ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್‌ಬಂದ್‌ ಸ್ಫೂರ್ತಿದಾಯಕ ಮಾದರಿ ಪಯಣ

55ರ ಹರೆಯದ ಸಾಹೇಬಲಾಲ್‌ ಅವರು ಪ್ರತಿದಿನ ಸುಮಾರು ಐದು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದು, ದೈಹಿಕವಾಗಿ ಸದೃಢವಾಗಿರಲು ಶ್ರಮಿಸುತ್ತಿದ್ದಾರೆ. ಅವರ ಫಿಟ್‌ನೆಸ್‌ ಪಯಣ ಆರಂಭವಾಗಿದ್ದು ಬಾಡಿಬಿಲ್ಡರ್‌ ಆಗಬೇಕೆಂಬ ಕನಸಿನಿಂದಲ್ಲ. ತೂಕ ಇಳಿಸಿಕೊಳ್ಳಬೇಕೆಂಬ ಸರಳ ಉದ್ದೇಶದಿಂದ.
Sahebalal Chapparband, Professional bodybuilder
ಸಾಹೇಬಲಾಲ್ ಛಪ್ಪರ್‌ಬಂದ್‌, ವೃತ್ತಿಪರ ಬಾಡಿಬಿಲ್ಡರ್
Updated on: 

ವಿಜಯಪುರ: ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡು, ಕಠಿಣ ವ್ಯಾಯಾಮದಿಂದ ದೂರ ಸರಿದು, ಹೆಚ್ಚು ಶ್ರಮವಿಲ್ಲದ ಜೀವನಶೈಲಿಗೆ ಹೊಂದಿಕೊಳ್ಳುವವರು ಹಲವರು. ಆದರೆ ನಿಡಗುಂದಿ ಮೂಲದ ಜಿಮ್‌ ತರಬೇತುದಾರ ಸಾಹೇಬಲಾಲ್ ಛಪ್ಪರ್‌ಬಂದ್‌ ಅವರ ಜೀವನಶೈಲಿ ಇದಕ್ಕೆ ತದ್ವಿರುದ್ಧವಾಗಿದೆ.

55ರ ಹರೆಯದ ಸಾಹೇಬಲಾಲ್‌ ಅವರು ಪ್ರತಿದಿನ ಸುಮಾರು ಐದು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದು, ದೈಹಿಕವಾಗಿ ಸದೃಢವಾಗಿರಲು ಶ್ರಮಿಸುತ್ತಿದ್ದಾರೆ. ಅವರ ಫಿಟ್‌ನೆಸ್‌ ಪಯಣ ಆರಂಭವಾಗಿದ್ದು ಬಾಡಿಬಿಲ್ಡರ್‌ ಆಗಬೇಕೆಂಬ ಕನಸಿನಿಂದಲ್ಲ. ತೂಕ ಇಳಿಸಿಕೊಳ್ಳಬೇಕೆಂಬ ಸರಳ ಉದ್ದೇಶದಿಂದ.

ವರ್ಷಗಳ ಕಠಿಣ ವ್ಯಾಯಾಮ ಮತ್ತು ಶಿಸ್ತಿನ ಆಹಾರಕ್ರಮದ ಬಳಿಕ 105 ಕೆಜಿ ತೂಕವಿದ್ದ ಸಾಹೇಬಲಾಲ್‌ ಅವರು ಈಗ ಸ್ಪರ್ಧಾತ್ಮಕ ಬಾಡಿಬಿಲ್ಡರ್‌ ಆಗಿ ರೂಪುಗೊಂಡಿದ್ದಾರೆ. ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಪದಕಗಳನ್ನೂ ಗೆದ್ದಿದ್ದಾರೆ.

Sahebalal Chapparband, Professional bodybuilder
ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ, ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!

ಅವರು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಸೆಪ್ಟೆಂಬರ್‌ 22ರಂದು ಆರಂಭವಾದ ಬ್ಯಾಂಕಾಕ್‌ನ 58ನೇ ಏಷ್ಯನ್‌ ಬಾಡಿಬಿಲ್ಡಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 50ರಿಂದ 60 ವರ್ಷ ವಯೋಮಾನದ 80 ಕೆಜಿಗೂ ಅಧಿಕ ತೂಕದ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸಾಹೇಬಲಾಲ್‌, ಇಂಡಿಯನ್‌ ಬಾಡಿಬಿಲ್ಡಿಂಗ್‌ ಫೆಡರೇಷನ್‌ ಆಯೋಜಿಸಿರುವ ಈ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.

