ಮಾಲ್ಡೀವ್ಸ್ ಗೆ ಪರ್ಯಾಯವಾಗಿ ಲಕ್ಷದ್ವೀಪ: ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಮುನ್ನ ಗಮನಿಸಬೇಕಾದ ಅಂಶಗಳೇನು?

ಮಾಲ್ಡೀವ್ಸ್ ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು  ಅಭಿವೃದ್ಧಿ ಪಡಿಸಬೇಕು ಎನ್ನುವ ಮಾತುಗಳ ನಡುವೆ ಸಮುದ್ರ ಜೀವಶಾಸ್ತ್ರಜ್ಞರು ಮತ್ತು ಆತಿಥ್ಯ ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಲಕ್ಷದ್ವೀಪ
ಲಕ್ಷದ್ವೀಪ

ಹುಬ್ಬಳ್ಳಿ: ಮಾಲ್ಡೀವ್ಸ್ ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ಮಾತುಗಳ ನಡುವೆ ಸಮುದ್ರ ಜೀವಶಾಸ್ತ್ರಜ್ಞರು ಮತ್ತು ಆತಿಥ್ಯ ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಲಕ್ಷದ್ವೀಪದಲ್ಲಿ ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಕೆಲವು ವರ್ಷಗಳ ಗುರಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಾಗಿನ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ದ್ವೀಪದ ಮನೋಹರ ಫೋಟೊಗಳು ಸಾಮಾಜಿಕ ಜಾಲತಾಣಿಗರ ಪ್ರಶಂಸೆಗೆ ಪಾತ್ರವಾಗಿದ್ದವು. ಹಾಗೆಯೆ ಇದು ಮಾಲ್ದೀವ್ಸ್‌ ಹಾಗೂ ಭಾರತದ ಮಧ್ಯೆ ತಿಕ್ಕಾಟಕ್ಕೂ ಕಾರಣವಾಯಿತು. ಮಾಲ್ದೀವ್ಸ್‌ನ ಸಚಿವರ ಹೇಳಿಕೆ ಹಾಗೂ ಆ ದೇಶದ ಚೀನಾ ಪರ ನಿಲುವು ಭಾರತದಾದ್ಯಂತ ಟೀಕೆಗೆ ಗುರಿಯಾಯಿತು. ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಕಾಟ್‌ಮಾಲ್ದೀವ್ಸ್‌’ ಎಂದೂ ‘ನಮ್ಮದೇ ದೇಶದ, ಮಾಲ್ದೀವ್ಸ್‌ನಂತೆಯೇ ಸಮುದ್ರವಿರುವ ಲಕ್ಷದ್ವೀಪಕ್ಕೆ ಭೇಟಿ ನೀಡೋಣ’ ಎಂದೂ ಅಭಿಪ್ರಾಯಗಳು ಬರತೊಡಗಿದವು.

ಲಕ್ಷ ದ್ವೀಪದಲ್ಲಿ ಹೆಚ್ಚಿನ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಮೂಲಸೌಕರ್ಯಗಳನ್ನು ಸುಧಾರಿಸಬೇಕೆಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಆದರೆ ಅರಬ್ಬಿ ಸಮುದ್ರದಲ್ಲಿರುವ ದ್ವೀಪಸಮೂಹವು ಇತರ ಯಾವುದೇ ದ್ವೀಪಗಳಂತೆ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಇದು ನೌಕಾ  ಕಾರ್ಯತಂತ್ರದ  ನೆಲೆಯಾಗಿದೆ, ಅಪರೂಪದ ಹವಳಗಳು ಮತ್ತು ಸಮುದ್ರ ಪ್ರಾಣಿಗಳಿಗೆ ನೆಲೆಯಾಗಿದೆ.

