
ಗದಗ: ಮಕ್ಕಳ ಜೀವನ ಶೈಲಿಯನ್ನು ಬದಲಾಯಿಸುವ ಮುಖ್ಯ ಘಟ್ಟ ಶೈಕ್ಷಣಿಕ ಹಂತವಾಗಿದೆ. ಶಿಕ್ಷಣದಿಂದ ಮಾತ್ರ ಎಲ್ಲವನ್ನು ಸಾಧಿಸಬಹುದು. ಆದರೆ, ರಾಜ್ಯದಲ್ಲಿ ನಾನಾ ಕಾರಣಗಳಿಂದಾಗಿ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.2023-24ರ ಅಂಕಿಅಂಶಗಳ ಪ್ರಕಾರ ಮಾಧ್ಯಮಿಕ ಶಿಕ್ಷಣದಲ್ಲಿ ರಾಜ್ಯದಲ್ಲಿ ಶಾಲೆ ಬಿಡುವವರ ಪ್ರಮಾಣ ಶೇ22 ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಶೇ.14ಕ್ಕಿಂತ ತುಂಬಾ ಹೆಚ್ಚಾಗಿದೆ.
ಇನ್ನು ಪ್ರಾಥಮಿಕ ಶಿಕ್ಷಣದಲ್ಲಿ ಶಾಲೆ ಬಿಡುವವರ ಪ್ರಮಾಣ ಶೇ.1.7ರಷ್ಟಿದ್ದು, ಉನ್ನತ ಪ್ರಾಥಮಿಕ ಶಿಕ್ಷಣದ ಪ್ರಮಾಣ ಶೇ.2.7ರಷ್ಟಿದೆ. ಶಿಕ್ಷಣ ಹಕ್ಕು ಕಾಯ್ದೆ (RTE), 2009 ನಂತಹ ಸಾಂವಿಧಾನಿಕ ನಿಬಂಧನೆಗಳ ಹೊರತಾಗಿಯೂ, ಪರಿಸ್ಥಿತಿಯನ್ನು ಸುಧಾರಿಸುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಏತನ್ಮಧ್ಯೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ಮತ್ತು ಗದಗ ಶಾಸಕರಾದ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಗದಗ ಜಿಲ್ಲೆಯಲ್ಲಿ ಅಭಿಯಾನವೊಂದನ್ನು ಆರಂಭಿಸಲಾಗಿದ್ದು, ಈ ಅಭಿಯಾನದ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿ, ಅವರನ್ನು ಶಾಲೆಗೆ ಮರಳಿ ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಗದಗ ಉಪನಿರ್ದೇಶಕರ ಕಚೇರಿ, ಗದಗ ಪ್ರದೇಶ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಿದ್ದಲಿಂಗ ನಗರ ಸರ್ಕಾರಿ ಪ್ರೌಢಶಾಲೆ ಜಂಟಿಯಾಗಿ ಜೂನ್ ಮೊದಲ ವಾರದಿಂದ 'ಉಜ್ವಲ ಭವಿಷ್ಯಕ್ಕಾಗಿ ಶಾಲೆಗೆ ಬನ್ನಿ' ಎಂಬ ಅಭಿಯಾನವನ್ನು ಆರಂಭಿಸಿದೆ.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಅಧಿಕಾರಿಗಳು ಮಕ್ಕಳ ಪೋಷಕರು ಮತ್ತು ಮಕ್ಕಳನ್ನು ಶಾಲೆಗಳಿಗೆ ಮರಳಿ ಬರುವಂತೆ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಇದಕ್ಕಾಗಿ ಶಾಲೆ ಬಿಟ್ಟ ಮಕ್ಕಳ ಪಟ್ಟಿ ಸಿದ್ಧಪಡಿಸಿರುವ ಅಧಿಕಾರಿಗಳು ಅವರಿರುವ ಪ್ರದೇಶಗಳಿಗೇ ತೆರಳಿ, ಮಕ್ಕಳನ್ನು ಹುಡುಕಿ ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ಅಧಿಕಾರಿಗಳು ಹಾಗೂ ಶಿಕ್ಷಕರು ಸಮೀಕ್ಷೆ ನಡೆಸಿ ಶಾಲೆ ಬಿಟ್ಟ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿತರು. ನಂತರ ಪ್ರದೇಶ, ಗ್ರಾಮ ಹಾಗೂ ವಾರ್ಡ್ ಪ್ರಕಾರ, ಬಿಇಒ, ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯಕರನ್ನು ಒಟ್ಟುಗೂಡಿಸಿ, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಬಳಿಕ ಪೋಷಕರು ಹಾಗೂ ಮಕ್ಕಳ ಮನವೊಲಿಸಿ ಶಾಲೆಗೆ ಮರಳಿ ಬರುವಂತೆ ಮಾಡುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರದವರೆಗೆ ಪಟ್ಟಣದಲ್ಲಿ 14 ವಿದ್ಯಾರ್ಥಿಗಳನ್ನು ಹಾಗೂ ಗ್ರಾಮೀಣ ಪ್ರದೇಶದ 8 ವಿದ್ಯಾರ್ಥಿಗಳನ್ನು ಶಾಲೆಗೆ ಮರಳಿ ಕರೆತರಲಾಗಿದೆ. ಅಭಿಯಾನ ಆರಂಭಿಕ ಹಂತದಲ್ಲಿದ್ದು, ಶಿಕ್ಷಣ ಇಲಾಖೆ ಇನ್ನೂ ಮಾಹಿತಿ ಸಂಗ್ರಹಿಸಿಲ್ಲ ಎಂದು ಹೇಳಿದ್ದಾರೆ.