ಸಣ್ಣ ಪಟ್ಟಣದ ಉದ್ಯಮಿ ಹಾಗೂ ಸ್ವಯಂ ತರಬೇತಿ ಪಡೆದ ಬಾಡಿಬಿಲ್ಡರ್‌ ಆಗಿರುವ ಸಾಹೇಬಲಾಲ್‌ ಸೀಮಿತ ಸಂಪನ್ಮೂಲಗಳ ನಡುವೆಯೇ ಈ ಸಾಧನೆ ಮಾಡಿದ್ದಾರೆ. ಹಲವು ವರ್ಷಗಳ ಪರಿಶ್ರಮಕ್ಕೆ ಇದು ದೊರೆತಿರುವ ಮಹತ್ವದ ಗೌರವವಾಗಿದೆ.

ಸುಮಾರು 48ನೇ ವಯಸ್ಸಿನಲ್ಲಿ ಸಾಹೇಬಲಾಲ್‌ ತೂಕ ಇಳಿಸಿಕೊಳ್ಳಲು ವ್ಯಾಯಾಮ ಆರಂಭಿಸಿದರು. ಆಗ ಅವರ ತೂಕ 105 ಕೆಜಿ ಇತ್ತು. ತೂಕ ಇಳಿಸಿಕೊಳ್ಳುವಂತೆ ಸ್ನೇಹಿತರು ಹಾಗೂ ಸಂಬಂಧಿಕರು ಸಲಹೆ ನೀಡುತ್ತಿದ್ದರು.

Sahebalal Chapparband, Professional bodybuilder
ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಬೆಂಗಳೂರಿನಲ್ಲಿ ಹೊಸ ನಿಯಂತ್ರಣ ಕೇಂದ್ರ ಆರಂಭ..!

ನಾನು ದಪ್ಪಗಿದ್ದ ಕಾರಣ ಸ್ನೇಹಿತರು ಮತ್ತು ಸಂಬಂಧಿಕರು ನನ್ನನ್ನು ಗೇಲಿ ಮಾಡುತ್ತಿದ್ದರು. ಇದರಿಂದ ತೂಕ ಇಳಿಸಿಕೊಳ್ಳಲು ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಜಿಮ್‌ಗೆ ಸೇರಿಕೊಂಡು ಆಹಾರ ಪದ್ಧತಿಯನ್ನೂ ಬದಲಿಸಿಕೊಂಡೆ. ಕೆಲವು ಕೆಜಿ ತೂಕ ಇಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆರಂಭವಾದ ಪ್ರಯತ್ನ ಕ್ರಮೇಣ ಕಠಿಣ ಜೀವನಶೈಲಿಯಾಗಿ ಬದಲಾಯಿತು ಎಂದು TNSEಗೆ ತಿಳಿಸಿದರು.

ಎಣ್ಣೆಯುಕ್ತ ಹಾಗೂ ಹೆಚ್ಚಿನ ಕ್ಯಾಲೊರಿಯ ಆಹಾರವನ್ನು ತ್ಯಜಿಸಿದ ಸಾಹೇಬಲಾಲ್‌, ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಶಿಸ್ತಿನ ಆಹಾರ ಕ್ರಮವನ್ನು ಪಾಲಿಸಿದರು. ಸಮಾರಂಭಗಳಲ್ಲಿಯೂ ಊಟ ಮಾಡುವುದನ್ನು ತಪ್ಪಿಸುತ್ತಿದ್ದರು.

ನಾನು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಫಲಿತಾಂಶ ದೊರೆಯಿತು. ಏಳು ತಿಂಗಳೊಳಗೆ 40 ಕೆಜಿ ತೂಕ ಕಳೆದುಕೊಂಡೆ. ಈ ಬದಲಾವಣೆ ನನಗೆ ಮಾತ್ರವಲ್ಲ, ನನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೂ ಅಚ್ಚರಿ ಮೂಡಿಸಿತು ಎಂದು ಹೇಳುತ್ತಾರೆ.

