ಸುಟ್ಟಗಾಯದಿಂದ ಪದ್ಮಶ್ರೀವರೆಗೆ: 'ಬೆಂಕಿಯಲ್ಲಿ ಅರಳಿದ ಹೂವು' ಪ್ರೇಮಾ ಧನರಾಜ್‌!

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ.ಪ್ರೇಮಾ ಧನರಾಜ್ ಅವರ ಬದುಕೇ ಒಂದು ರೋಚಕ ಕಥೆ. ಸುಟ್ಟ ದೇಹದಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗಿನ ಪ್ರೇಮಾ ಅವರ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ.
ಪ್ರೇಮಾ ಧನರಾಜ್‌
ಪ್ರೇಮಾ ಧನರಾಜ್‌

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ.ಪ್ರೇಮಾ ಧನರಾಜ್ ಅವರ ಬದುಕೇ ಒಂದು ರೋಚಕ ಕಥೆ. ಸುಟ್ಟ ದೇಹದಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗಿನ ಪ್ರೇಮಾ ಅವರ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ.

72 ವರ್ಷ ವಯಸ್ಸಿನ ಪ್ರೇಮಾ ಅವರ ಸಾಹಸಗಾಥೆ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಕಿ ಅವಘಡದಿಂದ ಸುಮಾರು ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬಳಿಕ ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಸುಟ್ಟ ಗಾಯಗಳಿಗೆ ತುತ್ತಾದ 25,000ಕ್ಕೂ ಅಧಿಕ ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು ಮೂರು ಪುಸ್ತಕಗಳನ್ನು ಬರೆದಿದ್ದಾರೆ.

ಅದು 1965ರ ಇಸವಿ. ಆಗ ಪ್ರೇಮಾ ಅವರಿಗೆ ಎಂಟು ವರ್ಷದ ಬಾಲಕಿ. ಅವರ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಅಂದು ಪ್ರೇಮಾ ಅವರ ಕುಟುಂಬಕ್ಕೆ ಆಘಾತವೊಂದು ಅಗ್ನಿ ಅವಘಡದ ರೂಪದಲ್ಲಿ ಎದುರಾಗಿತ್ತು.

ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕ ಪ್ರೇಮಾ ಅವರ ದೇಹದ ಮೇಲೆ ವ್ಯಾಪಿಸಿತ್ತು. ಶೇ. 50ರಷ್ಟು ಸುಟ್ಟ ಗಾಯಗಳೊಂದಿಗೆ ಪ್ರೇಮಾ ನೋವಿನಿಂದ ಒಡ್ಡಾಡುತ್ತಿದ್ದರು. ಸ್ಟವ್‌ ಸಿಡಿದು ಅವರ ಮುಖ, ಕುತ್ತಿಗೆ ಹಾಗೂ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಕೂಡಲೇ ಪ್ರೇಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬದುಕುವುದೇ ಅನುಮಾನ ಎಂದು ವೈದ್ಯರು ತಿಳಿಸಿದ್ದರು.

ಅಂದಾಜು ಒಂದು ತಿಂಗಳ ಚಿಕಿತ್ಸೆಯ ಬಳಿಕ ಪ್ರೇಮಾ ಅವರನ್ನು ಅವರ ತಂದೆ ಸಿಎಸ್‌ ಧನರಾಜ್‌ ಹಾಗೂ ತಾಯಿ ರೋಸಿ ಧನರಾಜ್‌ ತಮಿಳುನಾಡಿನ ವೆಲ್ಲೂರ್‌ನಲ್ಲಿರುವ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದ್ದರು.

ತಜ್ಞರ ವೈದ್ಯರ ಪ್ರಕಾರ ವ್ಯಕ್ತಿಯ ದೇಹದ ಶೇ.30ಕ್ಕಿಂತ ಹೆಚ್ಚು ಸುಟ್ಟಗಾಯಗಳು ಮಾರಣಾಂತಿಕವಾಗಬಹುದು. ಆದರೆ, ಪವಾಡ ಸದೃಶ ಎಂಬಂತೆ ಪ್ರೇಮಾ ಅವರು ಚೇತರಿಸಿಕೊಳ್ಳತೊಡಗಿದರು. ಆತ್ಮ ವಿಶ್ವಾಸದಿಂದ, ಮನೋಧೈರ್ಯದಿಂದ ಪರಿಸ್ಥಿತಿಯನ್ನು ಮೆಟ್ಟಿನಿಂತು ಬದುಕಿನತ್ತ ಹೊರಳಿದರು.

