ಗದಗ ಗ್ರಾಮೀಣ ಯುವಕರ 'ಯೋಗ': ತರಬೇತುದಾರ ಲೋಹಿತ್ ಪ್ರೇರಣೆ!

ಲೋಹಿತ್ ಉಚಿತ ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತಾರೆ ಮತ್ತು ಗದಗದ ಗ್ರಾಮೀಣ ಭಾಗಗಳಲ್ಲಿ ವಲಸೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.
Lohit Kasar, an engineer and yoga trainer from Gadag
ಯೋಗ ತರಬೇತುದಾರ ಲೋಹಿತ್ ಕಸರ್
Updated on

ಗದಗ: ಹಲವು ಕಾರಣಗಳಿಗೆ ಮನೆ ಬಿಟ್ಟು ಹೋಗುತ್ತಾರೆ, ಮತ್ತೆ ಮನೆಗೆ ಹಿಂತಿರುಗುವುದು ಸುಲಭವಲ್ಲ. ಗದಗದ ಎಂಜಿನಿಯರ್ ಮತ್ತು ಯೋಗ ತರಬೇತುದಾರ ಲೋಹಿತ್ ಕಸರ್ (38ವ) ಅವರ ಧ್ಯೇಯ ಒಂದೇ, ನಿಮ್ಮ ಮೂಲ ಸ್ಥಾನಕ್ಕೆ ಬದ್ಧವಾಗಿರಿ, ಶಾಂತವಾಗಿರಿ ಮತ್ತು ನೀವು ಇರುವ ಸ್ಥಳದಲ್ಲಿ ಕೆಲಸ ಮಾಡಿ ಎಂಬುದು.

ಲೋಹಿತ್ ಅವರ ಪ್ರಮುಖ ಸಾಧನೆ ಯೋಗ. ಉಚಿತ ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತಾರೆ ಮತ್ತು ಗದಗದ ಗ್ರಾಮೀಣ ಭಾಗಗಳಲ್ಲಿ ವಲಸೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಲೋಹಿತ್ ಯುವಕರನ್ನು ದೊಡ್ಡ ಪ್ರಮಾಣದಲ್ಲಿ ಕೃಷಿಯತ್ತ ಮತ್ತೆ ಆಸಕ್ತಿಯಿಂದ ಕೆಲಸ ಮಾಡಲು ಯುವಕರ ಮನವೊಲಿಸುತ್ತಿದ್ದಾರೆ,ಯೋಗಗಳಲ್ಲಿ ಹೆಚ್ಚೆಚ್ಚು ಜನರು ತೊಡಗಿಸುವಂತೆ ಪ್ರೇರೇಪಿಸುತ್ತಾರೆ.

ಆರಂಭದ ದಿನಗಳು ಹೇಗಿದ್ದವು?

ಲೋಹಿತ್ ಇತರ ಎಂಜಿನಿಯರಿಂಗ್ ಪದವೀಧರರಂತೆ ಪದವಿ ಮುಗಿಸಿ ಬೆಂಗಳೂರಿಗೆ ಹೋದರು, ಅಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕೆಲವು ಸಿಬ್ಬಂದಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಯೋಗದತ್ತ ಆಕರ್ಷಿತರಾದರು. ಯುವ ನಾಯಕತ್ವ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಸೇರಿದರು. ತಮ್ಮ ಬಿಡುವಿನ ವೇಳೆಯಲ್ಲಿ ಉಚಿತವಾಗಿ ಯೋಗವನ್ನು ಕಲಿಸಲು ಪ್ರಾರಂಭಿಸಿದರು. ಈಗ ಲೋಹಿತ್ ಗದಗ ಜಿಲ್ಲೆಯ ಸುಮಾರು 200 ಹಳ್ಳಿಗಳಲ್ಲಿ ಉಚಿತ ಯೋಗ ತರಬೇತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ ಮತ್ತು ಇತರ ಸ್ಥಳಗಳಲ್ಲಿ ಉಚಿತ ಸುದರ್ಶನ ಕ್ರಿಯೆ, ಧ್ಯಾನ, ಪ್ರಾಣಾಯಾಮ ಮತ್ತು ಯೋಗಾಸನ ತರಬೇತಿ ನೀಡಿದ್ದಾರೆ.

