
ಮಡಿಕೇರಿ: ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದ್ದರೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡಲು ಇಂದಿಗೂ ಆಸರೆಯಾಗಿವೆ. ಕೊಡಗಿನಲ್ಲಿ ಈ ವರ್ಷ ಸರ್ಕಾರಿ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದು, ಅಲ್ಲಿ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಿದ್ದಳು ಎಂಬುದು ವಿಶೇಷ.
ಸರಿಯಾದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಲ್ಲದೆ ಕೊರತೆಯಿಂದ ಹಲವು ಸರಕಾರಿ ಶಾಲೆಗಳು ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಒಳಭಾಗದ ನೀರುಗಳಲೆ ಗ್ರಾಮಸ್ಥರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ ನೀರುಗಳಲೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಪುನಶ್ಚೇತನಗೊಳಿಸಿದರು. ಗ್ರಾಮಸ್ಥರು ಹಳೆಯ ವಿದ್ಯಾರ್ಥಿಗಳ ಸಂಘ -- ಪೂರ್ವ ಪ್ರಾಥಮಿಕ ಶಾಲಾ ಸಮಿತಿ ಜೊತೆಗೆ ಸೇರಿ ಶಾಲೆಯನ್ನು ಪುನಶ್ಚೇತನಗೊಳಿಸುವ ಕಾರ್ಯ ಆರಂಭಿಸಿದರು.
ಇಲ್ಲಿ ಸ್ಪೂರ್ತಿದಾಯಕ ಮತ್ತು ವಿಶಿಷ್ಟವಾದ ಸಂಗತಿಯೆಂದರೆ, ಗ್ರಾಮಸ್ಥರು ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ತೆಗೆದುಕೊಳ್ಳಲಿಲ್ಲ. ಇಡೀ ಯೋಜನೆಯು ಗ್ರಾಮಸ್ಥರ ಮತ್ತು ಹಳೆಯ ವಿದ್ಯಾರ್ಥಿಗಳ ಉಪಕ್ರಮವಾಗಿದೆ.
67 ವರ್ಷಗಳಷ್ಟು ಹಳೆಯದಾದ ಈ ಶಾಲೆಯು ಪ್ರಾಥಮಿಕ ಶಾಲೆಯಾಗಿ ಪ್ರಾರಂಭವಾಯಿತು. ಪ್ರೌಢಶಾಲಾ ವಿಭಾಗವನ್ನು 2007 ರಲ್ಲಿ ಪ್ರಾರಂಭ ಮಾಡಲಾಯಿತು. ಸಂಸ್ಥೆಯು ಈ ಹಿಂದೆ ಗಣನೀಯ ಸಂಖ್ಯೆಯ ಪ್ರವೇಶಗಳನ್ನು ಹೊಂದಿದ್ದರೂ, ಪೋಷಕರು ಖಾಸಗಿ ಶಾಲೆಗಳಿಗೆ ಆದ್ಯತೆ ನೀಡುವುದರೊಂದಿಗೆ ನಿಧಾನವಾಗಿ ವಿದ್ಯಾರ್ಥಿಗಳು ಈ ಶಾಲೆಗೆ ಬರುವವರ ಸಂಖ್ಯೆ ಕ್ಷೀಣಿಸಲು ಪ್ರಾರಂಭಿಸಿತು. ಬಹುತೇಕ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳಿಂದ ಬಂದಿದ್ದು, ಈ ವರ್ಷ 1ರಿಂದ 10ನೇ ತರಗತಿವರೆಗೆ ಒಟ್ಟು 114 ಮಂದಿ ಪ್ರವೇಶ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳು ಕಾರ್ಮಿಕ ವರ್ಗಕ್ಕೆ ಮಾತ್ರ ಮೀಸಲಾದ ಸ್ಥಳಗಳಾಗಬಾರದು. ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ನಿಂತಾಗ ಮಾತ್ರ ಈ ಶಾಲೆಗಳು ಉಳಿಯಲು ಸಾಧ್ಯ ಎಂದು ಕಳೆದ 16 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲಾ ಶಿಕ್ಷಕ ರತ್ನಕುಮಾರ್ ಹೇಳುತ್ತಾರೆ.
ಇಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ಜೇನು ಕುರುಬ ಬುಡಕಟ್ಟಿನವರು, ಅವರು ಎಸ್ಟೇಟ್ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಪೂರ್ವಪ್ರಾಥಮಿಕ ಶಾಲಾ ಸಮಿತಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಇಳಿಮುಖವಾಗುತ್ತಿದ್ದಂತೆ ಗ್ರಾಮಸ್ಥರು, ಶಾಲಾ ಹಳೆ ವಿದ್ಯಾರ್ಥಿಗಳ ಜತೆ ಸೇರಿ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸಮಿತಿ ರಚಿಸಿದರು. ನಾವು ಕಳೆದ ವರ್ಷ ಮಾರ್ಚ್‌ನಲ್ಲಿ ಸಭೆಯನ್ನು ನಡೆಸಿದೆವು ಎಂದು ರತ್ನ ಕುಮಾರ್ ವಿವರಿಸಿದರು.
ಸಮಿತಿಯ ಮೊದಲ ಯೋಜನೆ ಶಿಶುವಿಹಾರವನ್ನು ಪರಿಚಯಿಸುವುದು ಮತ್ತು ಕ್ಯಾಂಪಸ್‌ನಲ್ಲಿರುವ ಹಳೆಯ ಕಟ್ಟಡವನ್ನು ನವೀಕರಿಸುವುದು, ಇದಕ್ಕಾಗಿ ತಾಲೂಕು ಬಿಇಒ ಅವರಿಂದ ಅನುಮತಿ ಕೋರಲಾಯಿತು. ಆದರೆ ವಿದ್ಯಾರ್ಥಿಗಳಿಗೆ ಹೊಸ ತರಗತಿಗಳನ್ನು ನಡೆಸಲು ಸಾಕಷ್ಟು ಹಣ ಅಥವಾ ಸಿಬ್ಬಂದಿ ಇಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಿತಿಗೆ ತಿಳಿಸಿದರು. ನಂತರ ಸಮಿತಿಯು ಸರ್ಕಾರದಿಂದ ಯಾವುದೇ ಹಣಕಾಸಿನ ಸಹಾಯವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿತು.
ಕ್ಯಾಂಪಸ್ ಐದು ತರಗತಿ ಕೊಠಡಿಗಳಿರುವ ಹಳೆಯ ಕಟ್ಟಡವನ್ನು ಹೊಂದಿದೆ, ಇದನ್ನು ಕ್ರೌಡ್‌ಫಂಡ್ ಬಳಸಿ ನವೀಕರಿಸಲಾಗಿದೆ. ಬಿಇಒ ಸಮಿತಿಗೆ ಬೆಂಬಲ ನೀಡಿದ್ದು, ಶಾಲೆಯಲ್ಲಿ ಎಲ್‌ಕೆಜಿ ಪರಿಚಯಿಸುವ ಜವಾಬ್ದಾರಿಯನ್ನು ನಾವೇ ತೆಗೆದುಕೊಂಡಿದ್ದೇವೆ ಎಂದು ಕುಮಾರ್ ಹೇಳಿದರು. ನವೀಕರಣ ಕಾಮಗಾರಿ ಆರಂಭಿಸುವ ಮುನ್ನ ಸಮಿತಿ ಮತ್ತು ಎಸ್‌ಡಿಎಂಸಿ ಸದಸ್ಯರು ದಾನಿಗಳನ್ನು ಸಂಪರ್ಕಿಸಿ, ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳಿಂದ ಸುಮಾರು 10 ಲಕ್ಷ ರೂಪಾಯಿ ಸಂಗ್ರಹಿಸಿದರು.
