
ಗದಗ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ಮತ್ತು ಉದ್ಯಮದ ಕ್ಷೇತ್ರದಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು, ಹಸಿರು ಪ್ರದೇಶಕ್ಕೆ ಪ್ರವಾಸಿ ಸ್ಥಳವಾಗಿದೆ. ಇದಲ್ಲದೆ, ಜಿಲ್ಲೆಯು ಪ್ರಾಚೀನ ಹಿಂದು ಮತ್ತು ಜೈನ ದೇವಾಲಯಗಳು ಮತ್ತು ಮಧ್ಯಕಾಲೀನ ವಾಸ್ತು ಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಹೀಗಾಗಿಯೇ ಜಿಲ್ಲೆಗೆ ಅನೇಕ ಪ್ರಕೃತಿ ಪ್ರೇಮಿಗಳು ಭೇಟಿ ನೀಡುತ್ತಿರುತ್ತಾರೆ.
ಗದಗ ಜಿಲ್ಲೆ ಬಂದು ದಂತಕಥೆಯಿದೆ. ನೀವು ಪಟ್ಟಣದಲ್ಲಿ ಎಲ್ಲೇ ನಿಂತು ಕಲ್ಲು ಎಸೆದರೂ ಅದು ಮುದ್ರಣಾಲಯ ಅಥವಾ ಕೈಮಗ್ಗದ ಮೇಲೆ ಬೀಳುತ್ತದೆ. ಗದಗ ನಗರಕ್ಕೆ ಮುದ್ರಣಕಾಶಿ ಎಂದು ಕರೆಯಲಾಗುತ್ತದೆ. ಗದಗದಲ್ಲಿ ಹೊಂಬಾಳಿ ಬ್ರದರ್ಸ್ ಮತ್ತು ಶಾಬಾದಿಮಠ ದಂತಹ ಬಹಳಷ್ಟು ಮುದ್ರಣಾಲಯಗಳಿವೆ. ಗದಗ ಪಕ್ಕದ ಪಟ್ಟಣವಾದ ಬೆಟಗೇರಿ ಕೈಮಗ್ಗಳಿಗೆ ಹೆಸರುವಾಸಿಯಾಗಿದೆ. ಇದಲ್ಲದೆ, ಗದಗವು ಉತ್ತರ ಕರ್ನಾಟಕದ ಹಿಂದೂಸ್ಥಾನಿ ಸಂಗೀತದ ಪ್ರಮುಖ ಸ್ಥಾನವಾಗಿದ್ದು, ಹುಂದೂಸ್ಥಾನಿ ಗಾಯಕ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪಂಚಿತ್ ಭೀಮಸೇನ ಜೋಶಿಯವರ ನೆಲೆಯಾಗಿದೆ. ಆಧುನಿಕ ಕನ್ನಡ ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀ.ಹುಯಿಲಗೋಳ ನಾರಾಯಣ ರಾವ್, ಪಂಡಿತ್ ಪುಟ್ಟರಾಜ್ ಗವಾಯಿ ಮತ್ತು ನಮ್ಮ ಪ್ರಸಿದ್ಧ ಕ್ರಿಕೆಟ್ ಆಟಗಾರ ಸುನೀಸ್ ಜೋಶಿ ಕೂಡ ಗದಗ ನಗರದವರಾಗಿದ್ದಾರೆ.
ಇಷ್ಟೊಂದು ಶ್ರೀಮಂತಿಕೆಯನ್ನು ಹೊಂದಿರುವ ಗದಗ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ಹಾಗೂ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದ್ದು, ಆ ಕೆಲಸವನ್ನು ನಿಸ್ವಾರ್ಥತೆಯಿಂದ ಕಳೆದ 50 ವರ್ಷಗಳಿಂದ 71 ವರ್ಷದ ಅಬ್ದುಲ್ ರಜಾಕ್ ದಸ್ತಗೀರ್'ಸಾಬ್ ಕಟ್ಟಿಮನಿ ಅವರು ಮಾಡಿಕೊಂಡು ಬರುತ್ತಿದ್ದಾರೆ.
ಕಟ್ಟಿಮನಿಯವರು ಸರ್ಕಾರದಿಂದ ನೇಮಿಸಲ್ಪಟ್ಟ ಗೈಡ್ ಅಲ್ಲದಿದ್ದರೂ, ಕಳೆದ 50 ವರ್ಷಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳಿಗೆ ಪ್ರಾಚೀನ ಕಾಲದ ದೇವಾಲಯಗಳಿಗೆ ಕರೆದೊಯ್ದು ಅಲ್ಲಿನ ಇತಿಹಾಸದ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ ಹಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಲಿದ್ದಾರೆ.
