

ಫಾಲ್ಕನರ್ಗೆ 4 ವಿಕೆಟ್, ಆಸೀಸ್ಗೆ ಸರಣಿ ಜಯ
ಕ್ಯಾನ್ಬೆರ್ರಾ: ಕೆಲ ತಿಂಗಳುಗಳ ಕಾಲ ಗಾಯದ ಸಮಸ್ಯೆಯಿಂದ ಬಳಲಿ ಈಗ ಚೇತರಿಕೆ ಕಂಡು ಮತ್ತೆ ಕಣಕ್ಕಿಳಿದಿರುವ ಆಸೀಸ್ನ ಆಲ್ರೌಂಡರ್ ಶೇನ್ ವಾಟ್ಸನ್, ತಂಡಕ್ಕೆ ಮರಳಿದ ಮೊದಲ ಪಂದ್ಯದಲ್ಲೇ ಶತಕ ದಾಖಲಿಸುವ ಮೂಲಕ ತಮ್ಮ ಅದ್ಭುತ ಫಾರ್ಮ್ಗೆ ಮರಳಿರುವ ಸೂಚನೆ ನೀಡಿದ್ದಾರೆ.
ವಿಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಮತ್ತೆ ತಂಡಕ್ಕೆ ಮರಳಿದ ಶೇನ್ ವಾಟ್ಸನ್ ಕೇವಲ 111 ಎಸೆತದಲ್ಲಿ 12 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಸ್ಫೋಟಕ 122 ರನ್ ದಾಖಲಿಸಿದರು.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತ ಆಟ ಪ್ರದರ್ಶಿಸಿದ ಆಸೀಸ್ನ ಆರಂಭಿಕ ಆಟಗಾರರು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರಂಭಿಕರಾಗಿ ಕಣಕ್ಕಿಳಿದ ಶೇನ್ ವಾಟ್ಸನ್ ಹಾಗೂ ಫಿಂಚ್ ತಂಡಕ್ಕೆ 15 ಓವರ್ಗಳಲ್ಲಿ 89 ರನ್ ಕಲೆ ಹಾಕುವ ಮೂಲಕ ಉತ್ತಮ ಆರಂಭ ದೊರಕಿಸಿ ಕೊಟ್ಟರು.
41 ಎಸೆತಗಳಲ್ಲಿ 38 ರನ್ಗಳಿಸಿ ಉತ್ತಮ ಆರಂಭ ಪಡೆದಿದ್ದ ಫಿಂಚ್, 16ನೇ ಓವರ್ನಲ್ಲಿ ವಿಡೀಸ್ ನಾಯಕ ಡಾರೆನ್ ಸಾಮಿ ಎಸೆತದಲ್ಲಿ ಬೇಜವಾಬ್ದಾರಿಯಾಗಿ ಬ್ಯಾಟ್ ಬೀಸಿದ ಪರಿಣಾಮ ವಿಕೆಟ್ ಕೀಪರ್ ಥಾಮಸ್ಗೆ ಕ್ಯಾಚ್ ನೀಡಿದರು.
ನಂತರ ವಾಟ್ಸನ್ ಜತೆಗೂಡಿದ ಫಿಲ್ ಹಗ್ಸ್ ಎರಡನೇ ವಿಕೆಟ್ಗೆ 112 ರನ್ಗಳ ಜತೆಯಾಟ ನೀಡಿದರು. ಈ ವೇಳೆ ಶತಕ ಸಿಡಿಸಿ ಸ್ಫೋಟಕ ಆಟಕ್ಕೆ ಮುಂದಾದ ಶೇನ್ ವಾಟ್ಸನ್ ತಂಡದ ಮೊತ್ತ 201 ಆಗಿದ್ದಾಗ ರೋಚ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ಬೌಂಡರಿ ಬಳಿ ಇದ್ದ ಪೊಲಾರ್ಡ್ಗೆ ಕ್ಯಾಚ್ ನೀಡಿದರು. ಇದೇ ಓವರ್ನಲ್ಲಿ 114 ಮೀಟರ್(374 ಅಡಿ)ನ ಭರ್ಜರಿ ಸಿಕ್ಸರ್ ಭಾರಿಸಿದ್ದರು.
ನಂತರ ಇನಿಂಗ್ಸ್ ಮುಂದುವರಿಸಿದ ಹಗ್ಸ್ 93 ಎಸೆತಗಳಲ್ಲಿ 86 ರನ್ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ವೇಳೆ ಬೇಯ್ಲಿ 22 ಎಸೆತದಲ್ಲಿ 44ರನ್ ಸಿಡಿಸಿ ತಂಡ 300ರ ಗಡಿದಾಟುವಂತೆ ಮಾಡಿದರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿತು.
