ಆಸೀಸ್‌ಗೆ ರೋಜರ್ ಆಶ್ರಯ

Updated on: 

ನಾಟಿಂಗ್‌ಹ್ಯಾಮ್: ಆಸೀಸ್‌ನ ಕ್ರಿಸ್ ರೋಜರ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧ ಶತಕ ದಾಖಲಿಸುವುದರೊಂದಿಗೆ, ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಮೊದಲ ಪಂದ್ಯದ 4ನೇ ದಿನವಾದ ಶನಿವಾರ ಚಹ ವಿರಾಮದ ಹೊತ್ತಿಗೆ ಕುತೂಹಲ ಘಟ್ಟ ತಲುಪಿದೆ.
ಚಹ ವಿರಾಮಕ್ಕೂ ಮುನ್ನ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾ, ಎಡ್ ಕೋವನ್ (14) ವಿಕೆಟ್ ಕಳೆದುಕೊಂಡಿತು. ಕೋವನ್ ಅವರು, ಅರೆಕಾಲಿಕ ಸ್ಪಿನ್ನರ್ ಜಾಯ್ ರೂಟ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಜೋನಾಥನ್ ಟ್ರಾಟ್ ಅವರಿಗೆ ಕ್ಯಾಚ್ ನೀಡಿದರು.
ಕೋವನ್ ವಿಕೆಟ್ ಒಪ್ಪಿಸುವುದರೊಂದಿಗೆ 2ನೇ ಇನಿಂಗ್ಸ್‌ನಲ್ಲಿ 311 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದ್ದು, ವಿಜಯ ಸಾಧಿಸಿಲು ಸರಿಯಾಗಿ 200 ರನ್ ದಾಖಲಿಸಬೇಕಿದೆ.
ಟ್ರೆಂಟ್ ಬ್ರಿಡ್ಜ್ ಅಂಗಣದಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ಯಾವ ತಂಡವೂ ಇಷ್ಟೊಂದು ದೊಡ್ಡ ಮೊತ್ತ ರನ್ ಪೇರಿಸಿಲ್ಲ. 2004ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 284 ರನ್ ಕಲೆ ಹಾಕಿತ್ತು.
104 ಎಸೆತಗಳನ್ನು ಎದುರಿಸಿದ ರೋಜರ್ಸ್ ಅರ್ಧ ಶತಕದಲ್ಲಿ ನಾಲ್ಕು ಬೌಂಡರಿಗಳು ಸೇರಿದ್ದವು. 35 ವರ್ಷದ ರೋಜರ್ಸ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಎರಡನೇ ಕ್ರಿಕೆಟ್ ಆಡುತ್ತಿದ್ದಾರೆ. ಮೊದಲ ಟೆಸ್ಟ್ ಆಡಿದ ನಂತರ 4 ವರ್ಷಗಳವರೆಗೆ ಅವರು ತಂಡದಿಂದ ಹೊರಗುಳಿದಿದ್ದರು.
ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ (46) ವಿಕೆಟ್ ಒಪ್ಪಿಸುವ ಮುನ್ನ ಇಂಗ್ಲೆಂಡ್ ವಿಕೆಟ್ ಪಡೆಯುವಲ್ಲಿ ಹರಸಾಹಸಪಡಬೇಕಾಯಿತು. ವ್ಯಾಟ್ಸನ್ ಅವರು ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಎಲ್‌ಬಿಗೆ ಬಲಿಯಾದರು.
ಇದಕ್ಕೂ ಮುನ್ನ ದಿನದ ಆಟ ಆರಂಭಿಸಿದ ಇಂಗ್ಲೆಂಡ್ ತಂಡ ಇಯಾನ್ ಬೆಲ್ (109) ಅವರ ಅಮೋಘ ಶತಕದ ನೆರವಿನೊಂದಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ 375 ರನ್ ಗಳಿಸಿತು.
ಶುಕ್ರವಾರ 95 ರನ್ ಗಳಿಸಿ ಅಜೇಯವಾಗಿ ಉಳಿದಿದ್ದ ಬೆಲ್ ಸ್ಟುವಟ್ ಬ್ರಾಡ್ (65) ಅವರೊಂದಿಗೆ 7ನೇ ವಿಕೆಟ್‌ಗೆ 138 ರನ್ ಪೇರಿಸಿದರು.
ಆಲ್ರೌಂಡರ್ ಬ್ರಾಡ್ 37 ರನ್ ಗಳಿಸಿದ್ದಾಗ ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಆ್ಯಶ್ಟನ್ ಅಗರ್ ಬೌಲಿಂಗ್‌ನಲ್ಲಿ ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ಅವರಿಗೆ ಕ್ಯಾಚ್ ನೀಡಿದ್ದರು. ಆದರೆ, ಅಂಪೈರ್ ತಪ್ಪು ತೀರ್ಪು ನೀಡುವ ಮೂಲಕ ಬ್ರಾಡ್ ಜೀವದಾನ ಪಡೆದರು. ಆಗಲೇ ಎರಡು ಬಾರಿ ಮೇಲ್ಮನವಿ ಸಲ್ಲಿಸಿದ್ದ ಆಸೀಸ್, ಮೇಲ್ಮನವಿ ಸಲ್ಲಿಸಲು ಅವಕಾಶ ಇರದ ಕಾರಣ ಸುಮ್ಮನಾಗಬೇಕಾಯಿತು.
31 ವರ್ಷದ ಬ್ರಾಡ್ ಅವರು ಇಂಗ್ಲೆಂಡ್ ತಂಡಕ್ಕೆ ಅಗತ್ಯವಿದ್ದಾಗ, ರನ್ ಗಳಿಸದ ಆರೋಪ ಎದುರಿಸುತ್ತಿದ್ದರು. ಹೀಗಾಗಿ ಇದು ಬ್ರಾಡ್ ಅವರ ಅತಿ ಹೆಚ್ಚು ಮೌಲ್ಯ ಹೊಂದಿದ ಇನಿಂಗ್ಸ್ ಎನಿಸಿತು. ಶುಕ್ರವಾರ 47 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಬ್ರಾಡ್ ಶನಿವಾರ 124 ಎಸೆತಗಳಲ್ಲಿ ತಮ್ಮ ಅರ್ಧ ಶತಕ ಪೂರೈಸಿದರು. ಆದರೆ, 141ನೇ ಓವರ್‌ನಲ್ಲಿ ಜೇಮ್ಸ್ ಪಾಟಿನ್ಸನ್ ಎಸೆತದಲ್ಲಿ ಹ್ಯಾಡಿನ್‌ಗೆ ಕ್ಯಾಚ್ ನೀಡಿದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ನಿಂಗ್ಸ್ 215
ಆಸೀಸ್ ಮೊದಲ ಇನಿಂಗ್ಸ್ 280
ಇಂಗ್ಲೆಡ್ ದ್ವಿತೀಯ ಇನಿಂಗ್ಸ್ 375
ಆಸೀಸ್ ದ್ವಿತೀಯ ಇನಿಂಗ್ಸ್
111/2
(4ನೇ ದಿನ ಚಹ ವಿರಾಮದ ಹೊತ್ತಿಗೆ)
ವ್ಯಾಟ್ಸನ್ 46, ರೋಜರ್ಸ್ ಅಜೇಯ 50
ಬೌಲಿಂಗ್: ಬ್ರಾಡ್ 8-1-22-1
ರೂಟ್: 1.4-0-5-1.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com