ಮಂಗಳೂರು: ಬೀಗ ಜಡಿಯುವ ಹಂತದಲ್ಲಿದ್ದ ಸರ್ಕಾರಿ ಶಾಲೆಯಲ್ಲೀಗ 180 ವಿದ್ಯಾರ್ಥಿಗಳಿಗೆ ಶಿಕ್ಷಣ!

ಒಂದು ಕಾಲದಲ್ಲಿ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿದ್ದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇದೀಗ ಹೆಚ್ಚಾಗಿದ್ದು ಮಾತ್ರವಲ್ಲದೆ ಶಾಲೆಗೆ ನೂತನ ಕಟ್ಟಡ ಕೂಡ ನಿರ್ಮಾಣ ಆಗಿದೆ ಅಂದರೆ ನೀವು ನಂಬಲೇಬೇಕು.
ಬೆಳ್ತಂಗಡಿಯ ಮರೋಡಿ ಗ್ರಾಮದ ಕುಕ್ರಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ
ಬೆಳ್ತಂಗಡಿಯ ಮರೋಡಿ ಗ್ರಾಮದ ಕುಕ್ರಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ

ಮಂಗಳೂರು: ಒಂದು ಕಾಲದಲ್ಲಿ ಮಕ್ಕಳಿಲ್ಲದೆ  ಮುಚ್ಚುವ ಹಂತ ತಲುಪಿದ್ದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇದೀಗ ಹೆಚ್ಚಾಗಿದ್ದು ಮಾತ್ರವಲ್ಲದೆ ಶಾಲೆಗೆ ನೂತನ ಕಟ್ಟಡ ಕೂಡ ನಿರ್ಮಾಣ ಆಗಿದೆ ಅಂದರೆ ನೀವು ನಂಬಲೇಬೇಕು.

2019ರಲ್ಲಿ ಕೇವಲ 16 ಮಕ್ಕಳಿದ್ದು, ಮುಚ್ಚುವ ಹಂತದಲ್ಲಿದ್ದ ತಾಲ್ಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೀಗ ಬರೋಬ್ಬರಿ 180 ಮಕ್ಕಳು ಓದುತ್ತಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಇತಿಹಾಸದ ಪುಟ ಸೇರಬೇಕಿದ್ದ ಶಾಲೆಯೊಂದು ಹೊಸ ಇತಿಹಾಸವನ್ನು ನಿರ್ಮಿಸಿದೆ.

ಗ್ರಾಮಸ್ಥರು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿರುವ ಸಮಿತಿಯ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ಶ್ರಮದಿಂದಾಗಿ ಶಾಲೆಯಲ್ಲಿ ಈಗ 180 ಮಕ್ಕಳಿದ್ದಾರೆ. ಒಂದರಿಂದ ಏಳನೇ ತರಗತಿಯ ಶಾಲೆಯನ್ನು 65 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಆದರೆ ನಾಲ್ಕು ವರ್ಷಗಳ ಹಿಂದೆ ಮಕ್ಕಳಿಲ್ಲದೆ ಹಲವು ತರಗತಿ ಕೊಠಡಿಗಳು ಖಾಲಿಯಾಗಿದ್ದವು.

ಆ ಸಮಯದಲ್ಲಿ, ಶಾಲೆಯ ಹಳೆ ವಿದ್ಯಾರ್ಥಿಗಳು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಮತ್ತು ಈಗಾಗಲೇ ಬಂಟ್ವಾಳ ತಾಲೂಕಿನ ಶಾಲೆಯನ್ನು ಪುನರುಜ್ಜೀವನಗೊಳಿಸಿರುವ ಅಂಚನ್ ಅವರನ್ನು ಸಂಪರ್ಕಿಸಿದರು. ಒಟ್ಟಾಗಿ, ಸಂಸ್ಥೆಯನ್ನು ಉಳಿಸಲು ಸಮಗ್ರ ಯೋಜನೆಯನ್ನು ರೂಪಿಸಿದರು.

