ರೈಪುರ: ಬಿಸಿಸಿಐನ ಕಾರ್ಪೊರೇಟ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತದ ಮಧ್ಯಮ ವೇಗದ ಬೌಲರ್ ಪ್ರವೀಣ್ ಕುಮಾರ್ ತಮ್ಮ ಎದುರಾಳಿ ತಂಡದ ಆಟಗಾರನ ಜೆತೆ ವಾಗ್ವಾದಕ್ಕಿಳಿದು ಹೊಸ ವಿವಾದದಲ್ಲಿ ಸಿಲುಕಿದ್ದಾರೆ.
ಸೋಮವಾರ ನಡೆದ ಒಎನ್ಜಿಸಿ ಹಾಗೂ ಆದಾಯ ತೆರಿಗೆ ತಂಡಗಳ ನಡುವಿನ ಪಂದ್ಯದಲ್ಲಿ ಒಎನ್ಜಿಸಿ ತಂಡದ ಪರ ಬೌಲಿಂಗ್ ಮಾಡಿದ ಪ್ರವೀಣ್ ಕುಮಾರ್, ಆದಾಯ ತೆರಿಗೆ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದ ಅಜಿತೇಶ್ ಅರ್ಗಾಲ್ ಅವರಿಗೆ ಶಾರ್ಟ್ ಪಿಚ್ನಲ್ಲಿ ಚೆಂಡನ್ನು ಎಸೆದರು. ಈ ವೇಳೆ ಮೈದಾನದ ಅಂಪೈರ್ ಆ ಎಸೆತ ನೊ ಬಾಲ್ ಇರುವ ಅನುಮಾನದಿಂದ ಮೂರನೇ ಅಂಪೈರ್ ಬಳಿ ಸ್ಪಷ್ಟನೆ ಪಡೆಯುತ್ತಿರುವಾಗ ತಾಳ್ಮೆ ಕಳೆದುಕೊಂಡ ಪ್ರವೀಣ್ ಎದುರಾಳಿ ಬ್ಯಾಟ್ಸ್ಮನ್ ಅಜಿತೇಶ್ ಅವರನ್ನು ನಿಂದಿಸಲು ಆರಂಭಿಸಿದರು. ನಂತರ ಮೈದಾನದ ಅಂಪೈರ್ ಈ ಘಟನೆಯನ್ನು ಪಂದ್ಯದ ರೆಫ್ರಿ ಧನಂಜಯ್ ಸಿಂಗ್ ಅವರಿಗೆ ತಿಳಿಸಿದರು.
ಆಗ ರೆಫ್ರಿ ಧನಂಜಯ್ ಬಿಸಿಸಿಐಗೆ ನೀಡಿದ ವರದಿಯಲ್ಲಿ ಪ್ರವೀಣ್ ಮಾನಸಿಕ ಅಸಮರ್ಥನೆಯಿಂದ ಈ ರೀತಿ ನಡೆದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಪ್ರವೀಣ್ ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಬಿಸಿಸಿಐ ಆಂತರಿಕ ವಿಷಯ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಬಿಸಿಸಿಐ ಅಧಿಕಾರಿ ರತ್ನಾಕರ್ ಶೆಟ್ಟಿ ಉತ್ತರಿಸಿದರು