
ಗದಗ: ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಭಾಷೆಯ ಮಹತ್ವ ಮತ್ತು ಅದರ ಇತಿಹಾಸದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ನಮ್ಮ ಎಲ್ಲಾ ಪ್ರಾಚೀನ ಗ್ರಂಥಗಳು ಮತ್ತು ಪುರಾಣಗಳು ಪವಿತ್ರ ಭಾಷೆಯಾಗಿ ಪೂಜಿಸಲ್ಪಡುವ ಸಂಸ್ಕೃತ ಭಾಷೆಯಲ್ಲಿಯೇ ರಚನೆಯಾಗಿದೆ. ಭಾರತೀಯ ಪ್ರಾದೇಶಿಕ ಭಾಷೆಗಳು ಉಳಿಯಲು ಹೆಣಗಾಡುತ್ತಿದ್ದು, ಈ ಸಮಯದಲ್ಲಿಯೇ ಗದಗದ ಜನರು ಸಂಸ್ಕೃತ ಕಲಿಯಲು ಸಾಕಷ್ಟು ಆಸಕ್ತಿ ತೋರುತ್ತಿದ್ದಾರೆ.
ಗದಗದ ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಕೃತ ಮಾತನಾಡುವ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಮಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ಗದಗದಲ್ಲಿರುವ 'ಸಂಸ್ಕೃತ ಭಾರತಿ ತಂಡವು' ಗ್ರಾಮೀಣ ಪ್ರದೇಶಗಳಲ್ಲಿ ತರಗತಿಗಳನ್ನು ಆರಂಭಿಸಲು ಮುಂದಾಗಿದೆ. ತಂಡವು ಗ್ರಾಮಗಳನ್ನು ಸಂಸ್ಕೃತ ಮಾತನಾಡುವ ಗ್ರಾಮಗಳನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ.
ಇತ್ತೀಚೆಗಷ್ಟೇ ತಂಡವು ಗದಗ ಬಳಿಯ ಕುರ್ತಕೋಟಿ ಗ್ರಾಮದಲ್ಲಿ ಸಂಸ್ಕೃತ ತರಬೇತಿ ಶಿಬಿರವನ್ನು ನಡೆಸಿತು. ಆರಂಭದಲ್ಲಿ ಜನರು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ದಿನ ಕಳೆಯುತ್ತಿದ್ದಂತೆಯೇ ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 30 ಗ್ರಾಮಸ್ಥರು ಶಿಬಿರಕ್ಕೆ ಸೇರ್ಪಡೆಯಾದರು. ನಿಧಾನಗತಿಯಲ್ಲಿ ಇಲ್ಲಿನ ಜನರು ಸಂಸ್ಕೃತ ಮಾತನಾಡಲು ಆರಂಭಿಸಿದ್ದಾರೆ. ಇದರಿಂದ ಪ್ರೇರಣೆಗೊಂಡಿರುವ ತಂಡವು ಇದೀಗ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉಚಿತ ಸಂಸ್ಕೃತ ಮಾತನಾಡುವ ತರಗತಿಗಳನ್ನು ಆಯೋಜಿಸಲು ಮುಂದಾಗಿದೆ,
ಈ ತಂಡವು ಉಚಿತ ಸಂಸ್ಕೃತ ಮಾತನಾಡುವ ಕೋರ್ಸ್‌ಗಳನ್ನು ಆಯೋಜಿಸುತ್ತಿರುವುದು ಇದೇ ಮೊದಲಲ್ಲ. ಸಂಸ್ಥೆಯು ಹಲವು ವರ್ಷಗಳಿಂದಲೂ ತರಗತಿಗಳನ್ನು ಆಯೋಜಿಸುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇಷ್ಟರ ಮಟ್ಟಿಗಿನ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಗ್ರಾಮಸ್ಥರ ಈ ಆಸಕ್ತಿಗೆ ಕಾರಣಗಳು ತಿಳಿದುಬಂದಿಲ್ಲ. ಕೆಲವರು ಧಾರಾವಾಹಿಗಳು ಮತ್ತು ಮೊಬೈಲ್ ವೀಡಿಯೊಗಳನ್ನು ನೋಡುವುದನ್ನು ಬಿಟ್ಟು ಸಂಸ್ಕೃತ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದಾರೆನ್ನಲಾಗಿದೆ.
