ಕರಾಚಿ: ಪಾಕಿಸ್ತಾನದ ಆಟಗಾರ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಿ ದನೀಶ್ ಕನೇರಿಯಾ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜೀವಮಾನ ನಿಷೇಧ ಹೇರಿ ಆದೇಶ ನೀಡಿದೆ.
2009ರಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ದನೀಶ್ ಕನೇರಿಯಾ ಪಾಲ್ಗೊಂಡಿದ್ದ ಆರೋಪಗಳು ಕೇಳಿಬಂದಿದ್ದವು. ನಂತರ, ಅವರ ಅವರ ವಿಚಾರಣೆ ನಡೆದು ಅವರು ಆರೋಪಿಯೆಂದು ಸಾಬೀತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ದನೀಶ್ ಕನೇರಿಯಾ ಮೇಲೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಜೀವ ನಿಷೇಧ ಹೇರಿತ್ತು. ಆದರೆ, ದನೀಶ್ ಅವರು ಇಸಿಬಿಯ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿ, ತಮ್ಮ ಮೇಲೆ ಹೇರಿರುವ ನಿಷೇಧವನ್ನು ಪ್ರಶ್ನಿಸಿದ್ದರು. ಆದರೆ, ಇದೀಗ ಪಿಸಿಬಿ ಕೂಡ ದನೀಶ್ ಅವರಿಗೆ ಆಜೀವ ನಿಷೇಧ ಹೇರಿದೆ.
ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಿರುವ ಪಿಸಿಬಿ, 'ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಇಸಿಬಿಯ ಉನ್ನತ ಸಮಿತಿ ಕೈಗೊಂಡಿರುವ ನಿರ್ಧಾರಕ್ಕೆ (ಕನೇರಿಯಾ ಮೇಲೆ ಆಜೀವ ನಿಷೇಧ) ಪಿಸಿಬಿಗೂ ಸಹಮತವಿದೆ. ಇಸಿಬಿ ನೀಡಿರುವ ತೀರ್ಪನ್ನು ಗೌರವಿಸುವ ಪಿಸಿಬಿ, ಪಾಕಿಸ್ತಾನದಲ್ಲೂ ದನೀಶ್ ಕನೇರಿಯಾಗೆ ನಿಷೇಧ ಹೇರಲಾಗುತ್ತಿದೆ' ಎಂದು ಅವರು ತಿಳಿಸಿದರು.
ಇದರಿಂದಾಗಿ, ತಮ್ಮ ವಿರುದ್ಧ ಆದೇಶಗಳನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸಿ, ವೃತ್ತಿಪರ ಕ್ರಿಕೆಟ್‌ಗೆ ಮುಂದೊಂದು ದಿನ ವಾಪಸಾಗುವ ಕನಸು ಕಾಣುತ್ತಿದ್ದ ದನೀಶ್ ಕನೇರಿಯಾ ಅವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ.
2009ರಲ್ಲಿ ಹೊರಬಿದ್ದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದನೀಶ್ ಕನೇರಿಯಾ ಆರೋಪಕ್ಕೊಳಗಾಗಿದ್ದರು. ನಂತರ ನಡೆದ ವಿಚಾರಣೆ ಹಾಗೂ ತನಿಖೆಯ ಹಿನ್ನೆಲೆಯಲ್ಲಿ, ಅವರು ತಪ್ಪಿತಸ್ಥರೆಂದು ಸಾಬೀತಾದ ನಂತರ, 2010ರಲ್ಲಿ ಇಸಿಬಿಯ ಶಿಸ್ತುಪಾಲನಾ ಸಮಿತಿ ಅವರ ಮೇಲೆ ಆಜೀವ ನಿಷೇಧ ಹೇರಿತ್ತು.
ಪಿಸಿಬಿಗೆ 80 ಮಿಲಿಯನ್ ಲಾಸ್!