ತೂಕ ಇಳಿಕೆಯಿಂದ ಬಾಡಿಬಿಲ್ಡಿಂಗ್‌ವರೆಗೆ

ಸಾಹೇಬಲಾಲ್‌ ಅವರಿಗೆ ತೂಕ ಇಳಿಸಿಕೊಳ್ಳುವುದು ಕೇವಲ ಆರಂಭವಾಗಿತ್ತು. ಜಿಮ್‌ನಲ್ಲಿ ಯುವಕರು ಕಠಿಣವಾಗಿ ವ್ಯಾಯಾಮ ಮಾಡುವುದನ್ನು ನೋಡುತ್ತಿದ್ದ ಅವರು, ತಮ್ಮ ಫಿಟ್‌ನೆಸ್‌ ಪಯಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಆದರೆ ಬಾಡಿ ಬಿಲ್ಡಿಂಗ್‌ ಕೇವಲ ತೂಕ ಇಳಿಸಿಕೊಳ್ಳುವುದಕ್ಕಿಂತ ಸಂಪೂರ್ಣ ಭಿನ್ನ ಎಂಬುದು ಅವರಿಗೆ ಶೀಘ್ರದಲ್ಲೇ ಅರಿವಾಯಿತು.

ಇದು ಸಂಪೂರ್ಣ ಭಿನ್ನ. ಸ್ಪರ್ಧಾತ್ಮಕ ಮಟ್ಟದ ದೇಹಸೌಷ್ಠವ ಪಡೆಯಲು ಶಿಸ್ತು, ದೃಢಸಂಕಲ್ಪ ಮತ್ತು ಬದ್ಧತೆ ಅಗತ್ಯ. ಹೆಚ್ಚು ಪರಿಶ್ರಮಿಸಬೇಕು, ನಿರಂತರವಾಗಿ ತರಬೇತಿ ಪಡೆಯಬೇಕು ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಪಾಲಿಸಬೇಕು ಎಂದು ಹೇಳಿದರು.

51ನೇ ವಯಸ್ಸಿನಲ್ಲಿ ಅವರು ಬಾಡಿ ಬಿಲ್ಡಿಂಗ್‌ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದರು. ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ನಿರುತ್ಸಾಹಗೊಳ್ಳಲಿಲ್ಲ. ವೃತ್ತಿಪರ ಬಾಡಿ ಬಿಲ್ಡರ್‌ಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದೇ ದೊಡ್ಡ ಸಾಧನೆ ಎಂದು ಭಾವಿಸಿದರು.

ನನ್ನ ಮೊದಲ ಸ್ಪರ್ಧೆಯಲ್ಲಿ ಪದಕ ಗೆಲ್ಲಲಿಲ್ಲ. 51ನೇ ವಯಸ್ಸಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಯುವ ಸ್ಪರ್ಧಿಗಳು ಸೇರಿದಂತೆ ಹಲವರು ನನ್ನನ್ನು ಮೆಚ್ಚಿಕೊಂಡರು. ಅದು ಪ್ರಶಸ್ತಿ ಗೆದ್ದಿದ್ದಕ್ಕಿಂತಲೂ ನನಗೆ ಹೆಚ್ಚಿನ ಸಂತಸ ನೀಡಿತು ಎನ್ನುತ್ತಾರೆ.