ಹಳೆಯ ಛಾವಣಿಯ ಹೆಂಚುಗಳನ್ನು ಬದಲಾಯಿಸುವ ಮತ್ತು ಗೋಡೆಗಳಿಗೆ ಪ್ಲ್ಯಾಸ್ಟರಿಂಗ್ ಮಾಡುವ ಕೆಲಸ ಪ್ರಾರಂಭವಾಯಿತು. ಸುಮಾರು ನಾಲ್ಕೈದು ತಿಂಗಳಲ್ಲಿ ಐದರಲ್ಲಿ ಮೂರು ಕೊಠಡಿಗಳು ನವೀಕರಣಗೊಂಡವು. ಒಂದನ್ನು ಹೊಚ್ಚ ಹೊಸ ಪೀಠೋಪಕರಣಗಳೊಂದಿಗೆ ತರಗತಿಯಾಗಿ ಪರಿವರ್ತಿಸಲಾಯಿತು, ಎರಡನೆಯ ಕೋಣೆ ಮಕ್ಕಳಿಗೆ ಆಟಗಳ ಕೋಣೆಯಾಗಿ ಮತ್ತು ಮೂರನೆಯದು ಕಛೇರಿಯಾಗಿ ಮಾರ್ಪಟ್ಟಿತು. ಇನ್ನೂ ಎರಡು ಕೊಠಡಿಗಳಿದ್ದು, ಹೆಚ್ಚಿನ ಹಣ ವ್ಯವಸ್ಥೆ ಮಾಡಿದ ನಂತರ ನವೀಕರಿಸಲಾಗುವುದು. ಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯವನ್ನೂ ನಿರ್ಮಿಸಿದ್ದೇವೆ ಎಂದು ಕುಮಾರ್ ತಿಳಿಸಿದರು.
ನವೀಕರಣದ ನಂತರ, ಸಮಿತಿಯ ಸದಸ್ಯರು ಗ್ರಾಮಸ್ಥರನ್ನು ಭೇಟಿ ಮಾಡಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರೋತ್ಸಾಹಿಸಿದರು. ಸಮಿತಿಯ ಪ್ರಯತ್ನ ಫಲ ನೀಡಿದ್ದು, 15 ವಿದ್ಯಾರ್ಥಿಗಳು ಎಲ್‌ಕೆಜಿಗೆ ದಾಖಲಾಗಿದ್ದಾರೆ. ಮುಂದಿನ ವರ್ಷ, ನಾವು ಯುಕೆಜಿ ಪರಿಚಯಿಸುತ್ತೇವೆ. ನಂತರದ ವರ್ಷ, ಗ್ರೇಡ್ 1 ಕ್ಕೆ ಇಂಗ್ಲಿಷ್ ಮಾಧ್ಯಮವನ್ನು ಪರಿಚಯಿಸಲು ಸರ್ಕಾರದ ಅನುಮತಿಯನ್ನು ಪಡೆಯಲು ನಾವು ಆಶಿಸಿದ್ದೇವೆ ಎಂದು ಕುಮಾರ್ ಹೇಳಿದರು. ಪ್ರಸ್ತುತ, SDMC ಶಿಕ್ಷಕರ ವೇತನವನ್ನು ಭರಿಸುತ್ತಿದೆ ಎಂದು ಹೇಳಿದರು.
ಗ್ರಾಮಗಳ ಅನೇಕ ಶಿಕ್ಷಕರು ವರ್ಗಾವಣೆಗಾಗಿ ಕಾಯುತ್ತಿರುವಾಗ, ನೀರುಗಳೆಲೆ ಶಾಲೆ ಆಡಳಿತ ಮಂಡಳಿಯ ಪ್ರಯತ್ನವು ಉದಾಹರಣೆಯಾಗಿದೆ. ಸಾವಿರಾರು ಮಂದಿಗೆ ಶಿಕ್ಷಣ ನೀಡಿದ ಶಾಲೆಯನ್ನು ಉಳಿಸಲು ಗ್ರಾಮಸ್ಥರು ಕೈ ಜೋಡಿಸಿದರು’ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್ತೇಲಾ ಸಿಲ್ವಾ ಸಂತೋಷ ವ್ಯಕ್ತಪಡಿಸುತ್ತಾರೆ.
Advertisement