
ಕರ್ನಾಟಕದಲ್ಲಿ ಸುಮಾರು ಕ್ರಿ.10 ರಿಂದ 13ನೇ ಶತಮಾನದ ವರೆಗೂ ಹೊಯ್ಸಳರ ಪ್ರಾಬಲ್ಯ ಹೆಚ್ಚಿದ್ದ ಸಮಯದಲ್ಲಿ ಹೊಯ್ಸಳರು ನಿರ್ಮಿಸಿದ ಅದೆಷ್ಟೋ ಕಟ್ಟಡಗಳು, ದೇವಾಲಯಗಳು, ಸ್ಮಾರಕಗಳು ಗತಕಾಲದ ವೈಭವವನ್ನು ಎತ್ತಿ ಹಿಡಿಯುವುದರೊಂದಿಗೆ, ಪ್ರಾಕೃತಿಕ ಅಸಮತೋಲನವನ್ನು ಮೆಟ್ಟಿ ನಿಂತು ಇತಿಹಾಸ ಪುಟಗಳಲ್ಲಿ ಚರಿತ್ರೆ ಸೃಷ್ಚಿಸಿವೆ. ಇದಕ್ಕೆ ಉದಾಹರಣೆ ಡಂಬಳದ ಈ ಜಪದ ಬಾವಿ.
ಡಂಬಳದ ದೊಡ್ಡಬಸಪ್ಪ ದೇವಾಲಯದಿಂದ ನೈಋತ್ಯಕ್ಕೆ ಸುಮಾರು 280 ಮೀಟರ್ ದೂರದಲ್ಲಿರುವ ಈ ಜಪದ ಬಾವಿ ಇದ್ದು, ಇದರ ಇತಿಹಾಸ, ಪವಿತ್ರತೆ, ಪ್ರಾಚೀನ ಕಾಲದಲ್ಲಿ ಬಳಸಲಾದ ತಂತ್ರಜ್ಞಾನ ಮತ್ತದರ ಯೋಜನೆ, ಕಲಾವಂತಿಕೆ, ಕುಶಲಕರ್ಮಿಗಳ ಕೌಶಲ್ಯ ಮತ್ತು ವಾಸ್ತುಶೈಲಿಯ ರಚನೆ ಪ್ರವಾಸಿಗರನ್ನು ಆಶ್ಚರ್ಯ ಚಕಿತಗೊಳಿಸುತ್ತಿದೆ. ಹಿಂದಿನ ಕಾಲದಲ್ಲಿ ಜೈನ ಮುನಿಗಳು ಸ್ನಾನ ಮುಗಿಸಿಕೊಂಡು ಇಲ್ಲಿ ಸುತ್ತಲೂ ಇರುವ ಗುಹೆಗಳಲ್ಲಿ ಜಪ ಮಾಡುತ್ತಿದ್ದರೆಂಬ ಪ್ರತೀತಿ ಇದೆ.
ಉತ್ತರ ಮತ್ತು ಭಾರತದ ಇತರ ಭಾಗಗಳಿಂದ ಬಂದ ಸಾಧುಗಳು ಕಪ್ಪತಗುಡ್ಡಕ್ಕೆ ಭೇಟಿ ನೀಡುವಾಗ ಮಳೆಗಾಲದಲ್ಲಿ ಇಲ್ಲಿ ಬಂದು ಧ್ಯಾನ ಮಾಡುತ್ತಿದ್ದರು ಎಂದು ಸಂಶೋಧಕರು ಹೇಳುತ್ತಾರೆ.
ವಿಕ್ಟೋರಿಯಾ ಕೆರೆ ಮತ್ತು ದಂಬಳದಲ್ಲಿರುವ ದೊಡ್ಡಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
'ಜಪದ ಬಾವಿ'ಯಲ್ಲಿ ನೀರಿನ ಮಟ್ಟವನ್ನು ಗಮನಿಸುವ ಮೂಲಕ ವಿಕ್ಟೋರಿಯಾ ಕೆರೆಯಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ಅಳೆಯಬಹುದು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಬಾವಿಯೊಳಗಿನ ಮೆಟ್ಟಿಲುಗಳಿಗಿಂತ ನೀರಿನ ಮಟ್ಟ ಹೆಚ್ಚಾದರೆ, ಸರೋವರವು ತುಂಬಿ ಹರಿಯುತ್ತಿದೆ ಎಂದರ್ಥ. ನೀರಿನ ಮಟ್ಟವನ್ನು ಗಮನಿಸಿ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಮುಂದಾಗುತ್ತಾರೆಂದು ತಿಳಿಸಿದ್ದಾರೆ.
