ಬೆಂಗಳೂರು: ರಾಬಿನ್ ಉತ್ತಪ್ಪ ಅವರ ಅಮೋಘ 307 ರನ್ಗಳ ನೆರವಿನಿಂದಾಗಿ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ವಿರುದ್ಧ ನಡೆಯುತ್ತಿರುವ ಶಫಿ ದರಾಶಾ ಪಂದ್ಯದಲ್ಲಿ ಕೆಎಸ್ಸಿಎ ಇಲೆವೆನ್ ತಂಡ ನಿಗದಿತ 120 ಓವರ್ಗಳಲ್ಲಿ 550 ರನ್ಗಳ ಭರ್ಜರಿ ಮೊತ್ತವನ್ನು ಕಲೆಹಾಕಿತು.
ಆಲೂರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಬುಧವಾರ ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ಕೆಎಸ್ಸಿಎ ಇಲೆವೆನ್, ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತ್ತು. ರಾಬಿನ್ ಉತ್ತಪ್ಪ ಅಜೇಯ 223 ರನ್ ಗಳಿಸಿದ್ದರು.
ಗುರುವಾರ ತಮ್ಮ ಬ್ಯಾಟಿಂಗ್ ಮುಂದುವರಿಸಿದ ಅವರು, ಜಾರ್ಖಂಡ್ ಬೌಲರ್ಗಳನ್ನು ಬಿಡದೇ ಕಾಡಿದರು. ಬುಧವಾರ ದಿನಾಂತ್ಯಕ್ಕೆ ಅರ್ಧ ಶತಕ ಗಳಿಸಿ, ರಾಬಿನ್ ಅವರೊಂದಿಗೆ ಅಜೇಯರಾಗಿ ಉಳಿದಿದ್ದ ಮನೀಶ್ ಪಾಂಡೆ ಇಂದೂ ಸಹ ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ, ಅವರಿಂದ ಶತಕ ಗಳಿಸಲು ಸಾಧ್ಯವಾಗಲಿಲ್ಲ. ವೈಯಕ್ತಿಕವಾಗಿ 78 ರನ್ ಗಳಿಸಿದ ಅವರು, ವಿಕೆಟ್ ಒಪ್ಪಿಸಿ ಹೊರನಡೆದರು.
ಆದರೆ, ಕ್ರೀಸ್ನ ಮತ್ತೊಂದು ತುದಿಯಲ್ಲಿ ನಿರಾತಂಕವಾಗಿ ಹೋರಾಟ ಮುಂದುವರಿಸಿದ ರಾಬಿನ್ ಉತ್ತಪ್ಪ, ಅಮೋಘ 307 ರನ್ ಗಳಿಸಿ ಅಜೇಯರಾಗುಳಿದರು. 358 ಎಸೆತಗಳನ್ನು ಎದುರಿಸಿದ ಅವರು, 4 ಬೌಂಡರಿ, 6 ಸಿಕ್ಸರ್ ಬಾರಿಸಿದ್ದರು.
ಜಾರ್ಖಂಡ್ನ ರಾಹುಲ್ ಶುಕ್ಲಾ ಅವರು 1 ವಿಕೆಟ್ ಪಡೆದರೆ, ಸಮರ್ ಖಾದ್ರಿ 2 ವಿಕೆಟ್ ಹಾಗೂ ಸನ್ನಿ ಗುಪ್ತಾ 1 ವಿಕೆಟ್ ಗಳಿಸಿದರು.
ಕರ್ನಾಟಕದ ಇನಿಂಗ್ಸ್ನ ನಂತರ ಬ್ಯಾಟಿಂಗ್ಗೆ ಇಳಿದ ಜಾರ್ಖಂಡ್ ತಂಡ, 41.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು.
ದಿನದಾಟಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಆಟವನ್ನು 41.5 ಓವರ್ಗಳಿಗೆ ನಿಲ್ಲಿಸಲಾಯಿತು.
ಜಾರ್ಖಂಡ್ ಪರವಾಗಿ ಆಕಾಶ್ ವರ್ಮಾ 35 ರನ್ ಹಾಗೂ ಮನೀಸ್ ವರ್ಧನ್ 38 ರನ್ ಗಳಿಸಿದರು. ಕರ್ನಾಟಕದ ಪರವಾಗಿ, ಕೆ. ಗೌತಮ್ ಅವರು 2 ವಿಕೆಟ್ ಕಬಳಿಸಿದರೆ, ಅಮಿತ್ ವರ್ಮಾ ಅವರು 1 ವಿಕೆಟ್ ಪಡೆದರು.
