ಮುಂಬೈ: ಮಹಿಳಾ ವಿಶ್ವಕಪ್ನ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಮುಂಬೈ ಹಾಗೂ ಕಟಕ್ನಲ್ಲಿ ನಡೆಯಲಿರುವ ಸೂಪರ್ ಸಿಕ್ಸ್ ಹಂತದ ಪಂದ್ಯಗಳಿಗೆ ಐಸಿಸಿ ಬುಧವಾರ ಅಂಪೈರ್ಗಳನ್ನು ಆಯ್ಕೆ ಮಾಡಿದೆ. ಈ ಸೂಪರ್ ಸಿಕ್ಸ್ ಹಂತದ ಪಂದ್ಯಗಳು ಮುಗಿದ ನಂತರ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳಿಗೆ ಅಂಪೈರ್ಗಳನ್ನು ಆಯ್ಕೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ. ಸೂಪರ್ ಸಿಕ್ಸ್ ಹಂತದ ಪಂದ್ಯಗಳು ಫೆ.8 ರಿಂದ ಆರಂಭವಾಗಲಿದ್ದು, ಫೆ.13ರ ವರೆಗೆ ನಡೆಯಲಿದೆ. ಈ ಹಂತದಲ್ಲಿ ಅಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ಸೆಣೆಸಾಟ ನಡೆಸಲಿವೆ. ಫೆ.17 ರಂದು ಪಂದ್ಯಾವಳಿಯ ಫೈನಲ್ ಪಂದ್ಯ ಮುಂಬೈನ ಭಾರತೀಯ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿದೆ.