ಹುಲಿ ಆಮ್ಲಾ

ಹುಲಿ ಆಮ್ಲಾ
Updated on: 

ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಸಾಧನೆ ಮಾಡಿದೆ ಮಹಾನ್ ಆಟಗಾರರೆಂದರೆ ತಕ್ಷಣಕ್ಕೆ ನೆನಪಿಗೆ ಬರುವುದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್. ಈಗ ಈ ಸಾಲಿಗೆ ಸೇರಿಕೊಂಡಿರುವ ಮತ್ತೋರ್ವ ಕ್ಲಾಸಿ ಬ್ಯಾಟ್ಸ್‌ಮನ್ ಎಂದರೆ ಅದು ಹಷಿಂ ಆಮ್ಲಾ.
ದಕ್ಷಿಣ ಆಫ್ರಿಕ ತಂಡ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸಿನ ನಾಗಾಲೋಟದಲ್ಲಿ ತೇಲುತ್ತಿದೆ. ಈ ಯಶಸ್ಸಿನಲ್ಲಿ ಆಮ್ಲಾ ಒಂದು ಆಧಾರ ಸ್ತಂಭವಾಗಿ ನಿಂತಿದ್ದಾರೆ. ಅಲ್ಲದೇ ಆಮ್ಲಾ ಅವರನ್ನು ದಕ್ಷಿಣ ಆಫ್ರಿಕ ಕ್ರಿಕೆಟ್‌ನ ಗೋಡೆ ಎಂದೇ ಪರಿಗಣಿಸಲಾಗುತ್ತಿದೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಿರುವ ಆಮ್ಲಾ, ತನ್ನ ಸದೃಢ ಬ್ಯಾಟಿಂಗ್‌ನಿಂದ ಬೌಲರ್‌ಗಳಿಗೆ ನೀರು ಕುಡಿಸಿದ್ದಾರೆ.
2004ರಲ್ಲಿ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಬ್ಯಾಟ್ಸ್‌ಮನ್ ಆರಂಭಿಕ ದಿನಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ. ನಂತರ 2006ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ 4ನೇ ಪಂದ್ಯವನ್ನಾಡಿದ ಇವರು ಮೊದಲ ಶತಕಗಳಿಸಿದರು. ಇದುವರೆಗೂ 68 ಪಂದ್ಯಗಳನ್ನಾಡಿರುವ ಆಮ್ಲಾ 51.94 ಸರಾಸರಿಯಲ್ಲಿ 5610 ರನ್‌ಗಳಿಸಿದ್ದಾರೆ. 19 ಶತಕ ಹಾಗೂ 25 ಶತಕಗಳನ್ನು ದಾಖಲಿಸಿರುವ ಇವರು ನಿರಂತರವಾಗಿ ರನ್‌ಗಳಿಸುತ್ತಾ ಬಂದಿದ್ದಾರೆ.
ಇನ್ನು ಏಕದಿನ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಈ ಬ್ಯಾಟ್ಸ್‌ಮನ್ 63 ಪಂದ್ಯಗಳಲ್ಲಿ 58.70 ಸರಾಸರಿಯಲ್ಲಿ 3528 ರನ್‌ಗಳಿಸಿದ್ದು, 10 ಶತಕ ಹಾಗೂ 19 ಅರ್ಧಶತಕ ದಾಖಲಿಸಿದ್ದಾರೆ. 59 ಪಂದ್ಯಗಳಲ್ಲಿ 3000 ರನ್ ಗಳಿಸಿ ಅತಿ ವೇಗವಾಗಿ 3000 ರನ್‌ಗಡಿ ದಾಟಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.

ಆಮ್ಲಾ ಮೂಲ ಭಾರತ
ಆಮ್ಲಾ ದಕ್ಷಿಣ ಆಫ್ರಿಕದ ಮುಸ್ಲಿಂ ಕುಟುಂಬದಲ್ಲಿ ಜನಿಸಿದರಾದರೂ, ಅವರ ಹಿರಿಯ ವಂಶಸ್ಥರು ಭಾರತದವರು. ಅವರು ಗುಜರಾತ್‌ನ ಸೂರತ್‌ನವರು.

ವಿವಾದದಲ್ಲಿ ಆಮ್ಲಾ
2006ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ ಆಮ್ಲಾ ಕ್ಯಾಚ್ ಪಡೆದಾಗ ಟೆನ್‌ಸ್ಪೋರ್ಟ್ಸ್ ವಾಹಿನಿಯ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಆಮ್ಲಾ ಅವರನ್ನು 'ದ ಟೆರೆರಿಸ್ಟ್ ಗೆಟ್ಸ್ ಅನದರ್ ವಿಕೆಟ್‌' ಎಂದು ಕರೆದು ಜನಾಂಗೀಯ ನಿಂದನೆ ಆರೋಪ ಎದುರಿಸಿದ್ದರು.
ನಂತರ ಸಾರಾಯಿ ಅಥವಾ ಮದ್ಯದ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಇಸ್ಲಾಂ ಧರ್ಮದ ವಿರೋಧ ಎಂಬ ಕಾರಣಕ್ಕೆ 2011ರಲ್ಲಿ ಆಮ್ಲಾ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಸ್ಟೆಲ್ (ಮದ್ಯ ಕಂಪನಿ) ಲೋಗೊ ಹೊಂದಿರುವ ಅಂಗಿಯನ್ನು ಧರಿಸಲು ನಿರಾಕರಿಸಿದ್ದರು. ನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಮ್ಲಾ ಅವರಿಗೆ ಕಾಸ್ಟೆಲ್ ಲೋಗೊ ಇಲ್ಲದ ಅಂಗಿ ಧರಿಸಲು ಅನುಮತಿ ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com