ಅಧ್ಯಕ್ಷರ ಇಲೆವೆನ್ ದಿಟ್ಟ ಉತ್ತರ: ಆಲೂರಿನ ಮತ್ತೊಂದು ಮೈದಾನದಲ್ಲಿ ನಡೆಯುತ್ತಿರುವ ಬಂಗಾಳ ಕ್ರಿಕೆಟ್ ಸಂಸ್ಥೆಯ ವಿರುದ್ಧದ ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡ ದಿಟ್ಟ ಉತ್ತರ ನೀಡಿದೆ. ಪಂದ್ಯದ ಮೊದಲ ದಿನವಾದ ಬುಧವಾರ ಮೊದಲು ಬ್ಯಾಟ್ ಮಾಡಿದ್ದ ಬಂಗಾಳ ತಂಡ 79.4 ಓವರ್ಗಳಲ್ಲಿ 262 ರನ್ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡ, ಗುರುವಾರ ದಿನಾಂತ್ಯಕ್ಕೆ 84.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿ, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಮಳೆ ಬಂದ ಕಾರಣ, ಗುರುವಾರದ ದಿನದಾಟ ಪೂರ್ಣಗೊಳ್ಳಲಿಲ್ಲ.
ಕರ್ನಾಟಕದ ಪರವಾಗಿ ಉತ್ತಮವಾಗಿ ಬ್ಯಾಟ್ ಮಾಡಿದ ಆರ್. ಸಮರ್ಥ್ ಅವರು ಶತಕ ಸಿಡಿಸಿದರಲ್ಲದೇ, ಅಜೇಯ 150 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಅವರೊಂದಿಗೆ, ಪವನ್ ದೇಶಪಾಂಡೆ (ಅಜೇಯ 45) ಕ್ರೀಸ್ನಲ್ಲಿದ್ದಾರೆ. ಇನ್ನುಳಿದಂತೆ, ಕರ್ನಾಟಕದ ಇತರ ಬ್ಯಾಟ್ಸ್ಮನ್ಗಳಾದ ಕುನಾಲ್ ಕಪೂರ್ 39 ರನ್ ಗಳಿಸಿದರೆ, ಶಿಶಿರ್ ಭಾವನೆ 33 ರನ್ ಗಳಿಸಿದರು. ಬಂಗಾಳದ ಪರ ಐರೇಶ್ ಸೆಕ್ಸೇನಾ ಹಾಗೂ ಸಂದೀಪನ್ ದಾಸ್ ಅವರು ತಲಾ ಒಂದು ವಿಕೆಟ್ ಗಳಿಸಿದರು.
ಒಡಿಶಾಗೆ ಅಲ್ಪ ಮುನ್ನಡೆ: ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಒಡಿಶಾ ಕ್ರಿಕೆಟ್ ಸಂಸ್ಥೆ ಹಾಗೂ ಕೆಎಸ್ಸಿಎ ಕೋಲ್ಟ್ಸ್ ನಡುವಿನ ಪಂದ್ಯದಲ್ಲಿ ಒಡಿಶಾ ತಂಡ ಮುನ್ನಡೆ ಸಾಧಿಸಿದೆಯಾದರೂ ಒತ್ತಡಲ್ಲಿದೆ. ಬುಧವಾರ ಮೊದಲು ಬ್ಯಾಟಿಂಗ್ಗೆ ಇಳಿದು 204 ರನ್ಗಳಿಗೆ ಆಲೌಟ್ ಆಗಿದ್ದ ಕೆಎಸ್ಸಿಎ ಕೋಲ್ಟ್ಸ್ ತಂಡಕ್ಕೆ ದಿಟ್ಟ ಉತ್ತರ ನೀಡಿದ ಒಡಿಶಾ, ಗುರುವಾರ ದಿನಾಂತ್ಯಕ್ಕೆ 209 ರನ್ (90 ಓವರ್) ಗಳಿಸಿ, ಅಲ್ಪ ಮುನ್ನಡೆ ಕಂಡುಕೊಂಡಿದೆಯಾದರೂ, ಇಷ್ಟು ಮೊತ್ತ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿರುವ ಅದು ಮೊದಲ ಇನಿಂಗ್ಸ್ನಲ್ಲಿ ಕೆಎಸ್ಸಿಎ ಕೋಲ್ಟ್ಸ್ ವಿರುದ್ಧ ದೊಡ್ಡ ಮೊತ್ತ ಕಲೆಹಾಕುವ ಕನಸಿನಿಂದ ವಂಚಿತವಾಗಿದೆ. ಒಡಿಶಾ ಪರ ಗಿರಿಜಾ ರಾವುತ್ (41), ಬಿಪ್ಲಬ್ ಸಾಮತ್ರನ್ (31) ಉತ್ತಮ ಪ್ರದರ್ಶ ತೋರಿದರು.
