
ಹಾವೇರಿ: ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರ ಹಾಗೂ ಮಂಗಳಮುಖಿಯರ ಸಾಹಸದ ಫಲವಾಗಿ ತಲೆ ಎತ್ತಿದ ಅಕ್ಕ ಕೆಫೆ ಇದೀಗ ಎಲ್ಲ ಜನಮನ್ನಣೆಗೆ ಪಾತ್ರವಾಗುತ್ತಿದ್ದು, ಕೆಫೆಯ ನಿರ್ವಹಣೆಗೆ ಇದೀಗ ಸ್ವತಃ ಜಿಲ್ಲಾಡಳಿತವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಹೌದು... ಹಾವೇರಿಯ ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲು ಮಂಗಳಮುಖಿಯರಿಗೆ ಅವಕಾಶ ನೀಡಿತ್ತು.
ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡುತ್ತಿರುವ ಈ ಅಕ್ಕ ಕೆಫೆಗೆ ಇದೀಗ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಕೆಫೆಯಲ್ಲಿ ಶುಚಿ ಮತ್ತು ರುಚಿಗೆ ಗ್ರಾಹಕರು ಮಾರು ಹೋಗಿದ್ದಾರೆ. ಆ ಮೂಲಕ ಕೆಫೆ ನಿರ್ವಹಣೆ ಕುರಿತು ಜಿಲ್ಲಾಡಳಿತ ಮತ್ತು ಮಂಗಳಮುಖಿಯರಿಗಿದ್ದ ಬಹುದೊಡ್ಡ ಆತಂಕ ಇದೀಗ ನಿವಾರಣೆಯಾಗಿದೆ.
ಗ್ರಾಹಕರ ಉತ್ತಮ ಸ್ಪಂದನೆ
ಮಂಗಳಮುಖಿಯರು ನಿರ್ವಹಣೆ ಮಾಡುವ ಈ ಅಕ್ಕ ಕೆಫೆಯಲ್ಲಿ ರುಚಿ ಮತ್ತು ಶುಚಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಕೃತಕ ಬಣ್ಣ ರುಚಿಕಾರಕ ರಸಾಯನಿಕಗಳನ್ನು ಬಳಸದೇ ಇಲ್ಲಿ ಆಹಾರ ತಯಾರಿಸಲಾಗುತ್ತಿದೆ. ಜಿಲ್ಲಾಡಳಿತ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗೆ ಬರುವ ದೂರ ದೂರದ ಗ್ರಾಮಗಳ ಜನರು ಊಟದ ಸಮಯದಲ್ಲಿ ಇಲ್ಲಿಗೆ ಬಂದು ಭೋಜನ ಸವಿಯುತ್ತಾರೆ. ಇಲ್ಲಿ 70 ರೂಪಾಯಿಗೆ ಫುಲ್ ಮೀಲ್ಸ್ ನೀಡಲಾಗುತ್ತಿದೆ. ಇದರಿಂದ ಬಡವರು ಜಿಲ್ಲಾಡಳಿತದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಮತ್ತು ಸರ್ಕಾರಿ ನೌಕರರು ಈ ಅಕ್ಕ ಕೆಫೆಯಲ್ಲಿ ಆಹಾರ ಸೇವಿಸುತ್ತಾರೆ. ಅಲ್ಲದೇ ಇಲ್ಲಿ ಪಾರ್ಸಲ್ ಸೇವೆ ಸಹ ಇದೆ.