ಸಂಸ್ಕೃತ ಭಾರತಿ ತಂಡವು ಕಳೆದ ವರ್ಷ ಗದಗದ ವಿವೇಕಾನಂದನಗರದಲ್ಲಿ ಉಚಿತ ಸಂಸ್ಕೃತ ಮಾತನಾಡುವ ಶಿಬಿರವನ್ನು ಪ್ರಾರಂಭಿಸಿತು.
ಶಿಕ್ಷಕ ಕಿರಣಕುಮಾರ್ ಅರಳಿಕಟ್ಟಿ ಅವರ ಸಂಸ್ಕೃತ ಮಾತನಾಡುವ ಶೈಲಿಯಿಂದ ಸ್ಥಳೀಯರು, ವಿದ್ಯಾರ್ಥಿಗಳು ಆಕರ್ಷಿತರಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬಳಿಕ ಮಕ್ಕಳು, ಮಹಿಳೆಯರು, ಹಿರಿಯರು ಸೇರಿ ಸಂಸ್ಕೃತ ಮಾತನಾಡಲು ಆಸಕ್ತಿ ತೋರಿದರು.
ಬಳಿಕ ಸಂಸ್ಕೃತ ಭಾರತಿಯ ಶಿಕ್ಷಕರ ತಂಡವು ಕಲಿಯುವವರನ್ನು ಪ್ರತಿದಿನ ಸಂಸ್ಕೃತ ಮಾತನಾಡಲು ಮತ್ತು ಇತರರಿಗೆ ಕಲಿಸಲು ಪ್ರೇರೇಪಿಸಿತು. ಶಿಬಿರದ ಕೊನೆಯ ದಿನದಂದು, ಅನೇಕ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಸಣ್ಣ ಭಾಷಣ ಮಾಡಿ ತಂಡಕ್ಕೆ ಸಂಸ್ಕೃತದಲ್ಲಿ ಧನ್ಯವಾದ ಅರ್ಪಿಸಿದರು.
ಇದೀಗ ತಂಡವು ಶಿಬಿರಗಳ ಆಯೋಜನೆಯನ್ನು ಮುಂದುವರೆಸಿದೆ. ಡಿಸೆಂಬರ್ ವರೆಗೆ ಗದಗದಲ್ಲಿ ಎರಡು ಶಿಬಿರಗಳನ್ನು ನಡೆಸಲಾಗಿತ್ತು. ಎರಡೂ ಶಿಬಿರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲಿಗೆ ತಂಡದ ಸದಸ್ಯ ಮತ್ತು ಗದಗ ಜಿಲ್ಲಾ ಭಾಷಾ ಸಂಯೋಜಕ ಮೌನೇಶ್ ಭಜತ್ರಿ ಅವರು ಗದಗದಲ್ಲಿ ಸಂಸ್ಕೃತ ಮಾತನಾಡುವ ಗ್ರಾಮಗಳನ್ನು ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದರು. ಇದಕ್ಕಾಗಿ ಕುರ್ತಕೋಟಿಗೆ ಹೋಗಿ ಅಪ್ಪಣ್ಣ ಇನಾಮತಿ ಎಂಬ ನಾಯಕನನ್ನು ಭೇಟಿಯಾದರು. ಬಳಿಕ ಅಪ್ಪಣ್ಣ ಅವರು ಆಸಕ್ತಿ ತೋರಿಸಿದ್ದು, ಶಿಬಿರ ಆಯೋಜನೆಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದರು. ಮೊದಲ ದಿನ 18 ಗ್ರಾಮಸ್ಥರು ತರಗತಿಗಳಿಗೆ ಸೇರ್ಪಡೆಯಾದರು. ಎರಡನೇ ದಿನ ಈ ಸಂಖ್ಯೆ 30ಕ್ಕೆ ದಾಟಿತು. ನಂತರ ಗ್ರಾಮಸ್ಥರು ಎರಡನೇ ಹಂತದ ಕೋರ್ಸ್'ನ್ನು ಆಯೋಜಿಸುವಂತೆ ಒತ್ತಾಯಿಸಿದರು ಎಂದು ತಂಡದ ಸದಸ್ಯರು ಹೇಳಿದ್ದಾರೆ.