ಬಳಿಕ ಪ್ರೇಮಾ ತಮ್ಮ ತಾಯಿಯ ಆಶಯದಂತೆ ಸಮಾಜ ಸೇವೆಗಾಗಿ ಜೀವನವನ್ನೇ ಮುಡಿಪಿಟ್ಟರು. ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಸೀಟು ಗಿಟ್ಟಿಸಿಕೊಂಡರು. ಮುಂದೆ ಅವರ ಆಸಕ್ತಿಯ ಸರ್ಜರಿ ವಿಭಾಗವನ್ನು ಅಧ್ಯಯನ ಮಾಡಿ ಪ್ಲಾಸ್ಟಿಕ್ ಸರ್ಜನ್ ಆಗಿ ಹೊರ ಹೊಮ್ಮಿದರು. ಅಮೆರಿಕಾದಲ್ಲಿ, ಗ್ಲಾಸ್ಗೋದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನಸಿನಂತೆ ದೇಶದ ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಆಗಿ ಗುರುತಿಸಿಕೊಂಡರು.

ವೆಲ್ಲೋರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಆರಂಭಿಸಿದ ಪ್ರೇಮಾ ಮುಂದೆ ಅದೇ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೂಡ ಸೇವೆ ಸಲ್ಲಿಸಿದರು. ಪ್ರೇಮಾ 1999ರಲ್ಲಿ ಅಗ್ನಿ ರಕ್ಷಾ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಸ್ಥಾಪಿಸಿ ಸುಟ್ಟ ಗಾಯಾಳುಗಳ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ.

ಇದೂವರೆಗೆ ಅವರು ಸುಮಾರು 25,000ಕ್ಕೂ ಹೆಚ್ಚು ಸುಟ್ಟಗಾಯಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಹುಟ್ಟಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ನಿಸ್ವಾರ್ಥ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ವೈದ್ಯೆಯಾಗುವಂತೆ ತಾಯಿ ಬಯಸಿದ್ದರು: ಪ್ರೇಮಾ ಧನರಾಜ್
ಶಾಲೆಯಲ್ಲಿ ಸಂಗೀತ ಸ್ಪರ್ಧೆ ಇತ್ತು. ಸ್ಪರ್ಧೆಯಲ್ಲಿ ಭಾಗಿಯಾಗಲು ಉತ್ಸುಕಳಾಗಿದ್ದೆ. ಇದಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದೆ. ಸಂಗೀತ ಅಭ್ಯಾಸ ಮಾಡುತ್ತಿದ್ದ ವೇಲೆ ಕಾಫಿ ಕುಡಿಯಲು ಬಯಸಿದ್ದೆ. ಮನೆಯಲ್ಲಿ ನಾನು ಹಿರಿಯ ಮಗಳಾಗಿದ್ದು, ನನಗೆ ಅಡುಗೆ ಮಾಡಲು ತಿಳಿದಿತ್ತು. ಪಂಪ್ ಸ್ಟೌವ್ ಆಗಿದ್ದರಿಂದ ಬೆಂಕಿ ಹತ್ತಿಸಲು ಕಷ್ಟವಾಗುತ್ತಿತ್ತು. ಸೀಮೆಎಣ್ಣೆ ಖಾಲಿಯಾಗಿರಬಹುದು ಎಂದು ಎಣ್ಣೆಯನ್ನು ಹಾಕಿದ್ದೆ. ಆದರೆ, ಈ ವೇಳೆ ಸ್ಟೌವ್ ಸ್ಫೋಟಗೊಂಡಿತ್ತು. ಕ್ಷಣಾರ್ಧರದಲ್ಲಿ ಬೆಂಕಿ ದೇಹವನ್ನು ಹೊತ್ತಿಕೊಂಡಿತ್ತು. ನೆರೆಮನೆಯವರು ಬೆಂಕಿ ನಂದಿಸಿದರು. ಘಟನೆ ಬಳಿಕ ಗಾಯಕಿಯಾಗಬೇಕಿಂದ ನಾನು ವೈದ್ಯೆಯಾಗಿ ಬದಲಾದೆ ಎಂದು ಪ್ರೇಮಾ ಅವರು ಸ್ಮರಿಸಿದ್ದಾರೆ.

ಘಟನೆ ಬಳಿಕ ನನ್ನ ತುಟಿ ಎದೆಗೆ ತಾಗುತ್ತಿತ್ತು, ಕುತ್ತಿಗೆ ನಿಲ್ಲುತ್ತಿರಲಿಲ್ಲ. ಬೆಂಗಳೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದೆ. ನಂತರ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (CMC) ನಲ್ಲಿ ಚಿಕಿತ್ಸೆ ಪಡೆದುಕೊಂಡೆ. ಪ್ರತಿ ಶಸ್ತ್ರಚಿಕಿತ್ಸೆಯ ಮೊದಲ ಹಾಗೂ ನಂತರ ಮೂರು ದಿನಗಳು ಕಣ್ಣೀರಿನಲ್ಲಿ ಮುಳುಗುತ್ತಿದ್ದೆ. ಮೂರು ಶಸ್ತ್ರಚಿಕಿತ್ಸೆಗಳು ವಿಫಲವಾಗಿತ್ತು. ನಾಲ್ಕನೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಇದು ನನ್ನ ಹಣೆಬರಹವನ್ನೇ ಬದಲಿಸಿತ್ತು. 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಇದಾಗಿತ್ತು. ನಂತರ ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿಯೇ ನಾನು ವೈದ್ಯೆಯಾಗಬೇಕೆಂದು ನನ್ನ ತಾಯಿ ಬಯಸಿದ್ದರು.