ಕೆಎಸ್ಸಿಎ ಕೋಲ್ಟ್ಸ್ ಪರವಾಗಿ, ಡೇವಿಡ್ ಮತಿಯಾಸ್ ಹಾಗೂ ಅಬರ್ ಕಾಝಿ 2 ವಿಕೆಟ್ ಗಳಿಸಿದರು.
ಬರೋಡಾಕ್ಕೆ ಮುನ್ನಡೆ: ಮೈಸೂರಿನ ಗಂಗ್ರೋತ್ರಿ ಗ್ಲೇಡ್ಸ್ನಲ್ಲಿ ನಡೆಯುತ್ತಿರುವ ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್ ತಂಡದ ವಿರುದ್ಧದ ಪಂದ್ಯದಲ್ಲಿ ಬರೋಡಾ ತಂಡ ಉತ್ತಮ ಮುನ್ನಡೆ ಸಾಧಿಸಿದೆ. ಪಂದ್ಯದ ಮೊದಲ ದಿನವಾದ ಬುಧವಾರ, ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್ ತಂಡ, ಕೇವಲ 177 ರನ್ಗಳಿಗೆ ಆಲೌಟ್ ಆಗಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ್ದ ಬರೋಡಾ ಕ್ರಿಕೆಟ್ ಸಂಸ್ಥೆಯ ತಂಡ ಗುರುವಾರ ದಿನಾಂತ್ಯದ ವೇಳೆಗೆ 6 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿದೆ. ಬರೋಡಾ ಪರ ಆದಿತ್ಯ ಅವರು 54 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಅವರೊಂದಿಗೆ ವಿಷ್ಣು ಸೋಲಂಕಿ ಅವರು 11 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಅಸ್ಸಾಂ ಉತ್ತಮ ಮೊತ್ತ: ಮೈಸೂರಿನ ಎಸ್ಜೆಸಿಇ ಕಾಲೇಜ್ ಆಫ್ ಇಂಜಿನಿಯರಿಂಗ್ ಮೈದಾನದಲ್ಲಿ ನಡೆಯುತ್ತಿರುವ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ ಹಾಗೂ ಅಸ್ಸಾಂ ಕ್ರಿಕೆಟ್ ಸಂಸ್ಥೆಗಳ ನಡುವಿನ ಪಂದ್ಯದಲ್ಲಿ ಅಸ್ಸಾಂ ಉತ್ತಮ ಮೊತ್ತ ದಾಖಲಿಸಿದೆ.
ಪಂದ್ಯದ ಮೊದಲ ದಿನವಾದ ಬುಧವಾರ, ಆಂಧ್ರ ಬೌಲರ್ಗಳ ಬೆವರಿಳಿಸಿದ್ದ ಅಸ್ಸಾಂ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 182 ರನ್ ಪೇರಿಸಿತ್ತು. ಗುರುವಾರ ತನ್ನ ಬ್ಯಾಟಿಂಗ್ ಮುಂದುವರಿಸಿದ ಅದು, 309 ರನ್ ಪೇರಿಸಿತು. ಅಸ್ಸಾಂನ ರಿಶವ್ ದಾಸ್ ಅವರು 119 ರನ್ ಗಳಿಸಿ, ಉತ್ತಮ ಪ್ರದರ್ಶನ ತೋರಿದರು.
ಈ ಮೊತ್ತವನ್ನು ಬೆನ್ನಟ್ಟಿದ ಆಂಧ್ರಪ್ರದೇಶ, ಗುರುವಾರ ದಿನಾಂತ್ಯದ ವೇಳೆಗೆ 54 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಆಂಧ್ರಪ್ರದೇಶದ ಪರ ಪ್ರಶಾಂತ್ ಅವರು 74 ರನ್ ಗಳಿಸಿದರೆ, ಕೆ. ಶ್ರೀಕಾಂತ್ ಅವರು 44 ರನ್ ಗಳಿಸಿದರು.
ಸಾಧಾರಣ ಮೊತ್ತದತ್ತ ಗೋವಾ: ಆದಿತ್ಯ ಗ್ಲೋಬಲ್ನಲ್ಲಿ ಗುರುವಾರ ಆರಂಭಗೊಂಡ ಗೋವಾ ಕ್ರಿಕೆಟ್ ಸಂಸ್ಥೆ ಹಾಗೂ ಒಡಿಶಾ ಕ್ರಿಕೆಟ್ ಸಂಸ್ಥೆ ನಡುವಿನ ಪಂದ್ಯದಲ್ಲಿ ದಿನಾಂತ್ಯಕ್ಕೆ ಗೋವಾ ತಂಡ 6 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು.
ಬುಧವಾರ ನಡೆಯಬೇಕಿದ್ದ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು.
