ಕಾಂಕ್ರೀಟ್ ಕಾಡಿನಲ್ಲಿ ಕೆರೆಗಳಿಗೆ ಮರು ಜೀವ: ಕಾರ್ಪೊರೇಟ್ ಕೆಲಸ ತೊರೆದು ಪರಿಸರ ರಕ್ಷಕನಾದ ಹರ್ಷ ತೇಜ್

ಕೆರೆಗಳ ರಕ್ಷಣೆ ಮಾಡುವ ಸಲುವಾಗಿ 5 ವರ್ಷಗಳ ಹಿಂದೆ ಕಾರ್ಪೊರೇಟ್ ಕೆಲಸ ತೊರೆದಿದ್ದ ಹರ್ಷ ತೇಜ್ ಅವರು, ಫೌಂಡೇಷನ್ ಆರಂಭಿಸಿ, ನಗರದಲ್ಲಿ ಕೆರೆಗಳ ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಹರ್ಷ ತೇಜ್
ಹರ್ಷ ತೇಜ್
Updated on

ಬೆಂಗಳೂರು: ಸಾವಿರ ಕೆರೆಗಳ ನಗರವಾಗಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಕಾಡು ಎಂಬ ಹೆಸರನ್ನು ಪಡೆದುಕೊಂಡಿದೆ. ಬೇಸಾಯ, ನಾಗರಿಕರ ಬಳಕೆ ಹಾಗೆಯೇ ನಗರದ ಸೌಂದರ್ಯಕ್ಕಾಗಿ ಜಲಮೂಲಗಳ ಸಂರಕ್ಷಣೆಯ ಅಗತ್ಯವನ್ನು ಮನಗಂಡಿದ್ದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಅನೇಕ ಕೆರೆಗಳನ್ನು ಮತ್ತು ಹರಿಯುವ ನೀರನ್ನು ಹಿಡಿದಿಡಲು ಒಡ್ಡುಗಳನ್ನು ನಿರ್ಮಿಸಿದ್ದರು. ಆದರೆ, ಅನೇಕ ಕೆರೆಗಳು ಇಂದು ಕಣ್ಮರೆಯಾಗಿವೆ.

ನಗರೀಕರಣದ ಧಾವಂತದಲ್ಲಿ ಅನೇಕ ಕೆರೆಗಳು ಹೂತು ಬಸ್ ನಿಲ್ದಾಣ, ಕ್ರೀಡಾಂಗಣ, ರಸ್ತೆ, ಅಪಾರ್ಟ್‌ಮೆಂಟ್‌ಗಳಾಗಿ ಹೋಗಿವೆ. ಹಾಗೆಯೇ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳಿಂದ ಉತ್ಪಾದನೆಯಾಗುತ್ತಿರುವ ಕೊಳಚೆ ನೀರಿನ ನಾಲೆಗಳು ಬಹುತೇಕ ಕೆರೆಗಳನ್ನೇ ಸೇರಿ ಕಲುಷಿತಗೊಳಿಸಿವೆ.

ಇವೆಲ್ಲವುಗಳ ನಡುವೆ ಪರಿಸರದ ಬಗ್ಗೆ ಕಾಳಜಿಯುಳ್ಳ ಒಂದಿಷ್ಟು ನಾಗರಿಕರ ಪ್ರಯತ್ನದಿಂದ ಕಸ ಕೊಳಚೆಯ ತೊಟ್ಟಿಗಳಾಗಿದ್ದ ಕೆರೆಗಳು ಪುನಃ ಕೆರೆಗಳಾಗಿ ಪುನಶ್ಚೇತನಗೊಳ್ಳುತ್ತಿವೆ. ಕೆರೆಗಳ ರಕ್ಷಣೆ ಮಾಡುವ ಸಲುವಾಗಿ 5 ವರ್ಷಗಳ ಹಿಂದೆ ಕಾರ್ಪೊರೇಟ್ ಕೆಲಸ ತೊರೆದಿದ್ದ ಹರ್ಷ ತೇಜ್ ಅವರು, ಫೌಂಡೇಷನ್ ಆರಂಭಿಸಿ, ನಗರದಲ್ಲಿ ಕೆರೆಗಳ ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿಯವರೂ ಕೂಡ ಕೈಜೋಡಿಸಿದ್ದಾರೆ.

ಹರ್ಷ ತೇಜ್ ಅವರು ಪ್ರಸ್ತುತ ಗುರುನಂದನ್ ರಾವ್ ಅವರ ಜೊತೆಯಲ್ಲಿ ಸರ್ಜಾಪುರ ಪ್ರದೇಶ, ವಿಮಾನ ನಿಲ್ದಾಣ ರಸ್ತೆ ಸೇರಿ ನಗರದ ಸುತ್ತಮುತ್ತಲಿನ 12-15 ಕೆರೆ ಸಂರಕ್ಷೆ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮಂತೆಯೇ ಇನ್ನೂ ಹಲವರು ಕೆರೆಗಳ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 4-5 ಜನರ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಮ್ಮ ಈ ಪ್ರಯತ್ನಕ್ಕೆ ಮತ್ತಷ್ಟು ಜನರ ಬಲ ಬೇಕಿದೆ ಎಂದು ಹರ್ಷ ತೇಜ್ ಅವರು ಹೇಳಿದ್ದಾರೆ.

ಹರ್ಷ ತೇಜ್
ಬೇಸಿಗೆ ನಿರ್ವಹಣೆಗೆ ಬೋರ್‌ವೆಲ್‌ ರೀಚಾರ್ಜ್: ಬರಗಾಲದ ನಡುವೆಯೂ ಕೊಪ್ಪಳದ ಶಾಲೆಗಳು ಜಲ ಸಮೃದ್ಧ!