ಇದಕ್ಕಾಗಿ ನೀತಿ ಆಯೋಗವೂ ಸೇರಿದಂತೆ, ಸರ್ಕಾರ ಕೆಲವು ಪ್ರಯತ್ನಗಳನ್ನು ಆರಂಭಿಸಿದೆ. ಲಕ್ಷದ್ವೀಪ ಸ್ಥಿತಿಗತಿಯನ್ನು ಅವಲೋಕಿಸಲು ಸಮಿತಿಗಳನ್ನು ರಚಿಸಿ ವರದಿಯನ್ನೂ ಕೇಂದ್ರ ಸರ್ಕಾರ ಪಡೆದುಕೊಂಡಿದೆ. ‘ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರವು ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ’ ಎಂದು ನೀತಿ ಆಯೋಗ ಹೇಳುತ್ತದೆ. ಇದೇ ಮಾತನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ರೂಪಿಸಿದ್ದ ತಜ್ಞರ ಸಮಿತಿಯೊಂದು ಕೂಡ ಹೇಳಿದೆ. ಆದರೆ, ಅದೇ ವರದಿಯಲ್ಲಿ, ‘ಲಕ್ಷದ್ವೀಪ ಆಡಳಿತವು ಪ್ರವಾಸೋದ್ಯಮ ಅಭಿವೃದ್ಧಿಗೆ ಮೊದಲು ನೀಲನಕ್ಷೆಯೊಂದನ್ನು ಸಿದ್ಧಪಡಿಸಿ’ ಎಂದು ಶಿಫಾರಸು ಮಾಡಿದೆ.

ಸುಮಾರು 20,000 ಜನಸಂಖ್ಯೆಯನ್ನು ಹೊಂದಿರುವ ಕವರತ್ತಿ ಸೇರಿದಂತೆ ಕೆಲವು ದ್ವೀಪಗಳನ್ನು ಹೊರತುಪಡಿಸಿ, ಉಳಿದೆಲ್ಲ ದ್ವೀಪಗಳಲ್ಲಿ ಜನವಸತಿಯಿಲ್ಲ, ಪ್ರವಾಸೋದ್ಯಮಕ್ಕೆ ಒಗ್ಗುವುದಿಲ್ಲ. ಸಾಗರ ವನ್ಯಜೀವಿಗಳ ಹಿತದೃಷ್ಟಿಯಿಂದ, ಲಕ್ಷದ್ವೀಪ ದ್ವೀಪಗಳು ಸಂರಕ್ಷಿತ ಪ್ರದೇಶದ ಸ್ಥಾನಮಾನವನ್ನು ಪಡೆಯಬೇಕು, ಅದರ ಮೂಲಕ ನಿಯಂತ್ರಿತ ಪ್ರವಾಸೋದ್ಯಮವನ್ನು ಪ್ರಾರಂಭಿಸಬಹುದು" ಎಂದು ಲಕ್ಷದ್ವೀಪ ದ್ವೀಪಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ಪ್ರಸಿದ್ಧ ಬರಹಗಾರ ಅಬ್ದುಲ್ ರಶೀದ್ ಹೇಳುತ್ತಾರೆ.

