ಮುಂಬೈ: ತೀವ್ರ ರೋಚಕವಾಗಿದ್ದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಮಹಿಳಾ ವಿಶ್ವಕಪ್ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಕೇವಲ 2 ರನ್ಗಳಿಂದ ಮಣಿಸಿ, ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 44.4 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ, 47.3 ಓವರ್ಗಳಲ್ಲಿ 145 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, ಕೂದಲೆಳೆಯ ಅಂತರದಲ್ಲಿ ಸೋಲು ಅನುಭವಿಸಿತು.
ಟಾಸ್ ಗೆದ್ದಿದ್ದ ಇಂಗ್ಲೆಂಡ್, ಮೊದಲು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ಗೆ ಇಳಿಸಿತು. ಆದರೆ, ಕಾಂಗರೂಗಳ ವಿರುದ್ಧ ಆಕ್ರಮಣಕಾರಿ ಬೌಲಿಂಗ್ ಮಾಡಿದ ಆಂಗ್ಲ ಬೌಲರ್ಗಳಾದ ಶ್ರಬ್ಸೋಲ್ (24/3), ಬ್ರಂಟ್ (22/2), ಬ್ರಿಂಡಲ್ (33/2) ಹಾಗೂ ಕೋಲ್ವಿನ್ (19/2) ಅವರು ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಗಟ್ಟಿಯಾಗಿ ನಿಲ್ಲಲು ಬಿಡಲಿಲ್ಲ.
ಆದರೆ, ಆಂಗ್ಲರ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಸ್ತಾಲೇಕರ್ ಹಾಗೂ ಕಾಯ್ಟ್ ಇಬ್ಬರೂ 5ನೇ ವಿಕೆಟ್ಗೆ 82 ರನ್ ಸೇರಿಸಿತು. 44.4ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡರೂ ಆಸೀಸ್, ಸ್ತಾಲೇಕರ್ ಹಾಗೂ ಕಾಯ್ಟ್ ಇಬ್ಬರ ಜೊತೆಯಾಟದಿಂದ 147 ರನ್ಗಳ ಸಾಧಾರಣ ಮೊತ್ತ ಪೇರಿಸಿತು.
ಛಲಬಿಡದ ಆಸೀಸ್: ಆಸ್ಟ್ರೇಲಿಯಾವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಇಂಗ್ಲೆಂಡ್ನ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ. ಇಂಗ್ಲೆಂಡ್ಗಿಂತಲೂ ಮೊನಚಾದ ದಾಳಿ ನಡೆಸಿದ ಆಸೀಸ್, ಆಂಗ್ಲರ ವಿಕೆಟ್ಗಳನ್ನು ಒಂದರ ಹಿಂದೊಂದರಂತೆ ಕೆಡವಿತು. ಮಧ್ಯಮ ಕ್ರಮಾಂಕದ ಗ್ರೀನ್ವೇ ಅವರನ್ನು ಹೊರತುಪಡಿಸಿದರೆ, ಮತ್ಯಾವ ಆಂಗ್ಲ ಬ್ಯಾಟರ್ಗಳಿಗೂ ಕಾಂಗರೂಗಳ ದಾಳಿಗೆ ಗಟ್ಟಿಯಾಗಿ ನಿಂತು ಆಡಲು ಸಾಧ್ಯವಾಗಲಿಲ್ಲ. 47ನೇ ಓವರ್ನ ಆರಂಭದಲ್ಲಿ ಅದಾಗಲೇ 9 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, 18 ಎಸೆತಗಳಲ್ಲಿ 3 ರನ್ ಪೇರಿಸುವ ಸುಲಭವಾದ ಗುರಿಯನ್ನೇನೋ ಹೊಂದಿತ್ತು. ಆದರೆ, ಕೊನೆಯ ಓವರ್ ಎದುರಿಸಿದ ಕೋಲ್ವಿನ್, ಆಸ್ಬೋರ್ನ್ ಅವರು ಮಾಡಿದ 47ನೇ ಓವರ್ನ 3ನೇ ಎಸೆತದಲ್ಲಿ ಕೀಪರ್ ಫೀಲ್ಡ್ಸ್ಗೆ ಕ್ಯಾಚ್ ನೀಡಿಬಿಟ್ಟರು. ಇದರಿಂದಾಗಿ, ಇಂಗ್ಲೆಂಡ್ ತಂಡ 145 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡು, ಶರಣಾಯಿತು.
ಸ್ತಾಲೇಕರ್ ಪಂದ್ಯಶ್ರೇಷ್ಠ: ಉಪಯುಕ್ತ 41 ರನ್ ಪೇರಿಸಿ, ಆಸೀಸ್ ಇನಿಂಗ್ಸ್ಗೆ ಶಕ್ತಿ ತುಂಬಿದ ಸ್ತಾಲೇಕರ್, ಬೌಲಿಂಗ್ ವೇಳೆ ತಾವು ಮಾಡಿದ 10 ಓವರ್ಗಳಲ್ಲಿ 5 ಮೇಡನ್ ಓವರ್ ಮಾಡಿ, 19 ರನ್ ನೀಡಿ 1 ವಿಕೆಟ್ ಕಬಳಿಸಿದರು. ಈ ಹಿನ್ನೆಲೆಯಲ್ಲಿ, ಅವರಿಗೆ ಪಂದ್ಯಶ್ರೇಷ್ಠ ಗೌರವ ನೀಡಲಾಯಿತು
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 147/10 (44.4 ಓವರ್); ಕಾಯ್ಟ್ 44 (81), ಸ್ತಾಲೇಕರ್ 41 (59)
ಬೌಲಿಂಗ್: ಶ್ರಬ್ಸೋಲ್ 24/3, ಕೋಲ್ವಿನ್ 19/2
ಇಂಗ್ಲೆಂಡ್: 145/10 (47.3 ಓವರ್)
ಗ್ರೀನ್ವೇ 49 (113), ಮಾರ್ಷ್ 22 (75); ಬೌಲಿಂಗ್: ಫರ್ಲಿಂಗ್ 35/3, ಹಂಟರ್ 15/2
ಪಂದ್ಯಶ್ರೇಷ್ಠ: ಸ್ತಾಲೇಕರ್ (ಆಸ್ಟ್ರೇಲಿಯಾ)