ಪ್ರಾಣಿ, ಪಕ್ಷಿ ಹಾಗೂ ಪರಿಸರ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತವೆ. ಆದರೆ, ಸಹಾಯ ಮಾಡುವವರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ. ನನಗೆ ಹಾಗೂ ಗುರುನಂದನ್ ಇಬ್ಬರಿಗೂ ಚಿಕ್ಕಂಂದಿನಿಂದಲೂ ಪರಸರವೆಂದರೆ ಒಲವು ಹೆಚ್ಚು. ನಾವು ಮಣ್ಣನ್ನು ಅರ್ಥ ಮಾಡಿಕೊಂಡಿದ್ದೇವೆ. ನೀರಿನ ಮೌಲ್ಯ ಕೂಡ ತಿಳಿದಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಕೆರೆ ಸಂರಕ್ಷಣೆಯಲ್ಲಿ ತೊಡಗಿರುವ ಹರ್ಷತೇಜ್ ಅವರ ತಂಡವರು ಫೋಟೋಗ್ರಾಮೆಟ್ರಿ ಸಮೀಕ್ಷೆ, ಕೆರೆಯ ಸುತ್ತಲೂ ಸ್ಥಳೀಯ ಮರಗಳ ನೆಡುವುದು, ಹೂಳು ತೆಗೆಯಲು ಡಿಸಿಲ್ಟಿಂಗ್‌ನಂತಹ ತಂತ್ರಗಳನ್ನು ಬಳಕೆ ಮಾಡುತ್ತಿದೆ. ಇದರಿಂದ ಕೆರೆಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದಲ್ಲದೆ, ಕೆರೆಗಳ ಒಳಹರಿವುಗಳಲ್ಲಿ ಜೌಗು ಪ್ರದೇಶಗಳನ್ನೂ ವಿನ್ಯಾಸಗೊಳಿಸುತ್ತಿದೆ, ಇದರಿಂದ ಶುದ್ಧ ನೀರು ಮಾತ್ರ ಕೆರೆಯಲ್ಲಿ ಉಳಿಯಲಿದೆ. ನಾವು ಕೆರೆಗಳ ಗಾತ್ರವನ್ನು ಅವಲಂಬಿಸಿ ಪುನರುಜ್ಜೀವನ ಕಾರ್ಯಗಳನ್ನು ತೆಗೆದುಕೊಳಳುತ್ತೇವೆ. ಸಾಮಾನ್ಯವಾಗಿ ಈ ಕಾರ್ಯ 3 ತಿಂಗಳಿನಿಂದ 1 ವರ್ಷದವರೆಗೆ ಸಮಯ ತೆಗೆದುಕೊಳ್ಳುತ್ತದೆ. ಮೂರು ವರ್ಷಗಳ ಮೇಲ್ವಿಚಾರಣೆ ಮಾಡುತ್ತೇವೆ. ಇದು ನಿರಂತರ ಪ್ರಕ್ರಿಯೆಯಾಗಿರಲಿದ್ದು, ಸಮಸ್ಯೆ ಬಂದಾಗ ಪರಿಹಾರ ಕಂಡುಕೊಳ್ಳುತ್ತೇವೆಂದು ಹೇಳಿದ್ದಾರೆ.

ಹರ್ಷ ತೇಜ್
ಸಾರಕ್ಕಿ ಕೆರೆ ಪುನರುಜ್ಜೀವನ: ತಪ್ಪಿದ ನೀರಿನ ಬವಣೆ; ಜೆ ಪಿ ನಗರ ನಿವಾಸಿಗಳ ಮೊಗದಲ್ಲಿ ಮಂದಹಾಸ!

ನೀರಿನ ಸಮಸ್ಯೆ ಕುರಿತು ಮಾತನಾಡಿ, ಈ ಸಮಸ್ಯೆ ಪರಿಹಾರಕ್ಕೆ ಸಮುದಾಯದ ಪಾತ್ರ ನಿರ್ಣಾಯಕವಾಗಿರುತ್ತದೆ. ಜನರು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಅಂತರ್ಜಲ ಇಲ್ಲದ ಕಾರಣ ಸಮಸ್ಯೆ ಎದುರಾಗುತ್ತಲೇ ಇದೆ. ಮಳೆಯಾದಾಗ ನೀರು ಭೂಮಿಯೊಳಗೆ ಹೋಗದೆ ಚರಂಡಿಗಳಲ್ಲಿ ಹರಿಯುತ್ತಿದೆ. ಹೀಗಾಗಿ ನಾವು ಮನೆಗಳಲ್ಲಿ ಮಳೆ ನೀರು ಕೊಯ್ಲು ಸ್ಥಾಪಿಸಬೇಕು. ಗುಂಡಿಗಳ ಗಾತ್ರಕ್ಕೆ ಅವಲಂಬಿಸಿ ಇದಕ್ಕೆ ರೂ.25,000-1 ಲಕ್ಷದವರೆಗೆ ವೆಚ್ಚವಾಗುತ್ತದೆ. ನಗರದಲ್ಲಿರುವ ಪ್ರತಿಯೊಬ್ಬರೂ ಇದನ್ನು ಮಾಡಲು ಸಾಧ್ಯವಾದರೆ, ಎರಡು-ಮೂರು ವರ್ಷಗಳಲ್ಲಿ ನೀರು ಸಮಸ್ಯೆ ದೂರಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com