ಜಿಲ್ಲೆಯ ತ್ರಿಕೂಟೇಶ್ವರ ಮತ್ತು ಲಕ್ಕುಂಡಿ ದೇವಸ್ಥಾನಗಳ ಪ್ರತಿ ಕಲ್ಲಿಗೂ ಒಂದು ಕಥೆಯಿದ್ದು, ಕಟ್ಟಿಮನಿ ಅವರು ಪ್ರವಾಸಿಗರೊಂದಿಗೆ ಆ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕಟ್ಟೀಮನಿಯವರಿಗೆ ವಿವಾಹವಾಗಿಲ್ಲ, ಪಟ್ಟಣದ ತಮ್ಮ ಪೂರ್ವಜರ ಮನೆಯಲ್ಲಿ ತನ್ನ ಸಹೋದರನೊಂದಿಗೆ ವಾಸವಿದ್ದಾರೆ. ಹಳೇ ಗದಗಿನ ಹನುಮಾನ್ ಗರಡಿ ಬಳಿ ಜನಿಸಿದ ಕಟ್ಟೀಮನಿಯವರಿಗೆ 10 ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.
ಬಳಿಕ ತಮ್ಮ ಮನೆಯ ಸಮೀಪವಿರುವ ವೀರನಾರಾಯಣ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ಅಲ್ಲಿನ ಶಾಸನಗಳು ಮತ್ತು ಶಿಲ್ಪಗಳನ್ನು ವೀಕ್ಷಿಸಿದರು. ನಿಧಾನವಾಗಿ ಅವುಗಳ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದರು, ವಿದ್ವಾಂಸರನ್ನು ಭೇಟಿ ಮಾಡಿದರು, ಪುಸ್ತಕಗಳನ್ನು ಓದಿದರು. ಭಂಟಕೆರೆ ಮತ್ತು ಕಲ್ಡುಗು ಬೆಟಗೇರಿ ಮತ್ತು ಗದಗಿನ ಹಳೆಯ ಹೆಸರುಗಳು ಎಂಬುದನ್ನು ತಿಳಿದುಕೊಂಡರು.
ನಂತರ ಕಟ್ಟಿಮನಿ ಅವರು ಬಿಡುವಿನ ವೇಳೆಯಲ್ಲಿ ತ್ರಿಕೂಟೇಶ್ವರ, ವೀರನಾರಾಯಣ, ಲಕ್ಕುಂಡಿ ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡಲಾರಂಭಿಸಿದರು. ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿ. ಶಾಸನಗಳು ಮತ್ತು ಹಳೆಯ ನಾಣ್ಯಗಳನ್ನು ವೀಕ್ಷಿಸಿದರು. ದೇವಾಲಯಗಳ ಪ್ರತಿಯೊಂದು ಗೋಡೆ ಮತ್ತು ಕಂಬಗಳ ಮೇಲೆ ಕೆತ್ತಲಾದ ಶಿಲ್ಪಗಳ ಕಂಡು ಆಕರ್ಷಿತರಾದರು.
ಬಳಿಕೆ ಜಿಲ್ಲೆಗೆ ಬರುವ ವಿದೇಶಿಗರು ಸೇರಿದಂತೆ ಪ್ರವಾಸಿಗರಿಗೆ ದಗಿನ ದೇವಾಲಯಗಳ ಸಂಕೀರ್ಣ ವಾಸ್ತುಶಿಲ್ಪದ ಕಥೆಗಳು ಮತ್ತು ಮಹತ್ವವನ್ನು ವಿವರಿಸಲು ಪ್ರಾರಂಭಿಸಿದರು. 10ನೇ ತರಗತಿ ಬಳಿಕ ಸೈಕಲ್‌ನಲ್ಲಿ ಪ್ರತಿದಿನ ಲಕ್ಕುಂಡಿಗೆ ಭೇಟಿ ನೀಡಲು ಪ್ರಾರಂಭಿಸಿದರು. ಬೆಳಿಗ್ಗೆಯೇ ಲಕ್ಕುಂಡಿಗೆ ಭೇಟಿ ನೀಡುತ್ತಿದ್ದ ಅವರು,. ಸಂಜೆ ಮನೆಗೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾಸಿಕರಿಗೆ ಉಚಿತವಾಗಿ ಮಾರ್ಗದರ್ಶಿಯಾಗಿ ಸೇವೆ ನೀಡಲು ಪ್ರಾರಂಭಿಸಿದರು.