ಮೊದಲಿಗೆ, ಅವರು ಸಮಿತಿಯನ್ನು ರಚಿಸಿದರು. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಹೊರತೆಗೆದು ಅವರನ್ನು ರಾಜ್ಯ ಸರ್ಕಾರಿ ಶಾಲೆಗೆ ಸೇರಿಸಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಸುಮಾರು 40 ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಪ್ರಕಾಶ್ ಅಂಚನ್ ಅವರ ಸತತ ಪ್ರಯತ್ನದಿಂದಾಗಿ ಶಾಲೆಗೆ ಮರೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಪೆರಾಡಿ, ಕಾಶಿಪಟ್ಣ, ಕೊಕ್ರಾಡಿ, ಸವ್ಯ, ಕುತ್ಲೂರು, ನಾರಾವಿ, ಶಿರ್ತಾಡಿ ಮತ್ತಿತರ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರಲಾರಂಭಿಸಿದರು ಎಂದು ಸಮಿತಿಯ ಅಧ್ಯಕ್ಷ ಜಯಂತ್ ಕೋಟ್ಯಾನ್ ಹೇಳಿದ್ದಾರೆ.

ಶಾಲೆಯನ್ನು ದತ್ತು ಪಡೆದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಿತು. ಆಂಗ್ಲ ಮಾಧ್ಯಮ ತರಗತಿಗಳಿಗೂ ಅನುಮತಿ ದೊರೆತಿದೆ. ಹೆಚ್ಚುವರಿ ಗೌರವ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.

ಯೋಗ, ಕರಾಟೆ, ನೃತ್ಯ, ಯಕ್ಷಗಾನ ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಯಿತು ಮತ್ತು ಟ್ರಸ್ಟ್ ದೂರದ ಸ್ಥಳಗಳಿಂದ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಶಾಲಾ ಬಸ್ ವ್ಯವಸ್ಥೆಗೊಳಿಸಿತು.

ದಾನಿಗಳ ನೆರವಿನಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರೊಂದಿಗೆ 2020ರಲ್ಲಿ 80 ಮತ್ತು 2021ರಲ್ಲಿ ಮಕ್ಕಳ ಸಂಖ್ಯೆ 120ಕ್ಕೆ ಏರಿತು. 2022ರಲ್ಲಿ 140 ದಾಟಿದೆ. ಪ್ರಸ್ತುತ ಶಾಲೆಯಲ್ಲಿ 180 ಮಕ್ಕಳು ಓದುತ್ತಿದ್ದಾರೆ. ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರು ಕಾಯಂ ಶಿಕ್ಷಕರು, ಮೂವರು ಅತಿಥಿ ಶಿಕ್ಷಕರು ಹಾಗೂ ಮೂವರು ಗೌರವ ಶಿಕ್ಷಕರಿದ್ದಾರೆ.

ಗ್ರಾಮೀಣ ಭಾಗದ ಈ ಮಕ್ಕಳಿಗೆ ಡಿಜಿಟಲ್ ಶಿಕ್ಷಣವನ್ನು ಒದಗಿಸಲು, ಐಇಇಇ ಅಡ್ವಾನ್ಸಿಂಗ್ ಟೆಕ್ನಾಲಜಿ ಫಾರ್ ಹ್ಯುಮಾನಿಟಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆ ಮೂಲಕ 2.4 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಶಾಲೆಗೆ ಒದಗಿಸಿದೆ.

ಶಾಸಕ ಹರೀಶ್ ಪೂಂಜಾ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅನುದಾನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2 ಲಕ್ಷ ದೇಣಿಗೆಯಲ್ಲಿ 1.10 ಕೋಟಿ ವೆಚ್ಚದಲ್ಲಿ ಎಂಟು ಕೊಠಡಿಗಳ ಕಟ್ಟಡ (ಸುಮಾರು 5,000 ಚದರ ಅಡಿ) ನಿರ್ಮಿಸಲಾಗಿದೆ. ಫೆಬ್ರವರಿ 17 ರಂದು ಕಟ್ಟಡ ಉದ್ಘಾಟನೆಯಾಗಲಿದ್ದು, ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಡಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com