

ಗ್ರಾಸ್ ಇಸ್ಲೆಟ್ (ಸೇಂಟ್ ಲೂಸಿಯಾ): ವೆಸ್ಟ್ ಇಂಡೀಸ್ನ ಬ್ಯಾಟ್ಸ್ಮನ್ಗಳಾದ ಕೆಮರ್ ರೋಚ್ ಹಾಗೂ ಜೆಸನ್ ಹೋಲ್ಡರ್ ಅವರು ಇನಿಂಗ್ಸ್ನ ಕೊನೆಯಲ್ಲಿ ಮಾಡಿದ ವೀರಾವೇಶದ ಹೋರಾಟದಿಂದಾಗಿ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲಿನಿಂದ ಪಾರಾಗಿ ಪಂದ್ಯವನ್ನು ಟೈ ಮಾಡಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಪೇರಿಸಿತು.
ಪಾಕ್ಗೆ ಆರಂಭಿಕ ಆಘಾತ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲೇ ಪೆಟ್ಟು ಬಿತ್ತು. ತಂಡದ ಮೊತ್ತ ಕೇವಲ 39 ರನ್ ಆಗಿದ್ದಾಗ, ಆರಂಭಿಕರಾದ ಅಹ್ಮದ್ ಶಹಜಾದ್ ಹಾಗೂ ನಾಸಿರ್ ಜೆಮ್ಷೆಡ್ ಇಬ್ಬರೂ ವಿಕೆಟ್ ಒಪ್ಪಿಸಿದರು. ಈ ಎರಡೂ ವಿಕೆಟ್ಗಳನ್ನು ಕ್ರಮವಾಗಿ ಹೋಲ್ಡರ್ ಹಾಗೂ ಸಾಮಿ ಅವರು ಪಡೆದರು.
ಆಗ, ಜೋಡಿಯಾದ ಮಹಮ್ಮದ್ ಹಫೀಸ್ ಹಾಗೂ ಮಿಸ್ಬಾ ಉಲ್ ಹಕ್ ಇಬ್ಬರೂ 2ನೇ ವಿಕೆಟ್ಗೆ 53 ರನ್ ಸೇರಿಸಿದರು. ಆದರೆ, ಮಹಮ್ಮದ್ ಹಫೀಸ್, ಹಕ್ ಅವರಿಗೆ ಉತ್ತಮ ಸಾಥ್ ನೀಡಲಿಲ್ಲ. ತಂಡದ ಮೊತ್ತ 92 ರನ್ ಆಗಿದ್ದಾಗ, ಅವರು ಡ್ವೈನ್ ಬ್ರಾವೊ ಅವರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಆದರೆ, ಮಿಸ್ಬಾ ಅವರು ಮಾತ್ರ ತದೇಕಚಿತ್ತದಿಂದ ಬ್ಯಾಟ್ ಬೀಸುತ್ತಾ ವೈಯಕ್ತಿಕವಾಗಿ 75 ರನ್ ಗಳಿಸಿ, ಪಾಕಿಸ್ತಾನ ಗೌರವ ಮೊತ್ತ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ, ಕ್ರೀಸ್ನಲ್ಲಿ ಅಂಥಾ ಸಾಥ್ ಸಿಗದಿದ್ದರೂ, ಹ್ಯಾರಿಸ್ ಸೊಹೈಲ್ (26), ಉಮರ್ ಅಕ್ಮಲ್ (40) ಅವರಿಂದ ಬೆಂಬಲ ಸಿಕ್ಕಿತು. ಮೊದಲ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಾಹಿದ್ ಅಫ್ರಿದಿ ಕೇವಲ 1 ರನ್ ಗಳಿಸಿದರು. ಅಂತಿಮವಾಗಿ, ಪಾಕಿಸ್ತಾನ ನಿಗದಿತ 50 ಓವರ್ಗಳಲ್ಲಿ 229 ರನ್ ಗಳಿಸಿತು.
ವಿಂಡೀಸ್ಗೂ ಆರಂಭಿಕ ಹೊಡೆತ: ಪಾಕಿಸ್ತಾನ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವೂ ಆರಂಭದಲ್ಲೇ ಪೆಟ್ಟು ತಿಂದಿತು. ಆರಂಭಿಕರಾದ ಕ್ರಿಸ್ ಗೇಯ್ಲ್ (8) ಹಾಗೂ ಚಾರ್ಲ್ಸ್ (6) ಇಬ್ಬರೂ ಒಂದಂಕಿ ರನ್ ಗಳಿಸಿ ಪೆವಿಲಿಯನ್ಗೆ ಹಿಂದಿರುಗಿದರು.
