ಆಕ್ಲಾಂಡ್: ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡವು ಗೆಲುವಿನ ಮೂಲಕ ತಮ್ಮ ಅಭಿಯಾನ ಆರಂಭಿಸಿದೆ. ಶನಿವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಿವೀಸ್ ವಿರುದ್ಧ ಭರ್ಜರಿ 40 ರನ್ಗಳ ಜಯ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ತಂಡದ ಕಳಪೆ ಫೀಲ್ಡಿಂಗ್ನ ಸಂಪೂರ್ಣ ಲಾಭ ಪಡೆದು ನಿಗಧಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 214 ರನ್ಗಳಿಸಿತು. ಇದು ಇಂಗ್ಲೆಂಡ್ ಟಿ20 ಪಂದ್ಯದಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.
ಈ ಪಂದ್ಯದಲ್ಲಿ ರಾಸ್ ಟೇಲರ್ 2 ಕ್ಯಾಚ್ಗಳನ್ನು ಕೈಚೆಲ್ಲಿದ್ದು, ನ್ಯೂಜಿಲೆಂಡ್ ತಂಡ ಒಟ್ಟು 6 ಪ್ರಮುಖ ಕ್ಯಾಚ್ಗಳನ್ನು ಕೈಚೆಲ್ಲಿದ ಹಿನ್ನಲೆಯಲ್ಲಿ ಸೋಲನುಭವಿಸಿತು.
ಇಂಗ್ಲೆಂಡ್ ಪರ ಆಲ್ರೌಂಡರ್ ಲೂಕು ರೈಟ್ ಹಾಗೂ ನಾಯಕ ಸ್ಟುವರ್ಟ್ ಬ್ರಾಡ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಪಡೆ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ತಂಡದ ಪರ ಗುಪ್ಟಿಲ್ 44 ರನ್ ಹಾಗೂ ಮುನ್ರೋ 28 ರನ್ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಜಯದ ಮೂಲಕ ಇಂಗ್ಲೆಂಡ್ ತಂಡವು 3 ಟಿ20 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 214/7 (20 ಓ.)
ಮಾರ್ಗನ್ 46 (26)
ರೈಟ್ 42 (20)
ಬೌಲಿಂಗ್: ಬೌಲ್ಟ್ 40/2, ಎಲ್ಲಿಸ್ 40/2
ನ್ಯೂಜಿಲೆಂಡ್ 174/9 (20 ಓ.)
ಗುಪ್ಟಿಲ್ 44 (32)
ಮುನ್ರೋ 28 (19)
ಬೌಲಿಂಗ್: ಬ್ರಾಡ್ 24/4, ಫಿನ್ 39/3