ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ ‘ಜಲಯೋಧ’ನ ಪ್ರೇರಣಾದಾಯಕ ಯಶೋಗಾಥೆ..!

ಬಾಲ್ಯದಲ್ಲಿ ನೀರಿಗಾಗಿ ಜನರು ಅನುಭವಿಸುತ್ತಿದ್ದ ಸಂಕಷ್ಟವನ್ನು ಕಣ್ಣಾರೆ ಕಂಡಿದ್ದ ಸಿಕಂದರ್, ಅದನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಇಂದು ಸಾವಿರಾರು ರೈತ ಕುಟುಂಬಗಳ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ.
A filled pond after desilting efforts improved its water storage
ಹೂಳೆತ್ತುವ ಪ್ರಯತ್ನ ನಡೆಸುತ್ತಿರುವುದು.
Updated on

ಗದಗ: ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ಬೇಸಿಗೆ ಬಂದರೆ ಸಾಕು, ನೀರಿಗಾಗಿ ಜನರು ಕಿಲೋಮೀಟರ್‌ಗಳಷ್ಟು ದೂರ ನಡೆದು ಹೋಗಬೇಕಾದ ಪರಿಸ್ಥಿತಿ ಇಂದಿಗೂ ಕಾಣಸಿಗುತ್ತದೆ. ಬತ್ತಿದ ಕೆರೆಗಳು, ಒಣಗಿದ ಕೊಳವೆಬಾವಿಗಳು, ನೀರಿನ ಅಭಾವದಿಂದ ಕಂಗಾಲಾದ ರೈತರು – ಇವೆಲ್ಲವೂ ಈ ಭಾಗದ ಜನರ ಬದುಕಿನ ಭಾಗವಾಗಿವೆ.

ಆದರೆ, ಇಂತಹ ಬರದ ನಾಡಿನಲ್ಲೇ ಒಬ್ಬ ವ್ಯಕ್ತಿ ತನ್ನ ಸಂಕಲ್ಪ, ಪರಿಶ್ರಮ ಮತ್ತು ಸಾಮಾಜಿಕ ಕಾಳಜಿಯಿಂದ ಜಲಕ್ರಾಂತಿಯನ್ನೇ ಸೃಷ್ಟಿಸಿದ್ದಾನೆ. ಗದಗ ಜಿಲ್ಲೆಯ ಕೊಟುಮಚಗಿ ಗ್ರಾಮದ ಸಿಕಂದರ್ ಮೀರಾನಾಯಕ್ ಎಂಬ ವ್ಯಕ್ತಿ ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸುಮಾರು 200 ಕೆರೆಗಳನ್ನು ಪುನಶ್ಚೇತನಗೊಳಿಸಿ, 3,000ಕ್ಕೂ ಹೆಚ್ಚು ಬತ್ತಿಹೋಗಿದ್ದ ಕೊಳವೆಬಾವಿಗಳಿಗೆ ಮರುಜೀವ ತುಂಬಿದ್ದಾರೆ.

ಬಾಲ್ಯದಲ್ಲಿ ನೀರಿಗಾಗಿ ಜನರು ಅನುಭವಿಸುತ್ತಿದ್ದ ಸಂಕಷ್ಟವನ್ನು ಕಣ್ಣಾರೆ ಕಂಡಿದ್ದ ಸಿಕಂದರ್, ಅದನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಇಂದು ಸಾವಿರಾರು ರೈತ ಕುಟುಂಬಗಳ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ. ‘ಬರನಾಡಿನ ಭಗೀರಥ’ ಎಂದೇ ಗುರುತಿಸಿಕೊಂಡಿರುವ ಈ ಜಲಯೋಧನ ಸಾಧನೆಯ ಪಯಣ ನಿಜಕ್ಕೂ ಪ್ರೇರಣಾದಾಯಕವಾಗಿದೆ

ಬಾಲ್ಯದ ನೋವೇ ಸೇವಾ ಮನೋಭಾವಕ್ಕೆ ಪ್ರೇರಣೆ

ಬರಗಾಲದ ಸಂಕಷ್ಟಕ್ಕೆ ಹೆಸರಾದ ಕೋಟುಮಚಗಿ ಗ್ರಾಮದಲ್ಲಿ ಜನಿಸಿದ ಸಿಕಂದರ್, ಬಾಲ್ಯದಲ್ಲೇ ನೀರಿಗಾಗಿ ಜನರು ನಾಲ್ಕು ಕಿಲೋಮೀಟರ್ ದೂರ ನಡೆದು ಕೆರೆ-ಕೊಳಗಳಿಂದ ನೀರು ತರುತ್ತಿದ್ದ ದೃಶ್ಯಗಳನ್ನು ಕಂಡು ಬೆಳೆದರು. ಒಣಗಿದ ಕೆರೆಗಳು, ಖಾಲಿ ಬೋರ್‌ವೆಲ್‌ಗಳು ಮತ್ತು ನೀರಿನ ಕೊರತೆಯಿಂದ ನರಳುತ್ತಿದ್ದ ರೈತರ ಬದುಕು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು.

