ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?
ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆ ಕುರಿತು ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸುವ ಗಡುವು ಮುಕ್ತಾಯದ ಹಂತಕ್ಕೆ ಬರುತ್ತಿರುವಂತೆಯೇ, ವರದಿ ಜಾರಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಪಶ್ಚಿಮ ಘಟ್ಟಗಳ ಸೂಕ್ಷ್ಮ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವ ಉದ್ದೇಶದ ಈ ಕರಡು ಅಧಿಸೂಚನೆ ಹಲವು ಆತಂಕಗಳನ್ನು ಹುಟ್ಟುಹಾಕಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಆರು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ವಿಚಾರವನ್ನು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿವೆ.
ಕೇರಳ ಮತ್ತು ತಮಿಳುನಾಡು ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ಸ್ವತಂತ್ರ ಅಧ್ಯಯನಗಳನ್ನು ನಡೆಸುತ್ತಿದ್ದರೆ, ಕರ್ನಾಟಕವು ಸ್ಥಳ ಪರಿಶೀಲನೆ ನಡೆಸಲು ಒಂದು ವರ್ಷದ ಕಾಲಾವಕಾಶ ಕೋರಿದೆ. ಇದೇ ವೇಳೆ, ವರದಿ ಜಾರಿ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಜ್ಞರು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯತ್ತ (NGT) ಗಮನಹರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಳೆದ 12 ವರ್ಷಗಳಲ್ಲಿ ಕಸ್ತೂರಿರಂಗನ್ ವರದಿಗೆ ದೊರೆತ ಬೆಂಬಲ ಹಾಗೂ ವ್ಯಕ್ತವಾಗಿರುವ ಟೀಕೆಗಳ ಕುರಿತು ಪರಿಶೀಲಿಸೋಣ.
ಕಸ್ತೂರಿರಂಗನ್ ವರದಿ ಎಂದರೇನು? 7ನೇ ಕರಡು ಅಧಿಸೂಚನೆ ಎಂದರೇನು?
ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಾಗೂ ಜೀವವೈವಿಧ್ಯತೆಯ ನೆಲೆ ಆಗಿರುವ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ESA) ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) 2013ರಲ್ಲಿ ಪರಿಸರ ಸಂರಕ್ಷಣೆಯ ರೂಪುರೇಷೆಯನ್ನು ಪ್ರಕಟಿಸಿತು.
ಈ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕಾರ್ಯಪಡೆ (HLWG) ರಚಿಸಲಾಯಿತು.
ಉಪಗ್ರಹ ಚಿತ್ರಗಳ ದತ್ತಾಂಶ ಆಧರಿಸಿ ಸಮೀಕ್ಷೆ ನಡೆಸಿದ ಸಮಿತಿಯು, ಪಶ್ಚಿಮ ಘಟ್ಟಗಳು ಹಾದುಹೋಗುವ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ಸುಮಾರು ಶೇ.37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವಂತೆ ಶಿಫಾರಸು ಮಾಡಿತು.
ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಆರು ರಾಜ್ಯಗಳಿಗೂ ಕಳುಹಿಸಿ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಯಿತು. ಇದಕ್ಕೂ ಮೊದಲು ಪರಿಸರ ವಿಜ್ಞಾನಿ ಹಾಗೂ ಸೆಂಟರ್ ಫಾರ್ ಎಕಾಲಜಿಕಲ್ ಸೈನ್ಸಸ್‌ನ ಸಂಸ್ಥಾಪಕ ಮಾಧವ್ ಗಾಡ್ಗಿಲ್ ಅವರು ಪಶ್ಚಿಮ ಘಟ್ಟಗಳ ಕುರಿತು 2011ರಲ್ಲಿ ನೀಡಿದ್ದ ವರದಿಯನ್ನು ರಾಜ್ಯಗಳು ತಿರಸ್ಕರಿಸಿದ್ದವು.
ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಕಾರ್ಯಪಡೆ(HLWG) 59,940 ಚದರ ಕಿ.ಮೀ. ಪ್ರದೇಶ ಹಾಗೂ 1,500 ಕಿ.ಮೀ. ಉದ್ದಕ್ಕೂ ಹರಡಿರುವ ನಿರಂತರ ನೈಸರ್ಗಿಕ ಸಸ್ಯವರ್ಗದ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು.
ಆರು ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯಲು ಮೊದಲ ಕರಡು ಅಧಿಸೂಚನೆಯನ್ನು 2014ರ ಮಾರ್ಚ್ 10ರಂದು ಹೊರಡಿಸಲಾಯಿತು. ಉನ್ನತ ಮಟ್ಟದ ಕಾರ್ಯಪಡೆ ರಚನೆಯಾದ ಬಳಿಕ ರಾಜ್ಯ ಸರ್ಕಾರಗಳೊಂದಿಗೆ ನಡೆದ ಹಲವು ಸಭೆಗಳು ಮತ್ತು ಪತ್ರವ್ಯವಹಾರಗಳ ನಂತರ ಈ ಅಧಿಸೂಚನೆ ಹೊರಬಂದಿತ್ತು.
ನಂತರ ವರ್ಷಗಳಲ್ಲಿ ಒಟ್ಟು ಆರು ಕರಡು ಅಧಿಸೂಚನೆಗಳನ್ನು ಹೊರಡಿಸಲಾಯಿತು. ಪರಿಸರ ಸೂಕ್ಷ್ಮ ಪ್ರದೇಶದ ಗಡಿಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಂದ ಬಂದ ಅಭಿಪ್ರಾಯ ಮತ್ತು ಸಲಹೆಗಳ ಆಧಾರದ ಮೇಲೆ ಪ್ರತಿ ಕರಡನ್ನೂ ಪರಿಷ್ಕರಿಸಲಾಯಿತು.
ಪ್ರಕಟಿತ ಕರಡುಗಳಲ್ಲಿನ ವ್ಯತ್ಯಾಸಗಳು ಹಾಗೂ ಮಾಹಿತಿ ಕೊರತೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳು ಎತ್ತಿದ ಸಮಸ್ಯೆಗಳನ್ನು ಪರಿಹರಿಸಲು ಹೆಚ್ ಎಲ್ ಡಬ್ಲ್ಯುಜಿ 2022ರಿಂದ 2024ರವರೆಗೆ ಹಲವು ಸಭೆಗಳನ್ನೂ ನಡೆಸಿತು.
2026ರ ಜುಲೈ 27ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(MoEFCC) 7ನೇ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ರಾಜ್ಯಗಳು ಮತ್ತು ಸಾರ್ವಜನಿಕರಿಗೆ 60 ದಿನಗಳ ಕಾಲಾವಕಾಶ ನೀಡಿತು.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದ ಮೇರೆಗೆ ಈ ಅಧಿಸೂಚನೆ ಹೊರಡಿಸಲಾಯಿತು. ರಾಜ್ಯಗಳು ಆಕ್ಷೇಪಣೆ ಸಲ್ಲಿಸಲು ನೀಡಲಾಗಿದ್ದ ಗಡುವು 2026ರ ಸೆಪ್ಟೆಂಬರ್ 27ರಂದು ಮುಕ್ತಾಯಗೊಂಡಿತು.
ವಿಶೇಷ ಸಮಿತಿ ಏಕೆ ರಚಿಸಲಾಯಿತು? ಒಂದು ವರ್ಷದ ಹೆಚ್ಚುವರಿ ಕಾಲಾವಕಾಶ ಏಕೆ ನೀಡಲಾಯಿತು?
ಪಶ್ಚಿಮ ಘಟ್ಟದ 6 ರಾಜ್ಯಗಳಲ್ಲಿನ ಉನ್ನತ ಮಟ್ಟದ ಕಾರ್ಯಪಡೆ- HLWG ಗುರುತಿಸಿರುವ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಸಮಗ್ರ ಸ್ಥಳ ಪರಿಶೀಲನೆ ನಡೆಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ MoEFCC 2022ರಲ್ಲಿ ಅರಣ್ಯಗಳ ಮಾಜಿ ಮಹಾನಿರ್ದೇಶಕ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಜ್ಞರ ಸಮಿತಿಯನ್ನು ರಚಿಸಿತು.