ಕಾಂಗರೂ ಪಡೆ ನೀಡಿದ ಬೃಹತ್ ಗುರಿ ಬೆನ್ನತ್ತಿದ ವಿಂಡೀಸ್, ಮೊದಲ ಮೂರು ಓವರ್ಗಳಲ್ಲಿ ಕೇವಲ 1ರನ್ಗಳಿಸಿ ನಿಧಾನಗತಿಯ ಆಟಕ್ಕೆ ಮುಂದಾಯಿತು. ಕ್ರಿಸ್ ಗೇಲ್ ತಮ್ಮ ಪಕ್ಕೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿಲ್ಲ. ಆರಂಭಿಕರಾಗಿ ಇನಿಂಗ್ಸ್ ಆರಂಭಿಸಿದ ಪೊವೆಲ್ ಹಾಗೂ ಥಾಮಸ್ ನಿಧಾನಗತಿಯಾಗಿ ಇನಿಂಗ್ಸ್ ಆರಂಭಿಸಿದರೂ ನಂತರ ವೇಗವಾಗಿ ರನ್ಗಳಿಸಿದರು ಮೊದಲ ವಿಕೆಟ್ಗೆ ಈ ಜೋಡಿ 54 ರನ್ ಗಳಿಸಿತು. ಇನಿಂಗ್ಸ್ನ 8.4 ನೇ ಓವರ್ನಲ್ಲಿ ಮೆಕೆ ಎಸೆತದಲ್ಲಿ ಹಗ್ಸ್ಗೆ ಕ್ಯಾಚ್ ನೀಡುವ ಮೂಲಕ ಥಾಮಸ್ ತಮ್ಮ ಇನಿಂಗ್ಸ್ ಮುಗಿಸಿದರು.
ನಂತರ ಪೊವೆಲ್ ಕೂಡ ಮ್ಯಾಕ್ಸ್ವೆಲ್ ಎಸೆತದಲ್ಲಿ ವೇಡ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಜತೆಗೂಡಿದ ಬ್ರಾವೊ ಸಹೋದರರಾದ ಡ್ವೇನ್ ಬ್ರಾವೊ ಹಾಗೂ ಡಾರೆನ್ ಬ್ರಾವೊ ಕಾಂಗರೂಗಳಿಗೆ ಉತ್ತಮ ಪ್ರತಿರೋಧ ನೀಡಿದರು. ಮೂರನೇ ವಿಕೆಟ್ಗೆ 114 ರನ್ಸೇರಿಸಿ ತಂಡದಲ್ಲಿ ಗೆಲುವಿನ ಆಸೆಗೆ ನೀರೆರೆದರು. ಈ ವೇಳೆ 50 ಎಸೆತಗಳಲ್ಲಿ 51 ರನ್ಗಳಿಸಿದ್ದ ಡ್ವೇನ್ ಬ್ರಾವೊ ಸ್ಟಾರ್ಕ್ ಎಸೆತದಲ್ಲಿ ಬೊಲ್ಡ್ ಆದರು. ನಂತರ ಬಂದ ಕ್ರಿಸ್ ಗೇಲ್ 2ರನ್ಗಳಿಸಿ ಪೆವಿಲಿಯನ್ಗೆ ಮರಳಿದರು. ನಂತರ ವಿಂಡೀಸ್ ಗೆಲುವಿನ ಆಶಾಕಿರಣವಾಗಿದ್ದ ಡಾರೆನ್ ಬ್ರಾವೊ 96 ಎಸೆತದಲ್ಲಿ 86 ರನ್ಗಳಿಸಿದ್ದಾಗ ಫಾಲ್ಕನರ್ ಎಸೆತದಲ್ಲಿ ಬೊಲ್ಡ್ ಆಗುವ ಮೂಲಕ ತಮ್ಮ ಉತ್ತಮ ಇನಿಂಗ್ಸ್ ಮುಗಿಸಿದರು. ನಂತರ ಬಂದ ಬ್ಯಾಟ್ಸ್ಮನ್ಗಳಲ್ಲಿ ರಸೆಲ್ 31 ಎಸೆತದಲ್ಲಿ 43 ರನ್ಗಳಿಸಿದ್ದು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ರನ್ಗಳಿಸಲಿಲ್ಲ. ಅಂತಿಮವಾಗಿ ವಿಂಡೀಸ್ 47.3 ಓವರ್ಗಳಲ್ಲಿ 290 ರನ್ಗಳಿಗೆ ಸರ್ವ ಪತನ ಕಾಣುವ ಮೂಲಕ ಸೋಲನುಭವಿಸಿತು.ಆಸೀಸ್ ಪರ 48 ರನ್ಗಳಿಗೆ 4 ವಿಕೆಟ್ ಕಬಳಿಸಿದ ಫಾಲ್ಕನರ್ ಯಶಸ್ವಿ ಬೌಲರ್ ಎನಿಸಿದರು. ಈ ಜಯದ ಮೂಲಕ ಆಸೀಸ್ ಐದು ಏಕದಿನ ಪಂದ್ಯದಲ್ಲಿ 3-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ
329/7 (50 ಓವರ್)
ವಾಟ್ಸನ್ 122(111)
ಹಗ್ಸ್ 86(93)
ಬೌಲಿಂಗ್: ಸಾಮಿ 49/2, ನಾರಾಯಣ್ 55/2
ವಿಂಡೀಸ್ 290/10
(47.3 ಓವರ್)
ಡಾರೆನ್ ಬ್ರಾವೊ 86 (96)
ಡ್ವೇನ್ ಬ್ರಾವೊ 51 (50)
ಬೌಲಿಂಗ್: ಫಾಲ್ಕನರ್ 48/4, ಮೆಕೆ 62/2