ಸಾಮಾಜಿಕ ಕಾರ್ಯದಲ್ಲಿ ಪದವಿ ಪಡೆದ ಬಳಿಕ ಅವರು ಹಾವೇರಿ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆ ಮತ್ತು ಸ್ವಚ್ಛತಾ ಯೋಜನೆಗಳನ್ನು ನಿರ್ವಹಿಸುತ್ತಿದ್ದ ಸರ್ಕಾರಿ ಸಂಸ್ಥೆಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದರು. ನಂತರ ಬೆಂಗಳೂರಿನ ಮಳೆನೀರು ಕೊಯ್ಲು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಅವರಿಗೆ ನೀರಿನ ಸಂರಕ್ಷಣೆಯ ತಾಂತ್ರಿಕ ಜ್ಞಾನ ದೊರೆಯಿತು.

A filled pond after desilting efforts improved its water storage
ಮೌಂಟ್ ಎವರೆಸ್ಟ್ ಶಿಖರದ ಮೇಲೆ ಕನ್ನಡದ ಕೀರ್ತಿ ಪತಾಕೆ; ಬೆಂಗಳೂರಿನ ಇಬ್ಬರು ಸಾಹಸಿಗಳಿಂದ ಐತಿಹಾಸಿಕ ಸಾಧನೆ..!

ಜೀವನ ಬದಲಿಸಿದ ಒಂದು ಭೇಟಿ

ಹುಬ್ಬಳ್ಳಿಯ ದೇಸ್ಪಾಂಡೆ ಫೌಂಡೇಶನ್‌ನ ಸಿಇಒ ನವೀನ್ ಝಾ ಅವರನ್ನು ಭೇಟಿಯಾದದ್ದು ಸಿಕಂದರ್ ಅವರ ಜೀವನದ ಮಹತ್ವದ ತಿರುವಾಯಿತು. ನೀರಿನ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸಿದ ನವೀನ್ ಝಾ, ಅಗತ್ಯ ಬೆಂಬಲವನ್ನೂ ನೀಡಿದರು.

2008ರಲ್ಲಿ "ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆ"ಯನ್ನು ಸ್ಥಾಪಿಸಿದ ಸಿಕಂದರ್, ಮೊದಲ ಹಂತದಲ್ಲಿ ದೇಸ್ಪಾಂಡೆ ಫೌಂಡೇಶನ್ ನೀಡಿದ ರೂ.30 ಸಾವಿರ ಬೀಜ ಧನದ ನೆರವಿನಿಂದ ಕಾರ್ಯ ಆರಂಭಿಸಿದರು. ಆ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿ ವಿವಿಧ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ, ಅವರ CSR ನಿಧಿಗಳಿಂದ ರೂ.2 ಲಕ್ಷ ಸಂಗ್ರಹಿಸಿದರು.

ತಂಡದ ಸಾಧನೆ

ಆರಂಭದಲ್ಲಿ ಒಬ್ಬರೇ ನೀರಿನ ಸಂರಕ್ಷಣಾ ಯೋಜನೆಗಳನ್ನು ಕೈಗೊಂಡ ಸಿಕಂದರ್ ಅವರಿಗೆ ನಂತರ ಐಟಿ ದಿಗ್ಗಜ ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳ ಬೆಂಬಲ ದೊರೆಯಿತು. ಸಣ್ಣ ಮಟ್ಟದಲ್ಲಿ ಆರಂಭವಾದ ಸಂಸ್ಥೆ ಇಂದು 25 ಸಿಬ್ಬಂದಿಯನ್ನು ಹೊಂದಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಗದಗದಲ್ಲಿ ಯಶಸ್ಸು ಕಂಡ ಬಳಿಕ ಅವರು ಕೊಪ್ಪಳ, ರಾಯಚೂರು, ಬೆಂಗಳೂರು ಉತ್ತರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬತ್ತಿಹೋಗಿದ್ದ ಬೋರ್‌ವೆಲ್‌ಗಳನ್ನು ಮರುಜೀವಗೊಳಿಸುವ ಕಾರ್ಯವನ್ನು ವಿಸ್ತರಿಸಿದ್ದಾರೆ.

