ಬೆಂಗಳೂರು: ರಾಬಿನ್ ಉತ್ತಪ್ಪ (ಅಜೇಯ 223) ದಿನವಿಡೀ ಜಾರ್ಖಂಡ್ ಬೌಲರ್ಗಳನ್ನು ದಂಡಿಸುವುದರೊಂದಿಗೆ ಶಫಿ ದರಾಶಾ ಟ್ರೋಫಿಯ ಆರಂಭಿಕ ದಿನವಾದ ಬುಧವಾರ, ಕೆಎಸ್ಸಿಎ ಇಲೆವೆನ್ ತಂಡ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ವಿರುದ್ಧ 2 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಬೃಹತ್ ಮೊತ್ತದತ್ತ ಸಾಗಿದೆ.
ಆಲೂರಿನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 276 ಎಸೆತಗಳನ್ನು ಎದುರಿಸಿದ ಉತ್ತಪ್ಪ 223 ರನ್ ಗಳಿಸಿದ್ದು, ಈ ಮೊತ್ತದಲ್ಲಿ 4 ಸಿಕ್ಸರ್ ಮತ್ತು 25 ಬೌಂಡರಿಗಳು ಸೇರಿದ್ದವು. ಇನ್ನು ಕೆ.ಎಲ್ ರಾಹುಲ್ (68) ಅರ್ಧ ಶತಕ ಗಳಿಸಿ ವಿಕೆಟ್ ಒಪ್ಪಿಸಿದರೆ, ಮನೀಶ್ ಪಾಂಡೆ (51) ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಗಣೇಶ್ ಸತೀಶ್ 38 ರನ್ ಗಳಿಸುತ್ತಿದ್ದಂತೆಯೇ ವಿಕೆಟ್ ಒಪ್ಪಿಸಿದರು.
ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಪರ ರಾಹುಲ್ ಶುಕ್ಲಾ 82 ರನ್ ನೀಡಿ 1 ವಿಕೆಟ್ ಪಡೆದರೆ, ಸಮಬರ್ ಖಾದ್ರಿ 91 ರನ್ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.
ಬಂಗಾಳ ಆಲೌಟ್: ಆಲೂರಿನಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ಮೊದಲು ಬ್ಯಾಟ್ ಮಾಡಿದ ಬಂಗಾಳ ಕ್ರಿಕೆಟ್ ಸಂಸ್ಥೆ 79.4 ಓವರ್ಗಳಲ್ಲಿ 262 ರನ್ಗಳಿಗೆ ಆಲೌಟ್ ಆಯಿತು. ಬಂಗಾಳ ಪರ ರೋಹನ್ ಬ್ಯಾನರ್ಜಿ (47), ವೃದ್ಧಿಮಾನ್ ಸಾಹಾ (34), ಸಂದೀಪನ್ ದಾಸ್ (40), ಸೌರಾಶಿಶ್ ಲಹಿರಿ (ಅಜೇಯ 59), ವೀರ ಪ್ರತಾಪ್ (31).
ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ರೋನಿತ್ ಮೋರೆ ಮತ್ತು ಸಾಲಿನ್ ಹೂವರ್ ಇಬ್ಬರೂ ತಲಾ 57 ರನ್ ನೀಡಿ, ತಲಾ 3 ವಿಕೆಟ್ ಕಬಳಿಸಿದರು. ದಿನಾಂತ್ಯಕ್ಕೆ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡ 13 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ.
ಹರ್ಯಾಣ ಉತ್ತಮ ಮೊತ್ತ: ಆಲೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಹರ್ಯಾಣ ಕ್ರಿಕೆಟ್ ಸಂಸ್ಥೆ ಮೊದಲ ದಿನಾಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿದೆ. ಅಭಿಮನ್ಯು ಕೋಡಾ (80), ಸನ್ನಿ ಸಿಂಗ್ (74), ಪ್ರತೀಕ್ ಪನ್ವಾರ (ಅಜೇಯ 61), ಜಯನಾಥ್ ಯಾದವ್ (50) ಹರ್ಯಾಣ ಪರ ಅರ್ಧ ಶತಕ ದಾಖಲಿಸಿದರು. ಬೌಲಿಂಗ್ನಲ್ಲಿ ಸೌರಾಷ್ಟ್ರದ ಪರ ಚಿರಾಂಗ್ ಜಾನಿ 64 ರನ್ ನೀಡಿ 2 ವಿಕೆಟ್ ಪಡೆದರೆ, ದಮೇಂದ್ರಾ ಜಡೇಜಾ 114 ರನ್ ನೀಡಿ 2 ವಿಕೆಟ್ ಕಬಳಿಸಿದರು.