ಈ ತಂಡವು ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ ಅಧಿಕಾರಿಗಳು, ತಜ್ಞರು, ಸಾರ್ವಜನಿಕರು ಹಾಗೂ ಇತರ ಪಾಲುದಾರರ ಅಭಿಪ್ರಾಯಗಳನ್ನು ದಾಖಲಿಸಿತು. ಆದರೆ ರಾಜ್ಯ ಸರ್ಕಾರಗಳ ಸಹಕಾರದ ಕೊರತೆ ಹಾಗೂ ವಿರೋಧದಿಂದಾಗಿ ತಂಡಕ್ಕೆ ವರದಿಯನ್ನು ಪೂರ್ಣಗೊಳಿಸಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮ ವರದಿ ಸಲ್ಲಿಸಲು ಸಮಿತಿಗೆ 2027ರ ಜುಲೈವರೆಗೆ ಒಂದು ವರ್ಷದ ವಿಸ್ತರಣೆ ನೀಡಲಾಗಿದೆ.
ಆದರೆ ಈ ವಿಸ್ತರಿತ ಗಡುವಿನೊಳಗೆ ವರದಿ ಸಲ್ಲಿಕೆಯಾಗಲಿದೆಯೇ ಎಂಬ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಕಳೆದ ಸೆಪ್ಟೆಂಬರ್ 22ರಂದು ಕರ್ನಾಟಕ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆಯನ್ನು ಸರ್ವಾನುಮತದಿಂದ ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಬೇಕಾದ ಪ್ರದೇಶಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಲು ಸ್ಥಳ ಪರಿಶೀಲನೆ ನಡೆಸಲು ಒಂದು ವರ್ಷದ ಕಾಲಾವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಕೋರಿದೆ.
7ನೇ ಕರಡು ಅಧಿಸೂಚನೆಯಲ್ಲಿ ಪ್ರತಿ ರಾಜ್ಯದಲ್ಲಿ ಎಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ESA ಎಂದು ಗುರುತಿಸಲಾಗಿದೆ?
ಕರಡು ಅಧಿಸೂಚನೆಯ ಪ್ರಕಾರ ಒಟ್ಟು 56,825.7 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.
ಇದರಲ್ಲಿ ಅತಿ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಪಶ್ಚಿಮ ಘಟ್ಟಗಳ ಅತಿ ದೊಡ್ಡ ಭಾಗ ಕರ್ನಾಟಕದಲ್ಲಿದ್ದು, ಇಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು ESA ವ್ಯಾಪ್ತಿಗೆ ಸೇರಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (17,340 ಚದರ ಕಿ.ಮೀ.), ಕೇರಳ (9,993.7 ಚದರ ಕಿ.ಮೀ.), ತಮಿಳುನಾಡು (6,914 ಚದರ ಕಿ.ಮೀ.), ಗೋವಾ (1,461 ಚದರ ಕಿ.ಮೀ.) ಮತ್ತು ಗುಜರಾತ್ (449 ಚದರ ಕಿ.ಮೀ.) ಇವೆ.
ರಾಜ್ಯ ಸರ್ಕಾರಗಳ ಆಕ್ಷೇಪಗಳೇನು?
ಕಸ್ತೂರಿರಂಗನ್ ವರದಿ ಜಾರಿಗೆ ರಾಜ್ಯಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನಡೆಸದೆ ಕೇವಲ ಉಪಗ್ರಹ ಚಿತ್ರಗಳ ದತ್ತಾಂಶವನ್ನು ಬಳಸಲಾಗಿದೆ ಎಂಬುದು ರಾಜ್ಯಗಳ ಪ್ರಮುಖ ಆಕ್ಷೇಪವಾಗಿದೆ. ಪ್ರದೇಶ ಹಾಗೂ ಸ್ಥಳೀಯ ಜನರ ಸಮಗ್ರ ಮತ್ತು ಒಳಗೊಳ್ಳುವ ಅಭಿವೃದ್ಧಿಗಿಂತ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದೂ ರಾಜ್ಯಗಳು ಹೇಳಿವೆ.