Meeranaik interacts with farmers near Raichur
ರಾಯಚೂರು ಬಳಿ ರೈತರೊಂದಿಗೆ ಸಂವಾದ ನಡೆಸಿದ ಮೀರಾನಾಯ್ಕ್.

150 ಕೆರೆಗಳ ಪುನಶ್ಚೇತನದ ಮಹತ್ವಾಕಾಂಕ್ಷಿ ಯೋಜನೆ

ಕೆಲವು ತಿಂಗಳುಗಳ ಹಿಂದೆ ಮುಂಡರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಕಂದರ್ ಮತ್ತು ಅವರ ತಂಡ 150 ಕೆರೆಗಳ ಪುನಶ್ಚೇತನ ಕಾರ್ಯ ಆರಂಭಿಸಿತು. ಈ ತಿಂಗಳ ಅಂತ್ಯದೊಳಗೆ 130 ಕೆರೆಗಳ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ರೈತರಿಗೆ ಪ್ರೇರಣೆಯಾದ ಹೋರಾಟ

ಸಿಕಂದರ್ ಅವರ ಕಾಲೇಜು ಪ್ರಾಧ್ಯಾಪಕ ಅನಿಲ್ ವೈದ್ಯ ಅವರು ಮಾತನಾಡಿ, "ಬೇಸಿಗೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಮಳೆನೀರು ಸಂಗ್ರಹಣೆ ಹಾಗೂ ನೀರಿನ ಸಂರಕ್ಷಣೆಯತ್ತ ರೈತರು ಗಮನಹರಿಸಲು ಸಿಕಂದರ್ ಅವರ ಕಾರ್ಯ ಪ್ರೇರಣೆಯಾಗಿದೆ. ಇಂದು ಅವರು ಉತ್ತರ ಕರ್ನಾಟಕದಲ್ಲಿ ನೀರಿನ ರಾಯಭಾರಿಯಂತಾಗಿದ್ದಾರೆ" ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ.

‘ಜನರ ನೋವೇ ನನ್ನ ಶಕ್ತಿ’

ತಮ್ಮ ಸಾಧನೆಯ ಬಗ್ಗೆ ಮಾತನಾಡುವ ಸಿಕಂದರ್, "ಬಾಲ್ಯದಿಂದಲೇ ನೀರಿಗಾಗಿ ಜನರು ಅನುಭವಿಸುತ್ತಿದ್ದ ಕಷ್ಟವನ್ನು ನೋಡಿದ್ದೇನೆ. ಅದೇ ನನಗೆ ಏನಾದರೂ ಮಾಡಬೇಕೆಂಬ ಸಂಕಲ್ಪ ಮೂಡಿಸಿತು. ಬತ್ತಿಹೋಗಿದ್ದ ಬೋರ್‌ವೆಲ್‌ಗಳನ್ನು ಮರುಪೂರಣಗೊಳಿಸುವ ತಂತ್ರವನ್ನು ಕಲಿತೆ. ಹಲವು ಕಂಪನಿಗಳ ನೆರವಿನಿಂದ ಸಾವಿರಾರು ಬೋರ್‌ವೆಲ್‌ಗಳಿಗೆ ಜೀವ ತುಂಬಿದ್ದೇನೆ. ಇನ್ನೂ ಬರಪೀಡಿತ ಗ್ರಾಮಗಳಲ್ಲಿ ನೀರಿನ ಸಂರಕ್ಷಣಾ ಕಾರ್ಯ ಮುಂದುವರಿದಿದೆ" ಎಂದು ಹೇಳುತ್ತಾರೆ.

ಒಂದು ಗ್ರಾಮದಿಂದ ಆರಂಭವಾದ ಸಿಕಂದರ್ ಮೀರಾನಾಯ್ಕ ಅವರ ಪಯಣ ಇಂದು ಸಾವಿರಾರು ಕುಟುಂಬಗಳಿಗೆ ನೀರಿನ ಭದ್ರತೆ ಒದಗಿಸುವ ಮಟ್ಟಕ್ಕೆ ಬೆಳೆದಿದೆ.

ಸರ್ಕಾರಗಳು ಮತ್ತು ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಸಮಾಜದ ಸಹಕಾರದೊಂದಿಗೆ ಸಾಧಿಸಿ ತೋರಿಸಿರುವ ಅವರು, ನೀರಿನ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ನಿಜವಾದ "ಜಲಯೋಧ"ರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com