ನವದೆಹಲಿ: ಎಂಟು ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿರುವ ಭಾರತದ ಸ್ನೂಕರ್ ತಾರೆ ಪಂಕಜ್ ಅಡ್ವಾಣಿ, ವೆಲ್ಶ್ ಓಪನ್ ಪ್ರೊ ಸ್ನೂಕರ್ ಸೀರೀಸ್ ಪಂದ್ಯಾವಳಿಯ ಪ್ರಮುಖ ಸುತ್ತಿನಲ್ಲಿ ಇಂಗ್ಲೆಂಡ್ನ ಶಾನ್ ಮುರ್ಫಿ ಅವರನ್ನು ಎದುರಿಸಲಿದ್ದಾರೆ. ಶಾನ್ ಮುರ್ಫಿ ತಮ್ಮ ಹಿಂದಿನ ಪಂದ್ಯದಲ್ಲಿ ತೆಪ್ಚೆಯಾ ಉನ್ ನೂಹ್ ಅವರ ವಿರುದ್ಧ 4-2ರ ಅಂತರದಲ್ಲಿ ಗೆಲುವು ದಾಖಲಿಸಿ ಈ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಭಾರತದ ಅಡ್ವಾಣಿ ಕೂಡ ರೊಚಕ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಪೀಟರ್ ಎಡ್ಬನ್ ಅವರನ್ನು 4-3 ಅಂತರದಿಂದ ಮಣಿಸುವ ಮೂಲಕ ಈ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಪಂದ್ಯಾವಳಿಗೆ ಆಯ್ಕೆಯಾದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿ ಪಂಕಜ್ ಪಾಲಾಗಿದ್ದು, ಮುರ್ಫಿ ವಿರುದ್ಧ ಜಯಗಳಿಸಿ ಪ್ರಿ ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶ ಪಡೆದರೆ ಈ ಹಂತಕ್ಕೆ ಪ್ರವೇಶ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆಯಲಿದ್ದಾರೆ.