ಆನಂತರ, ಜೊತೆಯಾದ ಡರೇನ್ ಬ್ರಾವೊ ಹಾಗೂ ಮರ್ಲಾನ್ ಸ್ಯಾಮ್ಯುಯೆಲ್ಸ್ ತಂಡವನ್ನು ಗೆಲವಿನ ದಿಶೆಯೆಡೆಗೆ ತರಲು ಪ್ರಯತ್ನಿಸಿದರು. ಆದರೆ, ಬ್ರಾವೊ (17) ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು.
ಈ ಹಂತದಲ್ಲಿ, ಸ್ಯಾಮ್ಯುಯೆಲ್ಸ್ (46)ಗೆ ಜೊತೆಯಾದ ಸಿಮನ್ಸ್ (75) ಭರ್ಜರಿ 91 ರನ್ಗಳ ಜೊತೆಯಾಟವಾಡಿದರು. ಅವರಿಬ್ಬರ ವಿಕೆಟ್ ಪತನದ ನಂತರ, ವಿಂಡೀಸ್ ಬೇಗ ಬೇಗನೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಡ್ವೈನ್ ಬ್ರಾವೊ (13), ಪೊಲಾರ್ಡ್ (0), ಡರೇನ್ ಸಾಮಿ (10), ಸುನಿಲ್ ನಾರಾಯಣ್ (14) ಬೇಗನೇ ವಿಕೆಟ್ ಒಪ್ಪಿಸಿದ್ದು ವಿಂಡೀಸ್ ತಂಡಕ್ಕೆ ಮುಳುವಾಯಿತು. ಆದರೂ, ಅಂತಿಮ ಹಂತದಲ್ಲಿ ಜೊತೆಯಾದ ಕೆಮರ್ ರೋಚ್ (ಅಜೇಯ 6) ಹಾಗೂ ಹೋಲ್ಡರ್, ತಮ್ಮ ತಂಡಕ್ಕೆ ಜಯ ತಂದುಕೊಡಲು ಪ್ರಯತ್ನಿಸಿದರಾದರೂ, ಅದು ಸಾಧ್ಯವಾಗಲೇ ಇಲ್ಲ.
ರೋಚಕವಾಗಿದ್ದ ಕೊನೆಯ ಓವರ್: ವಿಂಡೀಸ್ ಇನಿಂಗ್ಸ್ನ ಕೊನೆಯ ಓವರ್ ರೋಚಕವಾಗಿತ್ತು. ಕೊನೆಯ ಓವರ್ನಲ್ಲಿ ಗೆಲವಿಗಾಗಿ 15 ರನ್ ಪೇರಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತ ವಿಂಡೀಸ್ನ ರೋಚ್ ಹಾಗೂ ಹೋಲ್ಡರ್ 14 ರನ್ ಗಳಿಸುವಲ್ಲಿ ಯಶಸ್ವಿಯಾದರು. ಕೊನೆಯ ಓವರ್ನ 3ನೇ ಹಾಗೂ 5ನೇ ಎಸೆತದಲ್ಲಿ ಹೋಲ್ಡರ್ ಕ್ರಮವಾಗಿ ಬಾರಿಸಿದ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ಗಳು ಪಂದ್ಯವನ್ನು ಸೋಲುವುದರಿಂದ ವಿಂಡೀಸರನ್ನು ಪಾರು ಮಾಡಿದವು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 229/6 (50 ಓವರ್)
ಮಿಸ್ಬಾ ಉಲ್ ಹಕ್ 75 (112), ಉಮರ್ ಅಕ್ಮಲ್ ಅಜೇಯ 40
ಬೌಲಿಂಗ್: ಹೋಲ್ಡರ್ 40/2, ಡ್ವೈನ್ ಬ್ರಾವೊ 50/2
ವೆಸ್ಟ್ ಇಂಡೀಸ್: 229/9 (50 ಓವರ್)
ಸಿಮನ್ಸ್ 75 (86), ಸ್ಯಾಮ್ಯುಯೆಲ್ಸ್ 46 (106)
ಬೌಲಿಂಗ್: ಜುನೈದ್ ಖಾನ್ 54/3, ಸಯ್ಯದ್ ಅಜ್ಮಲ್ 36/3