ಪೋರ್ಟ್ ಆಫ್ ಸ್ಪೇನ್: ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕದಿಂದ ಸಹಾಯದಿಂದ ಭಾರತ ತಂಡ, ವಿಂಡೀಸ್ ವಿರುದ್ಧ ಶುಕ್ರವಾರ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ 311 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ ವಿಂಡೀಸ್ ಇನಿಂಗ್ಸ್ ಇನ್ನೂ ಆರಂಭವಾಗಿರಲಿಲ್ಲ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 123 ರನ್ ಪೇರಿಸಿ, ಇನಿಂಗ್ಸ್ಗೆ ಭರ್ಜರಿ ಅಡಿಪಾಯ ಹಾಕಿದರು.
ಇನಿಂಗ್ಸ್ನ 24ನೇ ಓವರ್ನಲ್ಲಿ ರೋಚ್, ಶಿಖರ್ ಧವನ್ ವಿಕೆಟ್ ಪಡೆಯುವ ಮೂಲಕ ಇವರಿಬ್ಬರ ಜೋಡಿಯನ್ನು ಮುರಿದರು. ಆಗ, ಕ್ರೀಸ್ನಲ್ಲಿದ್ದ ರೋಹಿತ್ಗೆ ಜೋಡಿಯಾಗಿದ್ದು ನಾಯಕ ವಿರಾಟ್ ಕೊಹ್ಲಿ. ವಿಂಡೀಸ್ ಬೌಲರ್ಗಳ ಬೆವರಿಳಿಸಿದ ಕೊಹ್ಲಿ, ಬಿರುಸಿನ ಬ್ಯಾಟಿಂಗ್ ನಡೆಸಿದರಲ್ಲದೇ, ತಂಡದ ಮೊತ್ತವನ್ನು ವೇಗವಾಗಿ ಏರಿಸಲು ಪ್ರಯತ್ನಿಸಿದರು. ಆದರೆ, ರೋಹಿತ್ ಶರ್ಮಾ ಅವರು ಬೇಗನೇ ಔಟಾಗುವ ಮೂಲಕ ಈ ಜೋಡಿ ಬೇಗನೇ ಮುರಿಯಲ್ಪಟ್ಟಿತು. ರೋಹಿತ್ ಅವರು, ಬೆಸ್ಟ್ ಅವರ ಬೌಲಿಂಗ್ನಲ್ಲಿ ಕೀಪರ್ ರಾಮ್ದಿನ್ಗೆ ಕ್ಯಾಚಿತ್ತು ನಿರ್ಗಮಿಸಿದರು. ರೋಹಿತ್ ಔಟಾದ ಮೇಲೆ, ವಿರಾಟ್ ಕೊಹ್ಲಿಗೆ ಭಾರತ ತಂಡದ ಯಾರೊಬ್ಬರೂ ಸಾಥ್ ನೀಡಲಿಲ್ಲ. ಮುರಳಿ ವಿಜಯ್ (27)ಹೊರತುಪಡಿಸಿದರೆ, ಮಿಕ್ಕೆಲ್ಲಾ ಆಟಗಾರರು ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದರು. ಆದರೆ, ಇದಕ್ಕೆ ಅಂಜದೇ ಬ್ಯಾಟ್ ಬೀಸುತ್ತಾ ಸಾಗಿದ ವಿರಾಟ್, ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತುಬಿಟ್ಟರು.
ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅವರ ವೀರೋಚಿತ ಬ್ಯಾಟಿಂಗ್ನ ನೆರವಿನಿಂದ ಮಾತ್ರವೇ ಭಾರತ 300 ರನ್ಗಳ ಗಡಿ ದಾಟಿತು. ಇನಿಂಗ್ಸ್ನ ಕೊನೆಯ ಎಸೆತದಲ್ಲಿ ವಿರಾಟ್ ಔಟಾದರಾದರೂ, ಒಟ್ಟು 83 ಎಸೆತಗಳಲ್ಲಿ ಅವರು ಗಳಿಸಿದ 102 ರನ್ ಭಾರತದ ಪಾಲಿಗೆ ಅಕ್ಷರಶಃ ನೆರವಾದವು.
ಸ್ಕೋರ್ ಬೋರ್ಡ್ (ಅಪೂರ್ಣ)
ಭಾರತ: 311/7 (50 ಓವರ್)
ರೋಹಿತ್ ಶರ್ಮಾ ಸಿ ರಾಮ್ದಿನ್ ಬಿ ಬೆಸ್ಟ್ 46 (78), ಶಿಖರ್ ಧವನ್ ಸಿ ಡರೇನ್ ಬ್ರಾವೊ ಬಿ ರೋಚ್ 69 (77), ವಿರಾಟ್ ಕೊಹ್ಲಿ ಸಿ ಸಾಮಿ ಬಿ ಡ್ವೈನ್ ಬ್ರಾವೊ 102 (83), ಸುರೇಶ್ ರೈನಾ ಸಿ ಸಾಮಿ ಬಿ ಸ್ಯಾಮ್ಯುಯೆಲ್ಸ್ 10 (14), ದಿನೇಶ್ ಕಾರ್ತಿಕ್ ಸಿ ರಾಮ್ದಿನ್ ಬಿ ಬೆಸ್ಟ್ 6 (7), ಮುರಳಿ ವಿಜಯ್ ಸಿ ಚಾರ್ಲ್ಸ್ ಬಿ ಪೊಲಾರ್ಡ್ 27 (18), ರವೀಂದ್ರ ಜಡೇಜಾ ರನೌಟ್ (ಬದಲಿಗ: ಸ್ಮಿತ್/ಡ್ವೈನ್ ಬ್ರಾವೊ), ರವೀಂದ್ರ ಅಶ್ವಿನ್ 25 (18), ಇತರೆ 24.
ವಿಕೆಟ್ ಪತನ: 1-123, 2-141, 3-156, 4-168, 5-210, 6-221, 7-331.
ಬೌಲಿಂಗ್: ಸಾಮಿ 8-1-28-0, ರೋಚ್ 10-2-69-1, ಬೆಸ್ಟ್ 10-0-51-2, ಡ್ವೈನ್ ಬ್ರಾವೊ 7-0-57-1, ಸುನಿಲ್ ನಾರಾಯಣ್ 5-1-35-0, ಸ್ಯಾಮ್ಯುಯೆಲ್ಸ್ 8-0-39-1, ಪೊಲಾರ್ಡ್ 2-0-21-1.