ನನ್ನೊಂದಿಗೆ ಇನ್ನೂ ಹಲವು ವಿದ್ಯಾರ್ಥಿಗಳು ಶಾಲೆಗೆ ಮರಳಲು ಉತ್ಸುಕರಾಗಿದ್ದಾರೆ. ಸಮೀಕ್ಷೆ ನಡೆಸಿ ನಮ್ಮನ್ನು ಮತ್ತೆ ಶಾಲೆಗೆ ಕರೆತಂದಿದ್ದಕ್ಕಾಗಿ ನಾವು ಶಾಲೆ ಮತ್ತು ಶಿಕ್ಷಣ ಇಲಾಖೆಗೆ ಕೃತಜ್ಞರಾಗಿರುತ್ತೇವೆ ಎಂದು ಹನ್ನೆರಡು ವರ್ಷದ ಚಿತ್ತರಂಜನ್ (ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ.
"ನಮ್ಮನ್ನು ಮತ್ತೆ ಶಾಲೆಗೆ ಕರೆತಂದಿದ್ದಕ್ಕಾಗಿ ನಾವು ಶಾಲೆ ಮತ್ತು ಶಿಕ್ಷಣ ಇಲಾಖೆಗೆ ಕೃತಜ್ಞರಾಗಿರುತ್ತೇವೆ. ನಮ್ಮ ವಯಸ್ಸಿನ ಅನೇಕ ವಿದ್ಯಾರ್ಥಿಗಳು ಈಗ ನಮ್ಮನ್ನು ನೋಡಿ ಮತ್ತೆ ಶಾಲೆಗೆ ಮರಳುತ್ತಿದ್ದಾರೆ. ಬರಗಾಲ, ಪ್ರವಾಹ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಬಿಡುವಂತಾಗಿತ್ತು. ಅಭಿಯಾನವು ನಮ್ಮನ್ನು ಮತ್ತೆ ಶಾಲೆಗೆ ಸೇರುವಂತೆ ಮಾಡಿದ್ದು, ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ನಮ್ಮ ದೇಶ ಶ್ರೇಷ್ಠವಾಗಬೇಕಾದರೆ, ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು. ಶಾಲೆಯಿಂದ ಹೊರಗುಳಿದ 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಮೂಲಕ ಶಿಕ್ಷಣ ನೀಡಬೇಕು. ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದು ಸರ್ಕಾರದ ಕಾಳಜಿ. ಎಲ್ಲರಿಗೂ ಶಿಕ್ಷಣ ನೀಡುವ ಮತ್ತು ಗೌರವಾನ್ವಿತ ಜೀವನವನ್ನು ನಿರ್ಮಿಸುವ ಉದಾತ್ತ ಉದ್ದೇಶ ಶಿಕ್ಷಣವನ್ನು ಒದಗಿಸುವುದರಲ್ಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್ ಎಸ್ ಬುರುಡಿ ಮಾತನಾಡಿ, "ಗುಣಮಟ್ಟದ ಶಿಕ್ಷಣವು ಪ್ರತಿಯೊಂದು ಮಗುವಿನ ಹಕ್ಕಾಗಿರಬೇಕು. ಈ ಸಂದರ್ಭದಲ್ಲಿ, ಸಚಿವ ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಸಕ್ತ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಬಿಇಒಗಳು, ಸಿಆರ್ ಪಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಈಗ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement