣಾನಿಧಿ, ಪುತ್ರಿಯರು ಸೇರಿದಂತೆ ಅವರ ಮಕ್ಕಳು ರಾಜಕೀಯದಲ್ಲಿದ್ದು, ಸ್ಟಾಲಿನ್ ಸಿಎಂ ಆಗಿದ್ದು, ಅವರ ಮಗ ಮಂತ್ರಿ ಮತ್ತು ಸಹೋದರಿ ಸಂಸದರಾಗಿದ್ದಾರೆ. ಒಂದು ರಾಜಕೀಯ ಪಕ್ಷವು ಒಂದು ಕುಟುಂಬದ ನಿಯಂತ್ರಣದಲ್ಲಿದೆ. ಅದು ಕುಟುಂಬ ರಾಜಕಾರಣ. ಇಲ್ಲಿ ಬಿಜೆಪಿಯಲ್ಲಿ ಹಾಗಲ್ಲ. ಬಿಎಸ್ ಯಡಿಯೂರಪ್ಪ ಅವರ ತಂದೆ ರಾಜಕೀಯದಲ್ಲಿ ಇರಲಿಲ್ಲ ಮತ್ತು ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವುದನ್ನು ಕುಟುಂಬ ರಾಜಕೀಯ ಎಂದು ಹೇಳಲು ಸಾಧ್ಯವಿಲ್ಲ. 

ಕುಟುಂಬ ರಾಜಕಾರಣದ ವಿಚಾರಕ್ಕೆ ಬಂದರೆ ನಿಮ್ಮ ಮೈತ್ರಿಕೂಟದ ಪಾಲುದಾರ ಜೆಡಿಎಸ್‌ ಸರಿಹೋಗುತ್ತದೆ ಅಲ್ಲವೇ?
ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಂಜಾಬ್‌ನಲ್ಲಿ ಎಸ್‌ಎಡಿ (ಶಿರೋಮಣಿ ಅಕಾಲಿದಳ) ಮತ್ತು ಮಹಾರಾಷ್ಟ್ರದಲ್ಲಿ ಶಿವಸೇನೆಯಂತಹ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. 

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಫಲಕಾರಿಯಾಗಲಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಜನರಿಗೆ ಅದೇ ಮನಸ್ಥಿತಿ ಇದೆಯೇ?
ಆದರೆ ಮೌಲ್ಯಮಾಪನದ ನಂತರವೇ ಮೈತ್ರಿ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ವಿಫಲವಾಗಿದೆ. ಆ ಸತ್ಯ ಗೊತ್ತಿದ್ದರೂ ಮತ್ತೆ ಮೈತ್ರಿ ಮಾಡಿಕೊಂಡು ಹೋದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ (2004 ರಲ್ಲಿ) ಧರಂ ಸಿಂಗ್ ಸಿಎಂ ಆದಾಗ, ಮೈತ್ರಿ ದೊಡ್ಡ ವೈಫಲ್ಯ ಕಂಡಿತ್ತು. 2018ರಲ್ಲಿ ಶಿವಕುಮಾರ್ ಮತ್ತು ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡರು, ಆದರೆ ಆ ಮೈತ್ರಿಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದರಿಂದ ಅದೂ ವಿಫಲವಾಗಿದೆ. ನಾವು 2006ರಲ್ಲಿ ಒಮ್ಮೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು ಅದು ಯಶಸ್ವಿಯಾಗಿತ್ತು. ಒಂದು ವೇಳೆ, ಆ ಅವಧಿಯಲ್ಲಿ ಯಡಿಯೂರಪ್ಪನವರು ಡಿಸಿಎಂ ಆಗಿ ಕುಮಾರಸ್ವಾಮಿ ಸಿಎಂ ಆಗಿ ಉತ್ತಮ ಆಡಳಿತ ನೀಡಿದ್ದರು. ಅದನ್ನು ಪರಿಗಣಿಸಿ ಈಗ ಮತ್ತೆ ಮೈತ್ರಿ ಮಾಡಿಕೊಂಡಿದ್ದೇವೆ. ಉತ್ತಮ ಆಡಳಿತಕ್ಕಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ನಮ್ಮ ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಘರ್ಷಣೆ ಇಲ್ಲ.

ಜೆಡಿಎಸ್ ಅಥವಾ ಬಿಜೆಪಿ ಯಾರಿಗೆ ಹೆಚ್ಚು ಲಾಭ?
ನಮ್ಮಿಬ್ಬರಿಗೂ ಪರಸ್ಪರ ಪ್ರಯೋಜನವನ್ನು ನೀಡುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ 6.5 ಲಕ್ಷಕ್ಕೂ ಅಧಿಕ ಮತ ಪಡೆದಿದ್ದು, 2024ರಲ್ಲಿ ಮೈತ್ರಿ ಕೆಲಸ ಮಾಡುವುದರಿಂದ ಗೆಲ್ಲುತ್ತೇವೆ. ಮಂಡ್ಯದಲ್ಲಿ ನಾವು ಕಳೆದ ಬಾರಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡಿದ್ದೆವು. ಈ ಬಾರಿ ಬಿಜೆಪಿ-ಜೆಡಿಎಸ್ ಎರಡೂ ಮತಗಳನ್ನು ಸೇರಿಸಿದರೆ ನಾವು ಗೆಲ್ಲುತ್ತೇವೆ. ಸಹಜವಾಗಿಯೇ ಹಾಸನ ಗೆಲ್ಲುತ್ತೇವೆ. ಈ ಹಿಂದೆ ನಾವು ಎಲ್ಲ 28 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರಲಿಲ್ಲ ಈ ಬಾರಿ ಎಲ್ಲ ಕಡೆ ಸ್ಪರ್ಧಿಸುತ್ತೇವೆ. 2019 ರಲ್ಲಿ, ಸಮೀಕ್ಷೆಗಳು ನಮಗೆ 19, 20 ಮತ್ತು 21 ಸ್ಥಾನಗಳು ಎನ್ನುತ್ತಿದ್ದವು. ಆದರೆ ನಾವು ಮೋದಿಯವರ ಇಮೇಜ್ ಮತ್ತು ಮ್ಯಾಜಿಕ್ ನಿಂದ 25 ಸ್ಥಾನ ಗೆದ್ದೆವು. 

ಅಧಿವೇಶನದ ನಂತರ ನಿಮ್ಮ ಯೋಜನೆ ಏನು?
ಎಲ್ಲ 28 ಸ್ಥಾನಗಳನ್ನು ಗೆಲ್ಲಲು ನಾನು ಮತ್ತು ವಿಜಯೇಂದ್ರ ಇಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ನಾವು ಸಾರ್ವಜನಿಕ ರ್ಯಾಲಿಗಳು ಮತ್ತು ಪ್ರತಿಭಟನೆಗಳನ್ನು ನಡೆಸುತ್ತೇವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com