ಉಪಗ್ರಹ ದತ್ತಾಂಶವು ಅರಣ್ಯ ಪ್ರದೇಶ, ತೋಟಗಳು, ಕೃಷಿ ಭೂಮಿ ಮತ್ತು ಇತರ ಹಸಿರು ಪ್ರದೇಶಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವುದಿಲ್ಲ ಎಂದು ರಾಜ್ಯಗಳು ವಾದಿಸಿವೆ. ಗ್ರಾಮಗಳ ಗಡಿಗಳು ಮತ್ತು ಅರಣ್ಯಗಳ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿಲ್ಲ. ಅಲ್ಲದೆ, ನೆಲಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳ ವಾಸ್ತವಾಂಶವನ್ನೂ ಪರಿಗಣಿಸಲಾಗಿಲ್ಲ ಎಂದು ಅವು ಹೇಳಿವೆ.
ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ಸಂಬಂಧಪಟ್ಟವರ, ವಿಶೇಷವಾಗಿ ಗ್ರಾಮಸ್ಥರ ಅಭಿಪ್ರಾಯಗಳನ್ನು ಪರಿಗಣಿಸಿಲ್ಲ ಎಂಬುದು ರಾಜ್ಯಗಳ ಮತ್ತೊಂದು ಆಕ್ಷೇಪವಾಗಿದೆ.
ಅಂತಿಮ ಅಧಿಸೂಚನೆ ಹೊರಬಂದ ಬಳಿಕ ಸ್ಥಳಾಂತರಗೊಳ್ಳಬೇಕಾದ ಅರಣ್ಯವಾಸಿಗಳು ಹಾಗೂ ಸ್ಥಳೀಯರಿಗೆ ಯಾವುದೇ ಆರ್ಥಿಕ ಪರಿಹಾರ ಅಥವಾ ಪರ್ಯಾಯ ಜೀವನೋಪಾಯದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕರಡಿನಲ್ಲಿ ಯಾವುದೇ ಅವಕಾಶವಿಲ್ಲ ಎಂದೂ ರಾಜ್ಯಗಳು ವಾದಿಸಿವೆ. ಆದರೆ ಪಶ್ಚಿಮ ಘಟ್ಟಗಳ ಗುರುತಿಸಲಾದ ESA ವ್ಯಾಪ್ತಿಯ ವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಸ್ಥಳೀಯರನ್ನು ಸ್ಥಳಾಂತರಿಸುವ ಅಥವಾ ಅವರ ವಾಸಸ್ಥಳ ಬದಲಾಯಿಸುವ ಯಾವುದೇ ಉದ್ದೇಶವಿಲ್ಲ ಎಂದು HLWG ತಿಳಿಸಿದೆ.
ಇದು ದಶಕದಷ್ಟು ಹಳೆಯ ಕೇಂದ್ರ-ರಾಜ್ಯ ಬಿಕ್ಕಟ್ಟನ್ನು ಬಹಿರಂಗಪಡಿಸುತ್ತಿದೆಯೇ?
ಕರಡು ಅಧಿಸೂಚನೆಗಳನ್ನು ಪದೇಪದೇ ಹೊರಡಿಸುವುದು ಹಾಗೂ ವರದಿಯನ್ನು ಅಂತಿಮಗೊಳಿಸಲು ಅಥವಾ ಸಂಪೂರ್ಣವಾಗಿ ತಿರಸ್ಕರಿಸಲು ಕಾಲಾವಕಾಶ ವಿಸ್ತರಿಸುತ್ತಿರುವುದು, ಈ ಹಿಂದೆ ಗಾಡ್ಗಿಲ್ ವರದಿ ವಿಚಾರದಲ್ಲೂ ಕಂಡುಬಂದಂತೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ನಡುವಿನ ದೀರ್ಘಕಾಲದ ಭಿನ್ನಾಭಿಪ್ರಾಯವನ್ನು ತೋರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಹಿಂದಿನ ಕರಡುಗಳ ಸಂದರ್ಭದಲ್ಲಿ ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಕೇಂದ್ರದಿಂದ ಕಾಲಾವಕಾಶ ಕೋರಿದ್ದವು. ಬಳಿಕ ಎರಡೂ ರಾಜ್ಯಗಳು ಸ್ಥಳ ಪರಿಶೀಲನೆ ನಡೆಸಿ, ESA ಎಂದು ಘೋಷಿಸಬೇಕಾದ ಪ್ರದೇಶಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದವು.
ಆದರೆ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆದಿಲ್ಲ. ಸ್ಥಳ ಪರಿಶೀಲನೆಗೆ ಮತ್ತೆ ಒಂದು ವರ್ಷದ ಕಾಲಾವಕಾಶ ಕೋರುತ್ತಿರುವುದು ಕಸ್ತೂರಿರಂಗನ್ ವರದಿ ಜಾರಿಯನ್ನು ಮತ್ತಷ್ಟು ವಿಳಂಬಗೊಳಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ವಿಶೇಷವಾಗಿ 2028ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವಿಳಂಬ ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದೆ ಎನ್ನುತ್ತಾರೆ.
7ನೇ ಕರಡು ಅಧಿಸೂಚನೆಯಲ್ಲಿ ಕೇರಳದ ಕ್ರಮವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಕೇರಳವು ಭೌತಿಕ ಪರಿಶೀಲನೆ ಮೂಲಕ ತನ್ನ ESA ಪ್ರದೇಶಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಿದೆ. ಕೇರಳವು ಒಟ್ಟು 9,993.7 ಚದರ ಕಿ.ಮೀ. ಪ್ರದೇಶವನ್ನು ESA ವ್ಯಾಪ್ತಿಗೆ ಸೇರಿಸುವಂತೆ ಶಿಫಾರಸು ಮಾಡಿದೆ. ಇದರಲ್ಲಿ 9,107 ಚದರ ಕಿ.ಮೀ. ಅರಣ್ಯ ಪ್ರದೇಶ ಹಾಗೂ 886.7 ಚದರ ಕಿ.ಮೀ. ಅರಣ್ಯೇತರ ಪ್ರದೇಶ ಸೇರಿದೆ. HLWG ಶಿಫಾರಸು ಮಾಡಿದ್ದ 13,108 ಚದರ ಕಿ.ಮೀ. ಪ್ರದೇಶಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ.
ಕಸ್ತೂರಿರಂಗನ್ ವರದಿ ವಿಚಾರದಲ್ಲಿನ ಬಿಕ್ಕಟ್ಟಿನ ಪರಿಣಾಮವನ್ನು ವಿವರಿಸಿದ ತಜ್ಞರು, 2014ರಿಂದ ಸ್ಥಳ ಪರಿಶೀಲನೆ ಪೂರ್ಣಗೊಳಿಸದ ಏಕೈಕ ರಾಜ್ಯ ಕರ್ನಾಟಕವಾಗಿದೆ. ಈ ದೀರ್ಘ ವಿಳಂಬವನ್ನು ಆಧರಿಸಿ ಕರ್ನಾಟಕ ಸರ್ಕಾರದ ನಿರಂತರ ವಿಳಂಬದ ಕುರಿತು MoEFCC ಸುಪ್ರೀಂ ಕೋರ್ಟ್ ಮತ್ತು ಎನ್‌ಜಿಟಿಗೆ ಮಾಹಿತಿ ನೀಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಎನ್‌ಜಿಟಿ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಕರ್ನಾಟಕಕ್ಕೆ ಶಿಫಾರಸು ಮಾಡಲಾದ ಕರಡನ್ನು ಜಾರಿಗೆ ತರಲು MoEFCCಗೆ ನಿರ್ದೇಶನ ನೀಡಬಹುದು.
