ಮಕ್ಕಳ ನಂದಗೋಕುಲ...: 'ಗಾಂಧಿ' ಸೃಷ್ಟಿ ಕೇಂದ್ರವಾದ ಗುರುಕುಲ ಶಾಲೆ..!

ಗಾಂಧಿ ತತ್ವವನ್ನು ವಿದ್ಯಾರ್ಥಿ ದಿಸೆಯಲ್ಲೇ ಭಿತ್ತಿ ರೂಢಿಸುವ ಅಪರೂಪದ ಶಾಲೆಯಿದು. ಗಾಂಧಿ ತತ್ವಗಳನ್ನು ಇವತ್ತಿಗೂ ಈ ಶಾಲೆಯಲ್ಲಿ ಕಾಣಬಹುದು.
ಪ್ರಾರ್ಥನೆ ಮಾಡುತ್ತಿರುವ ವಿದ್ಯಾರ್ಥಿಗಳು.
ಪ್ರಾರ್ಥನೆ ಮಾಡುತ್ತಿರುವ ವಿದ್ಯಾರ್ಥಿಗಳು.
Updated on

ಈ ಶಾಲೆಯ ವಿದ್ಯಾರ್ಥಿಗಳೇ ಭಿನ್ನ... ಇಲ್ಲಿನ ಮಕ್ಕಳು ನೂಲುತ್ತಾರೆ, ಗದ್ದೆಯಲ್ಲಿ ದುಡಿಯುತ್ತಾರೆ, ಸಾವಯವ ಗೊಬ್ಬರ ತಯಾರಿಸುತ್ತಾರೆ. ಹತ್ತಿ, ಮೆಕ್ಕೆಜೋಳ ಹಾಗೂ ಇತರೆ ತರಕಾರಿಗಳನ್ನು ಬೆಳೆಯುತ್ತಾರೆ.

ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯ ಚಿತ್ರಣವಿದು. ಗಾಂಧಿ ತತ್ವವನ್ನು ವಿದ್ಯಾರ್ಥಿ ದಿಸೆಯಲ್ಲೇ ಭಿತ್ತಿ ರೂಢಿಸುವ ಅಪರೂಪದ ಶಾಲೆಯಿದು. ಗಾಂಧಿ ತತ್ವಗಳನ್ನು ಇವತ್ತಿಗೂ ಈ ಶಾಲೆಯಲ್ಲಿ ಕಾಣಬಹುದು.

ನೂಲು-ನೇಯ್ಗೆ ಬಗ್ಗೆ ವಿಶೇಷವಾದ ತರಗತಿಗಳು ಇಲ್ಲಿ ನಡೆಯುತ್ತವೆ. ಇಲ್ಲಿನ ಮಕ್ಕಳು ತಾವೇ ಸ್ವತಃ ಹತ್ತಿ ಹಿಂಚಿ, ನೂಲು ತೆಗೆದು ತಯಾರಿಸಿದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ದುಡಿದು ಬೆಳೆದ ತರಕಾರಿ, ಹಣ್ಣು, ಇತರೆ ಆಹಾರವನ್ನು ಸೇವಿಸುವ ನಿಯಮ ಇಲ್ಲಿದೆ.

ಇಲ್ಲಿನ ಪ್ರತಿ ವಿದ್ಯಾರ್ಥಿಯೂ ಬಟ್ಟೆ ನೇಯ್ಗೆಯಲ್ಲಿ ಸಿದ್ಧಹಸ್ತರಾಗಿದ್ದು, ಮುಂಜಾನೆ ಎದ್ದು ಎಲ್ಲರೂ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟೊಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಆಟ ಆಡುತ್ತಾರೆ. ಸೂರ್ಯೋದಯವಾಗುತ್ತಿದ್ದಂತೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಮಕ್ಕಳ ನಿತ್ಯದ ಚಟುವಟಿಕೆ ಇಲ್ಲಿ ಪ್ರಾರಂಭವಾಗುತ್ತವೆ. ಮುಂಜಾನೆ 5 ಗಂಟೆಯಿಂದ ಆರಂಭವಾಗುವ ಚಟುವಟಿಕೆ ರಾತ್ರಿ 10ರ ವರೆಗೂ ನಡೆಯುತ್ತವೆ

ಪ್ರತಿನಿತ್ಯ ವಿದ್ಯಾರ್ಥಿಗಳು ಆಟ, ಪಾಠದ ಜೊತೆಗೆ ದನಕರುಗಳ ಮೈ ತೊಳೆಯವುದು. ಹಾಲು ಕರಿಯುವುದು, ಮೇವು ಹಾಕುವ ಕೆಲಸ ಮಾಡುತ್ತಾರೆ. ಇವುಗಳ ಜೊತೆಗೆ ತೋಟಗಾರಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಾವಯುವ ಗೊಬ್ಬರ ತಯಾರಿಸಿ, ಕೃಷಿಗೆ ಬಳಸುತ್ತಿದ್ದಾರೆ.

5ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ಇಲ್ಲಿನ ವಿದ್ಯಾರ್ಥಿಗಳು, ಮತ್ತೊಬ್ಬರನ್ನು ಅವಲಂಬಿಸಿ ಬದುಕು ನಡೆಸುವುದರ ಬದಲಿಗೆ ಸ್ವಾವಲಂಬಿಯಾಗಿ, ಐಷಾರಾಮಿ ಬದುಕಿನ ಬದಲಿಗೆ ಸರಳ ಬದುಕು ನಡೆಸುವುದನ್ನು ಕಲಿಯುತ್ತಿದ್ದಾರೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಎಳೆಯ ವಯಸ್ಸಿನಲ್ಲಿಯೇ ರಾಷ್ಟ್ರಾಭಿಮಾನ ಮೂಡುವಂತಹ ಪರಿಸರ ನಿರ್ಮಿಸಲಾಗಿದೆ.

ಈ ಗುರುಕುಲದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಬಳಸುವ ಮತ್ತು ತೊಡುವ ಬಟ್ಟೆ ಖಾದಿಯದ್ದೇ ಆಗಿರುತ್ತದೆ. ವಿವಿಧ ಆಕಾರ, ವಿವಿಧ ಬಣ್ಣದಿಂದಾಗಿದ್ದರೂ ಅದು ಖಾದಿಯದ್ದೇ ಆಗಿರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಅವಧಿ ನಂತರವಾಗಲಿ ಅಥವಾ ಬಿಡುವಿನ ದಿನವಾಗಲಿ ಸಮವಸ್ತ್ರವಲ್ಲದ ಬಟ್ಟೆ ತೊಡಲೇನೂ ಅಡ್ಡಿಯಿಲ್ಲ. ಆದರೆ, ಅದೂ ಖಾದಿಯದ್ದೇ ಆಗಿರಬೇಕು ಎಂಬ ನಿಯಮವಿದೆ. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿ, ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಖಾದಿ ಬಟ್ಟೆಗಳನ್ನು ಇಷ್ಟಪಟ್ಟು ತೊಡುತ್ತಿರುವುದು ರಾಷ್ಟ್ರಕ್ಕೆ ಒಂದು ಮಾದರಿಯಾಗಿದೆ.

ಗುರುಕುಲ ಶಾಲೆ.
ಗುರುಕುಲ ಶಾಲೆ.

ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ 1984ರ ಅಕ್ಟೋಬರ್​ 02ರಂದು ಆರಂಭಗೊಂಡಿದ್ದು, 39 ವರ್ಷಗಳಿಂದ ಗಾಂಧಿ ವಿಚಾರಗಳನ್ನು ಹೊಸ ಪೀಳಿಗೆಯಲ್ಲಿ ಅಳವಡಿಸಲು ದುಡಿಯುತ್ತಿದೆ.

ಈ ಗುರುಕುಲದಲ್ಲಿ 5ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜದ ಎಲ್ಲ ವರ್ಗ, ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿಯವರಿಗೆ ತಮ್ಮ ಹುಟ್ಟೂರು ಎಂದರೆ ಅಪಾರ ಅಭಿಮಾನ. ಹೀಗಾಗಿ ಗ್ರಾಮದಲ್ಲಿ ಗ್ರಾಮೀಣ ಮಕ್ಕಳಿಗಾಗಿ ಮಹಾತ್ಮ ಗಾಂಧೀಜೀಯವರ ಆದರ್ಶಗಳನ್ನು ಪ್ರತಿಬಿಂಬಿಸುವ ಗುರುಕುಲವನ್ನು ಸ್ಥಾಪಿಸಿದರು.