ಲೋಹಿತ್ 6 ನೇ ತರಗತಿಯಲ್ಲಿದ್ದಾಗ ಯೋಗದಲ್ಲಿ ಆಸಕ್ತಿ ಹೊಂದಿದ್ದರು, ಗದಗದಲ್ಲಿ ತಮ್ಮ ಶಾಲಾ ದಿನಗಳಲ್ಲಿ ತರಗತಿಗಳಿಗೆ ಸೇರಿದರು. ಅವರು ಎಂಜಿನಿಯರಿಂಗ್ ಓದುತ್ತಿದ್ದಾಗ, ಉತ್ತರ ಕರ್ನಾಟಕದ ಅನೇಕ ಯುವಕರು ಗ್ರಾಮೀಣ ಪ್ರದೇಶಗಳಿಂದ ತಮ್ಮ ಸ್ಥಳೀಯ ಸ್ಥಳಗಳಲ್ಲಿ ಕೃಷಿ ಭೂಮಿ ಮತ್ತು ಉದ್ಯೋಗಾವಕಾಶಗಳನ್ನು ಹೊಂದಿದ್ದರೂ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಬರುವುದನ್ನು ನೋಡಿದರು. ಎಂಜಿನಿಯರಿಂಗ್ ನಂತರ, ಲೋಹಿತ್ ತಮ್ಮದೇ ಆದ ಸಲಹಾ ಪರಿಹಾರ ಸಂಸ್ಥೆಯನ್ನು ಪ್ರಾರಂಭಿಸಿದರು. ಅವರು ಹಳ್ಳಿಗಳಿಗೆ ಭೇಟಿ ನೀಡಿ ವಲಸೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯೋಗವನ್ನು ಕಲಿಸಲು ಬಯಸಿದ್ದರು. ವಿವಿಧ ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸಿ ಅನುಮತಿಗಳನ್ನು ಪಡೆದು ಯೋಗ ತರಗತಿಗಳು ಮತ್ತು ಜಾಗೃತಿ ಅವಧಿಗಳ ಸರಣಿಯನ್ನು ಆಯೋಜಿಸಿದರು.

ಯೋಗ ಅವಧಿಗಳ ಜೊತೆಗೆ ವಲಸೆ ಜಾಗೃತಿ ಕಾರ್ಯಕ್ರಮಗಳು ಬೆಂಗಳೂರು ಮತ್ತು ಇತರ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಯುವಕರಿಗೆ ಹೊಸ ಮಾರ್ಗಗಳನ್ನು ತೆರೆದಿವೆ.

All in a bid to achieve work-life balance in Gadag district
ಗದಗ ಗ್ರಾಮೀಣ ಭಾಗದಲ್ಲಿ ತರಬೇತಿ

ಲೋಹಿತ್ ಪ್ರೇರಣೆ

ಲೋಹಿತ್ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಯುವಕರಲ್ಲಿ ಒಬ್ಬರಾದ ಮಲ್ಲಿಕಾರ್ಜುನ್ ಶಿಗ್ಲಿ ತಮ್ಮ ಗ್ರಾಮದಲ್ಲಿ ಶ್ರೀಗಂಧದ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಮತ್ತೊಬ್ಬ ಯುವಕ ಗಂಗಾಧರ ಹಿರೇಮಠ್, ಸಗಣಿ ಧೂಪ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

ಲೋಹಿತ್ ಮತ್ತು ಅವರ ತಂಡದ ವಲಸೆ ಜಾಗೃತಿ ಕಾರ್ಯಕ್ರಮದ ನಂತರ ಸದಾನಂದ ರಾಮಣ್ಣನವರ್, ಮಂಜುನಾಥ್ ದೊಡ್ಡಮನಿ ಮತ್ತು ಮಂಜುನಾಥ್ ಡಂಬಳ್ ಹೊಸ ತಂತ್ರಗಳೊಂದಿಗೆ ಹೈನುಗಾರಿಕೆ ಮತ್ತು ಕೃಷಿಯನ್ನು ಪ್ರಾರಂಭಿಸಿದರು.

Lohit Kasar, an engineer and yoga trainer from Gadag
'ಉಜ್ವಲ ಭವಿಷ್ಯಕ್ಕಾಗಿ ಶಾಲೆಗೆ ಬನ್ನಿ' ಅಭಿಯಾನ: ಶಿಕ್ಷಣದಿಂದ ದೂರ ಉಳಿದ ಮಕ್ಕಳಿಗಾಗಿ ಹುಡುಕಾಟ; ಮುಂಚೂಣಿಯಲ್ಲಿ ಗದಗ ಜಿಲ್ಲೆ!

ಲೋಹಿತ್ 2002 ರಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತ ಯೋಗ ತರಬೇತಿಯನ್ನು ನೀಡಲು ಪ್ರಾರಂಭಿಸಿದ್ದರು. ಈಗ ಅವರು ಜಿಲ್ಲೆಯ ನೂರಾರು ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಲೋಹಿತ್ ಖಾಸಗಿ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಯೋಗ ತರಗತಿಗಳನ್ನು ನಡೆಸಿ ಶುಲ್ಕವನ್ನು ಸಂಗ್ರಹಿಸುತ್ತಾರೆ. ಅದೇ ಶುಲ್ಕವನ್ನು ಹಳ್ಳಿಗಳಿಗೆ ಹೋಗಿ ಉಚಿತ ತರಬೇತಿ ನೀಡಲು ಮತ್ತು ಅವರ ತಂಡದ ಖರ್ಚುಗಳಿಗೆ ಬಳಸಿಕೊಳ್ಳುತ್ತಾರೆ.