ಉಳಿದ ಐದು ರಾಜ್ಯಗಳು ನೀಡಿರುವ ಸಲಹೆಗಳನ್ನು ಪರಿಗಣಿಸಿ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಲು ಸೂಚಿಸುವ ಸಾಧ್ಯತೆಯೂ ಇದೆ. ಮತ್ತೊಂದೆಡೆ, ಕರ್ನಾಟಕ ಸರ್ಕಾರದ ಮನವಿಯನ್ನು ಪರಿಗಣಿಸಿ ನ್ಯಾಯಾಲಯ ಅಥವಾ ನ್ಯಾಯಮಂಡಳಿ ಗಡುವು ವಿಸ್ತರಿಸಬಹುದು. ಆದರೆ ಈ ಬಾರಿ ಅನುಸರಣೆಗಾಗಿ ಕಟ್ಟುನಿಟ್ಟಿನ ಕಾಲಮಿತಿಯನ್ನೂ ವಿಧಿಸುವ ಸಾಧ್ಯತೆಯಿದೆ.
ವರದಿ ಜಾರಿಗೆ ಸಂಬಂಧಿಸಿದಂತೆ ಕೊನೆಯ ರಾಜ್ಯಗಳಲ್ಲಿ ಒಂದಾದ ಕರ್ನಾಟಕವು ಸೆಪ್ಟೆಂಬರ್ 22ರಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಿದೆ. ಕೇಂದ್ರ ಸರ್ಕಾರ ಇದುವರೆಗೆ ಪ್ರತಿಕ್ರಿಯಿಸಿಲ್ಲ. 13 ವರ್ಷಗಳ ಕಾಲ ವಿಳಂಬ ಮಾಡಿದ ಬಳಿಕವೂ ಕೇಂದ್ರವು ಸ್ಥಳ ಪರಿಶೀಲನೆ ನಡೆಸಲು ಹಾಗೂ ESA ವ್ಯಾಪ್ತಿಗೆ ಸೇರಿಸಬೇಕಾದ ಪ್ರದೇಶಗಳು ಮತ್ತು ಗ್ರಾಮಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡುವ ರಾಜ್ಯದ ಬೇಡಿಕೆಯನ್ನು ಒಪ್ಪಲಿದೆ ಎಂಬ ವಿಶ್ವಾಸ ಕರ್ನಾಟಕಕ್ಕಿದೆ.
ಸ್ಥಳೀಯ ಸಮುದಾಯಗಳ ಬದುಕುಳಿವಿಗೆ ಪರಿಸರ ಮತ್ತು ಆರ್ಥಿಕತೆಯ ನಡುವೆ ಸಮತೋಲನ ಹೇಗೆ ಸಾಧಿಸಬೇಕು? ಕಲ್ಲು ಗಣಿಗಾರಿಕೆ ಮತ್ತು ಪ್ರವಾಸೋದ್ಯಮದ ಆತಂಕಗಳೇನು?
ESA ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವಂತೆ ಕಸ್ತೂರಿರಂಗನ್ ವರದಿ ಶಿಫಾರಸು ಮಾಡಿರುವುದು ರಾಜ್ಯಗಳ ಪ್ರಮುಖ ವಿರೋಧಕ್ಕೆ ಕಾರಣವಾಗಿದೆ. ಅಂತಿಮ ESA ಅಧಿಸೂಚನೆ ಹೊರಡಿಸಿದ ದಿನದಿಂದ ಐದು ವರ್ಷಗಳೊಳಗೆ ಅಥವಾ ಅಸ್ತಿತ್ವದಲ್ಲಿರುವ ಗಣಿಗಾರಿಕೆ ಗುತ್ತಿಗೆ ಅವಧಿ ಮುಗಿದ ಬಳಿಕ, ಎಲ್ಲಾ ಅಸ್ತಿತ್ವದಲ್ಲಿರುವ ಗಣಿಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸುವಂತೆ ಕರಡು ಸೂಚಿಸಿದೆ.
