ಮುಂಬೈ: ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ವಿಶ್ವಕಪ್ನ ರನ್ನರ್ ಅಪ್ ತಂಡವಾದ ನ್ಯೂಜಿಲೆಂಡ್, ಬುಧವಾರ ಇಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಸೂಪರ್ ಸಿಕ್ಸ್ ವಿಭಾಗದಲ್ಲಿ ಸೆಣೆಸಲಿವೆ.
ಸೂಪರ್ ಸಿಕ್ಸ್ ಹಂತದ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ - ಎರಡೂ ತಂಡಗಳ ಪಾಲಿಗೆ ಈ ಪಂದ್ಯ 'ಮಾಡು ಇಲ್ಲವೇ ಮಡಿ' ಪಂದ್ಯವಾಗಲಿದೆ.
ಆದರೆ, ಬುಧವಾರವೇ ನಡೆಯಲಿರುವ ಆಸೀಸ್-ವೆಸ್ಟ್ ಇಂಡೀಸ್ ನಡುವಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವೇನಾದರೂ ಗೆದ್ದರೆ, ಇಂಗ್ಲೆಂಡ್-ನ್ಯೂಜಿಲೆಂಡ್ ಕದನ 'ಔಪಚಾರಿಕ' ಪಂದ್ಯವಾಗಿ ಮಾರ್ಪಡುತ್ತದೆ. ಏಕೆಂದರೆ, ಈಗಾಗಲೇ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ (8 ಅಂಕ) ಮೊದಲ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ (6 ಅಂಕ) ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ, ಆಂಗ್ಲರನ್ನು ಹಿಂದಿಕ್ಕಿ ಪಟ್ಟಿಯ ಎರಡನೇ ಸ್ಥಾನಕ್ಕೆ ಹಾರಿದೆ. ಇನ್ನು, ಆಸೀಸ್-ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ವಿಂಡೀಸ್ ಜಯಗಳಿಸಿದರೆ, ಕೆರಿಬಿಯನ್ನರು 6 ಅಂಕ ಗಳಿಸಿದಂತಾಗುತ್ತದೆ. ಹಾಗಾಗಿ, ಆಸೀಸ್, ವೆಸ್ಟ್ ಇಂಡೀಸ್ ತಂಡಗಳೇ ಫೈನಲ್ನಲ್ಲಿ ಸೆಣೆಸುವುದು ಖಚಿತವಾಗುತ್ತದೆ. ಈ ಹಿನ್ನೆಲೆಯಲ್ಲಿ, ಆಸೀಸ್-ವಿಂಡೀಸ್ ಕದನದಲ್ಲಿ ಆಸೀಸ್ ಗೆದ್ದರೆ ಮಾತ್ರ, ಇಂಗ್ಲೆಂಡ್- ನ್ಯೂಜಿಲೆಂಡ್ ನಡುವಿನ ಕದನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಇಂಗ್ಲೆಂಡ್ ತಂಡದಲ್ಲಿನ ಬಲಾಬಲ: ಹಾಗಾಗಿ, ಇಂಗ್ಲೆಂಡ್ ತಂಡದ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಆಸೀಸ್-ವಿಂಡೀಸ್ ಕದನದ ಬಗ್ಗೆ ಸಾಕಷ್ಟು ಕುತೂಹಲಗೊಂಡಿದ್ದಾರೆ. ಅಲ್ಲದೇ, ತಮ್ಮ ತಂಡವನ್ನು ಕಿವೀಸ್ ವಿರುದ್ಧದ ಪಂದ್ಯಕ್ಕೆ ಅಣಿಗೊಳಿಸುತ್ತಿದ್ದಾರೆ. ಚಾರ್ಲೋಟ್ ಅವರು ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಸಿಹಿ-ಕಹಿ ಎರಡೂ ಅನುಭವಗಳನ್ನು ಪಡೆದಿದ್ದಾರೆ. ಭಾರತ ವಿರುದ್ಧದ ಗ್ರೂಪ್ ಲೀಗ್ ಹಂತದ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಅವರು, ಸೂಪರ್ ಸಿಕ್ಸ್ ಹಂತದಲ್ಲಿ ಆಸೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ಒಂದು ಅಂಕಿ ರನ್ ಮಾತ್ರ ಗಳಿಸಿದ್ದರು. ಇನ್ನು, ಕ್ಯಾಥೆರಿನ್ ಬ್ರಂಟ್ ಹಾಗೂ ಆನ್ಯಾ ಶ್ರುಬ್ಸೋಲ್ ಅವರುಗಳು ಇದುವರೆಗೆ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಇನ್ನು, ತಂಡದ ಬ್ಯಾಟಿಂಗ್ ಕ್ರಮಾಂಕವೂ ಸಹಾ ಉತ್ತಮವಾಗಿಯೇ ಇದೆ.
ಅತ್ತ, ಕಿವೀಸ್ನ ನಾಯಕಿ ಬೇಟ್ಸ್ ಅವರು ಈ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಟಾಪ್ ರನ್ ಸ್ಕೋರರ್ (307 ರನ್) ಆಗಿದ್ದಾರೆ. ಆಂಗ್ಲರಿಗೆ ಅವರು ಬುಧವಾರದ ಪಂದ್ಯದಲ್ಲಿ ಸವಾಲಾಗಬಹುದು. ಅವರೊಂದಿಗೆ, ನಿಕೋಲಾ ಬ್ರೌನಿ, ಡಿವೈನ್ ಅವರಂಥಾ ಉತ್ತಮ ಬ್ಯಾಟರ್ಗಳೂ ಇದ್ದಾರೆ. ಕಿವೀಸ್ ಬೌಲಿಂಗ್ ವಿಭಾಗದಲ್ಲಿ ಸಿಯಾನ್ ರುಕ್, ರಾಚೆಲ್ ಕ್ಯಾಂಡಿ, ಲೀ ತಾಹಹು ಇದ್ದಾರೆ.