ಇತ್ತೀಚೆಗೆ ತಂಡವು ಕಣವಿ ಹೊಸೂರು ಗ್ರಾಮಗಳಲ್ಲಿಯೂ ತರಗತಿಗಳನ್ನು ನಡೆಸಿತು. ಮಂಜುನಾಥ ಕಲ್ಯಾಣಿ ಮತ್ತು ಇತರರು ತರಗತಿಗಳನ್ನು ನಡೆಸಲು ಸಂಘಟಕರಿಗೆ ಸಹಾಯ ಮಾಡಿದರು. ಈಗ ಸುಮಾರು 30 ಗ್ರಾಮಸ್ಥರು ಕಣವಿಯಲ್ಲಿ ಕಲಿಯುತ್ತಿದ್ದಾರೆ ಮತ್ತು ಏಪ್ರಿಲ್ ಎರಡನೇ ವಾರದಲ್ಲಿ ಈ ಕೋರ್ಸ್ ಪೂರ್ಣಗೊಳ್ಳಲಿದೆ.
ಇದೀಗ ಇತರೆ ಗ್ರಾಮಗಳ ಜನರೂ ಕೂಡ ತಮ್ಮ ಗ್ರಾಮಗಳಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸುವಂತೆ ಸಂಪರ್ಕಿಸುತ್ತಿದ್ದಾರೆ. ಹೀಗಾಗಿ ತಂಡವು ಏಪ್ರಿಲ್ ತಿಂಗಳಿನಲ್ಲಿ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶಿಬಿರಗಳ ಆಯೋಜನೆಗೆ ಚಿಂತನೆ ನಡೆಸುತ್ತಿದೆ. 6 ತಿಂಗಳ ಅವಧಿಯಲ್ಲಿ 50 ಹಳ್ಳಿಗಳಲ್ಲಿ ಶಿಬಿರ ನಡೆಸಲು ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಕುರ್ತಕೋಟಿ ಗ್ರಾಮದ ವಿದ್ಯಾರ್ಥಿಗಳಾದ ವಿರಾಟ್ ಅದರಕಟ್ಟಿ ಮತ್ತು ಉಮಾ ಭಜಂತ್ರಿ ಅವರು ಮಾತನಾಡಿ, ಮೊದಲ ದಿನದ ತರಗತಿ ನೀರಸವಾಗಿರುತ್ತದೆ ಎಂದು ಭಾವಿಸಿದ್ದೆವು. ಸ್ವಲ್ಪ ಹೊತ್ತು ಕುಳಿತು ಹೋಗುವ ಚಿಂತನೆ ಮಾಡಿದ್ದೆವು. ಆದರೆ, ಶಿಕ್ಷಕರು ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ತರಗತಿಗಳನ್ನು ಆರಂಭಿಸಿದ್ದರು. ಸಂಸ್ಕೃತ ಭಾಷೆ ತುಂಬಾ ಸಿಹಿಯಾಗಿತ್ತು, ಬಳಿಕ ಒಂದು ದಿನವೂ ತಪ್ಪಿಸಿಕೊಳ್ಳದೆ ತರಗತಿಗೆ ಹಾಜರಾಗಿದ್ದೆವು. ನಾವು ಸಂಸ್ಕೃತದಲ್ಲಿ ಮಾತನಾಡುವಾಗ ಕನ್ನಡ ಮತ್ತು ಇಂಗ್ಲಿಷ್ ಪದಗಳನ್ನು ತೆಗೆದುಕೊಳ್ಳುತ್ತಿದ್ದೆವು. ಈವೇಳೆ ಕೆಲವರು ನಗುತ್ತಿದ್ದವು. ಬಳಿಕ ಅದನ್ನು ಸವಾಗಿ ತೆಗೆದುಕೊಂಡೆವು. ಈಗ ನಾವು ಸ್ವಲ್ಪ ಮಟ್ಟಿಗೆ ಸಂಸ್ಕೃತದಲ್ಲಿ ಮಾತನಾಡಬಲ್ಲೆವು ಎಂದು ಹೇಳಿದ್ದಾರೆ.