ಗುರುವಾರ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗೋವಾ ರೋಹಿತ್ ಅಸ್ನೋದ್ಜಾರ್ ಅವರ ಅಜೇಯ 68 ರನ್ಗಳ ಸಹಾಯದಿಂದ 264 ರನ್ ಗಳಿಸಿತು. ದಿನಾಂತ್ಯಕ್ಕೆ ಅಮಿತ್ ಯಾದವ್ ಅವರು ಅಜೇಯ 45 ರನ್ಗಳೊಂದಿಗೆ ರೋಹಿತ್ ಜೊತೆ ಕ್ರೀಸ್ನಲ್ಲಿದ್ದಾರೆ.
ಒಡಿಶಾ ಪರ ರಾಮನ್ ಚ್ಛಾರ್ ಅವರು 3 ವಿಕೆಟ್ ಗಳಿಸಿದರೆ, ಗಜೇಂದ್ರ ಸಿಂಗ್, ರಾಜೇಶ್ ಬಿಶ್ನೋನಿ ಹಾಗೂ ರಿತುರಾಜ್ ಸಿಂಗ್ ಅವರು ತಲಾ ಒಂದು ವಿಕೆಟ್ ಗಳಿಸಿದರು.
ಕೇರಳ ಉತ್ತಮ ಮೊತ್ತ: ಬಿಜಿಎಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇರಳ ಕ್ರಿಕೆಟ್ ಸಂಸ್ಥೆ ಪಂದ್ಯ, ತ್ರಿಪುರಾ ಕ್ರಿಕೆಟ್ ಸಂಸ್ಥೆ ವಿರುದ್ಧ ಉತ್ತಮ ಮುನ್ನಡೆ ಸಾಧಿಸಿದೆ. ಪಂದ್ಯದ ಮೊದಲ ದಿನವಾದ ಬುಧವಾರ, ತ್ರಿಪುರಾ ತಂಡ 190 ರನ್ಗಳಿಗೆ ಆಲೌಟ್ ಆಗಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ ಕೇರಳ ಗುರುವಾರ ದಿನಾಂತ್ಯಕ್ಕೆ, 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದೆ. ಗುರುವಾರದ ದಿನದಾಟದಲ್ಲಿ ಜಗದೀಶ್ ವಿ.ಎ ಅವರು ಅಜೇಯ 123 ರನ್ ಗಳಿಸಿ, ಕೇರಳ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರೊಂದಿಗೆ ನಿಖಿಲೇಶ್ (48) ಹಾಗೂ ಸಚಿನ್ (36) ಉತ್ತಮ ಸಾಥ್ ನೀಡಿದರು.
ತ್ರಿಪುರಾ ಪರ, ಮಣಿ ಶಂಕರ್ಮುರಾ 2 ವಿಕೆಟ್ ಪಡೆದರೆ, ಅಭಿಜಿತ್ ಅವರು 3 ವಿಕೆಟ್ ಕಬಳಿಸಿದರು.
ಹರ್ಯಾಣ ದೊಡ್ಡ ಮೊತ್ತ: ಆಲೂರಿನ ಮತ್ತೊಂದು ಮೈದಾನದಲ್ಲಿ ನಡೆಯುತ್ತಿರುವ ಹರ್ಯಾಣ ಕ್ರಿಕೆಟ್ ಸಂಸ್ಥೆ ಹಾಗೂ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗಳ ನಡುವಿನ ಪಂದ್ಯದಲ್ಲಿ ಹರ್ಯಾಣ ತಂಡ ನಿಗದಿತ 120 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 448 ರನ್ ಪೇರಿಸಿದೆ. ಹರ್ಯಾಣ ಪರವಾಗಿ ಪ್ರತೀಕ್ ಪನ್ವಾರ್ ಅವರು 103 ರನ್ ಗಳಿಸಿದರು.
ಈ ಮೊತ್ತವನ್ನು ಬೆನ್ನಟ್ಟಿದ ಸೌರಾಷ್ಟ್ರ ತಂಡ, ಗುರುವಾರ 47.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 146 ರನ್ ಪೇರಿಸಿತು. ಮಳೆಯಿಂದಾಗಿ ದಿನದಾಟ ಪೂರ್ಣಗೊಳ್ಳಲಿಲ್ಲ.
ಅರ್ಪಿತ್ ವಾಸವದಾ ಅಜೇಯ 30 ಹಾಗೂ ಸಾಗರ್ ಜೋಗಿಯಾನಿ ಅಜೇಯ 6 ರನ್ಗಳೊಂದಿಗೆ ಕ್ರೀಸ್ನಲ್ಲಿದ್ದಾರೆ. ಹರ್ಯಾಣ ತಂಡದ ಅರ್ಹಿಶ್ ಹೂಡಾ 3 ವಿಕೆಟ್ ಹಾಗೂ ಜಯಂತ್ ಯಾದವ್ ಅವರು 1 ವಿಕೆಟ್ ಪಡೆದರು.