ಫೈನಲ್‌ಗೆ ಕಾಲಿಟ್ಟ ಬಾರ್ಟೋಲಿ

ಫ್ರಾನ್ಸ್‌ನ ಮಾರಿಯಾನ್ ಬಾರ್ಟೋಲಿ, ಈ ಬಾರಿಯ ವಿಂಬಲ್ಡನ್ ಪಂದ್ಯಾವಳಿಯ ಫೈನಲ್ ತಲುಪಿದ್ದಾರೆ.
ಫೈನಲ್‌ಗೆ ಕಾಲಿಟ್ಟ ಬಾರ್ಟೋಲಿ
Updated on: 

ಲಂಡನ್: ಪ್ರಸ್ತುತ ವಿಂಬಲ್ಡನ್ ಪಂದ್ಯಾವಳಿಯಲ್ಲಿ 15ನೇ ಶ್ರೇಯಾಂಕ ಪಡೆದಿರುವ ಹಾಗೂ 2007ರ ರನ್ನರ್ ಅಪ್ ಆದ ಫ್ರಾನ್ಸ್‌ನ ಮಾರಿಯಾನ್ ಬಾರ್ಟೋಲಿ, ಈ ಬಾರಿಯ ವಿಂಬಲ್ಡನ್ ಪಂದ್ಯಾವಳಿಯ ಫೈನಲ್ ತಲುಪಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಅವರು, ಬೆಲ್ಜಿಯಂನ ಕಿರ್ಸ್ಟ್‌ನ್ ಫ್ಲಿಪ್‌ಕೆನ್ಸ್ ಅವರ ವಿರುದ್ಧ 6-1, 6-2 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿ, ಫೈನಲ್‌ಗೆ ಲಗ್ಗೆಯಿಟ್ಟರು.
ಮೊದಲ ಸೆಟ್‌ನ ಆರಂಭದಿಂದಲೇ ಫ್ಲಿಪ್‌ಕಿನ್ಸ್ ಮೇಲೆ ಹಿಡಿತ ಸಾಧಿಸಿದ, 2007ರ ವಿಂಬಲ್ಡನ್ ಬಾಲಕಿಯರ ವಿಭಾಗದ ಪ್ರಶಸ್ತಿ ವಿಜೇತೆ ಬಾರ್ಟೋಲಿ ಅಂಕಗಳನ್ನು ವೇಗವಾಗಿ ಪೇರಿಸುತ್ತಾ ಸಾಗಿದರು.
ಆರಂಭದಲ್ಲೇ, ಉತ್ತಮವಾದ ಫ್ಲಾಟ್ ಹೊಡೆತಗಳಿಂದ ಒಂದರ ಹಿಂದೊಂದರಂತೆ ಬ್ರೇಕ್ ಪಾಯಿಂಟ್‌ಗಳನ್ನು ಗಳಿಸುತ್ತಾ ಸಾಗಿದ ಅವರು, ಒಂದು ಹಂತದಲ್ಲಿ ಎದುರಾಳಿಗಿಂತ 2-0 ಮುನ್ನಡೆ ಪಡೆದುಕೊಂಡರು. ಮುಂದಿನ ಗೇಮ್‌ಗಳಲ್ಲಿ ಮತ್ತಷ್ಟು ಬಿರುಸಾಗಿ ಆಡಿದ ಅವರು, ಫ್ಲಿಪ್‌ಕಿನ್ಸ್ ಅವರು ಚೇತರಿಸಿಕೊಳ್ಳಲು ಯಾವುದೇ ಅವಕಾಶವನ್ನೂ ನೀಡದೇ ಆರಂಭದಲ್ಲೇ 3-0ಯ ಲೀಗ್ ಪಡೆದರು. ಹೀಗೆ, ಹಂತ ಹಂತವಾಗಿ ಎದುರಾಳಿ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದ ಅವರು, ಅಂತಿಮವಾಗಿ ಮೊದಲ ಸೆಟ್ ಅನ್ನು 6-1ರ ಅಂತರದಲ್ಲಿ ಜಯ ಸಾಧಿಸಿದರು.
ಫ್ರಾನ್ಸ್ ಮಹಿಳೆಯ ಇದೇ ಬಿರುಸಿನ ಆಟ ಮುಂದಿನ ಸೆಟ್‌ನಲ್ಲೂ ಮುಂದುವರಿಯಿತು. ಮೊದಲ ಸೆಟ್‌ನಲ್ಲಿ ಸೋತ ಕಾರಣಕ್ಕೋ ಏನೋ, ಕೊಂಚ ಹಿಂಜರಿದಂತೆ ಕಾಣುತ್ತಿದ್ದ ಫ್ಲಿಪ್‌ಕಿನ್ಸ್ ಈ ಸೆಟ್‌ನಲ್ಲಿ ತಮ್ಮ ಆಟದ ಮೊನಚನ್ನು ಕಳೆದುಕೊಂಡಿದ್ದರು. ಆದರೆ, ಅತ್ತ ಬಿರುಸಾಗಿಯೇ ತಮ್ಮ ಆಟವನ್ನು ಮುಂದುವರಿಸಿದ ಬಾರ್ಟೋಲಿ, ಪಂದ್ಯದಲ್ಲಿ ಜಯಭೇರಿ ಬಾರಿಸಿ, ಫೈನಲ್‌ಗೆ ಕಾಲಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com