ತ್ರಿಪುರಾ ಸಾಧಾರಣ ಮೊತ್ತ: ಬಿಜಿಎಸ್ ಮೈದಾನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧ ತ್ರಿಪುರಾ ಕ್ರಿಕೆಟ್ ಸಂಸ್ಥೆ ಮೊದಲ ದಿನಾಂತ್ಯಕ್ಕೆ 96.1 ಓವರ್ಗಳಲ್ಲಿ 190 ರನ್ಗಳಿಗೆ ಆಲೌಟ್ ಆಗಿದೆ. ತ್ರಿಪುರ ಪರ ಕೆ.ಬಿ ಪವನ್ (23), ಸಮ್ರಾಟ್ ಸಿಂಗ್ (56), ಸಯೀದ್ ಅಬ್ಬಾಸ್ ಅಲಿ (36), ನಿರುಪಮಾ ಸೇನ್ ಚೌಹ್ದ್ (40) ರನ್ ಗಳಿಸಿದರು. ಕೇರಳ ಪರ ನಿಯಾಸ್ 41 ರನ್ ನೀಡಿ 3 ವಿಕೆಟ್ ಮತ್ತು ಪಿ ಪ್ರಶಾಂತ್ 3 ವಿಕೆಟ್ ಕಬಳಿಸಿದರು.
ಸಿದ್ಧಾರ್ಥ್ ಅರ್ಧ ಶತಕ: ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದ ಪಂದ್ಯದಲ್ಲಿ ಓಡಿಶಾ ಕ್ರಿಕೆಟ್ ಸಂಸ್ಥೆ ವಿರುದ್ಧ ಕೆಎಸ್ಸಿಎಕೋಲ್ಟ್ಸ್ ತಂಡ 204 ರನ್ಗಳಿಗೆ ಆಲೌಟ್ ಆಗಿದೆ. ಕೆ.ವಿ ಸಿದ್ದಾರ್ಥ್ (77), ಅಬ್ರಾರ್ ಖಾಜಿ (52) ಕೆಎಸ್ಸಿಎಕೋಲ್ಟ್ಸ್ ಅರ್ಧ ಶತಕ ದಾಖಲಿಸಿದರು. ಜಯಂತ್ ಬೆಹಾರಾ 39 ರನ್ ನೀಡಿ 2 ವಿಕೆಟ್ ಪಡೆದರು. ಓಡಿಶಾ ಕ್ರಿಕೆಟ್ ಸಂಸ್ಥೆ ದಿನಾಂತ್ಯಕ್ಕೆ 3.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ.
ಆದಿತ್ಯ ಗ್ಲೋಬಲ್ನಲ್ಲಿ ಗೋವಾ ಕ್ರಿಕೆಟ್ ಸಂಸ್ಥೆ ಮತ್ತು ರಾಜಸ್ಥಾನ ನಡುವೆ ನಡೆಯಬೇಕಿದ್ದ ಪಂದ್ಯ ಮೊದಲ ದಿನ ಮಳೆಗೆ ಆಹುತಿಯಾಗಿದೆ.
ಮೈಸೂರಿನ ಎಸ್ಜೆಸಿಇ ಕಾಲೇಜ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೊದಲ ದಿನ 2 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಆಸ್ಸಾಂ ಪರ ಪರ್ವಿಜ್ ಅಜೀಜ್ (58) ಮತ್ತು ರಿಶಾವ ದಾಸ್ (ಅಜೇಯ 89) ಅರ್ಧ ಶತಕ ಗಳಿಸಿ ಔಟ್ ಆದರೆ, ಅವಿಜೀತ್ ಸಿಂಗ್ ರಾಯ್ (ಅಜೇಯ 21) ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಆಂಧ್ರ ಕ್ರಿಕೆಟ್ ಸಂಸ್ಥೆ ಪರ ಡಿ. ಶಿವಕುಮಾರ್ 17 ರನ್ ನೀಡಿ 1 ವಿಕೆಟ್ ಪಡೆದರು.
ಮೈಸೂರಿನ ಗಂಗೋತ್ರಿ ಗ್ಲೇಡ್ಸ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬರೋಡಾ ಕ್ರಿಕೆಟ್ ಸಂಸ್ಥೆಯ ವಿರುದ್ಧ ಕೆಎಸ್ಸಿಎ ಸೆಕ್ರೆಟರೀಸ್ ಇಲೆವೆನ್ ತಂಡ ಮೊದಲ ದಿನ 68 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ. ಗೌರಾಲ್ (ಅಜೇಯ 51), ಸುಚಿತ್ (ಅಜೇಯ 27) ಕ್ರೀಸ್ನಲ್ಲಿದ್ದಾರೆ. ಬರೋಡಾ ಪರ ಸೋನಿತ್ 16 ರನ್ ನೀಡಿ 2 ವಿಕೆಟ್ ಪಡೆದರೆ, ಕೇತಾಲ್, ಬಬ್ಕಾನ್ ಹಾಗೂ ಹಾರ್ಡಿಕ್ ತಲಾ 1 ವಿಕೆಟ್ ಪಡೆದರು.