ಗುವಾಹಟಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹದಿಹರೆಯದ ಬಾಕ್ಸರ್ ಶಿವ ಥಾಪಾ ಅವರು ತಮ್ಮ ಈ ಯಶಸನ್ನು ತಮ್ಮ ತರಬೇತುದಾರ ಹಾಗೂ ತಮ್ಮ ಬೆಂಬಲಿಗರಿಗೆ ಅರ್ಪಿಸಿದ್ದಾರೆ. ಅಮನ್ನಲ್ಲಿ ನಡೆದಿದ್ದ ಪಂದ್ಯಾವಳಿಯ ನಂತರ, ಶುಕ್ರವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿನ ಲೋಕೊಪ್ರಿಯಾ ಗೋಪಿನಾಥ್ ಬೋಡೋಲೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ ಅವರನ್ನು ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸ್ವಾಗತಿಸಿದರು.
'ಈ ಸಾಧನೆ ನನ್ನಲ್ಲಿ ಹೆಚ್ಚಿನ ಖುಷಿ ತಂದಿದೆ. ದೀರ್ಘಕಾಲದಿಂದ ನಾನು ನಡೆಸಿದ ಕಠಿಣ ಅಭ್ಯಾಸಕ್ಕೆ ತಕ್ಕ ಫಲ ಸಂದಿದೆ. ನಾನಷ್ಟೇ ಅಲ್ಲ, ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತ ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು ಮತ್ತಷ್ಟು ಖುಷಿ ನೀಡಿದೆ' ಎಂದರು.
ತಮ್ಮ ಸಾಧನೆಯ ಗುಟ್ಟೇನು ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಅಭ್ಯಾಸದ ಜೊತೆಗೆ ನಾನು ಹೆಚ್ಚು ಧ್ಯಾನ ಮಾಡುತ್ತಿದ್ದೆ. ಇದು, ನನಗೆ ಆಟದ ಮೇಲೆ ಏಕಾಗ್ರತೆ ಸಾಧಿಸಲು ನೆರವಾಯಿತು. ಅಲ್ಲದೇ, ನನ್ನ ತರಬೇತುದಾರರು ನೀಡಿದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ,ನನ್ನಿಂದ ನಾನೆಷ್ಟು ಉತ್ತಮವಾಗಿ ಆಡಬೇಕೋ ಅಷ್ಟೂ ಉತ್ತಮವಾಗಿ ಆಡಲು ಪ್ರಯತ್ನಿಸಿದೆ. ಇದರಿಂದ ನನಗೆ ಯಶಸ್ಸು ಸಿಕ್ಕಿತು. ಹಾಗಾಗಿ, ನನ್ನೆಲ್ಲಾ ಯಶಸ್ಸು ನನ್ನ ಗುರುವಿಗೇ (ತರಬೇತುದಾರ) ಸಲ್ಲಬೇಕು' ಎಂದರು.
ಏತನ್ಮಧ್ಯೆ, ಅಖಿಲ ಭಾರತ ಅಸ್ಸಾಂ ವಿದ್ಯಾರ್ಥಿಗಳ ಸಂಘ (ಎಎಎಸ್ಯು) ಹಾಗೂ ಅಸ್ಸಾಂ ಜಾತೀಯತಾವಾದಿ ಯುವ ಭಾತ್ರಾ ಪರಿಷತ್, ಗೋರ್ಖಾ ಸ್ಟೂಡೆಂಟ್ಸ್ ಯೂನಿಯನ್ ಹಾಗೂ ಇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ವಿಮಾನ ನಿಲ್ದಾಣದಲ್ಲಿ ಶಿವ ಥಾಪಾ ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತ ಕೋರಿದವು.