ಈಗ ಅವರಿಂದ ಯೋಗ ಕಲಿತ ನೂರಾರು ವಿದ್ಯಾರ್ಥಿಗಳು ವಲಸೆ ಮತ್ತು ಸ್ಥಳೀಯ ಉದ್ಯೋಗಾವಕಾಶಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ನಂತರ ಲೋಹಿತ್ ಉತ್ತಮ ಪ್ರತಿಕ್ರಿಯೆಯನ್ನು ಪಡೆದರು, ನಗರಗಳಲ್ಲಿ ಅನೇಕ ಉದ್ಯೋಗಗಳು ಕಳೆದುಹೋಗಿವೆ. ಕೋವಿಡ್-19 ಮೊದಲ ಅಲೆಯ ನಂತರ, ಲೋಹಿತ್ ಮತ್ತು ತಂಡವು ಗ್ರಾಮೀಣ ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬಿಸುವ ಕೆಲಸ ಮಾಡಿತು. 2020 ಮತ್ತು 2021 ರಲ್ಲಿ ನೂರಾರು ಉಚಿತ ಯೋಗ ಶಿಬಿರಗಳನ್ನು ಆಯೋಜಿಸಿತು.

ಲೋಹಿತ್ ಅವರಿಂದ ಕಲಿತ ಗದಗದ ಕೆವಿಎಸ್ಆರ್ ಕಾಲೇಜಿನ ಪಿಯು ವಿದ್ಯಾರ್ಥಿ ಸಚಿನ್ ದೇಸಾಯಿ, ಲೋಹಿತ್ ಅವರಿಂದ ಯೋಗ ಕಲಿಯುವ ಮೊದಲು ನಾನು ತುಂಬಾ ಸಂಕುಚಿತ ಮನೋಭಾವ ವ್ಯಕ್ತಿಯಾಗಿದ್ದೆ. ಸುದರ್ಶನ ಕ್ರಿಯಾ ಸೇರಿದಂತೆ ಎಲ್ಲಾ ಆಸನಗಳು, ಧ್ಯಾನ ತಂತ್ರಗಳನ್ನು ಕಲಿಸುವ ಮೂಲಕ ಅವರು ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿದರು. ಅವರು ನಮ್ಮನ್ನು ಅನೇಕ ಕಾರ್ಯಕ್ರಮಗಳಿಗೆ ಕರೆದೊಯ್ದರು. ಗುಂಪನ್ನು ಹೇಗೆ ಮುನ್ನಡೆಸುವುದು ಮತ್ತು ಧ್ಯಾನ ತಂತ್ರಗಳನ್ನು ಹೇಗೆ ತೋರಿಸುವುದು ಎಂದು ತರಬೇತಿ ನೀಡಿದರು. ಅವರು ಅನೇಕ ಗ್ರಾಮೀಣ ಯುವಕರನ್ನು ತಮ್ಮ ಸ್ಥಳೀಯ ಸ್ಥಳಗಳಲ್ಲಿರಲು ಮತ್ತು ಕೃಷಿಯನ್ನು ಉದ್ಯೋಗವಾಗಿ ತೆಗೆದುಕೊಳ್ಳಲು ಮನವೊಲಿಸಿದರು. ಈಗ ನಾನು ಬಹಿರ್ಮುಖಿ ಮತ್ತು ಎಲ್ಲರೊಂದಿಗೆ ಬೆರೆಯುತ್ತೇನೆ. ನಾನು ಗ್ರಾಮೀಣ ವಿದ್ಯಾರ್ಥಿಗಳಿಗೆ ಯೋಗವನ್ನು ಸಹ ಕಲಿಸುತ್ತಿದ್ದೇನೆ ಎನ್ನುತ್ತಾರೆ.

