ಜೆಮ್ಷೆಡ್ಪುರ: ನಕಲಿ ದಾಖಲೆಗಳನ್ನು ನೀಡಿದ ಹಿನ್ನಲೆಯಲ್ಲಿ 16 ವರ್ಷದೊಳಗಿನ 33 ಕಿರಿಯ ಆಟಗಾರರಿಗೆ ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಜೆಎಸ್ಸಿಎ) 2 ವರ್ಷಗಳ ಕಾಲ ಅಮಾನತ್ತುಗೊಳಿಸುವ ಮೂಲಕ ಶಿಕ್ಷೆ ವಿಧಿಸಿದೆ.
ನಕಲಿ ವಯೋವುತಿ ಪ್ರಮಾಣ ಪತ್ರ ನೀಡಿದ ಹಿನ್ನಲೆಯಲ್ಲಿ ಈ 33 ಆಟಗಾರರನ್ನು ಎರಡು ವರ್ಷಗಳ ಕಾಲ ಅಮಾನತ್ತುಗೊಳಿಸಲಾಗಿದೆ ಎಂದು ಜೆಎಸ್ಸಿಎನ ಪಂದ್ಯಾವಳಿ ಸಮಿತಿಯ ಸಂಚಾಲಕ ಆಸಿಮ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಿಸಿಸಿಐ ವೈದ್ಯಕೀಯ ಸಮಿತಿಯು 52 ಕಿರಿಯ ಆಟಗಾರರ ವಯಸ್ಸನ್ನು ಪರಿಶೀಲಿಸಿದ್ದು, ಇದರಲ್ಲಿ ಕೇವಲ 19 ಆಟಗಾರರು ಉತ್ತೀರ್ಣರಾಗಿದ್ದು, ಉಳಿದ ಆಟಗಾರರು 16 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ ಎಂದು ಸಿಂಗ್ ತಿಳಿಸಿದರು.
ಪಂದ್ಯಾವಳಿ ಸಮಿತಿಯು ಭಾನುವಾರ ನಡೆಸಿದ ಸಭೆಯಲ್ಲಿ ಈ ಆಟಗಾರರಿಗೆ 5 ವರ್ಷಗಳ ಕಾಲ ಅಮಾನತ್ತುಗೊಳಿಸಲು ನಿರ್ಧರಿಸಿತ್ತು.
ಆದರೆ ಈ ಆಟಗಾರರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷೆಯ ಪ್ರಮಾಣವನ್ನು ಎರಡು ವರ್ಷಕ್ಕೆ ಇಳಿಸಲಾಗಿದೆ ಎಂದು ಸಿಂಗ್ ಹೇಳಿದರು.