ಸಾಕ್ಷಿ ಪಾಟೀಲ್, ಶ್ರಾವಣಿ, ರಾಧಾ, ರಕ್ಷಾ ಮತ್ತು ಇತರ ವಿದ್ಯಾರ್ಥಿಗಳು ಮಾತನಾಡಿ, ನಮ್ಮ ವಯಸ್ಸಿನ ಅನೇಕ ವಿದ್ಯಾರ್ಥಿಗಳು ಟ್ಯೂಷನ್, ಹೋಮ್‌ವರ್ಕ್ ಮತ್ತು ಮೊಬೈಲ್‌ಗಳಲ್ಲಿ ನಿರತರಾಗಿದ್ದಾರೆ. ಆದರೆ, ಈ ವರ್ಷ ನಾವು ಸಂಸ್ಕೃತವನ್ನು ಕಲಿತಿದ್ದಕ್ಕೆ ನಮಗೆ ಸಂತೋಷವಾಗಿದೆ. ಇದು ಉತ್ತಮ ಸಮಯವಾಗಿತ್ತು. ನಾವು ಹೊಸ ಭಾಷೆಯನ್ನು ಕಲಿತಿದ್ದರಿಂದ ನಮ್ಮ ಪೋಷಕರು ತುಂಬಾ ಸಂತಸಗೊಂಡಿದ್ದಾರೆಂದು ಹೇಳಿದ್ದಾರೆ.
ಸಂಸ್ಕೃತ ಭಾರತಿಯ ಜಿಲ್ಲಾ ಶಿಬಿರ ಸಂಯೋಜಕ ಮೌನೇಶ್ ಭಜಂತ್ರಿ ಮಾತನಾಡಿ, “ಗ್ರಾಮೀಣ ಪ್ರದೇಶಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಗದಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಇಂತಹ ಅನೇಕ ಶಿಬಿರಗಳನ್ನು ಆಯೋಜಿಸಲು ನಾವು ಯೋಜಿಸಿದ್ದೇವೆ. ಗ್ರಾಮಸ್ಥರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಂಸ್ಕೃತದಲ್ಲಿ ಮಾತನಾಡಬೇಕು ಮತ್ತು ನಾವು ಸಂಸ್ಕೃತವನ್ನು ಉಳಿಸಬೇಕು ಮತ್ತು ಹರಡಬೇಕೆಂದು ಬಯಸಿದ್ದಾರೆ, ಹೀಗಾಗಿ ನಾವು ಆರು ತಿಂಗಳ ಅವಧಿಯಲ್ಲಿ 50 ಹಳ್ಳಿಗಳನ್ನು ಒಳಗೊಳ್ಳುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆಂದು ಹೇಳಿದ್ದಾರೆ.
ಗದಗ ಜಿಲ್ಲಾ ಸಂಸ್ಕೃತ ಶಿಕ್ಷಕ ಶಿವಮೂರ್ತೆಪ್ಪ ಶಿವಶಿಂಪಿಗೇರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಳ್ಳಿಗಳಲ್ಲಿ ತರಬೇತಿಗಳ ನೀಡಲು ಚಿಂತನೆ ನಡೆಸಿದ್ದೇವೆಂದು ತಿಳಿಸಿದ್ದಾರೆ.
Advertisement