ಬೆಟಗೇರಿಯ ದಿ ಹ್ಯುಮಾನಿಟಿ ಟ್ರಸ್ಟ್‌ನ ಸಂಸ್ಥಾಪಕ ವಾದಿರಾಜ್ ಕೌಜಲಗಿ, ಲೋಹಿತ್ ಅವರ ಮಾರ್ಗದರ್ಶನದಲ್ಲಿ ನಾವು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಅನೇಕ ಜನರು ಅವರ ತರಬೇತಿಯನ್ನು ಇಷ್ಟಪಟ್ಟರು. ಲೋಹಿತ್ ಮತ್ತು ತಂಡವು ಬಂದು ಯಾವುದೇ ಶುಲ್ಕ ವಿಧಿಸದೆ ಅನೇಕ ಮಕ್ಕಳು, ಯುವಕರು ಮತ್ತು ಹಿರಿಯ ನಾಗರಿಕರಿಗೆ ಸುದರ್ಶನ ಕ್ರಿಯಾ ಮತ್ತು ಧ್ಯಾನವನ್ನು ಹೇಗೆ ಮಾಡಬೇಕೆಂದು ತರಬೇತಿ ನೀಡಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಬೆಟಗೇರಿಯಲ್ಲಿರುವ ಆರೋಗ್ಯ ಶಿಬಿರದ ನಿವಾಸಿಗಳು ಲೋಹಿತ್ ಮತ್ತು ಅವರ ತಂಡದಿಂದ ಸತ್ಸಂಗ ಮತ್ತು ಧ್ಯಾನ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಕೇಳುತ್ತಿದ್ದಾರೆ. ನಾವು ತಂಡವನ್ನು ಕೆಲವು ವೃದ್ಧಾಶ್ರಮಗಳಿಗೆ ಕರೆದೊಯ್ಯಲು ಮತ್ತು ಅಲ್ಲಿನ ಹಿರಿಯ ನಾಗರಿಕರಿಗೆ ತರಬೇತಿ ನೀಡಲು ಯೋಜಿಸುತ್ತಿದ್ದೇವೆ ಎಂದರು.

ಮಲ್ಲಿಕಾರ್ಜುನ್ ಎಂಬ ವಿದ್ಯಾರ್ಥಿ,ಲೋಹಿತ್ ಅವರು ಮೊದಲು ನಮ್ಮ ಹಳ್ಳಿಯಾದ ಡಂಬಲ್‌ಗೆ ಯೋಗಕ್ಕಾಗಿ ಭೇಟಿ ನೀಡಿದ್ದರು. ಕೋವಿಡ್ ಲಾಕ್ ಡೌನ್ ನಂತರ ನಾವು ಬೆಂಗಳೂರಿನಿಂದ ಡಂಬಲ್‌ಗೆ ಹಿಂತಿರುಗಿದೆವು. ಲೋಹಿತ್ ನಮಗೆ ಉಚಿತ ಯೋಗ ತರಗತಿಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಿ ನಮ್ಮ ಸ್ವಂತ ಹಳ್ಳಿಯಲ್ಲಿ ಕೆಲಸ ಮಾಡಲು ಹೇಳಿದರು. ನಾನು ಹೈನುಗಾರಿಕೆಯನ್ನು ಪ್ರಾರಂಭಿಸಿದೆ. ಈಗ ನಾನು ಉತ್ತಮ ಹಣವನ್ನು ಗಳಿಸುತ್ತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡರು.

ಯೋಗ ತರಬೇತಿ ಪಡೆಯಲು ಶಕ್ತರಲ್ಲ ಎಂಬ ಚಿಂತೆಯಲ್ಲಿದ್ದ ಅನೇಕ ಗ್ರಾಮೀಣ ನಿವಾಸಿಗಳನ್ನು ನಾನು ನೋಡಿ ಉಚಿತ ತರಬೇತಿಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ನಾನು ಮೊದಲು ಗದಗದಲ್ಲಿ ಪ್ರಾರಂಭಿಸಿದೆ, ನಿಧಾನವಾಗಿ ನನ್ನ ತಂಡದೊಂದಿಗೆ ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರಗೊಂಡೆ. ನಮಗೆ ಅನೇಕ ಗ್ರಾಮಸ್ಥರಿಂದ ಉತ್ತಮ ಬೆಂಬಲ ಸಿಕ್ಕಿತು. ಯುವ ವಲಸೆಯ ಬಗ್ಗೆ ಜಾಗೃತಿ ಮೂಡಿಸಲು ನಾವು ಈ ಅವಕಾಶವನ್ನು ಪಡೆದುಕೊಂಡೆವು. ನಮಗೆ ಉತ್ತಮ ಫಲಿತಾಂಶಗಳು ಸಿಕ್ಕವು. ಈಗ ನನ್ನ ಬಳಿ ಒಂದು ತಂಡವಿದೆ, ನಾವೆಲ್ಲರೂ ಆಸಕ್ತರಿಗೆ ಉಚಿತ ಯೋಗ ಮತ್ತು ಸುದರ್ಶನ ಕ್ರಿಯೆಯನ್ನು ಕಲಿಸುತ್ತೇವೆ ಎಂದು ಲೋಹಿತ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com