ಬಾವಿಯ ಸುತ್ತಲೂ 21 ಗುಹೆಗಳಿದ್ದು, 19 ಗುಹೆಗಳು ಉತ್ತಮ ಸ್ಥಿತಿಯಲ್ಲಿಸಿವೆ. ಈ ಗುಹೆಗಳು ಕಿರಿದಾಗಿದ್ದು, ಒಂದು ಗುಹೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಕುಳಿತುಕೊಳ್ಳಲು ಸಾಧ್ಯ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಈ ಸ್ಥಳವನ್ನು ಗುರುತಿಸಿದೆ. ಆದರೆ, ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಡಂಬಳದ ನಿವಾಸಿ ಸಿದ್ದು ಸತ್ಯಣ್ಣವರ್ ಎಂಬುವವರು ಮಾತನಾಡಿ, ಪ್ರವಾಸಿಗರನ್ನು ವಾರಾಂತ್ಯದ ವೇಳೆಗೆ ಜಪದ ಬಾವಿಗೆ ಕರೆದೊಯ್ಯುತ್ತಿರುತ್ತೇನೆ. ಇತ್ತೀಚೆಗೆ ಬರಹಗಾರ ಆನಂದತೀರ್ಥ ಪಯತಿ ಭೇಟಿ ನೀಡಿದ್ದರು. ಲೇಖಕಿ ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಅಕ್ಕಮಹಾದೇವಿ’ ಪುಸ್ತಕದಲ್ಲಿ ಈ ಬಾವಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಅಕ್ಕ ಮಹಾದೇವಿ ಕೂಡ ಬಾವಿಯ ಬಳಿ ಎರಡು ದಿನ ಕಾಲ ಕಳೆದಿದ್ದರು ಎಂದು ಹೇಳಿದ್ದಾರೆ.
ಮೊದಲು ಜೈನರು ಬಾವಿಯ ಸುತ್ತಲೂ ಇರುವ ಗುಹೆಗಳಲ್ಲಿ ಧ್ಯಾನ ಮಾಡುತ್ತಿದ್ದರು. ನಂತರ ಬೌದ್ಧರು ಬಂದರು. ಬಾವಿಯ ಮಹತ್ವವನ್ನು ತಿಳಿಯಲು ಹೆಚ್ಚಿನ ಸಂಶೋಧನೆಯ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
ಗದಗದ ವಿದ್ಯಾರ್ಥಿ ಮೌನೇಶ್ ಭಜಂತ್ರಿ ಅವರು ಮಾತನಾಡಿ, ದೊಡ್ಡಬಸಪ್ಪ ದೇವಸ್ಥಾನಕ್ಕೆ ಹೋದಾಗ ಅಲ್ಲಿದ್ದ ಪ್ರವಾಸಿಗರು ಜಪದ ಬಾವಿಯ ಬಗ್ಗೆ ಕೇಳುತ್ತಿದ್ದರು. ನಂತರ ನಾವು ಗ್ರಾಮಸ್ಥರನ್ನು ಸಂಪರ್ಕಿಸಿದ್ದೆವು. ದೇವಸ್ಥಾನದ ಬಳಿಯೇ ಬಾವಿಯಿದ್ದು, ಅದ್ದನ್ನು ನೋಡಿ ನಮಗೂ ಆಶ್ಯರ್ಯವಾಯಿತು. ಬಾವಿಯ ಸುತ್ತಲೂ ಧ್ಯಾನದ ಗುಹೆಗಳಿವೆ. ಆದರೆ, ಅದು ಬೇಲಿಗಳಿಂದ ಮುಚ್ಚಿ ಹೋಗಿದೆ. ಸ್ಥಳದ ರಕ್ಷಣೆಯ ಆಗತ್ಯವಿದ್ದು, ಸ್ಥಳೀಯರು ಕೂಡ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ಯೊಂದಿಗೆ ಸಹಕರಿಸಬೇಕು. ಐತಿಹಾಸಿಕ ಸ್ಥಳಗಳನ್ನು ಉಳಿಸುವಲ್ಲಿ ಸಮುದಾಯದ ಭಾಗವಹಿಸುವಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.
ಗದಗದ ಇತಿಹಾಸ ಸಂಶೋಧಕಿ ಡಾ. ಶ್ವೇತಾ ಆರ್. ಭಾಷ್ಮೆ ಅವರು ಮಾತನಾಡಿ, ಡಂಬಳದ ‘ಜಪದ ಬಾವಿ’ಯನ್ನು ನೋಡಿದ್ದೇವೆ. ಈ ಸ್ಥಳವು 12ನೇ ಶತಮಾನದಷ್ಟು ಹಿಂದಿನ ಪ್ರಾಚೀನ ಕಾಲದ್ದಾಗಿದ್ದು, ಜೈನ ಸನ್ಯಾಸಿಗಳು ಅಲ್ಲಿ ಧ್ಯಾನ ಮಾಡುತ್ತಿದ್ದರು. ಹೀಗಾಗಿಯೇ ಅದನ್ನು ‘ಜಪದ ಬಾವಿ’ ಎಂದು ಕರೆಯಲಾಗುತ್ತದೆ. ಸ್ಥಳದ ಸುತ್ತಲೂ ಗುಹೆ ಹಾಗೂ ಮಂಟಪಗಳಿವೆ. ಈ ಮಂಟಪಗಳು ಕದಂಬ ನಾಗರ ಶೈಲಿಯಲ್ಲಿವೆ. ಜಪದ ಬಾವಿಯನ್ನು ಸಂರಕ್ಷಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಇದರ ಪ್ರಾಚೀನತೆಯ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುವುದು ಪ್ರತಿಯೊಬ್ಬ ಇತಿಹಾಸ ಪ್ರೇಮಿಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
Advertisement