ಪ್ರಾರ್ಥನೆ ಮಾಡುತ್ತಿರುವ ವಿದ್ಯಾರ್ಥಿಗಳು.
ಮಹಾತ್ಮನ ಸ್ಮರಣೆ: ಕಣ್ಮನ ಸೆಳೆಯುವ ವಿಜಯಪುರದ ಗಾಂಧಿ ಭವನ

ಹಳ್ಳಿಕೇರಿ ಅವರು 1973ರಲ್ಲಿ 50ನೇ ವರ್ಷಕ್ಕೆ ಕಾಲಿಟ್ಟಾಗ ಹಾವೇರಿಯ ಜನರಿಂದ ಸಂಗ್ರಹಿಸಿದ ಒಂದೂವರೆ ಲಕ್ಷ ರೂಪಾಯಿಗಳನ್ನು ಬಳಸಿಕೊಂಡು ಗುರುಕುಲವನ್ನು ಸ್ಥಾಪಿಸಿದರು. ಶಾಲೆ ಇರುವ 32 ಎಕರೆ ಭೂಮಿಯನ್ನು 16,000 ರೂ.ಗೆ ಖರೀದಿಸಿದ್ದರು. ಬಳಿಕ ಅವರ ನೇತೃತ್ವದಲ್ಲಿ ಟ್ರಸ್ಟ್ ರಚಿಸಲಾಯಿತು.

ಬಳಿಕ ದೇಶದ ವಿವಿಧ ಭಾಗಗಳಲ್ಲಿನ ಪ್ರಸಿದ್ಧ ವಸತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಶಿಕ್ಷಣ ತಜ್ಞರನ್ನು ಕಂಡು, ಗ್ರಾಮೀಣ ಮಕ್ಕಳಿಗೆ ಉಪಯುಕ್ತವಾಗಬಲ್ಲ ಸ್ವಾವಲಂಬನೆ ಶಿಕ್ಷಣ ಪದ್ಧತಿಯ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು.

ವರದಾ ಆಶ್ರಮದಲ್ಲಿ ಜೀವನ ಶಿಕ್ಷಣ ತರಬೇತಿಯನ್ನು ಪಡೆದ ಶಿಕ್ಷಣ ತಜ್ಞ ಶ್ರೀ ಮ.ಗು. ಹಂದ್ರಾಳರು ಈ ಗುರುಕುಲದ ವಿಶೇಷ ಯೋಜನೆಯನ್ನು ರೂಪಿಸಿದರು. ಈ ವಿಶೇಷ ಯೋಜನೆಗೆ ಕರ್ನಾಟಕ ಸರ್ಕಾರದ ಅಂಗಿಕಾರ ಪಡೆದು, 1984 ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಗುರುಕುಲ ಪ್ರಾರಂಭಿಸಿದರು. ಈ ಗುರುಕುಲವು ವಿಶಾಲವಾದ 32 ಎಕರೆ ವಿಸ್ತೀರ್ಣದಲ್ಲಿ ಪಸರಿಸಿಕೊಂಡಿದ್ದು, ಈ ಭೂಮಿಯಲ್ಲಿ ತೆಂಗು, ಹಣ್ಣು, ಕಾಯಿಪಲ್ಲೆ ಬೆಳೆಯಲಾಗುತ್ತಿದೆ.

ಇಂದು ಈ ಗುರುಕುಲ ಶಿಕ್ಷಣವು ಮಕ್ಕಳಲ್ಲಿ ತಾನು ಭಾರತೀಯನೆಂದು ಹೇಳುವ ಧೈರ್ಯ ನೀಡುತ್ತಿದ್ದು, ತಾನೇ ನೇಯ್ದ ಬಟ್ಟೆಗಳನ್ನು ಧರಿಸಿ, ತಾನೇ ದುಡಿದು ಬೆಳೆದ ಆಹಾರವನ್ನು ಉಂಡು ನೆಮ್ಮದಿಯ ಸಹಜೀವನ ನಡೆಸುವ ಸ್ವಾವಲಂಬನೆಯ ಶಿಕ್ಷಣ ನೀಡುತ್ತಿದೆ. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಪ್ರಗತಿಪರ ಮಾರ್ಗ ಹೊಂದುವ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ.

ಐದನೇ ತರಗತಿಯಿಂದ ಹತ್ತನೇ ತರಗತಿವರೆಗೆ 250 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಉತ್ತರ ಕರ್ನಾಟಕದ ವಿವಿಧ ಗ್ರಾಮಗಳ ಬಡ, ಕೃಷಿಕ ಕುಟುಂಬದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶಾಲೆಯು ಈ ಮಕ್ಕಳನ್ನು ಶಿಕ್ಷಣ, ಕಂಪ್ಯೂಟರ್‌ ತರಬೇತಿ ಜೊತೆಗೆ, ಗಾಂಧಿ ತತ್ವಗಳ ಬಗ್ಗೆಯೂ ಪ್ರಾಯೋಗಿಕವಾಗಿ ತಿಳಿಸುವ ಕೆಲಸ ಮಾಡುತ್ತಿದೆ. ಈ ಮಕ್ಕಳ ಆಹಾರ ಮತ್ತು ವಾಸಕ್ಕೆ ರಾಜ್ಯ ಸರ್ಕಾರ ಹಣ ನೀಡಿದರೆ, ಉಳಿದ ವೆಚ್ಚವನ್ನು ಟ್ರಸ್ಟ್ ಭರಿಸುತ್ತಿದೆ.