ಹವಳಗಳು ಸಂವೇದನಾಶೀಲವಾಗಿರುತ್ತವೆ ಮತ್ತು ಹಲವು ಹಂತಗಳಲ್ಲಿ, ವಿವಿಧ ಕಾರಣಗಳಿಂದಾಗಿ ಅವು ಕೊಳೆಯುತ್ತವೆ. ಕಳೆದ ಕೆಲವು ವರ್ಷಗಳಿಂದ ಈ ದ್ವೀಪಗಳಿಗೆ ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ದ್ವೀಪಗಳು ಅಪರೂಪದ ಮೀನುಗಳಿಗೆ ನೆಲೆಯಾಗಿದೆ, ಇದನ್ನು ಕಾನೂನಿನ ಅಡಿಯಲ್ಲಿ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಸಮುದ್ರ ಜೀವಶಾಸ್ತ್ರಜ್ಞ ವಿಎನ್ ನಾಯಕ್ ಅವರು ದ್ವೀಪಗಳನ್ನು ರಕ್ಷಿಸಲು ಮತ್ತು ದೇಶೀಯ ಪ್ರವಾಸಿಗರಿಗೆ ಅವುಗಳನ್ನು ತೋರಿಸಲು ಪ್ರವಾಸೋದ್ಯಮವು ಪ್ರಮುಖವಾಗಿದೆ ಎಂದು ಸಲಹೆ ನೀಡಿದರು. ಲಕ್ಷ ದ್ವೀಪಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಎಂದಿಗೂ ಸಂಪೂರ್ಣವಾಗಿ ಅನ್ವೇಷಿಸಲಾಗಿಲ್ಲ. ಸರ್ಕಾರವು ಉತ್ತಮ ಮೂಲಸೌಕರ್ಯವನ್ನು ತರುತ್ತದೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದಾದ ಕೆಲವು ದ್ವೀಪಗಳನ್ನು ಆಯ್ಕೆ ಮಾಡುವ ಸಮಯ ಇದು. ಪ್ರವಾಸಿಗರಿಗೆ ಭೇಟಿ ನೀಡುವ ಪ್ರಕ್ರಿಯೆಯನ್ನು ಸಡಿಲಿಸಬೇಕಾಗಿದೆ ಮತ್ತು ಕೊಚ್ಚಿ ಮತ್ತು ಮಂಗಳೂರಿನಿಂದ ನಿಯಮಿತ ಹಡಗು ಸೇವೆಗಳನ್ನು ಪ್ರಾರಂಭಿಸಬೇಕು, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಸ್ಥಳೀಯ ಜನಸಂಖ್ಯೆ ಮತ್ತು ಸಂಪ್ರದಾಯಗಳ ಮೇಲೆ ಪರಿಣಾಮ ಬೀರಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ದ್ವೀಪಗಳಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ ಮತ್ತು ಇತ್ತೀಚೆಗೆ ಪ್ರವಾಸಿಗರಿಗೆ ಎರಡು ಮದ್ಯದ ಮಳಿಗೆಗಳನ್ನು ತೆರೆಯಲಾಗಿದೆ. ಟಾಟಾ ಗ್ರೂಪ್ ಎರಡು ಜನವಸತಿ ಇಲ್ಲದ ದ್ವೀಪಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಸಮುದ್ರ ವಿಲ್ಲಾಗಳು ಮತ್ತು ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದೆ. ಅನೇಕ ದ್ವೀಪಗಳಲ್ಲಿ, ಜನಸಂಖ್ಯೆಯು ತುಂಬಾ ಕಡಿಮೆಯಿದ್ದು, ಪ್ರವಾಸೋದ್ಯಮವು ಸ್ಥಳೀಯರಿಗೆ ಹೊಸ ಆದಾಯದ ಮೂಲವನ್ನು ಪಡೆಯಲು ಸಹಾಯ ಮಾಡುತ್ತದೆ.

ಪ್ರವಾಸಿಗರ ಒಳಹರಿವು ರಿಯಲ್ ಎಸ್ಟೇಟ್ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಸರ್ಕಾರವು ಎಚ್ಚರಿಕೆಯಿಂದ ಸಮಸ್ಯೆಯನ್ನು ನಿಭಾಯಿಸಬೇಕು ಎಂದು ಅನೇಕ ಸ್ಥಳೀಯರು ಹೇಳುತ್ತಾರೆ. ಲಕ್ಷದ್ವೀಪ ದ್ವೀಪಗಳು ಪ್ರಧಾನ ಭೂಭಾಗದಿಂದ ಸುಮಾರು 400 ಕಿ.ಮೀ ದೂರದಲ್ಲಿ ಆಯಕಟ್ಟಿನ ನೆಲೆಯಲ್ಲಿದ್ದು, ಇಡೀ ಸಾಗರ ಪ್ರದೇಶ ಭಾರತೀಯ ಅಧಿಕಾರಿಗಳ ನಿಯಂತ್ರಣದಲ್ಲಿದೆ. ಇದು ದ್ವೀಪಗಳನ್ನು ಉಳಿಸಲು ಮತ್ತೊಂದು ಕಾರಣವಾಗಿದೆ ಎಂದು ಪ್ರವಾಸೋದ್ಯಮ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com