ತುಂಬಾ ಭಯವಿತ್ತು, ಗುಣಮಟ್ಟ ಕಾಪಾಡಿಕೊಳ್ಳುತ್ತೇವೆ
ಇನ್ನು ಅಕ್ಕ ಕೆಫೆ ಆರಂಭಿಕ ದಿನಗಳಲ್ಲಿ ಇಲ್ಲಿನ ಸಿಬ್ಬಂದಿ ಸಾಕಷ್ಟು ಸವಾಲು ಎದುರಿಸಿದ್ದರು. ಅಕ್ಕ ಕೆಫೆಗೆ ಬರುವ ಗ್ರಾಹಕರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಆದರೆ ಈಗ ಎಲ್ಲವೂ ಸುಲಭವಾಗಿದೆ. ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ನಮ್ಮ ನೆರವಿಗೆ ನಿಂತು ನಮ್ಮ ಮೇಲೆ ಭರವಸೆ ಇರಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದ ಎಂದು ಅಕ್ಕ ಕೆಫೆ ಸಿಬ್ಬಂದಿಗಳು ಹೇಳಿದ್ದಾರೆ. ಅಲ್ಲದೆ ಅಕ್ಕ ಕೆಫೆ ಸ್ಥಾಪಿಸುವ ಮೂಲಕ ಜಿಲ್ಲಾ ಪಂಚಾಯತ್ ಹೊಸ ದಾರಿದೀಪವಾಗಿದೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಪ್ರತಿಯೊಬ್ಬ ಗ್ರಾಹಕನು ನಮಗೆ ದೇವರ ಸಮಾನ. ಯಾವುದೇ ಕೃತಕ ಬಣ್ಣ ರುಚಿಕಾರಕ ರಸಾಯನಿಕ ಬಳಸದೇ ರುಚಿಕಟ್ಟಾದ ಆಹಾರ ತಯಾರಿಸುತ್ತಿದ್ದೇವೆ. ಈ ರೀತಿ ತಯಾರಿಸಿದ ಆಹಾರವನ್ನು ಶುಚಿಯಾಗಿ ಪೂರೈಸುತ್ತೇವೆ. ಅಕ್ಕ ಕೆಫೆಯನ್ನ ಸ್ವಚ್ಛವಾಗಿಟ್ಟುಕೊಂಡಿದ್ದು, ಗ್ರಾಹಕರು ಸಹ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಜೀವನ ಸಾರ್ಥಕವಾದಂತೆ ಭಾಸವಾಗುತ್ತದೆ. ಇದೇ ಗುಣಮಟ್ಟವನ್ನು ಕೊನೆಯವರೆಗೂ ನಾವು ಕಾಯ್ದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ನಾವೂ ಕೂಡ ಮುಖ್ಯವಾಹಿನಿಗೆ ಬಂದಿದ್ದೇವೆ
"ನಾವು ಈ ಮೊದಲು ಭಿಕ್ಷೆ ಮತ್ತು ಸೆಕ್ಸ್ ವರ್ಕ್ ಮಾಡಿ ಜೀವನ ಸಾಗಿಸುತ್ತಿದ್ದೆವು. ಎಲ್ಲರಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದೆವು. ಅಲ್ಲದೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಈ ಅಕ್ಕ ಕೆಫೆ ನಮ್ಮನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಇಲ್ಲಿಗೆ ಗ್ರಾಹಕರು ಆಗಮಿಸುತ್ತಾರೋ ಇಲ್ಲವೋ? ನಾವು ತಯಾರಿಸುವ ಆಹಾರ ಸೇವಿಸುತ್ತಾರೋ ಇಲ್ಲವೋ ಎಂಬ ಆತಂಕ ನಮ್ಮಲ್ಲಿತ್ತು. ಆದರೆ ಇದೀಗ ನಮ್ಮ ಅಕ್ಕ ಕೆಫೆಗೆ ನಿರೀಕ್ಷೆಗೆ ಮೀರಿ ಗ್ರಾಹಕರು ಆಗಮಿಸುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ನಮಗೆ ಪೂರೈಕೆ ಮಾಡಲಾರದಷ್ಟು ಬೇಡಿಕೆ ಇರುತ್ತದೆ. ಆದರೂ ಸಹ ಹೆಚ್ಚು ಒತ್ತಡಕ್ಕೆ ಒಳಗಾಗದೇ ಪೂರೈಕೆ ಮಾಡುತ್ತಿದ್ದೇವೆ. ನಮ್ಮ ಬದುಕಿಗೆ ಗೌರವ ತಂದುಕೊಟ್ಟ ಜಿಲ್ಲಾಡಳಿತ ಸರ್ಕಾರದ ಕಾರ್ಯಕ್ಕೆ ಅಭಿನಂದನೆ" ಎಂದು ಮಂಗಳಮುಖಿಯರು ಹೇಳಿದ್ದಾರೆ.
Advertisement