ನವದೆಹಲಿ: ಅಸಮಾಧಾನದ ಹಿನ್ನೆಲೆಯಲ್ಲಿ ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಬಂಡೆದ್ದಿದ್ದ ದೇಶದ ಅಗ್ರ ಟೆನಿಸ್ ಆಟಗಾರರು ತಮ್ಮದೇ ಒಂದು ಸಂಘವನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ, ಎಐಟಿಎ ಜೊತೆಗೆ ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಂಡಿದ್ದರೂ, ತಮ್ಮದೇ ಒಂದು ಸಂಘವನ್ನು ಅಸ್ವಿತ್ವಕ್ಕೆ ತರುವ ಮೂಲಕ, ಎಐಟಿಎಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಹೊಸ ಸಂಘಕ್ಕೆ, ಭಾರತೀಯ ಟೆನಿಸ್ ಆಟಗಾರರ ಸಂಘ (ಐಟಿಪಿಎ) ಎಂದು ನಾಮಕರಣ ಮಾಡಲಾಗಿದೆ.
ಯಾರ್ಯಾರಿದ್ದಾರೆ?: ಎಐಟಿಎ ವಿರುದ್ಧ ಬಂಡಾಯ ಎದ್ದಿದ್ದ ಎಲ್ಲಾ ಟೆನಿಸ್ ಆಟಗಾರರೂ, ಈ ಸಂಘದ ಸದಸ್ಯರಾಗಿದ್ದಾರೆ. ಜೈದೀಪ್ ಮುಖರ್ಜಿಯಾ, ಮಹೇಶ್ ಭೂಪತಿ, ಕಾರ್ತಿ ಪಿ. ಚಿದಂಬರಂ, ಇನ್ರಿಕೋ ಪಿಪೆನ್ರೋ, ಮನಿಷಾ ಮಲ್ಹೋತ್ರಾ, ಪ್ರಹ್ಲಾದ್ ಶ್ರೀನಾಥ್, ಸೋಮದೇವ್ ದೇವರಾಮನ್, ರೋಹನ್ ಬೋಪಣ್ಣ, ಆದಿತ್ಯ ಸಚ್ದೇವ ಹಾಗೂ ಮುಸ್ತಾಫಾ ಗೌಸ್ - ಇವರೆಲ್ಲರೂ ಸಂಘದ ಸದಸ್ಯರಾಗಿದ್ದಾರೆ.
ಸಂಸ್ಥೆಯ ಉದ್ದೇಶ: ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಸಂಘವನ್ನು 'ಲಾಭದ ಉದ್ದೇಶವಿಲ್ಲದ ಸಂಸ್ಥೆ' ಎಂದು ಹೇಳಿರುವ ಟೆನಿಸ್ ಆಟಗಾರರು, ದೇಶದಲ್ಲಿನ ಟೆನಿಸ್ ಕ್ಷೇತ್ರದಲ್ಲಿ ಆಟಗಾರರು ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಂಘ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಪದಾಧಿಕಾರಿಗಳು: ಹೊಸದಾಗಿ ರೂಪುಗೊಳ್ಳಲಿರುವ ಸಂಘಕ್ಕೆ, ಜೈದೀಪ್ ಮುಖರ್ಜಿಯಾ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರನ್ನಾಗಿ ಕಾರ್ತಿ ಪಿ. ಚಿದಂಬರಂ ಅವರನ್ನು ನೇಮಿಸಲಾಗಿದೆ.
ಸಂಸ್ಥೆಯ ಬಗ್ಗೆ ಮಾತನಾಡಿದ ಸೋಮದೇವ್, 'ದೇಶದಲ್ಲಿ ಟೆನಿಸ್ ಆಟಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗುವಂಥ ಸಂಘವೊಂದನ್ನು ಅಸ್ತಿತ್ವಕ್ಕೆ ತರಬೇಕೆಂಬ ಉದ್ದೇಶದಿಂದಾಗಿ, ಭಾರತೀಯ ಟೆನಿಸ್ ಆಟಗಾರರ ಸಂಘ(ಐಟಿಪಿಎ)ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಲ್ಲದೇ, ದೇಶದಲ್ಲಿನ ಟೆನಿಸ್ ಕ್ರೀಡೆಯ ಬೆಳವಣಿಗೆಗಾಗಿ ಅಸ್ವಿತ್ವದಲ್ಲಿರುವ ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ)ಯ ಚಟುವಟಿಕೆಗಳ ಬಗ್ಗೆಯೂ ಐಟಿಪಿಎ ನಿಗಾ ವಹಿಸಲಿದೆ' ಎಂದು ಹೇಳಿದರು.