ನವದಹೆಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಹಸ್ತಾಕ್ಷರ ಉಳ್ಳ ಟೆನಿಸ್ ರ್ಯಾಕೆಟ್ ಅನ್ನು ಪ್ರಾಣಿ ದಯಾ ಸಂಘಕ್ಕೆ (ಪೇಟಾ) ನೀಡಿದ್ದಾರೆ. ಸಾನಿಯಾ ನೀಡಿರುವ ಈ ರ್ಯಾಕೆಟ್ ಅನ್ನು ebay.in ನಲ್ಲಿ ಹರಾಜಿಗೆ ಹಾಕಲಾಗುತ್ತಿದೆ. ಪೇಠಾ ಇಂಡಿಯಾ ಬೆಂಬಲಿತ 'ಎನಿಮಲ್ ರಾಹತ್' ಸಂಸ್ಥೆ ಹರಾಜು ಪ್ರಕ್ರಿಯೆ ನಡೆಸಲಿದೆ. 'ನನ್ನ ಟೆನಿಸ್ ರ್ಯಾಕೆಟ್ ಹರಾಜು ಹಾಕುವ ಮೂಲಕ ನಾವು ಪ್ರಾಣಿದಯಾ ಸಂಗಕ್ಕೆ ನಿಧಿ ಸಂಗ್ರಹಿಸಲಿದ್ದೇವೆ. ಇದರೊಂದಿಗೆ ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಬಳಸಿಕೊಳ್ಳುವ ಕುದುರೆ, ಎತ್ತುಗಳು, ಕತ್ತೆಗಳಂತಹ ಪ್ರಾಣಿಗಳಿಗೆ ನೆರವಾಗಲಿದೆ' ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಮಹಿಳಾ ಟೆನಿಸ್ ಅಸೋಸಿಯೇಷನ್ ಟೂರ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ ಸಾನಿಯಾ. 2009ರಲ್ಲಿ ಆಸ್ಟ್ರೇಲಿಯಾ ಓಪನ್ ಮತ್ತು 2012ರಲ್ಲಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಗ್ರ್ಯಾನ್ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಫೆಬ್ರವರಿಯಲ್ಲಿ ಇರಾನಿ ಟ್ರೋಫಿ
ಮುಂಬೈ: ಮುಂಬರುವ ರಣಜಿ ಋುತುವಿನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಹಾಗೂ ಭಾರತ ಇತರೆ ತಂಡಗಳ ನಡುವೆ ನಡೆಯಲಿರುವ ಇರಾನಿ ಟ್ರೋಫಿಯನ್ನು ಮುಂದಿನ ವರ್ಷ ಫೆಬ್ರವರಿ 9-13ರವರೆಗೆ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕಳೆದ ವರ್ಷ ಈ ಸರಣಿಯನ್ನು ದೇಶಿಯ ಕ್ರಿಕೆಟ್ ಋುತು ಆರಂಭಕ್ಕು ಮುನ್ನ ನಡೆಸುವ ಬದಲು ಋುತುವಿನ ಮಧ್ಯದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತು. ರಣಜಿಯ ನಾಕೌಟ್ ಹಂತವು 4 ಕ್ವಾರ್ಟರ್ ಫೈನಲ್ಸ್, ಎರಡು ಸೆಮಿ ಫೈನಲ್ಸ್ ಹಾಗೂ ಫೈನಲ್ ಪಂದ್ಯಗಳನ್ನು ಒಳಗೊಂಡಿದ್ದು, ಕ್ವಾರ್ಟರ್ ಫೈನಲ್ ಪಂದ್ಯವು ಜ.8-12ರವರೆಗೆ, ಸೆಮಿಫೈನಲ್ಸ್ ಪಂದ್ಯ ಜ.18-22 ಮತ್ತು ಫೈನಲ್ ಪಂದ್ಯ ಜ.29-ಫೆ.2ರವರೆಗೆ ನಡೆಯಲಿದೆ. ಹಾಗಾಗಿ ಇರಾನಿ ಟ್ರೋಫಿಯನ್ನು ರಣಜಿ ಚಾಂಪಿಯನ್ಸ್ ಹಾಗೂ ಭಾರತ ಇತರೆ ತಂಡಗಳ ನಡುವೆ ಫೆ.9-13ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಸಿ.ಕೆ ನಾಯ್ಡು ಕಿರಿಯರ ಪಂದ್ಯಾವಳಿ ಅ.8ರಿಂದ ಆರಂಭವಾಗಲಿದ್ದು, ಜ.12ರಂದು ಮುಕ್ತಾಯವಾಗದಲಿದೆ.