ಪ್ರಾರ್ಥನೆ ಮಾಡುತ್ತಿರುವ ವಿದ್ಯಾರ್ಥಿಗಳು.
ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ

ಇದೀಗ ರಾಜ್ಯ ಸರ್ಕಾರ, ಪ್ರತಿವರ್ಷ ನೀಡುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯನ್ನು ಗುರ್ತಿಸಿದ್ದು, ಅ. 2ರ ಗಾಂಧಿ ಜಯಂತಿಯಂದು ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಶಾಲೆಯ ಹಿರಿಯ ಟ್ರಸ್ಟಿ ವಿ.ಯು.ಚಕ್ಕಿ ಅವರು ಅವರು ಈ ಮಾನ್ಯತೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ ಸ್ಮರಿಸಲು ವಸ್ತುಸಂಗ್ರಹಾಲಯವನ್ನು ತೆರೆಯಲಾಗುವುದು ಎಂದು ಹೇಳಿದರು.

ಈ ಮ್ಯೂಸಿಯಂನಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ, ಸ್ವಾತಂತ್ರ್ಯ ಹೋರಾಟ ಮತ್ತು ಅವರ ಕೆಲಸವನ್ನು ಪ್ರದರ್ಶಿಸುವ ಸುಮಾರು 300 ಛಾಯಾಚಿತ್ರಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ವಸ್ತುಸಂಗ್ರಹಾಲಯಕ್ಕೆ ‘ದರ್ಶನ ಪ್ರದರ್ಶನ’ ಎಂದು ಹೆಸರಿಡಲು ನಿರ್ಧರಿಸಲಾಗಿದ್ದು, ಶಾಲೆಗೆ ಭೇಟಿ ನೀಡುವವರು ಹಳ್ಳಿಕೇರಿ ಅವರ ಜೀವನದ ಒಂದು ನೋಟವನ್ನು ನೋಡಬಹುದು. ಈ ಛಾಯಾಚಿತ್ರಗಳನ್ನು ವಿವಿಧ ಗ್ರಂಥಾಲಯಗಳಿಂದ ಪಡೆಯಲಾಗಿದೆ ಎಂದು ತಿಳಿಸಿದರು.

ಶಾಲೆಯಲ್ಲಿ 29 ಹುದ್ದೆಗಳ ಪೈಕಿ ಕೇವಲ ನಾಲ್ಕು ಶಿಕ್ಷಕರನ್ನಷ್ಟೇ ನೇಮಿಸಲಾಗಿದೆ. ಉಳಿದವರು ಟ್ರಸ್ಟ್‌ನಿಂದ ವೇತನ ಪಡೆಯುತ್ತಿದ್ದು, ಖಾಸಗಿ ಶಿಕ್ಷಕರಂತೆ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.

ಹಳ್ಳಿಕೇರಿ ಅವರು ಸಬರಮತಿ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದಾಗ ಮಹಾತ್ಮ ಗಾಂಧಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹಾವೇರಿಗೆ ಹಿಂತಿರುಗಿ ಇದೇ ರೀತಿಯ ಆಶ್ರಮವನ್ನು ಆರಂಭಿಸುವಂತೆ ಗಾಂಧೀಜಿಯವರು ತಿಳಿಸಿದ್ದರು. ಅದರಂತೆ ಗ್ರಾಮದಲ್ಲಿ ಹಳ್ಳಿಕೇರಿ ಅವರು ಜನರಲ್ಲಿ ಖಾದಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿದರು, ತಮ್ಮ ಬಟ್ಟೆಗಳನ್ನು ತಾವೇ ಸಿದ್ಧಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಹಳ್ಳಿಕೇರಿ ಅವರಿಗೆ ಸ್ವಾತಂತ್ರ್ಯದ ನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತಿತರರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ಇದೇ ವೇಳೆ ಸ್ಮರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com