ಕರಾಚಿ: ಪಾಕಿಸ್ತಾನ ಹಾಗೂ ಭಾರತ ನಡುವಿನ ಹದಗೆಟ್ಟ ಸಂಬಂಧದ ಪರಿಣಾಮ ಉಭಯ ದೇಶಗಳ ಮಧ್ಯೆ ಕ್ರಿಕೆಟ್ ಚಟುವಟಿಕೆಗಳು ನಿಂತ ಹಿನ್ನೆಲೆಯಲ್ಲಿ, ತನಗೆ ತನಗೆ ಸುಮಾರು 80 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ನಷ್ಟವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿಕೊಂಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಉಭಯ ದೇಶಗಳ ನಡುವೆ ಸ್ನೇಹಪರ ವಾತಾವರಣ ಇಲ್ಲದ ಕಾರಣ, ಪಾಕಿಸ್ತಾನ ಸ್ವದೇಶದಲ್ಲಿ ಭಾರತ ವಿರುದ್ಧದ ಸರಣಿಯನ್ನು ನಡೆಸಲಾಗಿಲ್ಲ. ಇದು ಪಿಸಿಬಿಗೆ ನಷ್ಟವುಂಟು ಮಾಡಿದೆ ಎಂದು ಪಿಸಿಬಿ ಹೇಳಿದೆ. ಈ ಬಗ್ಗೆ ಮಾತನಾಡಿದ ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು, ಭಾರತದ ವಿರುದ್ಧ ತನ್ನ ನೆಲದಲ್ಲಿ ನಡೆಸಲಾಗುವ ಸರಣಿಯ ಪ್ರಸಾರದ ಹಕ್ಕುಗಳನ್ನು ನಾಲ್ಕು ವರ್ಷಗಳ ಹಿಂದೆಯೇ ಪಿಸಿಬಿ, ದುಬೈ ಮೂಲದ ಟೆನ್‌ಸ್ಪೋರ್ಟ್ಸ್ ಸಂಸ್ಥೆಗೆ ಮಾರಿತ್ತು. ಆದರೆ, ಅಲ್ಲಿಂದ ಇಲ್ಲಿಯವರೆಗೂ ಪಾಕಿಸ್ತಾನದ ನೆಲದಲ್ಲಿ ಭಾರತ ವಿರುದ್ಧದ ಯಾವುದೇ ಕ್ರಿಕೆಟ್ ಸರಣಿ ನಡೆಯಲಿಲ್ಲ. ಇದೀಗ, ಟೆನ್‌ಸ್ಪೋರ್ಟ್ಸ್‌ನೊಂದಿಗೆ ಮಾಡಿಕೊಳ್ಳಲಾಗಿದ್ದ ಪ್ರಸಾರ ಹಕ್ಕುಗಳ ಒಪ್ಪಂದ ಕಳೆದ ತಿಂಗಳು ಮುಗಿದಿದೆ. ಇದರಿಂದ, ಪಿಸಿಬಿಗೆ 80 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿದೆ' ಎಂದಿದ್ದಾರೆ.
ಚುನಾವಣೆ ನಡೆಸಲು ಹೈ ಸೂಚನೆ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಪದಾಧಿಕಾರಿಗಳ ಹುದ್ದೆಗಳಿಗೆ ಹೊಸದಾಗಿ ಚುನಾವಣೆ ನಡೆಸಲು ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಅಲ್ಲದೇ, ಮೂರು ತಿಂಗಳೊಳಗೇ ಚುನಾವಣೆ ನಡೆಸಲು ಅದು ಗುಡುವನ್ನೂ ವಿಧಿಸಿದೆ. ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಝಾಕಾ ಅಶ್ರಫ್ ಅವರು ಪಿಸಿಬಿಯ ಅಧ್ಯಕ್ಷ ಪಟ್ಟಕ್ಕೇರಿದ್ದರು. ಆದರೆ, ಅವರ ಆಯ್ಕೆಯ ಕ್ರಮವನ್ನು ಪ್ರಶ್ನಿಸಿದ್ದ ಕೆಲವರು ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮವಾಗಿ, ಹೈಕೋರ್ಟ್ ಝಾಕಾ ಅಶ್ರಫ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿತ್ತಲ್ಲದೇ, ಮಧ್ಯಂತರ ಅಧ್ಯಕ್ಷರೊಬ್ಬರನ್ನು ನೇಮಿಸುವಂತೆ ಅದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್, ನಜಾಮ್ ಸೇಠಿ ಅವರನ್ನು ಪಿಸಿಬಿಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದೀಗ, ಹೊಸದಾಗಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ ಹೊರಬಿದ್ದಿರುವುದರಿಂದ ಪಿಸಿಬಿ ಪದಾಧಿಕಾರಿಗಳ ಹುದ್ದೆಗಳಲ್ಲಿ ಮೂರು ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯುವುದು ಖಚಿತವಾಗಿದೆ. ನಜಾಮ್ ಸೇಠಿ ಅವರಿಗೆ ಚುನಾವಣೆಯ ಜವಾಬ್ದಾರಿಯನ್ನು ನೀಡಲಾಗಿದೆ.
ವ್ಯಾಟ್ಮೋರ್ ಮುಂದುವರಿಕೆ ?
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ತರಬೇತುದಾರ ಡೇವ್ ವ್ಯಾಟ್ಮೋರ್ ಅವರನ್ನು ಕೋಚ್ ಆಗಿ ಮುಂದುವರಿಸಲು ಪಿಸಿಬಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ನೀಡಿದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ತರಬೇತುದಾರರನ್ನು ಬದಲಾಯಿಸುವಂತೆ ಕೂಗುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ವ್ಯಾಟ್ಮೋರ್ ಅವರ ಪದಚ್ಯುತಿ ಸನ್ನಿಹಿತವಾಗಿದೆಯೆಂದೇ ಊಹಿಸಲಾಗಿತ್ತು. ಆದರೆ, ಈ ಬಗ್ಗೆ ಮಾಹಿತಿ ನೀಡಿರುವ ಪಿಸಿಬಿ ಅಧಿಕಾರಿಯೊಬ್ಬರು, 'ವ್ಯಾಟ್ಮೋರ್ ಅವರನ್ನು ಮುಂದುವರಿಸುವ ಬಗ್ಗೆ ಪಿಸಿಬಿ ಚಿಂತನೆ ನಡೆಸಿದೆ' ಎಂದು ಹೇಳಿದ್ದಾರೆ. 2012ರಲ್ಲಿ ವ್ಯಾಟ್ಮೋರ್ ಅವರನ್ನು ಪಾಕಿಸ್ತಾನ ತಂಡದ ತರಬೇತುದಾರರನ್ನಾಗಿ ನೇಮಿಸಲಾಗಿತ್ತು.