ಅಲ್ಲದೆ, ESA ಪ್ರದೇಶಗಳಲ್ಲಿ ಹೊಸ ಉಷ್ಣ ವಿದ್ಯುತ್ ಯೋಜನೆಗಳಿಗೆ ಅಥವಾ ಅಸ್ತಿತ್ವದಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಕರಡು ಹೇಳಿದೆ. ಮಾಲಿನ್ಯಕಾರಕ ‘ಕೆಂಪು ವರ್ಗ’ದ ಕೈಗಾರಿಕೆಗಳ ಕಾರ್ಯಾಚರಣೆಯನ್ನೂ ನಿಷೇಧಿಸಲಾಗಿದೆ. 20,000 ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣದ ಅಭಿವೃದ್ಧಿ ಯೋಜನೆಗಳು, ಟೌನ್‌ಶಿಪ್‌ಗಳು ಹಾಗೂ ನಿರ್ಮಾಣ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ.
ಇದರಿಂದ ಸ್ಥಳೀಯರು ಹಾಗೂ ಒಟ್ಟಾರೆ ರಾಜ್ಯದ ಆರ್ಥಿಕ ಅವಕಾಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯಗಳು ವಾದಿಸಿವೆ.
ಅರಣ್ಯ ಪ್ರದೇಶಗಳ ಸಂರಕ್ಷಣೆ ಹಾಗೂ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ನೆಲಮಟ್ಟದ ವಾಸ್ತವಾಂಶ ಮತ್ತು ಬೆಳೆಯುತ್ತಿರುವ ಆರ್ಥಿಕತೆಯನ್ನು ಆಧರಿಸಿ ವರದಿಯನ್ನು ಪರಿಷ್ಕರಿಸಬೇಕು ಎಂದು ರಾಜ್ಯಗಳು ಸೂಚಿಸಿವೆ.
ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಗೆ ನಿರ್ಬಂಧ ವಿಧಿಸುವುದನ್ನು ಒಪ್ಪಿಕೊಂಡಿರುವ ರಾಜ್ಯಗಳು, ಅವುಗಳನ್ನು ಸಂಪೂರ್ಣವಾಗಿ ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಸಮಗ್ರ ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರಗಳು ಹಾಗೂ ವಿವಿಧ ಪಾಲುದಾರರು ಒತ್ತಾಯಿಸಿದ್ದಾರೆ.
ಅರಣ್ಯ ಪ್ರದೇಶಗಳ ಸುತ್ತ ಪರಿಸರ ಪ್ರವಾಸೋದ್ಯಮ ಸೇರಿದಂತೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಸ್ಥಳೀಯರ ಜೀವನೋಪಾಯಕ್ಕೆ ಬೆಂಬಲ ನೀಡಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ. ಪ್ರವಾಸೋದ್ಯಮವು ಜನರನ್ನು ಅರಣ್ಯ ಪ್ರದೇಶಗಳತ್ತ ಸೆಳೆಯುವುದರ ಜತೆಗೆ ಹಲವು ಕ್ಷೇತ್ರಗಳಲ್ಲಿ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸರ್ಕಾರಗಳು ಹೇಳಿವೆ. ಇದು ಪ್ರದೇಶದ ಸಮಗ್ರ ಅಭಿವೃದ್ಧಿಗೆ ನೆರವಾಗುವುದರ ಜತೆಗೆ, ಜನರ ಜೀವನೋಪಾಯದ ಮಾರ್ಗಗಳಲ್ಲಿ ಹಂತ ಹಂತವಾಗಿ ಬದಲಾವಣೆ ತರಲು ಹಾಗೂ ಸ್ಥಳಾಂತರದ ಆತಂಕವನ್ನು ಪರಿಹರಿಸಲು ಸಹಕಾರಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates

