ಇತರೆ ಭಾರತಕ್ಕೆ ಬಲ ತಂದ ರೈನಾ ಶತಕ

Updated on: 

ಮುಂಬೈ: ಮಧ್ಯಮ ಕ್ರಮಾಂಕದ ಸುರೇಶ್ ರೈನಾ ಅವರ ಶತಕ ಹಾಗೂ ಕರ್ನಾಟಕದ ಅಭಿಮನ್ಯು ಮಿಥುನ್ ಅವರ ಶತಕಾರ್ಧದ ಸಹಾಯದಿಂದಾಗಿ, ಇತರ ಭಾರತ ತಂಡ, ಮುಂಬೈ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 526 ರನ್‌ಗಳ ದೊಡ್ಡ ಮೊತ್ತ ಗಳಿಸಿತು.
ಪಂದ್ಯದ ಮೊದಲ ದಿನವಾದ ಬುಧವಾರ ಮುರಳಿ ವಿಜಯ್ ಅವರ ಶತಕದ ಸಹಾಯದಿಂದ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 330 ರನ್ ಕಲೆಹಾಕಿದ್ದ ಹರ್ಭಜನ್ ಸಿಂಗ್ ಪಡೆ, ಗುರುವಾರ 526ಕ್ಕೆ ಆಲೌಟ್ ಆಯಿತು.
ನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಮುಂಬೈ, ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ.
ಗುರುವಾರ ದಿನಾಂತ್ಯಕ್ಕೆ ಖಾತೆ ತೆರೆಯದೇ ರೈನಾ ಅವರೊಂದಿಗೆ ಕ್ರೀಸ್‌ನಲ್ಲಿ ಉಳಿದಿದ್ದ ಹರ್ಭಜನ್ ಸಿಂಗ್, ವೈಯಕ್ತಿಕವಾಗಿ 16 ರನ್ ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ರೈನಾ-ಭಜ್ಜಿ ಜೋಡಿ, 6ನೇ ವಿಕೆಟ್‌ಗೆ ಕೇವಲ 22 ರನ್ ಮಾತ್ರ ಗಳಿಸಿತು. ಭಜ್ಜಿ ನಿರ್ಗಮನದ ನಂತರ ಬಂದ ಅಭಿಮನ್ಯು ಮಿಥುನ್, ರೈನಾಗೆ ಉತ್ತಮ ಸಾಥ್ ನೀಡಿದರು.
ಬಿರುಸಿನ ಆಟವಾಡಿದ ಈ ಜೋಡಿ, 7ನೇ ವಿಕೆಟ್‌ಗೆ 153 ರನ್ ಸೇರಿಸಿತು. ತಂಡದ ಮೊತ್ತ 505 ರನ್ ಆಗಿದ್ದಾಗ, ಈ ಜೋಡಿ ಬೇರ್ಪಟ್ಟಿತು. 9 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 51 ರನ್ ಗಳಿಸಿದ್ದ ಮಿಥುನ್ ಔಟಾಗಿ ಪೆವಿಲಯನ್‌ಗೆ ಸೇರಿದರು. ಆನಂತರ, ರೈನಾಗೆ ಜೋಡಿಯಾಗಿದ್ದು ಓಜಾ. ಆದರೆ, ಓಜಾ ಡಕ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಓಜಾ ಔಟಾದ ಮೇಲೂ ರೈನಾಗೆ ಯಾರೊಬ್ಬರಿಂದಲೂ ಉತ್ತಮ ಸಾಥ್ ಸಿಕ್ಕಲಿಲ್ಲ. ಅಂತಿಮವಾಗಿ, ಇತರೆ ಭಾರತ ತಂಡ 526 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಆರಂಭದಲ್ಲೇ ಎಡವು: ದೊಡ್ಡ ಮೊತ್ತದ ಬೆನ್ನಟ್ಟಿದ ಮುಂಬೈ ತಂಡ, ಆರಂಭದಲ್ಲೇ ಎಡವಿತು. ತಂಡದ ಮೊತ್ತ ಕೇವಲ 14 ರನ್ ಆಗಿದ್ದಾಗ, ಆರಂಭಿಕ ತಾರೆ ಔಟಾದರು.
ಆದರೆ, 2ನೇ ವಿಕೆಟ್‌ಗೆ 132 ರನ್ ಸೇರಿಸಿದ ಆರಂಭಿಕ ಜಾಫರ್ ಹಾಗೂ ಮೂರನೇ ಕ್ರಮಾಂಕದ ಅಜಿಂಕ್ಯ ರಹಾನೆ, ಮುಂಬೈ ತಂಡದ ನಾಯಕ ಅಭಿಷೇಕ್ ನಾಯರ್ ನಿಟ್ಟುಸಿರು ಬಿಡುವಂತೆ ಮಾಡಿದರು. ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಜಾಫರ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಆಗ, ಅವರ ಜಾಗಕ್ಕೆ ಬಂದ ಶಾರ್ದೂಲ್ ಠಾಕೂರ್ (4), ದಿನಾಂತ್ಯದವರೆಗೆ ರಹಾನೆ (55) ಅವರೊಂದಿಗೆ ಕ್ರೀಸ್ ಹಂಚಿಕೊಂಡು ಅಜೇಯರಾಗಿ ಉಳಿದರು.
ಇದೀಗ, ಮುಂಬೈ ತಂಡ, ಇತರೆ ಭಾರತ ತಂಡಕ್ಕಿಂತ 371 ರನ್‌ಗಳ ಹಿನ್ನೆಡೆಯನ್ನು ಹೊಂದಿದೆ.