ಚಿಕಿತ್ಸೆ ಬಳಿಕ ಮನೆಗೆ ಮರಳಿದಾಗ ಆಗಾಗ್ಗೆ ಮನೆಗೆ ಬರುತ್ತಿದ್ದ ನನ್ನ ಸಂಬಂಧಿಕರು ಮನೆಗೆ ಬರುವುದನ್ನು ನಿಲ್ಲಿಸಿದ್ದರು. ಅವರ ಯಾವ ಕಾರಣಕ್ಕೆ ಭಯಪಡುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಲು ನನಗ ಒಂದು ವರ್ಷ ಸಮಯ ಬೇಕಾಯಿತು. ಏಕೆಂದರೆ ತಾಯಿ ಮನೆಯಲ್ಲಿದ್ದ ಕನ್ನಡಗಿಗಳೆಲ್ಲವನ್ನೂ ತೆಗೆದು ಹಾಕಿದ್ದರೆ. ಮನೆ ಸಹಾಯಕಿಯೊಬ್ಬಕು ತಾಯಿಯ ಕೋಣೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಕನ್ನಡಿಯ ತುಂಡೊಂದು ಸಿಕ್ಕಿತ್ತು. ಈ ವೇಳೆ ನನ್ನನ್ನು ನಾನು ನೋಡಿಕೊಂಡಿದ್ದೆ. ಬಳಿಕ ನಿಯಂತ್ರಿಸಲಾಗದಷ್ಟು ಅತ್ತಿದ್ದೆ. ಪರಿಸ್ಥಿತಿಗೆ ಹೊಂದಿಕೊಳ್ಳುವಷ್ಟರದಲ್ಲಿ ನನ್ನ ಸಹಪಾಠಿಗಳುು ಮುಂದೆ ಹೋಗಿಬಿಟ್ಟಿದ್ದರು. ನನ್ನ ತಂದೆ ತಾಯಿ ಮತ್ತೆ ನನ್ನನ್ನು ಶಾಲೆಗೆ ಸೇರಿಸಲು ಬಯಸಿದ್ದರು. ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಾನು ಹುಬ್ಭಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ಓದಿದೆ. ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿಯಾಗಾದಲೆಲ್ಲಾ ನನ್ನ ತಾಯಿ ನನ್ನನ್ನು ವೈದ್ಯರ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ನೋಡಬೇಕೆಂದು ಹೇಳುತ್ತಿದ್ದರು. ತಾಯಿಯ ಇಚ್ಛೆಯಂತೆ ವೈದ್ಯೆಯಾಗಿ ನಾನು ಚಿಕಿತ್ಸೆ ಪಡೆದ ಸಿಎಂಸಿ ಆಸ್ಪತ್ರೆಯಲ್ಲಿ ಕೆಲಸ ಪಡೆದುಕೊಂಡೆ. ಅಲ್ಲಿ ನನ್ನ ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ನಿರ್ದೇಶಕರನ್ನು ಮೊದಲು ಭೇಟಿ ಮಾಡಿದೆ.

ನಂತರ ಪ್ಲಾಸ್ಟಿಕ್ ಸರ್ಜರಿ ತರಿಬೇತಿ ಪಡೆಯಲು ಲುಧಿಯಾನಕ್ಕೆ ಹೋಗಿದ್ದೆ. ಅಲ್ಲಿ ಭಾರತ-ಪಾಕಿಸ್ತಾನ ಯುದ್ಧದಿಂದ ಗಾಯಗಳಿಂದ ಬಳಲುತ್ತಿದ್ದ ಹಲವಾರು ರೋಗಿಗಳಿಗೆ ಚಿಕಿತ್ಸೆ ನೀಡಿದೆ. 2002ರಲ್ಲಿ ಅಗ್ನಿ ರಕ್ಷಾ ಎನ್‌ಜಿಒ ಸ್ಥಾಪಿಸಿದೆ. ಈ ಎನ್‌ಜಿಒ ಮೂಲಕ 25,000 ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ತಾವು ನಡೆದುಬಂದ ಹಾದಿಯನ್ನು ಪ್ರೇಮಾ ಅವರು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com