ಇದರ ನಡುವಲ್ಲೇ ಇತಿಹಾಸದಲ್ಲಿಯೇ ಎಂಎ ಪದವಿಯನ್ನೂ ಪಡೆದ ಅವರು, ಬಳಿಕ ಲಕ್ಕುಂಡಿಯಲ್ಲಿ ಕ್ಯಾಂಪ್ ಹಾಕಿದರು. ಲಕ್ಕುಂಡಿಗೆ ಬರುವ ಪ್ರವಾಸಿಗರಿಗೆ ಇತಿಹಾಸ ತಿಳಿಸುವ ಕೆಲಸ ಆರಂಭಿಸಿದರು. ಇವರ ಈ ಕೆಲಸಕ್ಕೆ ಇವರ ಕುಟುಂಬಸ್ಥರು ಕೂಡ ಬೆಂಬಲ ನೀಡಿದರು. ಇದೇ ವೇಳೆ ಕಟ್ಟಿಮನಿಯವರುಕುಮಾರವ್ಯಾಸ, ಚಾಮರಸ, ನಯನಸೇನ, ದಾನ ಚಿಂತಾಮಣಿ ಅತ್ತಿಮಬ್ಬೆ ಮತ್ತು ಇತರ ಕವಿಗಳು ಮತ್ತು ಬರಹಗಾರರ ಕುರಿತೂ ಸಂಶೋಧಿಸಿದರು,
ಗದಗನ ವಿಡಿಎಸ್ ಕಾಲೇಜಿನ ಇತಿಹಾಸ ತಜ್ಞ ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ.ದತ್ತಪ್ರಸನ್ನ ಪಾಟೀಲ ಮಾತನಾಡಿ, ಎ.ಡಿ.ಕಟ್ಟಿಮನಿ ಅವರು ಚೆನ್ನಾಗಿ ಓದಿದವರು. ಅವರು ಲಕ್ಕುಂಡಿಯಲ್ಲಿನ ಪ್ರತಿಯೊಂದು ಕಲ್ಲುಗಳ ಬಗ್ಗೆ ತಿಳಿದಿದ್ದಾರೆ. ದಶಕಗಳಿಂದ ಉಚಿತ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಕುಂಡಿಯ ಬಗ್ಗೆ ತಿಳಿದುಕೊಳ್ಳಲು ಬಯಸುವವರೊಂದಿಗೆ ಉತ್ಸುಕರಾಗಿ ಮಾಹಿತಿ ನೀಡುತ್ತಿರುತ್ತಾರೆ. ಈಗ ಅವರ ವಯಸ್ಸು 70 ವರ್ಷ. ಆದರೂ ಅವರ ಉತ್ಸಾಹ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.
ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ನನ್ನ ಕನಸನ್ನು ನನಸಾಗಿಸಲು ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ ಸದಸ್ಯರು ಮತ್ತು ಇತರರಿಗೆ ನಾನು ಕೃತಜ್ಞನಾಗಿದ್ದೇನೆ. ಜಯರಾಮಾಚಾರ್ ಮಾಳಗಿ, ಹೆಚ್.ಆರ್.ಕಿದಿಯೂರು, ಎಂ.ಜೀವನ್, ಎಂ.ದಸ್ತಗೀರ್, ದಿವಂಗತ ಡಾ.ಎಂ.ಫಜಲಹಾಸನ್ ಮತ್ತು ತೋಂಟದಾರ್ಯ ಸಿದ್ದಲಿಂಗ ಶ್ರೀಗಳಿಂದ ನನಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ನಾನು AIRದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಸಾಕ್ಷ್ಯಚಿತ್ರಗಳಿಗೆ ಆ್ಯಂಕರಿಂಗ್ ಮಾಡಿದ್ದೇನೆ. ನನ್ನ ಇತಿಹಾಸದ ಜ್ಞಾನವನ್ನು ಹಂಚಿಕೊಳ್ಳಲು ನಾನು ಎಂದಿಗೂ ಯಾವುದೇ ಹಣವನ್ನು ಕೇಳಿಲ್ಲ. ಏಕೆಂದರೆ ಇದು ನನ್ನ ಆಸಕ್ತಿ ಹಾಗೂ ನನ್ನ ಉತ್ಸಾಹವಾಗಿದೆ ಎಂದು ಕಟ್ಟಿಮನಿಯವರು ಹೇಳಿದ್ದಾರೆ.
Advertisement