ಸ್ಕೋರ್ ಬೋರ್ಡ್



ಇತರೆ ಭಾರತ ಪ್ರಥಮ ಇನಿಂಗ್ಸ್ 526/10 (ಬುಧವಾರ ದಿನಾಂತ್ಯಕ್ಕೆ 330/5)
ರೈನಾ ಸಿ ಠಾಕುರ್ ಬಿ ಚವಾಣ್ 134, ಹರ್ಭಜನ್ ಸಿ ನಾಯರ್ ಬಿ ಕುಲ್ಕರ್ಣಿ 16, ಮಿಥುನ್ ಎಲ್‌ಬಿಡಬ್ಲ್ಯೂ ಬಿ ಚಾವಣ್ 51, ಓಜಾ ಸಿ ಕುಲ್ಕರ್ಣಿ ಬಿ ದಾಬೊಲ್ಕರ್ 0, ಶಾಂತ್ ಅಜೇಯ 1, ಪಾಂಡೆ ಸಿ ರಹಾನೆ ಬಿ ಚವಾಣ್ 13, ಇತರೆ 27
ವಿಕೆಟ್ ಪತನ: 6-352, 7-505, 8-506, 9-512, 10-526
ಬೌಲಿಂಗ್: ಖಾನ್ 18-6-45-0 , ಕುಲ್ಕರ್ಣಿ 27-5-107-2, ಠಾಕುರ್ 18-1-82-1 , ದಾಬೋಲ್ಕರ್ 26-3-119-1, ನಾಯರ್ 25-10-70-2, ಚವಾಣ್ 10.1-1-56-3 , ಶರ್ಮಾ 6-2-33-1 ,
ಮುಂಬೈ ಪ್ರಥಮ ಇನಿಂಗ್ಸ್ 155/2
ಜಾಫರ್ ಸಿ ರಾಯಿಡು ಬಿ ಶ್ರೀಶಾಂತ್ 80, ತಾರೆ ಸಿ ತಿವಾರಿ ಬಿ ಪಾಂಡೆ 6, ರಹಾನೆ ಅಜೇಯ 55, ಠಾಕುರ್ ಅಜೇಯ 4, ಇತರೆ 10
ವಿಕೆಟ್ ಪತನ: 1-14, 2-146.
ಬೌಲಿಂಗ್: ಶ್ರೀಶಾಂತ್ 9-3-33-1, ಪಾಂಡೆ 11-4-33-1,ಮಿಥುನ್ 9-1-30-0 , ಓಜಾ 7-1-29-0 , ಹರ್ಭಜನ್ 7-0-21-0

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com