ಅನೇಕ ವೃತ್ತಿಪರ ಬಾಡಿಬಿಲ್ಡರ್‌ಗಳಿಗೆ ವಿಶೇಷ ತರಬೇತುದಾರರು, ಪೌಷ್ಟಿಕ ತಜ್ಞರು ಹಾಗೂ ಅತ್ಯಾಧುನಿಕ ಜಿಮ್‌ಗಳ ಸೌಲಭ್ಯವಿರುತ್ತದೆ. ಆದರೆ ಸಾಹೇಬಲಾಲ್‌ ಸೀಮಿತ ಸಂಪನ್ಮೂಲಗಳಲ್ಲೇ ಸ್ವತಃ ತರಬೇತಿ ಪಡೆದಿದ್ದಾರೆ. ವ್ಯಾಯಾಮದ ತಂತ್ರಗಳನ್ನು ಕಲಿಯಲು ಮತ್ತು ಆರೋಗ್ಯಕರ ಆಹಾರಕ್ರಮದ ಬಗ್ಗೆ ತಿಳಿದುಕೊಳ್ಳಲು ಆನ್‌ಲೈನ್‌ ವಿಡಿಯೋಗಳು ಹಾಗೂ ಯೂಟ್ಯೂಬ್‌ ಚಾನೆಲ್‌ಗಳನ್ನು ಅವಲಂಬಿಸಿದ್ದಾರೆ.

ನಿಡಗುಂದಿಯಲ್ಲಿರುವ ಅವರ ಜಿಮ್‌ನಲ್ಲಿ ಮೂಲಭೂತ ಉಪಕರಣಗಳಷ್ಟೇ ಇವೆ. ಪ್ರತಿದಿನ ಬೆಳಗ್ಗೆ ಸುಮಾರು ಮೂರು ಗಂಟೆ ಹಾಗೂ ಸಂಜೆ ಎರಡು ಗಂಟೆ ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಾರೆ.

ಕರ್ನಾಟಕ ಬಾಡಿ ಬಿಲ್ಡರ್ಸ್‌ ಅಸೋಸಿಯೇಷನ್‌ ಆಯೋಜಿಸಿರುವ 40ಕ್ಕೂ ಹೆಚ್ಚು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಸಾಹೇಬಲಾಲ್‌ ಭಾಗವಹಿಸಿದ್ದಾರೆ. ನಾಲ್ಕು ಬಾರಿ ಮೊದಲ ಸ್ಥಾನ ಗಳಿಸಿದ್ದು, ಹಲವು ಸ್ಪರ್ಧೆಗಳಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ತೆಲಂಗಾಣದ ಕರೀಂನಗರದಲ್ಲಿ ಇಂಡಿಯನ್‌ ಬಾಡಿಬಿಲ್ಡಿಂಗ್‌ ಫೆಡರೇಷನ್‌ ಆಯೋಜಿಸಿದ್ದ 16ನೇ ರಾಷ್ಟ್ರೀಯ ಬಾಡಿಬಿಲ್ಡಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2023ರಲ್ಲಿ ಮಧ್ಯಪ್ರದೇಶದ ರತ್ಲಾಂನಲ್ಲಿ ನಡೆದ 13ನೇ ಮಿಸ್ಟರ್‌ ಇಂಡಿಯಾ ಸ್ಪರ್ಧೆಯ ಮಾಸ್ಟರ್ಸ್‌ ವಿಭಾಗದಲ್ಲೂ ಕಂಚಿನ ಪದಕ ಪಡೆದಿದ್ದಾರೆ.

ಮಕ್ಕಳಿಗಿಂತಲೂ ಕಿರಿಯರಂತೆ ಕಾಣುತ್ತಾರೆ!

ಸಾಹೇಬಲಾಲ್‌ ಅವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬರು ನಿಡಗುಂದಿಯಲ್ಲೇ ಸಣ್ಣ ಉದ್ಯಮ ನಡೆಸುತ್ತಿದ್ದಾರೆ.

ಒಮ್ಮೆ ತಮ್ಮನ್ನು ಗೇಲಿ ಮಾಡುತ್ತಿದ್ದ ಸ್ನೇಹಿತರೇ ಇದೀಗ ಅವರ ಮಕ್ಕಳಿಗೆ, ನಿಮ್ಮ ತಂದೆ ನಿಮಗಿಂತಲೂ ಚಿಕ್ಕವರಂತೆ ಕಾಣುತ್ತಾರೆ ಎಂದು ಹೇಳುತ್ತಾರೆ. 40 ವರ್ಷ ದಾಟಿದವರಿಗೆ ತಮ್ಮ ಅನುಭವ ಪ್ರೇರಣೆಯಾಗಬಹುದು ಎಂದು ಸಾಹೇಬಲಾಲ್‌ ನಂಬಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com